ADVERTISEMENT

ಷೇರುಪೇಟೆಯತ್ತ ಮಹಿಳೆಯರ ಆಸಕ್ತಿ ಹೆಚ್ಚಳ: ಏಕೆ ಗೊತ್ತೆ?

ಪಿಟಿಐ
Published 6 ಸೆಪ್ಟೆಂಬರ್ 2020, 15:34 IST
Last Updated 6 ಸೆಪ್ಟೆಂಬರ್ 2020, 15:34 IST
   

ನವದೆಹಲಿ: ಕೋವಿಡ್–19 ಸಾಂಕ್ರಾಮಿಕದ ಅವಧಿಯಲ್ಲಿ ಷೇರು ಮಾರುಕಟ್ಟೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ. ವೇತನ ಕಡಿತ ಹಾಗೂ ಉದ್ಯೋಗ ನಷ್ಟದ ಪರಿಣಾಮವಾಗಿ ಮನೆಯ ಖರ್ಚುಗಳಿಗೆ ಹಣ ಕೊಡಬೇಕಾದ ಅಗತ್ಯತೆ ಹೆಚ್ಚುತ್ತಿರುವುದು ಇದಕ್ಕೆ ಒಂದು ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ಯಾಂಕುಗಳಲ್ಲಿ ಇರಿಸುವ ನಿಶ್ಚಿತ ಠೇವಣಿಗಳ (ಎಫ್‌.ಡಿ.) ಮೇಲಿನ ಬಡ್ಡಿದರ ಕಡಿಮೆ ಆಗುತ್ತಿರುವುದರ ಪರಿಣಾಮವಾಗಿ, ಮಹಿಳೆಯರು ಪರ್ಯಾಯ ಆದಾಯ ಮೂಲಗಳನ್ನೂ ಹುಡುಕುತ್ತಿದ್ದಾರೆ. ಹೂಡಿಕೆ ಮಾಡುತ್ತಿರುವ ಮಹಿಳೆಯರಲ್ಲಿ ಹೆಚ್ಚಿನವರು ಷೇರು ಮಾರುಕಟ್ಟೆಗೆ ಹೊಸಬರು, ಬಹುತೇಕರು ಗೃಹಿಣಿಯರು ಎಂಬುದು ಕುತೂಹಲದ ಅಂಶ.

‘ಲಾಕ್‌ಡೌನ್‌ ಅವಧಿಯಲ್ಲಿ ರಿಟೇಲ್‌ ಹೂಡಿಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಈ ಮಾತು ಮಹಿಳೆಯರ ವಿಚಾರದಲ್ಲಿಯೂ ಸತ್ಯ. ಉಳಿದೆಲ್ಲರಂತೆ ಮಹಿಳೆಯರೂ ಎಫ್‌.ಡಿ.ಗೆ ಪರ್ಯಾಯಗಳನ್ನು ಹುಡುಕುತ್ತಿದ್ದಾರೆ’ ಎಂದು ‘ಶೇರ್‌ಖಾನ್‌’ ಸಂಸ್ಥೆಯ ನಿರ್ದೇಶಕ ಶಂಕರ್ ವೈಲಾಯಾ ಹೇಳಿದರು. ಡಿಜಿಟಲ್ ವೇದಿಕೆಗಳ ಮೂಲಕ ಮಹಿಳೆಯರು ಬಂಡವಾಳ ಮಾರುಕಟ್ಟೆ ಕುರಿತ ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳಲು ಲಾಕ್‌ಡೌನ್‌ ಅವಧಿಯನ್ನು ಬಳಸಿಕೊಂಡಿದ್ದಾರೆ ಎಂದರು.

ADVERTISEMENT

ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ಹಿಂದಿನ ಮೂರು ತಿಂಗಳುಗಳಿಗೆ ಹೋಲಿಸಿದರೆ, ಮಹಿಳೆಯರು ಖಾತೆ ತೆರೆಯುತ್ತಿರುವ ಪ್ರಮಾಣ ಶೇಕಡ 32ರಷ್ಟು ಹೆಚ್ಚಳವಾಗಿದೆ ಎಂದು ಆನ್‌ಲೈನ್‌ ಬ್ರೋಕರೇಜ್ ಸಂಸ್ಥೆ ‘ಅಪ್‌ಸ್ಟಾಕ್ಸ್’ ಹೇಳಿದೆ. ಈ ಪೈಕಿ ಶೇಕಡ 70ರಷ್ಟು ಮಹಿಳೆಯರು ಮೊದಲ ಬಾರಿಗೆ ಷೇರುಗಳಲ್ಲಿ ಹೂಡಿಕೆ ಮಾಡುತ್ತಿರುವವರು. ಅಲ್ಲದೆ, ಶೇ 35ರಷ್ಟಕ್ಕಿಂತ ಹೆಚ್ಚಿನ ಮಹಿಳೆಯರು ಗೃಹಿಣಿಯರು.

ಮಾರ್ಚ್‌ ನಂತರದಲ್ಲಿ ಷೇರು ಮಾರುಕಟ್ಟೆ ಏರುಗತಿಯಲ್ಲಿ ಇರುವುದು ಕೂಡ ಮಹಿಳೆಯರು ಷೇರುಗಳ ಮೇಲಿನ ಹೂಡಿಕೆಯಲ್ಲಿ ಆಸಕ್ತಿ ತೋರಿಸುತ್ತಿರುವುದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾರ್ಚ್‌ 1ರ ನಂತರ ಜೆರೋದಾ ವೇದಿಕೆಯ ಮೂಲಕ 1.8 ಲಕ್ಷ ಮಹಿಳೆಯರು ಹೂಡಿಕೆಯತ್ತ ಮುಖ ಮಾಡಿದ್ದಾರೆ, ಅವರ ಸರಾಸರಿ ವಯಸ್ಸು 33 ವರ್ಷ ಎಂದು ಕಂಪನಿಯ ಸಹಸಂಸ್ಥಾಪಕ ನಿಖಿಲ್ ಕಾಮತ್ ತಿಳಿಸಿದರು.

ಮುಂದಿನ ಒಂದೆರಡು ವರ್ಷಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವು ಗಣನೀಯವಾಗಿ ಹೆಚ್ಚಳ ಕಾಣಲಿದೆ ಎಂದು ‘5ಪೈಸಾ.ಕಾಂ’ನ ಸಿಇಒ ಪ್ರಕಾಶ್ ಗಾಗ್ದಾನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.