ADVERTISEMENT

ಟಾಟಾ ಮೋಟಾರ್ಸ್‌ ಷೇರು ಶೇ 11 ಗಳಿಕೆ: ಷೇರುಪೇಟಯಲ್ಲಿ ರಿಲಯನ್ಸ್, ಏರ್‌ಟೆಲ್ ಸದ್ದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2020, 9:02 IST
Last Updated 5 ಜೂನ್ 2020, 9:02 IST
ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ
ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದ ಪ್ರಮುಖ ದೂರ ಸಂಪರ್ಕ ಸೇವಾಧಾರ ಸಂಸ್ಥೆ ಭಾರ್ತಿ ಏರ್‌ಟೆಲ್‌ನಲ್ಲಿ ಜಾಗತಿಕ ಸಂಸ್ಥೆ ಅಮೆಜಾನ್‌ 2 ಬಿಲಿಯನ್‌ ಡಾಲರ್‌ (ಸುಮಾರು ₹15,000 ಕೋಟಿ) ಷೇರು ಪಡೆಯಲು ಮಾತುಕತೆ ನಡೆದಿರುವುದಾಗಿ ವರದಿಯಾಗಿದೆ. ರಿಲಯನ್ಸ್‌ ಆರು ವಾರಗಳಲ್ಲಿ ಆರನೇ ಸಂಸ್ಥೆಯೊಂದಿಗೆ ಹೂಡಿಕೆ ಒಪ್ಪಂದ ಮಾಡಿಕೊಂಡಿದೆ. ದೂರ ಸಂಪರ್ಕ ಸಂಸ್ಥೆಗಳಲ್ಲಿನ ಈ ಬೆಳವಣಿಗೆಗಳು ಷೇರುಪೇಟೆಯಲ್ಲಿ ಶುಕ್ರವಾರ ಉತ್ಸಾಹ ಮೂಡಿಸಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 295.97 ಅಂಶ ಹೆಚ್ಛಳವಾಗಿ 34,276.67 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 114 ಅಂಶ ಏರಿಕೆಯಾಗಿ 10,143.10 ಅಂಶಗಳಲ್ಲಿ ವಹಿವಾಟು ನಡೆದಿದೆ.

ಅಬು–ಧಾಬಿ ಮೂಲದ ಮುಬದಲಾ ಸಂಸ್ಥೆ ಜಿಯೊ ಪ್ಲಾಟ್‌ಫಾರ್ಮ್‌ಗಳಲ್ಲಿ ₹9,093.60 ಕೋಟಿ ಹೂಡಿಕೆ ಮಾಡಲಿರುವುದು ಪ್ರಕಟಗೊಂಡ ಬೆನ್ನಲ್ಲೇ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಶೇ 2.38ರಷ್ಟು ಏರಿಕೆಯಾಗಿ 52 ವಾರಗಳ ಅಧಿಕ ಮಟ್ಟ ₹1,617.70 ಮುಟ್ಟಿತು. ಒಟಿಟಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವ ಏರ್‌ಟೆಲ್‌ನಲ್ಲಿ ಅಮೆಜಾನ್‌ 2 ಬಿಲಿಯನ್‌ ಡಾಲರ್‌ ಮೌಲ್ಯದ ಷೇರು ಖರೀದಿಸುವ ಯೋಜನೆ ಇರುವುದಾಗಿ ವರದಿಯಾಗಿದ್ದು, ಏರ್‌ಟೆಲ್‌ ಷೇರು ಸಹ ಶೇ 1ರಷ್ಟು ಗಳಿಕೆ ದಾಖಲಿಸಿದೆ. ಇಂದು ಪ್ರತಿ ಷೇರಿಗೆ ₹584ರ ವರೆಗೂ ವಹಿವಾಟು ನಡೆದಿದೆ. ಆದರೆ, ಅಮೆಜಾನ್‌ ಜೊತೆಗೆ ಅಂತಹ ಮಾತುಕತೆ ನಡೆದಿಲ್ಲ ಎಂದು ಏರ್‌ಟೆಲ್‌ ಹೇಳಿದೆ.

ADVERTISEMENT

ತೀವ್ರ ಕುಸಿತಕ್ಕೆ ಒಳಗಾಗಿದ್ದ ಟಾಟಾ ಮೋಟಾರ್ಸ್‌ ಷೇರು ಇಂದು ದಿಢೀರ್ ಏರಿಕೆಯಾಗಿದೆ. ಶೇ 11.47ರಷ್ಟು ಗಳಿಕೆಯೊಂದಿಗೆ ಪ್ರತಿ ಷೇರು ಬೆಲೆ ₹110 ಆಗಿದೆ. ಲೋಹ ವಲಯ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರುಗಳು ಗಳಿಕೆ ದಾಖಲಿಸಿವೆ. ಎಸ್‌ಬಿಐ, ಸನ್‌ ಫಾರ್ಮಾ, ಟಾಟಾ ಸ್ಟೀಲ್‌, ಬಜಾಜ್‌ ಫೈನಾನ್ಸ್‌ ಷೇರುಗಳು ಏರಿಕೆ ಕಂಡಿವೆ.

ಟಿಸಿಎಸ್‌, ಹಿಂದುಸ್ತಾನ್‌ ಯೂನಿಲಿವರ್‌ ಷೇರುಗಳು ಕುಸಿತ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.