ಅನುರಣನ: ಇದು ಬರೀ ಬಾಡಲ್ಲೊ ಅಣ್ಣಾ
ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜತೆಗೆ ಮಾಂಸಾಹಾರವನ್ನೂ ಒದಗಿಸಬೇಕು ಎನ್ನುವ ಬೇಡಿಕೆ ಕಾವು ಪಡೆದುಕೊಳ್ಳುತ್ತಿರುವುದು ಮತ್ತು ಅದರ ಸುತ್ತ ವಿವಾದ ಹುಟ್ಟಿಕೊಂಡಿರುವುದು ಆಹಾರಕ್ಕೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಮಾಂಸಾಹಾರದ ವ್ಯವಸ್ಥೆ ಆಗುತ್ತದೋ ಬಿಡುತ್ತದೋ ಎನ್ನುವ ವಿಷಯ ಬೇರೆ. ಇಂದಿನ ಸಂದರ್ಭದಲ್ಲಿ ಇಂತಹದ್ದೊಂದು ಬೇಡಿಕೆ ಎದ್ದಿದೆ ಮತ್ತು ಅದನ್ನು ಗಟ್ಟಿಯಾಗಿ ಪ್ರತಿಪಾದಿಸಲಾಗುತ್ತಿದೆ ಎನ್ನುವುದೇ ಒಂದು ವಿಶೇಷ.
ಇದು ನಿರ್ದಿಷ್ಟ ಆಹಾರಕ್ಕಾಗಿ ಕೆಲವರು ಮಾಡುತ್ತಿರುವ ಆಗ್ರಹ ಎನ್ನುವುದಕ್ಕಿಂತ ಹೆಚ್ಚಾಗಿ ಮಂಡ್ಯದ ಮಣ್ಣಿನಿಂದ ಮೂಡಿಬಂದ ಒಂದು ಪ್ರತಿರೋಧದ ಧ್ವನಿ. ಎಲ್ಲೆಡೆ ಏಕ ಸಂಸ್ಕೃತಿಯೊಂದನ್ನು ಹೇರುವ ಭಾಗವಾಗಿ ಜನರ ಆಹಾರಕ್ರಮವನ್ನೂ ರಾಷ್ಟ್ರೀಯ, ರಾಷ್ಟ್ರವಿರೋಧಿ ಎನ್ನುವಂತೆ ಪ್ರತ್ಯೇಕಿಸಿದ್ದು ಮತ್ತು ಅದನ್ನು ಒಪ್ಪಿಕೊಳ್ಳದವರೆಲ್ಲರೂ ದೇಶದ್ರೋಹಿಗಳು ಮತ್ತು ಧರ್ಮದ್ರೋಹಿಗಳು ಎಂದು ಬಿಂಬಿಸುವ ಇಂದಿನ ರಾಜಕೀಯದ ಹಿನ್ನೆಲೆಯಲ್ಲಿ ಈ ಮಾಂಸಾಹಾರದ ಪ್ರತಿಪಾದನೆಯನ್ನು ಗಮನಿಸಬೇಕಿದೆ.
ಕರ್ನಾಟಕದಲ್ಲಿ ಈ ರಾಜಕೀಯದ ಅತ್ಯಂತ ಕೊಳಕು ಪ್ರದರ್ಶನ ಆಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದಿನ ಅಧಿಕಾರಾವಧಿಯಲ್ಲಿ ಮಾಂಸಾಹಾರ ಸೇವಿಸಿ ದೇವಸ್ಥಾನವೊಂದಕ್ಕೆ ಭೇಟಿ ನೀಡಿದರು ಎನ್ನುವುದನ್ನು ಮುಂದಿಟ್ಟುಕೊಂಡು ಕೆಲವರು ಸೃಷ್ಟಿಸಿದ ವಿವಾದದಲ್ಲಿ. ಅಂದು, ಆಹಾರ ಸೇವನೆಯ ಕಾರಣದಿಂದ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧವೇನೂ ಇಲ್ಲ ಎಂದು ಆ ದೇವಸ್ಥಾನದ ಆಡಳಿತ ಮಂಡಳಿಯವರೇ ಸಮಜಾಯಿಷಿ ನೀಡಿದ ಮೇಲೂ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದ್ದು ಬಹುಸಂಸ್ಕೃತಿಯ ಜನವರ್ಗವನ್ನು ಅಕ್ಷರಶಃ ಅವಮಾನಿಸಿದಂತಿತ್ತು.
