
ಮುಖ್ಯಮಂತ್ರಿ ಬದಲಾವಣೆ ಕುರಿತ ಸುದ್ದಿಗಳು ರಾಜಕಾರಣದ ಮೊಗಸಾಲೆಯಲ್ಲಿ ಮತ್ತೆ ದಟ್ಟವಾಗಿವೆ. ಅದೇ ಕಾಲಕ್ಕೆ, ದಲಿತರೊಬ್ಬರು ಮುಖ್ಯಮಂತ್ರಿ ಆಗುವ ಸಾಧ್ಯತೆ ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದೆ. ‘ದಲಿತ ಸಿಎಂ’ ಕಾಣುವ ಅವಕಾಶ ಕನ್ನಡಿಗರಿಗೆ ಸದ್ಯಕ್ಕೆ ಇರುವಂತೆ ಕಾಣಿಸುತ್ತಿಲ್ಲ. ಆದರ್ಶ ಎನ್ನುವುದು ಅಧಿಕಾರಕ್ಕೆ ಮೆಟ್ಟಿಲೇ ಹೊರತು ಆಚರಣೆಗಲ್ಲ ಎನ್ನುವ ಸತ್ಯ ಮತ್ತೆ ಸಾಬೀತಾಗುತ್ತಿದೆ.
ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎಂಬ ಹಾಗೆಯೇ ಅಂತೂ ಇಂತೂ ಕರ್ನಾಟಕಕ್ಕೆ ದಲಿತ ಸಿಎಂ ಭಾಗ್ಯ ಇಲ್ಲ! ಸದ್ಯದ ರಾಜಕೀಯ ವಿದ್ಯಮಾನವನ್ನು ಗಮನಿಸಿದರೆ, ರಾಜ್ಯದಲ್ಲಿ ದಲಿತ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಸಾಧ್ಯವಾಗುವ ಲಕ್ಷಣ ಕಾಣುತ್ತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಇರುವ ದಲಿತ ಸಚಿವರೆಲ್ಲ ಸಭೆ ಮೇಲೆ ಸಭೆ ನಡೆಸಲಿ, ದಲಿತ ಮುಖಂಡರ ಮೆರವಣಿಗೆ ನಡೆಯಲಿ, ಸಮಾವೇಶ ನಡೆಯಲಿ, ಏನೇ ಪ್ರಯತ್ನ ಪಟ್ಟರೂ ಈ ಬಾರಿ ದಲಿತರೊಬ್ಬರು ಮುಖ್ಯಮಂತ್ರಿಯಾಗುವುದು ದೂರದ ಮಾತು ಎನ್ನುತ್ತದೆ ಕಾಂಗ್ರೆಸ್‌ನ ರಾಜಕೀಯ ಮೊಗಸಾಲೆ. ಮುಖ್ಯಮಂತ್ರಿ ಪಟ್ಟದ ವಿಚಾರ ಬಂದಾಗ ‘ದಲಿತರಿಗೆ ಮುಂದಿನ ಬಾರಿ’ ಎನ್ನುವುದೊಂದೇ ಸಿಕ್ಕುವ ಭರವಸೆ. ದಲಿತರೊಬ್ಬರು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದ್ದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ಬಿಜೆಪಿ ಅಥವಾ ಜೆಡಿಎಸ್‌ನಲ್ಲಿ ಅದು ಸಾಧ್ಯವೇ ಇಲ್ಲ. ಆದರೆ, ಈ ಬಾರಿ ದಲಿತ ಮುಖ್ಯಮಂತ್ರಿ ಇಲ್ಲ ಎಂದೇ ಪಕ್ಷದ ವಲಯ ಹೇಳುತ್ತದೆ. ಇದೆಲ್ಲ ಗೊತ್ತಾಗಿಯೇ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಕೊಳಿ ಅವರು, ತಾವು 2028ಕ್ಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಮತ್ತು ಅವರ ಬೆಂಬಲಿಗರು ದಲಿತ ಸಿಎಂ ಎಂಬ ಭೂತವನ್ನು ಹೊರಗೆ ಬಿಟ್ಟಿರುವುದು ಸಿದ್ದರಾಮಯ್ಯ ಅವರ ಕುರ್ಚಿಯನ್ನು ಗಟ್ಟಿ ಮಾಡಿಕೊಳ್ಳುವ ತಂತ್ರದ ಭಾಗವೇ ವಿನಾ ಮತ್ತೇನೂ ಅಲ್ಲ. ಕಾಂಗ್ರೆಸ್‌ನಲ್ಲಿರುವ ಬಹಳಷ್ಟು ದಲಿತ ನಾಯಕರು ಮುಖ್ಯಮಂತ್ರಿ ಹುದ್ದೆಗೆ ಅರ್ಹರೇ ಆಗಿದ್ದರೂ ಅವರ ಕನಸು ನನಸಾಗುವ ಸಂಭವ ಕಡಿಮೆ.
