ADVERTISEMENT

ಮಾರಾಟದ ಒತ್ತಡ: ಷೇರುಪೇಟೆಯಲ್ಲಿ ಕರಡಿ ಕುಣಿತ

5 ತಿಂಗಳ ಕನಿಷ್ಠ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯ

ಪಿಟಿಐ
Published 1 ಆಗಸ್ಟ್ 2019, 19:45 IST
Last Updated 1 ಆಗಸ್ಟ್ 2019, 19:45 IST
   

ಮುಂಬೈ: ಲೋಹ, ಬ್ಯಾಂಕಿಂಗ್‌ ಮತ್ತು ತಂತ್ರಜ್ಞಾನ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದ ಗುರುವಾರ ದೇಶದ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ಹೆಚ್ಚಿನ ಹಾನಿ ಅನುಭವಿಸುವಂತಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಮಧ್ಯಾಹ್ನದ ವಹಿವಾಟಿನಲ್ಲಿ 750 ಅಂಶಕ್ಕೂ ಹೆಚ್ಚಿನ ಕುಸಿತ ಕಂಡಿತ್ತು. ನಂತರ ತುಸು ಚೇತರಿಕೆ ಕಂಡಿತಾದರೂ ದಿನದ ವಹಿವಾಟಿನ ಅಂತ್ಯದಲ್ಲಿ463 ಅಂಶ ಇಳಿಕೆಯೊಂದಿಗೆ ಐದು ತಿಂಗಳ ಕನಿಷ್ಠ ಮಟ್ಟವಾದ 37,018 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 138 ಅಂಶ ಇಳಿಕೆಯಾಗಿ 10,980 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ಗರಿಷ್ಠ ನಷ್ಟ: ವೇದಾಂತ ಶೇ 5.55ರಷ್ಟು ಗರಿಷ್ಠ ನಷ್ಟ ಕಂಡಿದೆ. ಟಾಟಾ ಮೋಟರ್ಸ್‌, ಎಸ್‌ಬಿಐ, ಯೆಸ್‌ ಬ್ಯಾಂಕ್, ಭಾರ್ತಿ ಏರ್‌ಟೆಲ್‌ ಮತ್ತು ಇನ್ಫೊಸಿಸ್‌ ಷೇರುಗಳು ಶೇ 4.50ರವರೆಗೂ ಇಳಿಕೆಯಾಗಿವೆ.

ರೂಪಾಯಿ ಮೌಲ್ಯ ಇಳಿಕೆ:ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 27 ಪೈಸೆ ಕುಸಿತ ಕಂಡಿದ್ದು, ಐದು ವಾರಗಳ ಕನಿಷ್ಠ ಮಟ್ಟವಾದ ₹ 69.06ಕ್ಕೆ ತಲುಪಿದೆ.

ಬ್ರೆಂಟ್‌ ತೈಲ ದರ ಶೇ 0.97ರಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್‌ಗೆ 64.42 ಡಾಲರ್‌ಗಳಂತೆ ಮಾರಾಟವಾಯಿತು.

ನಕಾರಾತ್ಮಕ ಅಂಶಗಳು:

* ದೇಶದ ಮೂಲಸೌಕರ್ಯ ವಲಯದ ಪ್ರಗತಿ ಜೂನ್‌ನಲ್ಲಿ ಶೇ 0.2ರಷ್ಟು ಕುಸಿತ

* ವಿದೇಶಿ ಸಾಂಸ್ಥಿಕ ಬಂಡವಾಳ (ಎಫ್‌ಪಿಐ) ಹೊರಹರಿವು ಮುಂದುವರಿದಿದೆ. ಬುಧವಾರದ ವಹಿವಾಟಿನಲ್ಲಿ ₹ 1,497 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಜುಲೈನಲ್ಲಿ ₹ 3,700 ಕೋಟಿಗೂ ಆಧಿಕ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

* ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆಯೂ ನಿರಾಶಾದಾಯವಾಗಿದೆ.

* ವಾಹನ ಉದ್ಯಮದ ಜುಲೈ ತಿಂಗಳ ಮಾರಾಟದ ಅಂಕಿ–ಅಂಶ ಬಿಡುಗಡೆ ಆಗಿದ್ದು, ಬಹುತೇಕ ಕಂಪನಿಗಳ ಮಾರಾಟ ಇಳಿಕೆಆಗಿದೆ.

* ಇದು ಬಡ್ಡಿದರ ಕಡಿತದ ಆರಂಭ ಅಲ್ಲ ಎಂದು ಹೇಳುವ ಮೂಲಕ ಇನ್ನಷ್ಟು ಬಡ್ಡಿದರ ಕಡಿತವಾಗುವ ನಿರೀಕ್ಷೆ ಬೇಡ ಎನ್ನುವ ಸಂದೇಶವನ್ನು ಫೆಡರಲ್‌ ರಿಸರ್ವ್‌ನ ಅಧ್ಯಕ್ಷ ಜೆರೊಮ್‌ ಪಾವೆಲ್‌ ರವಾನಿಸಿದ್ದಾರೆ.

ಕರಗಿದ ₹ 1.5 ಲಕ್ಷ ಕೋಟಿ ಸಂಪತ್ತು
ಷೇರುಪೇಟೆಯಲ್ಲಿ ಸೂಚ್ಯಂಕಗಳ ಇಳಿಮುಖ ಚಲನೆಯಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯ ದಿನೇ ದಿನೇ ಕರಗಲಾರಂಭಿಸಿದೆ.

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಗುರುವಾರ ಹೂಡಿಕೆದಾರರ ಸಂಪತ್ತು ₹ 1.5 ಲಕ್ಷ ಕೋಟಿ ಕರಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 139.87 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಬಜೆಟ್‌ ನಂತರ ಇದುವರೆಗೆ ಹೂಡಿಕೆದಾರರ ಸಂಪತ್ತಿನಲ್ಲಿ ₹ 11.48 ಲಕ್ಷ ಕೋಟಿಕರಗಿದೆ.

ಬಡ್ಡಿದರ ತಗ್ಗಿಸಿದ ಫೆಡರಲ್‌ ರಿಸರ್ವ್‌
ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆಗಿರುವ ಫೆಡರಲ್‌ ರಿಸರ್ವ್‌, 10 ವರ್ಷಗಳ ಬಳಿಕ ಬಡ್ಡಿದರದಲ್ಲಿ ಕಡಿತ ಮಾಡಿದೆ.ಶೇ 2.25 ರಷ್ಟಿದ್ದ ಬಡ್ಡಿದರವನ್ನು ಶೇ 2ಕ್ಕೆ ಅಂದರೆ ಶೇ 0.25ರಷ್ಟು ಕಡಿತ ಮಾಡಿದೆ.

ಬಡ್ಡಿದರ ತಗ್ಗಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಒಂದು ವರ್ಷದಿಂದ ಒತ್ತಡ ಹೇರುತ್ತಿದ್ದರು. ಆದರೆ, ‘ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಿಲ್ಲ’ ಎಂದು ಫೆಡರಲ್‌ ರಿಸರ್ವ್‌ನ ಅಧ್ಯಕ್ಷ ಜೆರೊಮ್‌ ಪಾವೆಲ್ ತಿಳಿಸಿದ್ದಾರೆ.

‘ಕೇಂದ್ರೀಯ ಬ್ಯಾಂಕ್‌ ನಿರಾಸೆಗೊಳಿಸಿದೆ.ಆರ್ಥಿಕತೆಗೆ ಇದೊಂದು ಸೀಮಿತ ಉತ್ತೇಜನ ಕೊಡುಗೆಯಾಗಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.