ನಾವು ಹೇಳಿದ್ದೇ ಧರ್ಮ, ನಾವು ನಿರೂಪಿಸಿದ್ದೇ ದೇವರು, ನಾವು ಪ್ರತಿಪಾದಿಸಿದ್ದೇ ಪಾವಿತ್ರ್ಯ, ನಾವು ಒಪ್ಪಿಕೊಂಡದ್ದೇ ಆಹಾರಕ್ರಮ ಎನ್ನುವ ಒಂದು ಜನವರ್ಗದವರ ಅಹಂಕಾರದ ಎದುರು ಸಿದ್ದರಾಮಯ್ಯ ಪ್ರಕರಣದಲ್ಲಿ ಒಂದು ಸಣ್ಣ ಪ್ರತಿರೋಧವೂ ಹುಟ್ಟಿಕೊಂಡಿರಲಿಲ್ಲ. ಏಕೆಂದರೆ, ಈ ನೆಲದ ಮೂಲ ವಾರಸುದಾರರಾದ ಬಹುಜನ ವರ್ಗಗಳು ತಮ್ಮ ಮೇಲಾದ ನಿರಂತರ ಸಾಂಸ್ಕೃತಿಕ ದಾಳಿಯಿಂದ ಆ ಮಟ್ಟಿಗೆ ತಮ್ಮತನವನ್ನು ಕಳೆದುಕೊಂಡು ನಿಸ್ತೇಜವಾಗಿಬಿಟ್ಟಿದ್ದವು. ಮಾಂಸಾಹಾರದ ಬಗ್ಗೆ ಯಾರೋ ತಕರಾರು ಎತ್ತುತ್ತಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಮಾಂಸಾಹಾರಿಗಳೇ ತಮ್ಮ ಆಹಾರಕ್ರಮದ ಬಗ್ಗೆ ಕೀಳರಿಮೆ ಬೆಳೆಸಿಕೊಂಡದ್ದು ಒಂದು ದುರಂತ. ಅಂದೇ ಜಾಗೃತವಾಗಿ ಮೇಲೆದ್ದು, ಮಾಂಸಾಹಾರ ಸೇವನೆ ಮಾಡಿ ದೇವಾಲಯ ಪ್ರವೇಶಿಸಬಾರದೆಂಬ ನಿರ್ಬಂಧ ಹೇರುವ ರಾಜಕೀಯವನ್ನು ಖಂಡಿಸಬೇಕಿದ್ದ ಈ ನೆಲದ ಶೂದ್ರಪ್ರಜ್ಞೆ ಈಗಲಾದರೂ ಈ ರೀತಿ ಮಂಡ್ಯದಲ್ಲಿ ಕಾಣಿಸಿಕೊಂಡಿರುವುದು ಸ್ವಾಗತಾರ್ಹ.
ಮಾಂಸಾಹಾರದಿಂದಾಗಿ ದೇವರ ಪಾವಿತ್ರ್ಯ ಕೆಡುತ್ತದೆ ಎನ್ನುವವರು ಒಂದು ವಿಷಯ ಅರಿತುಕೊಳ್ಳಬೇಕು. ದೇವರನ್ನು ಸೃಷ್ಟಿಯ ಅಗೋಚರ ನಿಯಾಮಕ ಶಕ್ತಿ ಎಂದು ಸ್ವೀಕರಿಸಿದರೆ, ಒಂದು ಜೀವಿಯು ಬದುಕುವುದಕ್ಕಾಗಿ ಇನ್ನೊಂದು ಜೀವಿಯನ್ನು ತಿನ್ನಲೇಬೇಕಾದ ಆಹಾರ ಶೃಂಖಲೆಯನ್ನು ಸೃಷ್ಟಿಸಿದ್ದು ಅದೇ ದೇವರು ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಪರ್ಯಾಯವಾಗಿ, ದೇವರುಗಳು ಎಂದರೆ ಮನುಷ್ಯನೇ ಸೃಷ್ಟಿಸಿದ ಪೌರಾಣಿಕ ಪಾತ್ರಗಳೆಂದು ನಂಬಿದರೆ, ಅಂತಹ ಹಲವಾರು ದೇವರು ಮಾಂಸಾಹಾರಿಗಳಾಗಿದ್ದರು ಎನ್ನುವುದನ್ನು ಆಯಾ ದೇವರ ಪುರಾಣಗಳೇ ಸಾರುತ್ತವೆ.
