ADVERTISEMENT

ಬೆರಗಿನ ಬೆಳಗು ಅಂಕಣ | ತಾಯಿ ತಂದೆಯರಲ್ಲಿ ಪರಮ ನಂಬಿಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 23:15 IST
Last Updated 1 ಮಾರ್ಚ್ 2023, 23:15 IST
   

ನಗುನಗುವ ಕಣ್ಗಳಿಗೆ ಹೊಗೆಯನೂದಲು ಬೇಡ |
ಜಗವ ಸುಡುಗಾಡೆನುವ ಕಟುತಪಸು ಬೇಡ ||
ಮಗುವು ತಾಯ್ತಂದೆ ಕಣ್ಮುಂದೆ ನಡೆವಂತೆ ನಡೆ |
ಮಿಗೆ ಚಿಂತೆ ತಲೆ ಹರಟೆ – ಮಂಕುತಿಮ್ಮ || 833 ||


ಪದ-ಅರ್ಥ: ಹೊಗೆಯನೂದಲು=ಹೊಗೆಯನು+ಊದಲು, ಸುಡುಗಾಡೆನುವ=ಸುಡುಗಾಡು+ಎನುವ, ಮಿಗೆ ಚಿಂತೆ= ಉಳಿದ
ಚಿಂತೆ.

ವಾಚ್ಯಾರ್ಥ: ಸಂತೋಷವಾಗಿರುವ ಜೀವಗಳ ಬದುಕಿನಲ್ಲಿ ನೆಮ್ಮದಿಯನ್ನು ಕೆಡಿಸಬೇಡ. ಜಗತ್ತು ಬರೀ ಸುಡುಗಾಡು ಎನ್ನುವ ಋಣಾತ್ಮಕ ಮನೋಧರ್ಮವೂ ಬೇಡ. ತಂದೆ- ತಾಯಿಯರ ಎದುರಿನಲ್ಲಿ ಮಗು ನಿರಾತಂಕವಾಗಿ ಆಡಿಕೊಂಡಿರುವಂತೆ ಬದುಕು ಸಾಗಿಸು. ಉಳಿದುದೆಲ್ಲ ತಲೆ ಹರಟೆ.

