ADVERTISEMENT

ವಿದೇಶಿ ಬಂಡವಾಳ ಒಳಹರಿವು: ಮತ್ತೆ 59 ಸಾವಿರದ ಮಟ್ಟಕ್ಕೇರಿದ ಸೆನ್ಸೆಕ್ಸ್‌

ಕೈಗಾರಿಕಾ ಬೆಳವಣಿಗೆ ಹೆಚ್ಚಳದ ಪ್ರಭಾವ

ಪಿಟಿಐ
Published 1 ಏಪ್ರಿಲ್ 2022, 15:58 IST
Last Updated 1 ಏಪ್ರಿಲ್ 2022, 15:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳು 2022–23ನೇ ಹಣಕಾಸು ವರ್ಷವನ್ನು ಸಕಾರಾತ್ಮಕವಾಗಿ ಆರಂಭಿಸಿದವು. ವಿದೇಶಿ ಬಂಡವಾಳ ಒಳಹರಿವು ಮತ್ತು ಆರ್ಥಿಕ ಚೇತರಿಕೆಯನ್ನು ಸೂಚಿಸುವ ಅಂಶಗಳು ಸೂಚ್ಯಂಕಗಳ ಏರಿಕೆಗೆ ಬೆಂಬಲಿಸಿದವು ಎಂದು ವರ್ತಕರು ಹೇಳಿದ್ದಾರೆ.

2022–23ನೇ ಹಣಕಾಸು ವರ್ಷದ ಮೊದಲ ದಿನ ಶುಕ್ರವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 708 ಅಂಶ ಜಿಗಿತ ಕಂಡು 59,276 ಅಂಶಗಳಿಗೆ ಏರಿಕೆ ಕಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 205 ಅಂಶ ಹೆಚ್ಚಾಗಿ 17,670 ಅಂಶಗಳಿಗೆ ತಲುಪಿತು.

ADVERTISEMENT

ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ವಹಿವಾಟು ಮಂದಗತಿಯಲ್ಲಿ ಆರಂಭ ಆಯಿತು. ಬಳಿಕ ಬ್ಯಾಂಕಿಂಗ್‌, ವಿದ್ಯುತ್‌ ಮತ್ತು ರಿಯಲ್‌ ಎಸ್ಟೇಟ್‌ ವಲಯಗಳಲ್ಲಿ ಖರೀದಿ ಚಟುವಟಿಕೆ ಹೆಚ್ಚಾಗಿದ್ದರಿಂದ ವಹಿವಾಟು ಚೇತರಿಕೆ ಕಂಡುಕೊಂಡವು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೊದ್‌ ನಾಯರ್‌ ಹೇಳಿದ್ದಾರೆ.

ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 1914 ಅಂಶ ಹಾಗೂ ನಿಫ್ಟಿ 517 ಅಂಶ ಏರಿಕೆ ಕಂಡಿವೆ. ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 1.71ರಷ್ಟು ಹಾಗೂ ಮಿಡ್‌ ಕ್ಯಾಪ್‌ ಸೂಚ್ಯಂಕ ಶೇ 1.39ರಷ್ಟು ಹೆಚ್ಚಾಗಿವೆ.

2021–22ನೇ ಹಣಕಾಸು ವರ್ಷದಲ್ಲಿ ಸೆನ್ಸೆಕ್ಸ್‌ 9,059 ಅಂಶ ಮತ್ತು ನಿಫ್ಟಿ 2,774 ಅಂಶಗಳಷ್ಟು ಏರಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.