ADVERTISEMENT

ಐ.ಟಿ., ಬ್ಯಾಂಕಿಂಗ್, ಎಫ್‌ಎಂಸಿಜಿ ಷೇರು ಮೌಲ್ಯ ಇಳಿಕೆ

ಪಿಟಿಐ
Published 26 ಜುಲೈ 2022, 12:45 IST
Last Updated 26 ಜುಲೈ 2022, 12:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಅಮೆರಿಕದ ಫೆಡರಲ್ ರಿಸರ್ವ್‌ ಬಡ್ಡಿ ದರವನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಯಲ್ಲಿ ಹೂಡಿಕೆದಾರರು ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಎಫ್‌ಎಂಸಿಜಿ ವಲಯದ ಷೇರುಗಳನ್ನು ಲಾಭ ಗಳಿಕೆಯ ಉದ್ದೇಶದಿಂದ ಮಾರಾಟ ಮಾಡಿದರು. ಇದರ ಪರಿಣಾಮವಾಗಿ ದೇಶದ ಷೇರು‍ಪೇಟೆ ಸಂವೇದಿ ಸೂಚ್ಯಂಕಗಳು ಮಂಗಳವಾರ ಸರಿಸುಮಾರು ಶೇಕಡ 1ರವರೆಗೆ ಇಳಿಕೆ ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 497 ಅಂಶ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 147 ಅಂಶ ಇಳಿಕೆ ಕಂಡವು. ಇನ್ಫೊಸಿಸ್‌ ಷೇರುಗಳು ಶೇ 3.4ರವರೆಗೂ ಕುಸಿದವು. ವಿಪ್ರೊ, ಎಚ್‌ಸಿಎಲ್‌, ಟೆಕ್ ಮಹೀಂದ್ರ ಮತ್ತು ಟಿಸಿಎಸ್ ಷೇರುಗಳು ಕೂಡ ಕುಸಿದಿವೆ.

ಫೆಡರಲ್ ರಿಸರ್ವ್‌ನ ಸಭೆಯು ಮಂಗಳವಾರದಿಂದಾಗಿ ಶುರುವಾಗಲಿದೆ. ಅದು ಬಡ್ಡಿ ದರವನ್ನು 75 ಮೂಲಾಂಶಗಳಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಪಶ್ಚಿಮದ ದೇಶಗಳಲ್ಲಿ ಆರ್ಥಿಕ ಹಿಂಜರಿತದ ಭೀತಿ ಇದೆ. ಇವು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದವು ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಪಾಶ್ಚಿಮಾತ್ಯ ದೇಶಗಳ ಮಾರುಕಟ್ಟೆಗಳಲ್ಲಿ ಆಗುವ ವಿದ್ಯಮಾನಗಳ ಪರಿಣಾಮದಿಂದ ತಪ್ಪಿಸಿಕೊಳ್ಳಲು ದೇಶಿ ಮಾರುಕಟ್ಟೆಗಳಿಗೆ ಆಗದು ಎಂದೂ ಅವರು ಹೇಳಿದ್ದಾರೆ.

ಫೆಡರಲ್ ರಿಸರ್ವ್‌ ಹಾಗೂ ವಿಶ್ವದ ಇತರ ಪ್ರಮುಖ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರವನ್ನು ತೀವ್ರವಾಗಿ ಹೆಚ್ಚಿಸಿದರೆ ಜಾಗತಿಕ ಆರ್ಥಿಕ ಬೆಳವಣಿಗೆಗೆ ಏಟು ಬೀಳಬಹುದು ಎಂಬ ಆತಂಕ ಹೂಡಿಕೆದಾರರಲ್ಲಿ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ 1.21ರಷ್ಟು, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ 1.20ರಷ್ಟು ಇಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.