ADVERTISEMENT

ವಿವರಣೆ: ಬಟ್ರಾಂಡ್ ರಸೆಲ್ ಮೂರು ತರಹದ ದು:ಖಿಗಳನ್ನು ಗುರುತಿಸುತ್ತಾರೆ. ಒಬ್ಬನು ಸಿನ್ನರ್, (sinner) ಅವನು ಮಾಡಬಾರದ ಅಪರಾಧವನ್ನೇನೂ ಮಾಡಿದವನಲ್ಲ. ಆದರೆ ಸಣ್ಣ ಸಣ್ಣ ತಪ್ಪುಗಳನ್ನು ಮಾಡುತ್ತಲೇ, ದು:ಖಿಸುತ್ತಲೇ ಇರುತ್ತಾನೆ.
ಎರಡನೆಯವನು ನಾರ್ಸಿಸಿಸ್ಟ್ (narcist ). ಇವನು ಇನ್ನೊಂದುಬಗೆಯ ದು:ಖಿ. ಅವರಿಗೆ ತಮ್ಮ ಪ್ರತಿಭೆಯ ಬಗ್ಗೆ ಉತ್ಪೇಕ್ಷಿತ ಕಲ್ಪನೆ ಇದೆ. ಪ್ರಪಂಚ ತಮ್ಮ ಬುದ್ಧಿವಂತಿಕೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ, ಪ್ರಪಂಚದಲ್ಲಿಯ ದ್ವೇಷ, ಅಸೂಯೆಗಳಿಗೆ ತಾನೊಬ್ಬ ಬಲಿಪಶುವೆಂದೂ, ಇದೊಂದು ವ್ಯರ್ಥ ಪ್ರಪಂಚ, ಇದರಿಂದ ಯಾವ ಉದ್ಧಾರವೂ ಆಗುವುದಿಲ್ಲವೆಂಬ ತೀರ್ಮಾನ ಇವರದು. ಮೂರನೆಯವನು ಮೆಗಲೋಮೆನಿಯಾಕ್ (mega melonic). ಅವರಿಗೆ ಎಲ್ಲರ ಮೇಲೆ ಅಧಿಕಾರ ಚಲಾಯಿಸುವ ಹುಚ್ಚು. ಇತರರನ್ನು ಟೀಕಿಸುವ, ದಾಸ್ಯದಲ್ಲಿಡುವುದರಲ್ಲಿಯೇ ಅವರಿಗೆ ತೃಪ್ತಿ. ತಮ್ಮ ಸುತ್ತ ಮುತ್ತ ಇರುವವರಲ್ಲಿ ಯಾರಾದರೂ ಸಂತೋಷವಾಗಿದ್ದರೆ ಅವರಿಗೆ ಅಸಹನೆಯುಂಟಾಗುತ್ತದೆ. ಈ ಕಗ್ಗದಲ್ಲಿ ಇವರಲ್ಲಿ ಎರಡು ತರಹದ ಜನರನ್ನು ಕುರಿತು ಹೇಳಲಾಗಿದೆ. ಕೆಲವರು ಮೆಗಲೋಮೇನಿಯಾಕ್ ಎಂದರೆ ಪರದು:ಖಿಗಳು. ಅವರಿಗೆ ಯಾರು ಸಂತೋಷವಾಗಿದ್ದರೂ ಸಹನೆ ಇಲ್ಲ. ಅವರ ಶಾಂತಿಯನ್ನು ಕೆಡಿಸುವುದರಲ್ಲೇ ಇವರಿಗೆ ತೃಪ್ತಿ. ಅದು ಬೇಡ ಎನ್ನುತ್ತದೆ ಕಗ್ಗ. ನಗುನಗುವ ಕಣ್ಣುಗಳಿಗೆ ಹೊಗೆಯನೂದುವುದು ಎಂದರೆ ಸಂತಸದ ಬಾಳಿನಲ್ಲಿ ದು:ಖದ ತೊರೆಯ ನುಗ್ಗಿಸುವುದು. ಇದೊಂದು ಕ್ಷುದ್ರತೃಪ್ತಿ. ಇದು ಸಂತೋಷದ ಬಾಳಿಗೆ ಮಾರಕವಾದದ್ದು. ಕೆಲವರಿಗೆ ಪ್ರಪಂಚದ ಸೊಗಸು ಕಾಣುವ ಮನಸ್ಸೇ ಇಲ್ಲ. ಈ ಜಗತ್ತೊಂದು ನೀರ ಮೇಲಣ ಗುಳ್ಳೆ. ಅದು ನಶ್ವರವಾದದ್ದು. ಕೇವಲ ದುಃಖಮೂಲವಾದದ್ದು. ಇಲ್ಲಿ ನಡೆಸುವ ಜೀವನ ವ್ಯರ್ಥವಾದದ್ದು ಎಂಬ ಸದಾ ಪ್ರಲಾಪ ಈ ನಾರ್ಸಿಸಿಟ್ಸ್ ಜನರದು. ಇವೆರಡೂ ಬೇಡ. ಇರುವ ತನಕ ಜೀವನ ಸುಂದರವಾಗಬೇಕಾದರೆ ತಾಯಿ-ತಂದೆಯರ ಮುಂದೆ ಮಗುಹೇಗೆ ನಿಶ್ಚಿಂತೆಯಿಂದ, ನಿರಾಳವಾಗಿ ಬದುಕುತ್ತದೆಯೋ ಹಾಗೆ ಪರಬ್ರಹ್ಮದಲ್ಲಿ ಪರಮ ನಂಬಿಕೆಯನ್ನಿಟ್ಟು ಜೀವನ ಸಾಗಿಸುವುದು ಮುಖ್ಯ. ಉಳಿದ ವಿಷಯಗಳು ಕೇವಲ ತಲೆ ಹರಟೆ. ತಾವು ಮಗುವಾಗಿದ್ದಾಗ ಪ್ರವಾಸಕ್ಕೆ ಹೋದದ್ದು ನೆನಪಿದೆಯೆ? ನೀವು ಆಗ ಹೋಗಬೇಕಾದ ರೈಲು, ಉಳಿಯಬೇಕಾದ ಸ್ಥಳ, ಊಟದ ವ್ಯವಸ್ಥೆ, ಹಣಕಾಸಿನ ಬಗ್ಗೆ ಚಿಂತೆ ಮಾಡಿದ್ದಿರಾ? ಎಲ್ಲವನ್ನೂ ತಂದೆ- ತಾಯಿಯರು ನಿಭಾಯಿಸುತ್ತಾರೆಂಬ ನಂಬಿಕೆಯಲ್ಲಿ ಯಾವ ಯೋಚನೆಯೂ ಇಲ್ಲದಂತೆ ಮಗು ಸಂತೋಷಪಟ್ಟಂತೆ,ಜೀವನದಲ್ಲಿ ನಮ್ಮನ್ನು ಕಾಪಿಡುವ ಶಕ್ತಿಯೊಂದಿದೆಯೆಂದು ನಂಬಿ ನಡೆಯುವುದೇ ಸಂತೋಷದ ಮೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.