ಆಹಾರ ಎನ್ನುವುದು ಎಲ್ಲ ಜೀವಸೆಲೆಗಳ ಚೈತನ್ಯದ ಮೂಲ. ಆಹಾರವು ಯಾವುದೇ ರೂಪದಲ್ಲಿದ್ದರೂ ಸೇವಿಸುವ ಜೀವಿಗೆ ಅದೇ ದೇವರು, ಅದೇ ಪವಿತ್ರ. ಹಾಗಾಗಿ, ಮಾಂಸಾಹಾರವು ಅಪವಿತ್ರ, ಕೊಳಕು, ಹೊಲಸು ಎಂಬೆಲ್ಲಾ ನಂಬಿಕೆಗಳನ್ನು ಸೃಷ್ಟಿಸಿ ಬಹುಜನರ ಮನಸ್ಸಿನಲ್ಲಿ ಪಾಪಪ್ರಜ್ಞೆ ಮತ್ತು ಕೀಳರಿಮೆಯನ್ನು ಹುಟ್ಟುಹಾಕಿದ್ದು ಒಂದು ರೀತಿಯ ಸಾಂಸ್ಕೃತಿಕ ವಸಾಹತೀಕರಣ. ಇದರಿಂದಾಗಿ ಮಾಂಸದಡುಗೆಯನ್ನೇ ತಮ್ಮ ದೇವರುಗಳಿಗೂ ಬಡಿಸಿ ತಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ಸರಳವಾಗಿ ಪೂರೈಸಿಕೊಳ್ಳುತ್ತಿದ್ದ ಬಹುಜನ ವರ್ಗಗಳು ‘ಶುದ್ಧ’ ಸಸ್ಯಾಹಾರಿ ವೈದಿಕ ದೇವರುಗಳು ತಮ್ಮ ಮೂಲದೇವರುಗಳಿಗಿಂತ ಶ್ರೇಷ್ಠ ಮತ್ತು ಬಲಶಾಲಿಗಳು ಅಂತ ಭ್ರಮಿಸುವಂತಾಯಿತು. ಆ ಪ್ರಭಾವಿ ದೇವರುಗಳ ಪ್ರೀತ್ಯರ್ಥ ಆಡಂಬರದ ತೀರ್ಥಯಾತ್ರೆ ಮಾಡುತ್ತಾ, ಹೋಮ ಹವನ ಮಾಡಿಸಿಕೊಳ್ಳುತ್ತಾ ಆಧ್ಯಾತ್ಮಿಕವಾಗಿಯೂ ಆದಿಭೌತಿಕವಾಗಿಯೂ ತಮ್ಮನ್ನು ತಾವೇ ಕಳೆದುಕೊಳ್ಳುವಂತೆಯೂ ಆಯಿತು. ಅವರಿಗಾದ ಈ ನಷ್ಟದ ಲಾಭ ಪಡೆದವರು ಯಾರು ಅಂತ ವಿವರಿಸುವ ಅಗತ್ಯ ಇಲ್ಲ.
ಸಾಹಿತ್ಯ ಸಮ್ಮೇಳನವೊಂದೇ ಅಲ್ಲ, ಬಹುಕಾಲದಿಂದ ಇಂತಹ ಸಮಾರಂಭಗಳಲ್ಲಿ ಸಸ್ಯಾಹಾರವನ್ನು ಮಾತ್ರ ನೀಡುವ ಪದ್ಧತಿ ಇದೆ. ಅದಕ್ಕೊಂದು ಕಾರಣವೂ ಇದೆ. ಸಸ್ಯಾಹಾರವನ್ನು ಎಲ್ಲರೂ ಸೇವಿಸುತ್ತಾರೆ, ಮಾಂಸಾಹಾರವನ್ನು ಎಲ್ಲರೂ ಸೇವಿಸುವುದಿಲ್ಲ. ಹಾಗಾಗಿ, ಪ್ರಾಯೋಗಿಕ ನೆಲೆಯಲ್ಲಿ ಎಲ್ಲರೂ ಸೇವಿಸುವ ಆಹಾರವೇ ಇರಲಿ ಎನ್ನುವುದು ಆ ಕಾರಣ. ಇದು ತಾರತಮ್ಯ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ಅನುಕೂಲಕರ ವ್ಯವಸ್ಥೆ ಎನ್ನುವ ಅರ್ಥದಲ್ಲಿ ಸ್ವೀಕೃತವಾಗಿದೆ. ಈ ವ್ಯವಸ್ಥೆಯನ್ನು ಮಾಂಸಾಹಾರಿಗಳು ಪ್ರಶ್ನಿಸದೇ ಇದ್ದದ್ದು ಸಾರ್ವಜನಿಕ ಸಭ್ಯತೆಯ ದೃಷ್ಟಿಯಿಂದಲೋ ಕೀಳರಿಮೆಯಿಂದಲೋ ಇರಬಹುದು. ಏನೇ ಆಗಲಿ, ಅದೊಂದು ಅಲಿಖಿತ ಒಪ್ಪಂದ. ಇಂತಹ ಕೊಡುಕೊಳ್ಳುವಿಕೆಯ, ಪರಸ್ಪರ ತಾಳಿಕೊಳ್ಳುವಿಕೆಯ ಸಂಬಂಧಗಳ ಹಂದರವೇ ಈ ವೈವಿಧ್ಯಮಯ ದೇಶವನ್ನು ಏಕಮಯವಾಗಿ ಉಳಿಸಿದ್ದು. ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳದೆ ಮಾಂಸಾಹಾರಿಗಳು ದುಷ್ಟ ತಾಮಸ ಪ್ರವೃತ್ತಿಯವರು, ಸಸ್ಯಾಹಾರಿಗಳು ಸಾತ್ವಿಕರು ಎಂಬಿತ್ಯಾದಿ ಕಥನಗಳನ್ನು ಕಟ್ಟಿ, ಮಾಂಸ ಸೇವನೆಯ ವಿಷಯದಲ್ಲಿ ಮನುಷ್ಯರನ್ನೇ ಎಗ್ಗಿಲ್ಲದೆ ಬೀದಿಬೀದಿಗಳಲ್ಲಿ ಥಳಿಸಿ ಕೊಲ್ಲುವ ಮಟ್ಟಿಗೆ ಆಹಾರ ರಾಜಕೀಯದ ಅತಿರೇಕ ಮುಂದುವರಿದಿರುವ ಈ ಕಾಲಕ್ಕೆ ಸಸ್ಯಾಹಾರ ಮಾತ್ರ ಯಾಕೆ, ಮಾಂಸಾಹಾರ ಯಾಕಿಲ್ಲ ಅಂತ ಯಾರಾದರೂ ಕೇಳುವುದು ಸಹಜ ಮತ್ತು ಅತ್ಯಗತ್ಯ ಬೆಳವಣಿಗೆ.
ಮಾಂಸಾಹಾರಿಗಳು ಕೆಲವರು ತಾವು ‘ಆ ದಿನ’ ಮಾಂಸ ಸೇವಿಸುವುದಿಲ್ಲ, ‘ಈ ತಿಂಗಳು’ ಮಾಂಸ ಸೇವಿಸುವುದಿಲ್ಲ ಎಂಬಂತಹ ಪದ್ಧತಿಗಳನ್ನು ಅಳವಡಿಸಿಕೊಂಡಿರುವುದು ಬರೀ ನಂಬಿಕೆಯ ವಿಷಯವಷ್ಟೇ ಅಲ್ಲ. ಅದೊಂದು ರೀತಿ ಅತ್ತ ತಮ್ಮ ಆಹಾರ ಪದ್ಧತಿಯನ್ನು ತ್ಯಜಿಸಲಾಗದ ಇತ್ತ ಮಾಂಸಾಹಾರ ಸೇವಿಸಿ ಅದೇನೋ ದೈವದ್ರೋಹ ಎಸಗುತ್ತಿದ್ದೇವೆ ಎನ್ನುವ ದ್ವಂದ್ವದಿಂದ ಹೊರಬರಲಾಗದ ಸ್ಥಿತಿಯಲ್ಲಿ ರೂಢಿಸಿಕೊಂಡಿರುವ ತಾತ್ಕಾಲಿಕ ಪಲಾಯನ ಮಾರ್ಗವೂ ಆಗಿದೆ. ಅವೆಲ್ಲವೂ ವೈಯಕ್ತಿಕ ನಂಬಿಕೆಗಳು ಅಂತ ಬಿಟ್ಟುಬಿಡಬಹುದು. ಆದರೆ, ಆಹಾರಕ್ರಮದಲ್ಲೂ ಶ್ರೇಣೀಕರಣ ಸೃಷ್ಟಿಸಿ ಈ ದೇಶದ ಬಹುಜನರನ್ನು ಬೌದ್ಧಿಕ- ಸಾಂಸ್ಕೃತಿಕ ದಾಸ್ಯಕ್ಕೆ ದೂಡುವ ಪ್ರವೃತ್ತಿಯನ್ನು ಯಾರೂ ಪ್ರಶ್ನಿಸದಿರಲಿ ಎಂಬ ಕಾರಣಕ್ಕೆ ನಂಬಿಕೆ ಎಂಬ ಈ ಗುರಾಣಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಪ್ರಜ್ಞೆ ಕೂಡ ಶೂದ್ರ ಬಹುಜನ ವರ್ಗಕ್ಕೆ ಇರಬೇಕಾಗುತ್ತದೆ.
