ADVERTISEMENT

ಸೆನ್ಸೆಕ್ಸ್‌ ಅಲ್ಪ ಗಳಿಕೆ: ಎಚ್‌ಡಿಎಫ್‌ಸಿ, ಇನ್ಫೊಸಿಸ್‌ ಷೇರುಗಳಲ್ಲಿ ಆಸಕ್ತಿ

ಏಜೆನ್ಸೀಸ್
Published 20 ಏಪ್ರಿಲ್ 2020, 10:53 IST
Last Updated 20 ಏಪ್ರಿಲ್ 2020, 10:53 IST
ಷೇರುಪೇಟೆ ವಹಿವಾಟು
ಷೇರುಪೇಟೆ ವಹಿವಾಟು    

ಬೆಂಗಳೂರು: ಎಚ್‌ಡಿಎಫ್‌ಸಿ ಬ್ಯಾಂಕ್‌ ತ್ರೈಮಾಸಿಕದಲ್ಲಿ ಉತ್ತಮ ಲಾಭಾಂಶ ವರದಿಯಾಗಿರುವ ಕಾರಣ ದೇಶದ ಷೇರುಪೇಟೆಗಳಲ್ಲಿ ಖರೀದಿ ಉತ್ಸಾಹ ಕಂಡು ಬಂದಿತು. ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ಹೂಡಿಕೆದಾರರಲ್ಲಿ ಆತಂಕ ಉಳಿಸಿದ್ದು, ಬ್ಯಾಂಕ್‌ ವಲಯದ ಇತರೆ ಷೇರುಗಳು ಹಾಗೂ ಗ್ರಾಹಕ ಉತ್ಪನ್ನಗಳ ಷೇರುಗಳು ನಷ್ಟ ಅನುಭವಿಸಿವೆ. ಬೆಳಗ್ಗಿನ ವಹಿವಾಟಿನಲ್ಲಿ 125 ಅಂಶಗಳ ಏರಿಕೆ ಕಂಡ ಸೆನ್ಸೆಕ್ಸ್‌ ನಂತರ ಹಾವು–ಏಣಿ ಆಟದಂತಹ ವಹಿವಾಟು ಏರಿಳಿತಕ್ಕೆ ಒಳಗಾಯಿತು.

ಬೆಳಿಗ್ಗೆ 11ರ ನಂತರ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 31,714 ಅಂಶ ತಲುಪಿದರೆ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 9,282 ಅಂಶ ಮುಟ್ಟಿತು. ಲಾಕ್‌ಡೌನ್‌ ವಿಸ್ತರಣೆಯ ನಡುವೆಯೂ ದೇಶದಾದ್ಯಂತ ಸೋಮವಾರ ಬೆಳಿಗ್ಗೆ ವರೆಗೂ ಕೋವಿಡ್‌–19 ಪ್ರಕರಣಗಳು 17,264 ಆಗಿದ್ದು, 543 ಮಂದಿ ಸಾವಿಗೀಡಾಗಿದ್ದಾರೆ. ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್ 59.28 ಅಂಶ ಏರಿಕೆಯಾಗಿ 31,648.00 ಅಂಶ ತಲುಪಿದೆ. ನಿಫ್ಟಿ ಶೇ 0.04ರಷ್ಟು ಇಳಿಕೆಯೊಂದಿಗೆ 9,266.55 ಅಂಶಗಳಲ್ಲಿ ವಹಿವಾಟು ಮುಗಿಸಿದೆ.

ನಿಫ್ಟಿಯಲ್ಲಿ ಟಾಟಾ ಮೋಟಾರ್ಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಇನ್ಫೊಸಿಸ್‌, ಸನ್‌ ಫಾರ್ಮಾ ಹಾಗೂ ಎನ್‌ಟಿಪಿಸಿ ಹೆಚ್ಚಿನ ಗಳಿಕೆ ದಾಖಲಿಸಿವೆ. ಹಿಂಡಾಲ್ಕೊ, ಜೆಎಸ್‌ಡಬ್ಲ್ಯು ಸ್ಟೀಲ್‌, ಆ್ಯಕ್ಸಿಸ್‌ ಬ್ಯಾಂಕ್‌, ಭಾರ್ತಿ ಇನ್ಫ್ರಾಟೆಲ್‌ ಹಾಗೂ ಗ್ರಾಸಿಮ್‌ ಷೇರುಗಳು ನಷ್ಟಅನುಭವಿಸಿವೆ.

ADVERTISEMENT

ಐಟಿ, ಸಾರ್ವಜನಿಕ ಬ್ಯಾಂಕಿಂಗ್‌, ಇಂಧನ ವಲಯಗಳ ಷೇರುಗಳಲ್ಲಿ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ. ಆಟೊ, ಎಫ್‌ಎಂಸಿಜಿ ಹಾಗೂ ಲೋಹ ವಲಯದ ಷೇರುಗಳು ಮಾರಾಟ ಒತ್ತಡಕ್ಕೆ ಸಿಲುಕಿವೆ.

ಎಚ್‌ಡಿಎಫ್‌ಸಿ ಷೇರು ಶೇ 3.63ರಷ್ಟು, ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಶೇ 2ರಷ್ಟು ಗಳಿಗೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.