ADVERTISEMENT

ಹೇಡಿಗಳ ಕುತಂತ್ರ

ಡಾ. ಗುರುರಾಜ ಕರಜಗಿ
Published 1 ಡಿಸೆಂಬರ್ 2019, 18:30 IST
Last Updated 1 ಡಿಸೆಂಬರ್ 2019, 18:30 IST

ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುವಾಗ ಬೋಧಿಸತ್ವ ರಾಜಕುಮಾರನಾಗಿ ಹುಟ್ಟಿದ್ದ. ದೊಡ್ಡವನಾದಂತೆ ಶಿಕ್ಷಣ ಪಡೆದು ತಂದೆಯ ಮರಣದ ನಂತರ ತಾನೇ ರಾಜನಾದ.

ಒಂದು ದಿನ ರಾಜ್ಯದ ಒಬ್ಬ ಗೊಲ್ಲ ಹಸುಗಳನ್ನು ಕಾಡಿಗೆ ಕರೆದುಕೊಂಡು ಹೋಗಿ ಮೇಯಿಸಿಕೊಂಡು ಬರುವಾಗ ಒಂದು ಗರ್ಭಿಣಿ ಹಸುವನ್ನು ಮರೆತು ಬಂದ. ಅದು ಹೇಗೋ ಒಂದು ಸಿಂಹಿಣಿಗೆ ಈ ಹಸುವಿನೊಂದಿಗೆ ಸ್ನೇಹವಾಯಿತು. ಅದು ಹಸುವಿನ ರಕ್ಷಣೆಗೆ ನಿಂತಿತು. ಆ ಸಿಂಹಿಣಿಯೂ ಗರ್ಭಿಣಿಯಾಗಿತ್ತು. ಕೆಲದಿನಗಳ ನಂತರ ಹಸು ಕರುವಿಗೆ ಜನ್ಮ ನೀಡಿದ ಸ್ವಲ್ಪ ಹೊತ್ತಿಗೇ ಸಿಂಹಿಣಿ ಮರಿಗೆ ಜನ್ಮ ಕೊಟ್ಟಿತು. ಎರಡೂ ಮರಿಗಳೂ ಜೊತೆಜೊತೆಗೇ ಬೆಳೆದವು. ತಮ್ಮ ತಾಯಿಯರಿಂದ ಬಂದ ಸ್ನೇಹವನ್ನು ಪಾಲಿಸಿಕೊಂಡು ಸಂತೋಷವಾಗಿ ಬದುಕಿದ್ದವು.

ಒಬ್ಬ ಬೇಡರವ ಕಾಡಿನಲ್ಲಿ ದೊರಕುವ ವಿಶೇಷ ವಸ್ತುಗಳನ್ನು ತೆಗೆದುಕೊಂಡು ಬಂದು ರಾಜನಿಗೆ ನೀಡಿದ. ಆಗ ರಾಜ, ‘ನಿನಗೆ ಕಾಡಿನಲ್ಲಿ ಏನಾದರೂ ಆಶ್ಚರ್ಯಕರವಾದ ಸಂಗತಿ ಕಂಡಿತೇ?‘ ಎಂದು ಕೇಳಿದ. ಆತ, ‘ಒಡೆಯಾ, ಉಳಿದುದೆಲ್ಲವೂ ಮೊದಲಿನಂತೆಯೇ ಇತ್ತು. ಆದರೆ ಒಂದು ವಿಶೇಷವೆಂದರೆ ಒಂದೆಡೆಗೆ ಒಂದು ಸಿಂಹ ಮತ್ತು ಒಂದು ಹೋರಿ ಅತ್ಯಂತ ಸ್ನೇಹದಿಂದಿವೆ. ಹಾಗೆ ಇರುವುದನ್ನು ನಾನೆಂದಿಗೂ ಕಂಡಿಲ್ಲ’ ಎಂದ. ರಾಜ ಹೇಳಿದ, ‘ಅವೆರಡೂ ಹಾಗಿದ್ದರೆ ತೊಂದರೆ ಇಲ್ಲ. ಇವರ ನಡುವೆ ಮತ್ತೊಂದು ಪ್ರಾಣಿ ಸೇರಿಕೊಂಡರೆ ತೊಂದರೆಯಾಗುತ್ತದೆ. ಹಾಗೆ ಮತ್ತೊಂದು ಪ್ರಾಣಿ ಸೇರಿಕೊಂಡರೆ ನನಗೆ ಬಂದು ತಿಳಿಸು’ ಎಂದ. ಬೇಡ ಒಪ್ಪಿಕೊಂಡು ನಡೆದ.