‘ಅಹಿಂದ’ ರಾಜಕಾರಣವನ್ನು ಮಾಡಿಕೊಂಡು ಬಂದಿರುವ ಸಿದ್ದರಾಮಯ್ಯ ಅವರು, ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಯುವುದು ಖಚಿತವಾದರೆ, ಅಹಿಂದ ವರ್ಗಕ್ಕೆ ಸೇರಿದ ವ್ಯಕ್ತಿಗೇ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡುವುದಾಗಿ ಷರತ್ತು ವಿಧಿಸಿದರೆ ಅದು ಸಹಜವೂ ಹೌದು. ಅವರಿಗೆ ಅದು ಮಾಡಲೇಬೇಕಾದ ಕಾರ್ಯವೂ ಹೌದು. ಆದರೆ, ದಲಿತ ಸಿಎಂ ಎಂಬ ಕೂಗೆಬ್ಬಿಸಿರುವುದರ ಹಿಂದೆ ಇಂತಹ ಉದಾತ್ತ ಭಾವವೊಂದೇ ಇದೆಯೋ ಅಥವಾ ರಾಜಕಾರಣವೂ ಇದೆಯೇ ಎಂದು ಕೇಳಿದರೆ ಖಂಡಿತ ರಾಜಕೀಯ ತಂತ್ರವೂ ಇದೆ ಎನ್ನುತ್ತದೆ ಕಾಂಗ್ರೆಸ್ ಪಡಸಾಲೆ. ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯಬೇಕು ಮತ್ತು ಇದೇ ವಿಷಯಕ್ಕೆ ರಾಜಕೀಯ ಗೊಂದಲ ಉಂಟಾಗಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಗಾದಿಯಲ್ಲಿ ಮುಂದುವರಿಯಬೇಕು ಎಂಬ ಇರಾದೆ ಇರುವುದಂತೂ ಸತ್ಯ. ಇದು ಅಂಗೈ ಹುಣ್ಣಿನಷ್ಟೇ ಗೋಚರ. ಅದನ್ನು ನೋಡಲು ಕನ್ನಡಿ ಅಗತ್ಯವಿಲ್ಲ.
ಹಾಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟದಿಂದ ಕೆಳಕ್ಕೆ ಇಳಿಯುವರೇ? ಎಂದು ಪ್ರಶ್ನೆ ಮಾಡಿದರೆ, ‘ಹೌದು, ಕಾಂಗ್ರೆಸ್ ಪಾಳಯದಲ್ಲಿ ಅಂತಹ ಸನ್ನಿವೇಶವೊಂದು ನಿರ್ಮಾಣ ಆಗಿದೆ’ ಎನ್ನುವ ಉತ್ತರವೇ ಬರುತ್ತದೆ. ಅದಕ್ಕೆ ಸಿದ್ದರಾಮಯ್ಯ ಅವರ ಮಾತುಗಳೇ ಸಾಕ್ಷಿ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು. ಮೊದಮೊದಲು ಸಿದ್ದರಾಮಯ್ಯ ಅವರು, ‘ಹೈಕಮಾಂಡ್ ಲೆವೆಲ್‌ನಲ್ಲಿ ಅಧಿಕಾರದ ಹಂಚಿಕೆಯ ಬಗ್ಗೆ ಮಾತುಕತೆಯೇ ಆಗಿಲ್ಲ. ಅವೆಲ್ಲ ಮಾಧ್ಯಮಗಳ ಸೃಷ್ಟಿ. ನಾನು ಐದು ವರ್ಷ ಮುಖ್ಯಮಂತ್ರಿ. ಈ ಬಗ್ಗೆ ಅನುಮಾನವೇ ಬೇಡ’ ಎನ್ನುತ್ತಿದ್ದರು. ಸ್ವಲ್ಪ ಸಮಯದ ನಂತರ ‘ಶಾಸಕರ ಬೆಂಬಲ ಇದ್ದರೆ ಮುಖ್ಯಮಂತ್ರಿಯಾಗಬಹುದು’ ಎಂದರು. ನಂತರ ‘ಮುಖ್ಯಮಂತ್ರಿಯಾಗಲು ಶಾಸಕರ ಬೆಂಬಲವೂ ಬೇಕು, ಹೈಕಮಾಂಡ್ ಆಶೀರ್ವಾದವೂ ಬೇಕು’ ಎಂಬ ಹೇಳಿಕೆ ನೀಡಿದರು. ಈಗ ಅವರು ‘ಹೈಕಮಾಂಡ್ ಒಪ್ಪಿದರೆ ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದು ಹೇಳುತ್ತಿದ್ದಾರೆ. ಅಂದರೆ ಅವರ ಮಾತಿನ ಅರ್ಥ ಸದ್ಯಕ್ಕೆ ಅಧಿಕಾರದ ಹಂಚಿಕೆ ಅನಿವಾರ್ಯ ಎಂಬುದನ್ನೇ ಸೂಚಿಸುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇನ್ನೊಂದೆಡೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವರ್ತನೆಯನ್ನು ಗಮನಿಸಬೇಕು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಚರ್ಚೆಗೆ ಬಂದಾಗಿನಿಂದಲೂ ಅವರ ನಡವಳಿಕೆ ಗಂಭೀರವಾಗಿಯೇ ಇದೆ. ತೀರಾ ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುತುವರ್ಜಿಯ ಹೆಜ್ಜೆ ಇಡುತ್ತಿದ್ದಾರೆ. ಎಲ್ಲಿಯೂ ಅತಿರೇಕದ ಮಾತುಗಳಿಲ್ಲ. ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ದ್ರೋಣಪುತ್ರ ಅಶ್ವತ್ಥಾಮ ಪಾಂಡವರ ವಿರುದ್ಧ ನಾರಾಯಣ ಅಸ್ತ್ರವನ್ನು ಪ್ರಯೋಗ ಮಾಡುತ್ತಾನೆ. ಆ ಅಸ್ತ್ರಕ್ಕೆ ಪ್ರತಿಯೆಂಬುದೇ ಇಲ್ಲ. ಅದನ್ನು ಧಿಕ್ಕರಿಸಿದರೆ ಅದು ಎಲ್ಲರನ್ನೂ ನಾಶ ಮಾಡುತ್ತದೆ. ಇಂತಹ ನಾರಾಯಣ ಅಸ್ತ್ರವನ್ನು ಕಂಡು ಪಾಂಡವರು ಕಂಗಾಲಾಗುತ್ತಾರೆ. ಯುದ್ಧದಲ್ಲಿ ಸೋಲು ಗ್ಯಾರಂಟಿ ಎಂದು ಭಯಗೊಳ್ಳುತ್ತಾರೆ. ಆಗ ಕೃಷ್ಣ ಪಾಂಡವರನ್ನು ಸಮಾಧಾನಪಡಿಸಿ, ‘ಈ ಅಸ್ತ್ರಕ್ಕೆ ಶರಣಾದರೆ ಅದು ನಿಷ್ಫಲವಾಗುತ್ತದೆ’ ಎಂದು ಉಪದೇಶ ಮಾಡುತ್ತಾನೆ. ಅದರಂತೆಯೇ ಪಾಂಡವರು ನಾರಾಯಣ ಅಸ್ತ್ರಕ್ಕೆ ಶರಣಾಗುತ್ತಾರೆ. ಅದು ಹಿಂದೆ ಸರಿಯುತ್ತದೆ. ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಎಂಬ ನಾರಾಯಣಾಸ್ತ್ರ ಹೊರಕ್ಕೆ ಬಂದಾಗ ಶಿವಕುಮಾರ್ ಬಣ ಕೂಡಾ ಕಂಗಾಲಾಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂಬ ಗುಲ್ಲು ಹಬ್ಬಿಸಲಾಯಿತು. ಆಗ ಶಿವಕುಮಾರ್ ನಡವಳಿಕೆ ಕೂಡಾ ಬದಲಾಯಿತು. ಸಿದ್ದರಾಮಯ್ಯ ಅವರು ಪಟ್ಟದಿಂದ ಇಳಿದು ಇನ್ನೊಬ್ಬರು ಮುಖ್ಯಮಂತ್ರಿಯಾಗುವುದಕ್ಕಿಂತ ಈಗಿರುವ ವ್ಯವಸ್ಥೆಯೇ ಮುಂದುವರಿಯಲಿ ಎಂದು ಅವರು ಭಾವಿಸಿದರೋ ಏನೋ, ಅಂತೂ ಅವರು ಅಲ್ಲಿಂದ ತಮ್ಮ ವರ್ತನೆಯನ್ನೇ ಬದಲಿಸಿಕೊಂಡರು. ಅವರಿಗೆ ಉಪದೇಶ ಮಾಡಿದ ಕೃಷ್ಣ ಪರಮಾತ್ಮ ಯಾರೆಂಬುದು ಗೊತ್ತಿಲ್ಲ. ಆದರೆ, ಉಪದೇಶ ಸಂಪೂರ್ಣ ಅವರಿಗೆ ನಾಟಿರುವುದು ಸತ್ಯ. ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿಯೂ ಅವರು, ‘ಸಿದ್ದರಾಮಯ್ಯ ಅವರ ಪರ ಬಂಡೆಯಂತೆ ನಿಲ್ಲುವೆ’ ಎಂಬ ಭರವಸೆಯ ಮಾತುಗಳನ್ನು ಆಡಿದ್ದರು. ಸಿದ್ದರಾಮಯ್ಯ ವಿರುದ್ಧ ಎಲ್ಲಿಯೂ ಕಟುಟೀಕೆ ಮಾಡಲಿಲ್ಲ. ಕಾಂಗ್ರೆಸ್ ಭಿನ್ನಮತ ಇಷ್ಟೊಂದು ಲೈಟಾದರೆ ಹೇಗೆ ಸ್ವಾಮಿ ಎಂದು ಜನರೇ ಪ್ರಶ್ನೆ ಮಾಡುವಂತೆ ಅವರ ವರ್ತನೆ ಇತ್ತು. ರಾಜಕೀಯದಲ್ಲಿ ಭಿನ್ನಮತ ಎಂದರೆ ಅದು ಮಾತಿನ ಚಕಮಕಿಯೂ ಹೌದು. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವೀರಪ್ಪ ಮೊಯಿಲಿ, ರಾಜಶೇಖರಮೂರ್ತಿ, ಎಸ್.ಎಂ. ಕೃಷ್ಣ ಮುಂತಾದವರು ಹೇಗೆಲ್ಲ ನಡೆದುಕೊಂಡಿದ್ದರು, ಏನೆಲ್ಲ ಮಾತನಾಡಿದ್ದರು ಎನ್ನುವುದನ್ನು ನೆನಪಿಸಿಕೊಂಡರೆ ಈಗಿನ ಭಿನ್ನಮತ ಸಪ್ಪೆಸಪ್ಪೆ.
ಸಿದ್ದರಾಮಯ್ಯ ಅವರ ಬೆಂಬಲಿಗರು ಮುಖ್ಯಮಂತ್ರಿ ಪರವಾಗಿ ಹೇಳಿಕೆ ನೀಡಿದಾಗಲೂ, ಸ್ವತಃ ಸಿದ್ದರಾಮಯ್ಯ ಅವರೇ ‘ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ’ ಎಂದು ಹೇಳಿದಾಗಲೂ, ಶಿವಕುಮಾರ್ ಅವರು ಸಂಯಮ ಕಳೆದುಕೊಳ್ಳಲಿಲ್ಲ. ಶಿವಕುಮಾರ್ ಆಗಲಿ, ಅವರ ಸಹೋದರ ಸುರೇಶ್ ಆಗಲಿ ಅತಿರೇಕದ ಹೇಳಿಕೆ ನೀಡಲಿಲ್ಲ. ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರು, ‘ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಸತೀಶ ಜಾರಕಿಹೊಳಿ’ ಎಂದು ಹೇಳಿಕೆ ನೀಡಿದಾಗಲೂ ಶಿವಕುಮಾರ್ ಮುಗುಂ ಆಗಿಯೇ ಇದ್ದರು. ‘ಹೈಕಮಾಂಡ್ ಬಯಸಿದರೆ ನಾನೇ ಐದು ವರ್ಷ ಮುಖ್ಯಮಂತ್ರಿ’ ಎಂದು ಸಿದ್ದರಾಮಯ್ಯ ಹೇಳಿದಾಗಲೂ ಶಿವಕುಮಾರ್ ಅವರು ‘ಮುಖ್ಯಮಂತ್ರಿ ಹೇಳಿದ ಮೇಲೆ ಮುಗಿದೇ ಹೋಯ್ತು. ಇನ್ನೇನೂ ಹೇಳುವುದಕ್ಕೆ ಇಲ್ಲ’ ಎಂದು ಪ್ರತಿಕ್ರಿಯೆ ನೀಡಿದರು. ಅವರ ತಮ್ಮ ಸುರೇಶ್ ‘ನನ್ನ ಅಣ್ಣನ ಹಣೆಬರಹದಲ್ಲಿ ಮುಖ್ಯಮಂತ್ರಿ ಆಗುವ ಯೋಗ ಇದ್ದರೆ ಆಗ್ತಾರೆ. ಇಲ್ಲದಿದ್ದರೆ ಇಲ್ಲ’ ಎಂದು ಅಲವತ್ತುಕೊಂಡರು. ಹಾಗಂತ ಶಿವಕುಮಾರ್ ಏನೂ ತಂತ್ರಗಾರಿಕೆಯನ್ನೇ ಮಾಡಿಲ್ಲ ಎಂದಲ್ಲ. ಕಾಂತರಾಜ ಸಮಿತಿ ವರದಿ ಜಾರಿ ವಿಷಯ ಆಗಲಿ, ಮತ್ತೊಮ್ಮೆ ಜಾತಿ ಸಮೀಕ್ಷೆ ನಡೆಸುವ ವಿಚಾರವೇ ಇರಲಿ, ಸಹಕಾರ ಸಚಿವ ರಾಜಣ್ಣ ಅವರ ರಾಜೀನಾಮೆ ವಿಷಯದಲ್ಲಿಯೇ ಇರಲಿ, ಎಲ್ಲಿ ಏನು ಹೇಳಬೇಕೋ ಅದನ್ನು ಹೇಳಿದರು. ಏನಾಗಬೇಕಾಗಿತ್ತೋ ಆ ಪರಿಣಾಮ ಆಯಿತು. ಈಗ ಯತೀಂದ್ರ ಅವರ ಹೇಳಿಕೆಯ ಬಗ್ಗೆಯೂ ಅವರು ಹೇಳಿದ್ದು ‘ಎಲ್ಲಿ ಹೇಳಬೇಕೋ ಅಲ್ಲಿ ಹೇಳುವೆ’ ಎಂಬುದೇ ಆಗಿತ್ತು. ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಅವರು ನಂಬಿದ್ದು ದೇವರು ಮತ್ತು ಹೈಕಮಾಂಡ್‌ನನ್ನು ಮಾತ್ರ.
ಒಟ್ಟಾರೆ ವಿಷಯ ಇಷ್ಟೆ. ಈ ಬಾರಿ ದಲಿತರೊಬ್ಬರು ಮುಖ್ಯಮಂತ್ರಿ ಆಗುವುದಿಲ್ಲ. ಹೆಚ್ಚೆಂದರೆ ಕೆಪಿಸಿಸಿ ಅಧ್ಯಕ್ಷರಾಗಬಹುದು ಅಷ್ಟೇ. ಅಲ್ಲಿಗೆ ಗೊಂದಲಗಳೆಲ್ಲ ಮುಗಿದು ಶುಭಂ ಎಂದು ಮುಗಿಸಬಹುದೇ? ಬಹುತೇಕ ಹೌದು. ಅಥವಾ ಹೊಸ ಸಮಸ್ಯೆ ಆರಂಭವೂ ಆಗಬಹುದು. ಆದರೆ, ಒಂದಂತೂ ಸತ್ಯ. ಅದು ಕನಕದಾಸರ ವಿಚಾರಗಳೇ ಆಗಲಿ, ಅಂಬೇಡ್ಕರ್, ಮಹಾತ್ಮ ಗಾಂಧಿ, ಬಸವಣ್ಣನವರ ವಿಚಾರಗಳೇ ಆಗಲಿ, ಎಲ್ಲವೂ ಅಧಿಕಾರದ ಮೆಟ್ಟಿಲುಗಳೇ ವಿನಾ ಆಚರಣೆಯ ದಾರಿಗಳಲ್ಲ. ರಾಜಕೀಯದಲ್ಲಿ ಅದೆಲ್ಲವನ್ನೂ ನಿರೀಕ್ಷಿಸುವಂತೆಯೂ ಇಲ್ಲ. ಹೇ ರಾಮ್.