ಹಾಗಾಗಿ, ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಎದ್ದಿರುವ ಬಾಡೂಟದ ಬೇಡಿಕೆಯು ವ್ಯವಸ್ಥಿತವಾಗಿ ಸಾಂಸ್ಕೃತಿಕ ದಾಸ್ಯವನ್ನು ಹೇರುವ ರಾಷ್ಟ್ರಮಟ್ಟದ ರಾಜಕೀಯಕ್ಕೊಂದು ಸ್ಥಳೀಯ ಪ್ರತಿರೋಧದಂತೆ ಕಾಣಿಸುತ್ತಿದೆ. ರಾಷ್ಟ್ರಕ್ಕೆಲ್ಲ ಒಂದು ದೇವರು- ಒಂದು ಧರ್ಮ, ದೇವರು ಎಂದರೆ ಒಂದು ವರ್ಗದವರು ಸೃಷ್ಟಿಸಿದ ಪೌರಾಣಿಕ ಪಾತ್ರಗಳು, ಧರ್ಮ ಎಂದರೆ ಒಂದು ವರ್ಗದವರು ಒಪ್ಪಿಕೊಂಡ ನಂಬಿಕೆಗಳು ಎನ್ನುವ ರೀತಿಯಲ್ಲಿ ಇಡೀ ಜನಸಮುದಾಯವನ್ನು ನಂಬಿಸಿ, ಅವರು ತಮ್ಮ ಸ್ವಂತಿಕೆಯನ್ನು ಮತ್ತು ಅಸ್ಮಿತೆಯನ್ನು ಮರೆಯುವಂತೆ ಮಾಡುವ ರಾಜಕೀಯಕ್ಕೆ ಎಸೆದ ಸವಾಲಿನ ರೂಪದಲ್ಲಿ ‘ಮಾಂಸದೂಟವೂ ಬೇಕು’ ಎನ್ನುವ ಬೇಡಿಕೆ ಎದ್ದು ಬಂದಿದೆ. ಅದೇ ರೀತಿ, ಬಹುಕಾಲದಿಂದಲೂ ಮಾಂಸಾಹಾರಿ ಬಹುಜನರನ್ನು ಆವರಿಸಿಕೊಂಡಿರುವ ಕೀಳರಿಮೆಯಿಂದ ಹೊರಬರಲು ಅವರಿಗೆ ನೀಡಿದ ಕರೆಯೂ ಆಗಿದೆ.
ಹಾಗೆಯೇ, ಮಾಂಸಾಹಾರವೂ ಏಕಿಲ್ಲ ಎನ್ನುವುದು ಬರೀ ಪ್ರಶ್ನೆಯಲ್ಲ. ಬದಲಿಗೆ ಅದು ಈ ದೇಶದ ಬಹುಸಂಸ್ಕೃತಿಯ ಮೇಲೆ ಆಗುತ್ತಿರುವ ದಾಳಿಯನ್ನು ಹಿಮ್ಮೆಟ್ಟಿಸಲು ಅಗತ್ಯವಾಗಿ ಪ್ರಯೋಗಿಸಬೇಕಿರುವ ಪ್ರತ್ಯಸ್ತ್ರ. ಸಸ್ಯಾಹಾರಿಗಳೂ ಸೇರಿದಂತೆ ಎಲ್ಲರನ್ನೂ ಗೌರವಿಸುವ, ಎಲ್ಲರ ಹಕ್ಕುಗಳನ್ನೂ ರಕ್ಷಿಸುವ ಹಾಗೂ ದೇವರು, ನಂಬಿಕೆ, ಆಹಾರಕ್ರಮದಂತಹವು ವೈಯಕ್ತಿಕ ಆಯ್ಕೆಗಳು ಎಂದು ಸಾರುವ ಈ ದೇಶದ ಸಂವಿಧಾನ ತೋರಿಸಿರುವ ಹಾದಿಗೆ ಸಮಾಜವನ್ನು ಮರಳಿಸುವ ಪ್ರಯತ್ನವಾಗಿಯೂ ಇಂತಹ ಬೇಡಿಕೆಗಳನ್ನು ಅರ್ಥೈಸಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.