ADVERTISEMENT

ಲಾಕ್‌ಡೌನ್‌ ವಿಸ್ತರಣೆ: ಷೇರುಪೇಟೆಯಲ್ಲಿ ತಲ್ಲಣ, 1,000 ಅಂಶ ಕುಸಿದ ಸೆನ್ಸೆಕ್ಸ್‌

ಏಜೆನ್ಸೀಸ್
Published 18 ಮೇ 2020, 11:06 IST
Last Updated 18 ಮೇ 2020, 11:06 IST
ಷೇರುಪೇಟೆಯಲ್ಲಿ ಕರಡಿ ಹಿಡಿತ– ಸಾಂಕೇತಿಕ ಚಿತ್ರ
ಷೇರುಪೇಟೆಯಲ್ಲಿ ಕರಡಿ ಹಿಡಿತ– ಸಾಂಕೇತಿಕ ಚಿತ್ರ   

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಬಿಕ್ಕಟ್ಟಿಗೆ ಸಿಲುಕಿರುವ ಆರ್ಥಿಕತೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ₹20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಿಸಿದೆ ಹಾಗೂ ಕೇಂದ್ರ ಹಣಕಾಸು ಸಚಿವೆ ಐದು ದಿನಗಳು ಪ್ಯಾಕೇಜ್‌ ಪ್ರಕಟಿಸಿದ್ದಾರೆ. ಆದರೆ, ಇದರಿಂದಷೇರುಪೇಟೆಯ ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಲ್ಲ. ವಾರದ ಮೊದಲ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 1,000 ಅಂಶ ಕಡಿಮೆಯಾಗಿದೆ.

ದೇಶವ್ಯಾಪಿ ಮೇ 31ರ ವರೆಗೂ ಲಾಕ್‌ಡೌನ್‌ ಮುಂದುವರಿಯುವುದಾಗಿ ಕೇಂದ್ರ ಸರ್ಕಾರ ಘೋಷಿಸಿರುವುದು ಸಹ ಹೂಡಿಕೆದಾರರಲ್ಲಿ ಉತ್ಸಾಹ ಕುಗ್ಗಿಸಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,068.75 ಅಂಶ (ಶೇ 3.44) ಕಡಿಮೆಯಾಗಿ 30,028 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 50 ಸಹ ಶೇ 3.32ರಷ್ಟು ಇಳಿಕೆಯಾಗಿ 8,823 ಅಂಶ ಮುಟ್ಟಿದೆ.

ಸೆನ್ಸೆಕ್ಸ್‌ನ 30 ಕಂಪನಿಗಳ ಷೇರುಗಳ ಪೈಕಿ 26 ಷೇರುಗಳು ನಕಾರಾತ್ಮಕ ವಹಿವಾಟು ಕಂಡಿವೆ. ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಶೇ 9.63ರಷ್ಟು ನಷ್ಟ ಅನುಭವಿಸಿದೆ. ಎಚ್‌ಡಿಎಫ್‌ಸಿ, ಮಾರುತಿ ಸುಜುಕಿ, ಆ್ಯಕ್ಸಿಸ್‌ ಬ್ಯಾಂಕ್‌ ಹಾಗೂ ಅಲ್ಟ್ರಾಟೆಕ್‌ ಸಿಮೆಂಟ್ಸ್‌ ಷೇರುಗಳ ಬೆಲೆ ಶೇ 5.5ರಿಂದ ಶೇ 7.5ರಷ್ಟು ಕಡಿಮೆಯಾಗಿದೆ.

ADVERTISEMENT

ಟಿಸಿಎಸ್‌, ಇನ್ಫೊಸಿಸ್‌, ಐಟಿಸಿ ಹಾಗೂ ಎಚ್‌ಸಿಎಲ್‌ ಟೆಕ್‌ ಷೇರುಗಳು ಅಲ್ಪಮಟ್ಟಿನ ಚೇತರಿಕೆ ಕಂಡಿವೆ. ನಿಫ್ಟಿ 50 ಕಂಪನಿಗಳ ಷೇರುಗಳ ಪೈಕಿ 44 ಷೇರುಗಳು ನಷ್ಟ ಅನುಭವಿಸಿವೆ.

ನಿಫ್ಟಿ ಮೀಡಿಯಾ, ನಿಫ್ಟಿ ಬ್ಯಾಂಕ್‌ ಶೇ 6.5ರಷ್ಟು ಕುಸಿದರೆ; ನಿಫ್ಟಿ ಆಟೊ ಶೇ 6ರಷ್ಟು ಕಡಿಮೆಯಾಗಿದೆ. ಇಂಡಸ್‌ಇಂಡ್‌ ಬ್ಯಾಂಕ್‌, ಜೀ ಎಂಟರ್‌ಟೈನ್ಮೆಂಟ್, ಐಷರ್‌ ಮೊಟಾರ್ಸ್‌ ಷೇರುಗಳು ಗರಿಷ್ಠ ನಷ್ಟ ಅನುಭವಿಸಿವೆ. ಸಿಪ್ಲಾ, ಟಿಸಿಎಸ್‌, ಭಾರ್ತಿ ಇನ್ಫ್ರಾಟೆಲ್‌ ಷೇರುಗಳು ಗಳಿಕೆ ದಾಖಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.