
ಮುಂಬೈ: 2026ರ ಕ್ಯಾಲೆಂಡರ್ ವರ್ಷದ ಕೊನೆಯ ದಿನವಾದ ಬುಧವಾರ ದೇಶದ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡಿವೆ.
ರಿಲಯನ್ಸ್, ಟಾಟಾ ಸ್ಟೀಲ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್‌ನ ಷೇರುಗಳ ಖರೀದಿ ಹೆಚ್ಚಳದಿಂದ ಷೇರುಪೇಟೆ ಸೂಚ್ಯಂಕಗಳು ಏರಿಕೆ ದಾಖಲಿಸಿದವು.
ದೇಶಿ ಹೂಡಿಕೆದಾರರು ಹೆಚ್ಚಿನ ಷೇರುಗಳನ್ನು ಖರೀದಿ ಮಾಡಿದ್ದು ಸಹ ಸೂಚ್ಯಂಕಗಳ ಏರಿಕೆಗೆ ನೆರವಾಯಿತು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 545 ಅಂಶ ಏರಿಕೆಯಾಗಿ, 85,220ಕ್ಕೆ ವಹಿವಾಟು ಕೊನೆಗೊಂಡಿದೆ. ವಹಿವಾಟಿನ ನಡುವಿನಲ್ಲಿ ಸೂಚ್ಯಂಕವು 762 ಅಂಶದವರೆಗೆ ಜಿಗಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 190 ಅಂಶ ಹೆಚ್ಚಳವಾಗಿ, 26,129ಕ್ಕೆ ಅಂತ್ಯಗೊಂಡಿದೆ.
ಪ್ರಸಕ್ತ ವರ್ಷದಲ್ಲಿ ಸೆನ್ಸೆಕ್ಸ್ 7,081 ಅಂಶ ಮತ್ತು ನಿಫ್ಟಿ 2,484 ಅಂಶ ಏರಿಕೆಯಾಗಿದೆ. ಸೂಚ್ಯಂಕಗಳ ಏರಿಕೆಯಿಂದ ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕೆ ₹33.84 ಲಕ್ಷ ಕೋಟಿ ಸೇರ್ಪಡೆಯಾಗಿದೆ. ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ ₹475 ಲಕ್ಷ ಕೋಟಿಗೆ ಏರಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರ ₹3,844 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹6,159 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 0.31ರಷ್ಟು ಏರಿಕೆಯಾಗಿದೆ. ಪ್ರತಿ ಬ್ಯಾರಲ್ ದರವು 61.53 ಡಾಲರ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.