ADVERTISEMENT

ನಿರಾಸೆ ಮೂಡಿಸಿದ ಕಾರ್ಪೊರೇಟ್‌ ಫಲಿತಾಂಶ: ಪೇಟೆಯಲ್ಲಿ ಮಾರಾಟದ ಒತ್ತಡ

ಎಫ್‌ಪಿಐ ಹೊರಹರಿವು

ಪಿಟಿಐ
Published 30 ಜುಲೈ 2019, 20:00 IST
Last Updated 30 ಜುಲೈ 2019, 20:00 IST
   

ಮುಂಬೈ: ನಿರಾಸೆ ಮೂಡಿಸಿರುವ ಕಾರ್ಪೊರೇಟ್‌ ಫಲಿತಾಂಶ, ವಾಹನ, ಇಂಧನ ವಲಯದಲ್ಲಿ ನಗದು ಕೊರತೆ, ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವಿನ ವಿದ್ಯಮಾನಗಳು ಷೇರುಪೇಟೆಗಳಲ್ಲಿ ಮಂಗಳವಾರವೂ ಇಳಿಮುಖ ವಹಿವಾಟು ನಡೆಯುವಂತೆ ಮಾಡಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 289 ಅಂಶ ಇಳಿಕೆ ಕಂಡು 37,397 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 104 ಅಂಶ ಇಳಿಕೆಯಾಗಿ 11,085 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿತು.

ADVERTISEMENT

ದಿನದ ಆರಂಭದಲ್ಲಿ ಸಕಾರಾತ್ಮಕ ಮಟ್ಟದಲ್ಲಿ ವಹಿವಾಟು ಆರಂಭವಾಯಿತು. ಅಮೆರಿಕದ ಫೆಡರಲ್‌ ರಿಸರ್ವ್‌ನಿಂದ ಬಡ್ಡಿದರ ಕಡಿತದ ನಿರೀಕ್ಷೆಯಿಂದ ಏಷ್ಯಾದ ಮಾರುಕಟ್ಟೆಗಲ್ಲಿ ನಡೆದ ಉತ್ತಮ ವಹಿವಾಟು ದೇಶಿ ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿತ್ತು. ಆದರೆ ನಂತರ ಮಾರಾಟದ ಒತ್ತಡದಿಂದ ಇಳಿಮುಖವಾಗಿ ವಹಿವಾಟು ಅಂತ್ಯವಾಯಿತು.

ಗರಿಷ್ಠ ನಷ್ಟ:ಯೆಸ್‌ ಬ್ಯಾಂಕ್‌ ಶೇ 9.13ರಷ್ಟು ಗರಿಷ್ಠ ನಷ್ಟ ಕಂಡಿತು. ಇಂಡಸ್‌ ಇಂಡ್‌ ಬ್ಯಾಂಕ್‌ (ಶೇ 6.66), ಹೀರೊಮೋಟೊ ಕಾರ್ಪ್‌ (ಶೇ 6.01), ಸನ್‌ ಫಾರ್ಮಾ (ಶೇ 4.79) ಮತ್ತು ಎಸ್‌ಬಿಐ (ಶೇ 4.70) ನಷ್ಟ ಕಂಡ ಉಳಿದ ಕಂಪನಿಗಳಾಗಿವೆ.

ಗಳಿಕೆ: ಭಾರ್ತಿ ಏರ್‌ಟೆಲ್‌ ಶೇ 3.19ರಷ್ಟು ಗಳಿಕೆ ಕಂಡುಕೊಂಡಿತು. ಟಿಸಿಎಸ್‌, ಎಚ್‌ಸಿಎಲ್‌ ಟೆಕ್‌, ಐಟಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಎಚ್‌ಯುಎಲ್‌, ಎಲ್‌ಆ್ಯಂಡ್‌ಟಿ, ಇನ್ಫೊಸಿಸ್‌ ಗಳಿಕೆ ಕಂಡಿವೆ.

ಇಳಿಕೆಗೆ ಕಾರಣಗಳು

* ವಾಣಿಜ್ಯ ಸಮರ ಬಗೆಹರಿಸಿಕೊಳ್ಳಲುಅಮೆರಿಕ ಮತ್ತು ಚೀನಾ ಮಧ್ಯೆ ಮತ್ತೊಮ್ಮೆ ಮಾತುಕತೆ ನಡೆಯಲಿದೆ. ಹೀಗಾಗಿ ಹೂಡಿಕೆದಾರರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

* ದೇಶಿ ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಮಾರುಕಟ್ಟೆಯ ನಿರೀಕ್ಷೆಯಂತೆ ಇಲ್ಲ.

* ಒಂದು ವರ್ಷದವರೆಗೆ ಮಾರಾಟ ಪ್ರಗತಿಯನ್ನೇ ಕಾಣದ ವಾಹನ ಉದ್ಯಮ ನಗದು ಕೊರತೆ ಎದುರಿಸುತ್ತಿದೆ.

* 10 ವರ್ಷಗಳ ಬಾಂಡ್‌ ಗಳಿಕೆಯಲ್ಲಿಯೂ ಕುಸಿತ ಕಂಡಿದೆ.

* ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಷೇರುಗಳ ಮಾರಾಟಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ. ಸೋಮವಾರದ ವಹಿವಾಟಿನಲ್ಲಿ ₹ 704 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 10 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 68.85ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.