ಮುಂಬೈ,: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದಂತೆ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತದೊಂದಿಗೆ ವಹಿವಾಟು ಆರಂಭಿಸಿವೆ.
30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 424.65 ಅಂಶಗಳಷ್ಟು ಕುಸಿದು 79,910.16 ರಲ್ಲಿ ವಹಿವಾಟು ಆರಂಭಿಸಿದರೆ, ಎನ್‌ಎಸ್‌ಇ ನಿಫ್ಟಿ 144.75 ಅಂಶಗಳ ಕುಸಿತದೊಂದಿಗೆ 24,129.05 ಕ್ಕೆ ತಲುಪಿತ್ತು.
ಗುರುವಾರ ರಾತ್ರಿ ಭಾರತವು ದೇಶದ ಉತ್ತರ ಮತ್ತು ಪಶ್ಚಿಮದ 15 ಸ್ಥಳಗಳಲ್ಲಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳೊಂದಿಗೆ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುವ ಪಾಕಿಸ್ತಾನದ ಹೊಸ ಪ್ರಯತ್ನಗಳನ್ನು ತ್ವರಿತವಾಗಿ ವಿಫಲಗೊಳಿಸಿತ್ತು, ಆದರೆ, ವ್ಯಾಪಕ ಸಂಘರ್ಷದ ಭೀತಿಯ ನಡುವೆ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಯಿತು.
ಬುಧವಾರ ಭಾರತೀಯ ಸಶಸ್ತ್ರ ಪಡೆಗಳು 'ಆಪರೇಷನ್ ಸಿಂಧೂರ' ಅಡಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಾಕಿಸ್ತಾನದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ನಿಖರವಾದ ಕ್ಷಿಪಣಿ ದಾಳಿಗಳನ್ನು ನಡೆಸಿದ್ದವು.
ಏಪ್ರಿಲ್ 22ರಂದು 26 ಜನರನ್ನು ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಈ ದಾಳಿ ನಡೆಸಿತ್ತು.
ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಪವರ್ ಗ್ರಿಡ್, ಐಸಿಐಸಿ ಬ್ಯಾಂಕ್, ಟಾಟಾ ಸ್ಟೀಲ್, ಅದಾನಿ ಪೋರ್ಟ್ಸ್, ಬಜಾಜ್ ಫಿನ್‌ಸರ್ವ್, ಎಟರ್ನಲ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ನೆಸ್ಲೆ ನಷ್ಟ ಅನುಭವಿಸಿದ ಪ್ರಮುಖ ಕಂಪನಿಗಳಾಗಿವೆ.
ಲಾಭ ಹೆಚ್ಚಳ ಹಿನ್ನೆಲೆಯಲ್ಲಿ ಲಾರ್ಸನ್ ಅಂಡ್ ಟೊರ್ಬೊ ಷೇರು ಶೇ 4ರಷ್ಟು ಏರಿಕೆ ಕಂಡಿದೆ. ಟೈಟನ್ ಷೇರುಗಳ ಬೆಲೆ ಸಹ ಶೇ 4ರಷ್ಟು ಜಿಗಿದಿದೆ.
ಟಾಟಾ ಮೋಟರ್ಸ್, ಏಷಿಯನ್ ಪೇಂಟ್ಸ್, ಕೋಟಕ್ ಮಹೀಂದ್ರ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ಲಾಭ ಗಳಿಸಿವೆ.
ಗಡಿ ಉದ್ವಿಗ್ನತೆ ನಡುವೆಯೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ ₹2,007.96 ಕೋಟಿ ಬೆಲೆಯ ಷೇರುಗಳನ್ನು ಖರೀದಿಸಿದ್ದಾರೆ.
ಏಷ್ಯಾ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ, ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಇಂಡೆಕ್ಸ್, ಹಾಂಗ್‌ಕಾಂಗ್‌ಮ ಹ್ಯಾಂಗ್‌ಸೆಂಗ್ ಇಳಿಕೆ ದಾಖಲಿಸಿವೆ. ಜಪಾನ್‌ನ 225 ಇಂಡೆಕ್ಸ್ ಏರಿಕೆ ದಾಖಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.