
ಬೆಂಗಳೂರು: ಮರುಬಳಕೆ ಇಂಧನ ವಲಯದಲ್ಲಿ ಹೆಸರು ಮಾಡಿರುವ ಆರ್.ಪಿ.ಸಂಜೀವ್ ಗೊಯೆಂಕಾ ಉದ್ಯಮ ಸಮೂಹವು ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ ₹10,500 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಇದಕ್ಕೆ ಸರ್ಕಾರದ ಕಡೆಯಿಂದ ಬೇಕಾದ ನೆರವು ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಪಾಲ್ಗೊಂಡಿರುವ ಅವರು ಗುರುವಾರ ಈ ಮಾಹಿತಿ ನೀಡಿದರು.
ಪವನ ವಿದ್ಯುತ್ ಕ್ಷೇತ್ರದಲ್ಲಿ ಅಗತ್ಯವಾಗಿರುವ ಟರ್ಬೈನ್ ಬ್ಲೇಡ್ ಉತ್ಪಾದನೆಯನ್ನು ಕುಷ್ಟಗಿಯಲ್ಲಿ ಈಗಾಗಲೇ ಆರಂಭಿಸಿರುವ ಐನಾಕ್ಸ್ ಜಿಎಫ್ಎಲ್ ಕಂಪನಿಯು ಮುಂಬರುವ ದಿನಗಳಲ್ಲಿ ಇದಕ್ಕೆ ಹತ್ತಿರದ ಪ್ರದೇಶದಲ್ಲೇ ಪವನ ವಿದ್ಯುತ್ಗೆ ಬೇಕಾದ ದೈತ್ಯ ಗೋಪುರಗಳ ಅಭಿವೃದ್ಧಿ ಘಟಕ ಆರಂಭಿಸಲು ಮುಂದಾಗಿದೆ. ಈ ಕಂಪನಿಯು ರಾಜ್ಯದಲ್ಲಿ ಈಗಾಗಲೇ ₹10 ಸಾವಿರ ಕೋಟಿ ಹೂಡಿಕೆ ಮಾಡಿದೆ ಎಂದು ಮಾಹಿತಿ ನೀಡಿದರು.
ರಾಮ್ಕಿ ಗ್ರೂಪ್, ಕೆಐಎಡಿಬಿಯ ಕೈಗಾರಿಕಾ ಪ್ರದೇಶಗಳಲ್ಲಿ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು (ಸಿಇಪಿಟಿ) ಸ್ಥಾಪಿಸಲು ಆಸಕ್ತಿ ತೋರಿಸಿದೆ. ರಾಜ್ಯದಲ್ಲಿ ‘ಫಾರ್ಮಾ ಪಾರ್ಕ್’ ಸ್ಥಾಪನೆ ಸಂಬಂಧ ಈ ಕಂಪನಿಯೊಂದಿಗೆ ಚರ್ಚಿಸಲಾಗಿದೆ. ಟೆಕ್ ಮಹೀಂದ್ರಾ ಕಂಪನಿ ಕೂಡ ರಾಜ್ಯದ 2ನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡಲು ಬಯಸಿದೆ ಎಂದು ಅವರು ವಿವರಿಸಿದರು.
‘ಸಿಂಗಪುರ ಪಾರ್ಕ್’ ಸ್ಥಾಪಿಸುವ ಬಗ್ಗೆ ಆ ದೇಶದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ‘ಸಿಂಗಪುರ ಆರ್ಥಿಕ ಅಭಿವೃದ್ಧಿ ಮಂಡಳಿ’ ಪ್ರತಿನಿಧಿಗಳ ಜತೆ ಪ್ರಸ್ತಾಪಿಸಲಾಗಿದೆ. ಲೆನೊವೊ ಕಂಪನಿಯು ಸ್ಥಳೀಯ ಪೂರೈಕೆದಾರರು ಮತ್ತು ಉದ್ಯಮಿಗಳೊಂದಿಗೆ ಸಹಭಾಗಿತ್ವ ಹೊಂದುವ ಕುರಿತು ವಿಚಾರ ವಿನಿಮಯ ನಡೆಸಿದೆ. ರಕ್ಷಣಾ ಕ್ಷೇತ್ರದಲ್ಲಿರುವ ಎಕ್ಸಾನ್ ಕೇಬಲ್ಸ್, ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಕೆಲವು ಸಭೆಗಳಲ್ಲಿ ಭಾಗವಹಿಸಿದ್ದರು.
ರಾಜ್ಯದಲ್ಲಿನ 2ನೇ ಸ್ತರದ ನಗರಗಳಲ್ಲಿ ವಿಸ್ತರಣೆಗೆ ಟೆಕ್ ಮಹೀಂದ್ರಾ ಒಲವು ವ್ಯಕ್ತಪಡಿಸಿದೆ. ರಾಜ್ಯದಲ್ಲಿ 20 ಹೆಚ್ಚುವರಿ ತರಬೇತಿ ಮೂಲಸೌಕರ್ಯ ಸೌಲಭ್ಯಗಳನ್ನು ಸ್ಥಾಪಿಸುವ ಯೋಜನೆ ಹೊಂದಿರುವುದಾಗಿ ಸ್ನೈಡರ್ ಎಲೆಕ್ಟ್ರಿಕ್ ತಿಳಿಸಿದೆ. ಕ್ರಮೇಣ 100 ಕೌಶಲ ಅಭಿವೃದ್ಧಿ ಕೇಂದ್ರಗಳವರೆಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಎಂ.ಬಿ. ಪಾಟೀಲ ಅವರು ತಿಳಿಸಿದರು. ಸ್ವಿಟ್ಜರ್ಲೆಂಡಿನ ಕಂಪನಿಗಳೊಂದಿಗೆ ರಾಜ್ಯದ ಕೈಗಾರಿಕಾ ಸಂಬಂಧವನ್ನು ಉತ್ತೇಜಿಸುವ ಉದ್ದೇಶದಿಂದ ಸ್ವಿಸ್ ಚೇಂಬರ್ಸ್ ಇಂಡಿಯಾದೊಂದಿಗೆ ರಾಜ್ಯ ಸರ್ಕಾರ ಒಡಂಬಡಿಕೆಗೆ ಸಹಿ ಹಾಕಿದೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.