ADVERTISEMENT

ಐ.ಟಿ., ಬ್ಯಾಂಕಿಂಗ್ ಷೇರುಗಳ ಉತ್ತಮ ಗಳಿಕೆ; ಸೆನ್ಸೆಕ್ಸ್ 701 ಅಂಶ ಜಿಗಿತ

ಐ.ಟಿ., ಬ್ಯಾಂಕಿಂಗ್ ಷೇರುಗಳ ಉತ್ತಮ ಗಳಿಕೆ

ಪಿಟಿಐ
Published 28 ಏಪ್ರಿಲ್ 2022, 13:54 IST
Last Updated 28 ಏಪ್ರಿಲ್ 2022, 13:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ರಿಲಯನ್ಸ್, ಎಚ್‌ಯುಎಲ್‌ ಮತ್ತು ಇನ್ಫೊಸಿಸ್‌ ಕಂಪನಿಗಳ ಷೇರುಗಳ ಉತ್ತಮ ಗಳಿಕೆಯಿಂದಾಗಿ ದೇಶದ ಷೇರುಪೇಟೆಗಳು ಗುರುವಾರ ಶೇಕಡ 1ಕ್ಕೂ ಹೆಚ್ಚಿನ ಪ್ರಮಾಣದ ಏರಿಕೆ ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 701 ಅಂಶ ಹೆಚ್ಚಾಗಿ 57,521 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 206 ಅಂಶ ಏರಿಕೆ ಕಂಡು 17,245 ಅಂಶಗಳಿಗೆ ತಲುಪಿತು.

ಸರ್ಕಾರಿ ಬಾಂಡ್‌ಗಳ ಏಪ್ರಿಲ್‌ ತಿಂಗಳ ವಾಯಿದಾ ವಹಿವಾಟು ಅವಧಿಯು ಗುರುವಾರ ಮುಕ್ತಾಯ ಆಗಿದ್ದು, ಈ ಸಂದರ್ಭದಲ್ಲಿಯೇ ಮಾರುಕಟ್ಟೆಗಳು ಉತ್ತಮ ಚೇತರಿಕೆ ಕಂಡು ವಹಿವಾಟು ನಡೆಸಿದವು. ಎಫ್‌ಎಂಸಿಜಿ, ಇಂಧನ, ಬ್ಯಾಂಕಿಂಗ್‌ ಮತ್ತು ಐ.ಟಿ. ವಲಯದ ಷೇರುಗಳು ಹೆಚ್ಚಿನ ಖರೀದಿಗೆ ಒಳಗಾಗಿದ್ದು ಸಹ ಸಕಾರಾತ್ಮಕ ಚಲನೆಗೆ ಪೂರಕವಾಯಿತು ಎಂದು ರೆಲಿಗೇರ್‌ ಬ್ರೋಕಿಂಗ್ ಲಿಮಿಟೆಡ್‌ನ ಉಪಾಧ್ಯಕ್ಷ ಅಜಿತ್‌ ಮಿಶ್ರಾ ಹೇಳಿದ್ದಾರೆ.

ADVERTISEMENT

ಬ್ರೆಂಟ್ ಕಚ್ಚಾ ತೈಲ ದರ 0.07ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 105.33 ಡಾಲರ್‌ಗಳಂತೆ ಮಾರಾಟವಾಯಿತು.

ಎಚ್‌ಯುಎಲ್‌ ಮಾರುಕಟ್ಟೆ ಮೌಲ್ಯ ವೃದ್ಧಿ: ಹಿಂದುಸ್ತಾನ್‌ ಯುನಿಲಿವರ್‌ ಲಿಮಿಟೆಡ್‌ನ ನಿವ್ವಳ ಲಾಭ ಹೆಚ್ಚಾಗಿರುವುದರಿಂದ ಅದರ ಷೇರು ಮೌಲ್ಯವು ಗುರುವಾರ ಶೇ 4.5ರಷ್ಟು ಹೆಚ್ಚಳ ಆಯಿತು. ಇದರಿಂದಾಗಿ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 22,920 ಕೋಟಿಯಷ್ಟು ಹೆಚ್ಚಾಗಿ ಒಟ್ಟಾರೆ ಮೌಲ್ಯವು ₹ 5.26 ಲಕ್ಷ ಕೋಟಿಗೆ ತಲುಪಿತು.

ರಿಲಯನ್ಸ್ ಇಂಡಸ್ಟ್ರೀಸ್‌ನ ಮಾರುಕಟ್ಟೆ ಬಂಡವಾಳ ಮೌಲ್ಯವು ಗುರುವಾರದ ವಹಿವಾಟಿನ ಅಂತ್ಯದ ವೇಳೆಗೆ ₹ 19 ಲಕ್ಷ ಕೋಟಿಯ ಗಡಿ ದಾಟಿ ₹ 19.07 ಲಕ್ಷ ಕೋಟಿಗೆ ತಲುಪಿತು.

ಬುಧವಾರ ಮಧ್ಯಂತರ ವಹಿವಾಟಿನ ವೇಳೆಗೆ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 19 ಲಕ್ಷ ಕೋಟಿಯ ಮಟ್ಟ ತಲುಪಿತ್ತಾದರೂ ವಹಿವಾಟಿನ ಅಂತ್ಯದಲ್ಲಿ ₹ 18.79 ಲಕ್ಷ ಕೋಟಿಗೆ ಇಳಿಕೆ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.