ADVERTISEMENT

ಸತತ ನಾಲ್ಕನೇ ದಿನವೂ ಸೂಚ್ಯಂಕ ಏರಿಕೆ

ಪಿಟಿಐ
Published 12 ಜನವರಿ 2022, 16:01 IST
Last Updated 12 ಜನವರಿ 2022, 16:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ದಿನವೂ ಸಕಾರಾತ್ಮಕ ವಹಿವಾಟು ಮುಂದುವರಿದಿದೆ. ಕಂಪನಿಗಳ ತ್ರೈಮಾಸಿಕ ಫಲಿತಾಂಶವು ಉತ್ತಮವಾಗಿರುವ ನಿರೀಕ್ಷೆಯಿಂದ ಹೂಡಿಕೆದಾರರು ವಹಿವಾಟು ನಡೆಸಿದರು. ಇದರಿಂದಾಗಿ ಸೂಚ್ಯಂಕಗಳು ಏರಿಕೆ ಕಾಣುವಂತಾಯಿತು ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 533 ಅಂಶ ಜಿಗಿತ ಕಂಡು 61,150 ಅಂಶಗಳಿಗೆ ತಲುಪಿತು. ಮಧ್ಯಂತರ ವಹಿವಾಟಿನಲ್ಲಿ 61,218 ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಬಂಡವಾಳ ಮೌಲ್ಯವು ದಾಖಲೆಯ ₹ 277.22 ಲಕ್ಷ ಕೋಟಿಗಳಿಗೆ ಏರಿಕೆ ಆಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 156 ಅಂಶ ಏರಿಕೆ ಕಂಡು 18,212 ಅಂಶಗಳಿಗೆ ತಲುಪಿತು.

ಸೆನ್ಸೆಕ್ಸ್‌ನಲ್ಲಿ ಮಹೀಂದ್ರ, ಭಾರ್ತಿ ಏರ್‌ಟೆಲ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಇಂಡಸ್‌ಇಂಡ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಟಾಟಾ ಸ್ಟೀಲ್‌ ಷೇರುಗಳ ಮೌಲ್ಯವು ಶೇ 4.68ರವರೆಗೆ ಏರಿಕೆ ಆಗಿದೆ.

ADVERTISEMENT

ರಿಯಲ್‌ ಎಸ್ಟೇಟ್‌ ವಲಯದ ವಹಿವಾಟು ಉತ್ತಮವಾಗಿದ್ದು, ಮುನ್ನೋಟವು ಸಹ ಆಶಾದಾಯಕ ಆಗಿರುವ ನಿರೀಕ್ಷೆ ವ್ಯಕ್ತವಾಗಿದೆ. ಹೀಗಾಗಿ ಆ ವಲಯದ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಾಯಿತು. ಪ್ರಮುಖ ಐ.ಟಿ. ಕಂಪನಿಗಳ ತ್ರೈಮಾಸಿಕ ಆರ್ಥಿಕ ಸಾಧನೆಯು ಮುಂಬರುವ ದಿನಗಳಲ್ಲಿ ಸೂಚ್ಯಂಕಗಳ ಚಲನೆಯನ್ನು ನಿರ್ಧರಿಸಲಿವೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 1 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 73.93ರಂತೆ ವಿನಿಮಯಗೊಂಡಿತು. ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.13ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 83.61 ಡಾಲರ್‌ಗಳಿಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.