ADVERTISEMENT

ಕೆಲ ದಿನಗಳ ನಂತರ ಬೇಡ ಬಂದು ರಾಜನಿಗೆ ಹೇಳಿದ, ‘ಸ್ವಾಮಿ, ಈಗ ಅವುಗಳ ನಡುವೆ ಒಂದು ನರಿ ಬಂದು ಸೇರಿದೆ’. ‘ಹಾಗಾದರೆ ತಕ್ಷಣ ಹೋಗೋಣ ನಡೆ. ಈ ನರಿ ಅವುಗಳನ್ನು ನಾಶ ಮಾಡುವ ಮೊದಲೇ ಹೋಗಿ ಅವುಗಳನ್ನು ಉಳಿಸೋಣ’ ಎಂದು ಬೇಡನನ್ನು ಕರೆದುಕೊಂಡು ಹೊರಟ.

ಇತ್ತ ನರಿ ಸಿಂಹ ಮತ್ತು ಹೋರಿಗಳನ್ನು ಸೇರಿಕೊಂಡು ಇವೆರಡೂ ಸತ್ತರೆ ತನಗೆ ಅಪರೂಪವಾದ ಸಿಂಹದ ಹಾಗೂ ಹೋರಿಯ ಮಾಂಸ ಸಿಗುತ್ತದೆ ಎಂದುಕೊಂಡು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಚಾಡಿ ಹೇಳುತ್ತ ಎರಡೂ ಪ್ರಾಣಿಗಳ ಮನಸ್ಸನ್ನು ಕೆಡಿಸಿತು. ಅವೆರಡೂ ಹೋರಾಡುವ ಮಟ್ಟಿಗೆ ಕೋಪ ಬಲಿಯಿತು. ಸಿಂಹ ಹಾರಿ ಹೋರಿಯ ಮೇಲೆ ಬಿದ್ದಿತು. ಹೋರಿಯೂ ಬಲಶಾಲಿಯೇ. ಅದು ತನ್ನೆಲ್ಲ ಶಕ್ತಿಯನ್ನು ಹಾಕಿ ಚೂಪಾದ ಕೋಡುಗಳಿಂದ ಸಿಂಹದ ಹೊಟ್ಟೆಯನ್ನು ಮೇಲಿಂದ ಮೇಲೆ ಇರಿಯಿತು. ಗಾಯಗೊಂಡ ಸಿಂಹ ರೊಚ್ಚಿನಿಂದ ಹಾರಿ ಹೋರಿಯ ಕತ್ತನ್ನು ಕಚ್ಚಿ ರಕ್ತ ಹೀರಿತು. ಸ್ವಲ್ಪ ಸಮಯದಲ್ಲೇ ಎರಡೂ ನಿತ್ರಾಣ ಹೊಂದಿ ಕುಸಿದು ಸತ್ತು ಹೋದವು. ನರಿ ಸಂತೋಷದಿಂದ ಒಮ್ಮೆ ಸಿಂಹದ ಮತ್ತೊಮ್ಮೆ ಹೋರಿಯ ಮಾಂಸವನ್ನು ತಿನ್ನುತ್ತ ಕುಳಿತಿತು. ಆ ಸಮಯಕ್ಕೆ ಅಲ್ಲಿಗೆ ಬಂದ ರಾಜ ಬೇಡನಿಗೆ ಹೇಳಿದ. ‘ನೋಡಯ್ಯ, ಮೂರು ಪ್ರಾಣಿಗಳಲ್ಲಿ ಅತ್ಯಂತ ಅಶಕ್ತವಾದದ್ದು ನರಿ. ಅದು ಪರಮ ಹೇಡಿ. ಆದರೆ ಪ್ರಬಲ ಪ್ರಾಣಿಗಳಾದ ಸಿಂಹ ಮತ್ತು ಹೋರಿಗಳನ್ನು ಕೊಲ್ಲಿಸುವುದರಲ್ಲಿ ಯಶಸ್ವಿಯಾಯಿತು. ಹೇಡಿಗಳೇ ಚಾಡಿ ಹೇಳುವವರು. ಆದರೆ ಅವರ ಕುತಂತ್ರ ಮತ್ತು ಕೆಟ್ಟ ನಾಲಿಗೆ ಎಂಥ ಬಲಿಷ್ಠರನ್ನು ಬಲಿ ಹಾಕಿಬಿಡುತ್ತದೆ’.

ಬಲಿಷ್ಠರಿಂದ ಆಗುವ ತೊಂದರೆಗಳಿಗಿಂತ ಹೇಡಿ, ಚಾಡಿಕೋರರು ಮಾಡಬಹುದಾದ ಅನಾಹುತ ಎಣಿಸಲಾರದ್ದು. ನಾವು ಚಾಡಿಕೋರರಾಗಬಾರದು, ಅಂಥವರನ್ನು ಹತ್ತಿರ ಬರಗೊಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.