ADVERTISEMENT

ಷೇರುಪೇಟೆಯಲ್ಲಿ ಕರಡಿ ಕುಣಿತ

ಜಾಗತಿಕ ಷೇರುಪೇಟೆಗಳಲ್ಲಿ ಹೆಚ್ಚಿದ ಮಾರಾಟದ ಒತ್ತಡ

ಪಿಟಿಐ
Published 11 ಫೆಬ್ರುವರಿ 2022, 14:22 IST
Last Updated 11 ಫೆಬ್ರುವರಿ 2022, 14:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದ ಮಾರಾಟದ ಒತ್ತಡದಿಂದಾಗಿ ದೇಶಿ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತಾಯಿತು.

ಅಮೆರಿಕದ ಗ್ರಾಹಕ ಹಣದುಬ್ಬರವು 40 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ. ಈ ಮೂಲಕ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ ನಿರೀಕ್ಷೆಗಿಂತಲೂ ತ್ವರಿತವಾಗಿ ಬಡ್ಡಿದರ ಹೆಚ್ಚಿಸುವ ಸಾಧ್ಯತೆ ವ್ಯಕ್ತವಾಗಿದೆ. ಈ ಅಂಶವು ಇದು ಜಾಗತಿಕ ಮತ್ತು ದೇಶಿ ಷೇರುಪೇಟೆಗಳ ಮೇಲೆ ತೀವ್ರ ಪರಿಣಾಮ ಉಂಟುಮಾಡಿತು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಕೆ ಮತ್ತು ವಿದೇಶಿ ಬಂಡವಾಳ ಹೊರಹರಿವು ಮುಂದುವರಿದಿರುವುದು ಸಹ ಷೇರುಪೇಟೆಯ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿವೆ ಎಂದು ವರ್ತಕರು ಹೇಳಿದ್ದಾರೆ.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 773 ಅಂಶ ಕುಸಿತ ಕಂಡು, 58,153 ಅಂಶಗಳಿಗೆ ತಲುಪಿತು. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 1.90ರವರೆಗೆ ಇಳಿಕೆ ಕಂಡಿವೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 231 ಅಂಶ ಇಳಿಕೆ ಕಂಡು 17,374 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯವಾಯಿತು.

ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 492 ಅಂಶ ಮತ್ತು ನಿಫ್ಟಿ 142 ಅಂಶಗಳಷ್ಟು ಇಳಿಕೆ ಕಂಡಿವೆ.

ಜಾಗತಿಕ ಅಂಶಗಳ ಜೊತೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟಕ್ಕೆ ಹೆಚ್ಚು ಒತ್ತು ನೀಡಿದ ಪರಿಣಾಮವಾಗಿ ದೇಶಿ ಷೇರುಪೇಟೆಗಳ ವಹಿವಾಟು ತೀವ್ರ ಇಳಿಕೆ ಕಾಣುವಂತಾಯಿತು. ಐ.ಟಿ., ರಿಯಲ್ ಎಸ್ಟೇಟ್‌ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಜೊತೆಗೆ ಎಲ್ಲಾ ವಲಯಗಳ ಷೇರುಗಳೂ ನಷ್ಟ ಕಂಡಿವೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.43ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 91.80 ಡಾಲರ್‌ಗಳಿಗೆ ತಲುಪಿದೆ.

ಕರಗಿತು ₹ 3.91 ಲಕ್ಷ ಕೋಟಿ

ಮುಂಬೈ ಷೇರುಪೇಟೆಯಲ್ಲಿ ಸೂಚ್ಯಂಕದ ಇಳಿಕೆಯಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 3.91 ಲಕ್ಷ ಕೋಟಿಗಳಷ್ಟು ಕರಗಿದೆ. ಇದರಿಂದಾಗಿ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯವು ₹ 263.89 ಲಕ್ಷ ಕೋಟಿಗಳಿಗೆ ಇಳಿಕೆ ಆಗಿದೆ.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 21 ಪೈಸೆ ಇಳಿಕೆ ಕಂಡು ಒಂದು ಡಾಲರ್‌ಗೆ ₹ 75.36ರಂತೆ ವಿನಿಮಯಗೊಂಡಿತು. ಇದು ಏಳು ವಾರಗಳ ಕನಿಷ್ಠ ಮಟ್ಟವಾಗಿದೆ. ವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 67 ಪೈಸೆಗಳಷ್ಟು ಇಳಿಕೆ ಕಂಡಿದೆ.

ಮುಖ್ಯಾಂಶಗಳು

ಸೆನ್ಸೆಕ್ಸ್‌ನಲ್ಲಿ ಟೆಕ್‌ ಮಹೀಂದ್ರ ಷೇರು ಮೌಲ್ಯ ಶೇ 2.94ರಷ್ಟು ಇಳಿಕೆ

ನಿಲ್ಲದ ವಿದೇಶಿ ಬಂಡವಾಳ ಹೊರಹರಿವು

ಅಮೆರಿಕದ ಹಣದುಬ್ಬರ ಜನವರಿಯಲ್ಲಿ ಶೇ 7.5ಕ್ಕೆ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.