ಮುಂಬೈ: ಮಾರಾಟದ ಒತ್ತಡದಿಂದಾಗಿ ದೇಶದ ಷೇರುಪೇಟೆಗಳು ಸೋಮವಾರದ ವಹಿವಾಟಿನಲ್ಲಿ ದಾಖಲೆ ಮಟ್ಟದಿಂದ ಕೆಳಗಿಳಿದಿವೆ.
ರಿಲಯನ್ಸ್ ಇಂಡಸ್ಟ್ರೀಸ್, ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಟಿಸಿಎಸ್ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾಗಿದ್ದರಿಂದ ಸೂಚ್ಯಂಕಗಳು ಇಳಿಕೆ ಕಂಡವು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ42,274 ಅಂಶಗಳ ದಾಖಲೆ ಮಟ್ಟ ತಲುಪಿತ್ತಾದರೂ ನಂತರ ಇಳಿಮುಖವಾಗಿ 416 ಅಂಶಗಳ ನಷ್ಟದೊಂದಿಗೆ 41,529 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 129 ಅಂಶ ಇಳಿಕೆಯಾಗಿ 12,224 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಗರಿಷ್ಠ ನಷ್ಟ: ದಿನದ ವಹಿವಾಟಿನಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರು ಶೇ 4.70ರಷ್ಟು ಗರಿಷ್ಠ ಇಳಿಕೆ ಕಂಡಿತು. ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ವಸೂಲಾಗದ ಸಾಲದ ಪ್ರಮಾಣ ಹೆಚ್ಚಾಗಿರುವುದರಿಂದ ನಷ್ಟ ಅನುಭವಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಟಿಸಿಎಸ್ ಷೇರುಗಳು ಶೇ 3.08ರವರೆಗೂ ಇಳಿಕೆ ಕಂಡಿವೆ.
ಗಳಿಕೆ; ಪವರ್ ಗ್ರಿಡ್ ಷೇರು ಶೇ 3.75ರಷ್ಟು ಗರಿಷ್ಠ ಗಳಿಕೆ ಕಂಡಿದೆ. ಭಾರ್ತಿ ಏರ್‌ಟೆಲ್, ಐಟಿಸಿ, ಏಷ್ಯನ್ ಪೇಂಟ್ಸ್, ಐಸಿಐಸಿಐ ಬ್ಯಾಂಕ್ ಮತ್ತು ಎಲ್‌ಆ್ಯಂಡ್‌ಟಿ ಷೇರುಗಳ ಮೌಲ್ಯ ಹೆಚ್ಚಾಗಿದೆ.
ದೇಶಿ ಹೂಡಿಕೆದಾರರು ಲಾಭಗಳಿಕೆಗೆ ಮುಂದಾಗಿದ್ದರಿಂದ ಸೂಚ್ಯಂಕಗಳು ಇಳಿಕೆ ಕಂಡಿವೆ ಎಂದು ವರ್ತಕರು ಹೇಳಿದ್ದಾರೆ.
3ನೇ ತ್ರೈಮಾಸಿಕದಲ್ಲಿಬ್ಯಾಂಕಿಂಗ್ ಮತ್ತು ಪ್ರಮುಖ ಕಂಪನಿಗಳ ಆರ್ಥಿಕ ಸಾಧನೆ ಮಂದಗತಿಯಲ್ಲಿದೆ. ಇದು ಷೇರುಪೇಟೆಯ ಮೇಲೆ ಪರಿಣಾಮ ಬೀರಿದೆ. ಬಜೆಟ್ ನಿರ್ಧಾರಗಳು ದೇಶದ ಆರ್ಥಿಕತೆಯ ದಿಕ್ಕನ್ನು ನಿರ್ಧರಿಸಲಿವೆ. ಹೀಗಾಗಿ ಎಲ್ಲರೂ ಬಜೆಟ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ ಎಂದೂ ಹೇಳಿದ್ದಾರೆ.
ಕರಗಿದ ಸಂಪತ್ತು:ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ, ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 1.29 ಲಕ್ಷ ಕೋಟಿ ಕರಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 160.57 ಲಕ್ಷ ಕೋಟಿಗಳಿಂದ ₹ 159.28 ಲಕ್ಷ ಕೋಟಿಗೆ ಇಳಿಕೆಯಾಗಿದೆ.
ವಹಿವಾಟಿನ ವಿವರ
0.57%:ಬಿಎಸ್‌ಇ ಸಣ್ಣ ಮತ್ತು ಮಧ್ಯಮ ಶ್ರೇಣಿ ಸೂಚ್ಯಂಕಗಳ ಇಳಿಕೆ
0.66 %:ಬ್ರೆಂಟ್ ತೈಲ ದರದಲ್ಲಿ ಆಗಿರುವ ಏರಿಕೆ
5 ಪೈಸೆ:ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಆಗಿರುವ ಇಳಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.