ADVERTISEMENT

ಸೆನ್ಸೆಕ್ಸ್‌ 740 ಅಂಶ ಹೆಚ್ಚಳ

ಪಿಟಿಐ
Published 30 ಮಾರ್ಚ್ 2022, 14:39 IST
Last Updated 30 ಮಾರ್ಚ್ 2022, 14:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಮೂರನೇ ದಿನವೂ ಸಕಾರಾತ್ಮಕ ವಹಿವಾಟು ನಡೆಯತು. ರಿಲಯನ್ಸ್‌ ಇಂಡಸ್ಟ್ರೀಸ್‌, ಇನ್ಫೊಸಿಸ್‌, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್‌ ಷೇರುಗಳ ಗಳಿಕೆಯಿಂದಾಗಿ ಸೆನ್ಸೆಕ್ಸ್‌ ಮತ್ತು ನಿಫ್ಟಿ ಶೇಕಡ 1ಕ್ಕೂ ಹೆಚ್ಚಿನ ಏರಿಕೆ ಕಂಡು ಆರು ವಾರಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಯಿತು.

ರಷ್ಯಾ–ಉಕ್ರೇನ್‌ ಶಾಂತಿ ಮಾತುಕತೆಯಲ್ಲಿ ಪ್ರಗತಿ ಕಾಣುವ ವಿಶ್ವಾಸ ವ್ಯಕ್ತವಾಗಿರುವುದು ಏಷ್ಯಾದ ಷೇರುಪೇಟೆಗಳ ಗಳಿಕೆಗೆ ಕಾರಣವಾಯಿತು. ದೇಶದ ಷೇರುಪೇಟೆಗಳ ಮೇಲೆಯೂ ಅದರ ಪ್ರಭಾವ ಕಂಡುಬಂತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 740 ಅಂಶ ಹೆಚ್ಚಾಗಿ 58,683 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 173 ಅಂಶ ಹೆಚ್ಚಾಗಿ 17,498 ಅಂಶಗಳಿಗೆ ತಲುಪಿತು.

ADVERTISEMENT

ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 1,321 ಅಂಶ, ನಿಫ್ಟಿ 345 ಅಂಶ ಏರಿಕೆ ಆಗಿದೆ. ಬಿಎಸ್‌ಇನಲ್ಲಿ ಸ್ಮಾಲ್‌ಕ್ಯಾಪ್‌ ಶೇ 1.09ರಷ್ಟು ಮತ್ತು ಮಿಡ್‌ಕ್ಯಾಪ್‌ ಶೇ 0.78ರಷ್ಟು ಏರಿಕೆ ಆಗಿದೆ.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 21 ಪೈಸೆ ಇಳಿಕೆ ಆಗಿದ್ದು, ಒಂದು ಡಾಲರ್‌ಗೆ ₹ 75.94ರಂತೆ ವಿನಿಮಯಗೊಂಡಿತು.

ಕಚ್ಚಾ ತೈಲ ದರ ಏರಿಕೆ ಮತ್ತು ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳದಿಂದಾಗಿ ಹಣದುಬ್ಬರ ಹೆಚ್ಚಳ ಆಗುವ ಹಾಗೂ ಬಡ್ಡಿದರ ಏರಿಕೆ ಕಾಣುವ ಸಾಧ್ಯತೆ ಎದುರಾಗಿದೆ. ಹೀಗಾಗಿ ರೂಪಾಯಿ ಮೌಲ್ಯ ಇಳಿಕೆ ಕಂಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ 112.7 ಡಾಲರ್‌ಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.