ADVERTISEMENT

ಬೆರಗಿನ ಬೆಳಕು: ಸೌಂದರ್ಯದ ಅಪೇಕ್ಷೆ

ಡಾ. ಗುರುರಾಜ ಕರಜಗಿ
Published 25 ಜುಲೈ 2021, 19:30 IST
Last Updated 25 ಜುಲೈ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಸೊಗಸು ಬೇಡದ ನರಪ್ರಾಣಿಯೆಲ್ಲಿಹುದಯ್ಯ?|
ಮಗುವೆ, ಮುದುಕನೆ, ಪುರಾಣಿಕ ಪುರೋಹಿತರೇ?||
ಜಗದ ಕಣ್ಣಿಣಿಕದೆಡೆ ಮುಕುರದೆದುರೊಳು ನಿಂತು |
ಮೊಗವ ತಿದ್ದುವರೆಲ್ಲ – ಮಂಕುತಿಮ್ಮ || 442 ||

ಪದ-ಅರ್ಥ: ನರಪ್ರಾಣಿಯೆಲ್ಲಿಹುದಯ್ಯ=
ನರಪ್ರಾಣಿ+ಎಲ್ಲಿ+ಇಹುದಯ್ಯ, ಕಣ್ಣಿಣಿಕದೆಡೆ=ಕಣ್ಣು+ಇಣಿಕದ(ಕಾಣದ)+ಎಡೆ, ಮುಕುರ=ಕನ್ನಡಿ.

ವಾಚ್ಯಾರ್ಥ: ಸೊಗಸು, ಸುಂದರತೆ ಬೇಡವೆನ್ನುವ ಮನುಷ್ಯ ಎಲ್ಲಿಯಾದರೂ ಇದ್ದಾನೆಯೆ? ಮಗು, ಮುದುಕ, ಪುರಾಣಿಕ, ಪುರೋಹಿತ ಎಲ್ಲರಿಗೂ ಸೊಗಸು ಬೇಕು. ಜಗತ್ತಿನ ಕಣ್ಣು ತಮ್ಮನ್ನು ಗಮನಿಸದಿದ್ದಾಗ ಎಲ್ಲರೂ ಕನ್ನಡಿಯ ಮುಂದೆ ನಿಂತು ಮುಖವನ್ನು ತಿದ್ದುವವರೇ.

ADVERTISEMENT

ವಿವರಣೆ: ಆಕೆಗೆ ಎಂಭತ್ತೈದು ವರ್ಷ ವಯಸ್ಸು. ದೇವರನ್ನು ಘನವಾಗಿ ಪ್ರಾರ್ಥಿಸಿದಳು. ದೇವ ಅವಳಿಗೊಲಿದ. ಆಕೆ ಕೇಳಿದಳು, ‘ಭಗವಂತ, ನನಗೆ ಇನ್ನೂ ಎಷ್ಟು ವರ್ಷ ಆಯುಸ್ಸು?’ ಆತ, ‘ನಿನಗೆ ಇನ್ನೂ ಇಪ್ಪತ್ತು ವರ್ಷ ಬಾಕಿ ಇದೆ’ ಎಂದ. ಆಕೆಗೆ ಸಂಭ್ರಮ. ತಕ್ಷಣ ಆಕೆ ಒಂದು ಪ್ರಖ್ಯಾತ ಆಸ್ಪತ್ರೆಗೆ ಹೋದಳು. ವೈದ್ಯರನ್ನು ಕರೆದು ಹೇಳಿದಳು. ‘ನಾನು ಮತ್ತೆ ಇಪ್ಪತ್ತು ವರ್ಷದ ತರುಣಿಯಂತಾಗಬೇಕು. ಏನೇನು ಶಸ್ತ್ರಚಿಕಿತ್ಸೆ ಮಾಡಬೇಕೋ ಮಾಡಿ. ಒಂದು ವರ್ಷದಲ್ಲಿ ನಾನು ಪರಮಸುಂದರಿಯಾಗಬೇಕು. ಎಷ್ಟು ಹಣ ಖರ್ಚಾದರೂ ಚಿಂತೆಯಿಲ್ಲ’. ವೈದ್ಯರು ಒಂದರ ಮೇಲೊಂದು ಶಸ್ತ್ರಚಿಕಿತ್ಸೆ ಮಾಡಿದರು, ಕೆಲವು ಅಂಗಾಂಗಗಳನ್ನು ಬದಲಿಸಿದರು, ಕೆಲವನ್ನು ಹುರಿ ಮಾಡಿದರು, ಬಣ್ಣ ಬದಲಾಯಿಸಿದರು. ಪೂರ್ತಿ ಚಿಕಿತ್ಸೆ ಮುಗಿಯುವವರೆಗೆ ಆಕೆ ಕನ್ನಡಿಯನ್ನು ನೋಡಿಕೊಳ್ಳಲಿಲ್ಲ. ಒಂದು ವರ್ಷದ ಚಿಕಿತ್ಸೆ ಮುಗಿಸಿ ಕನ್ನಡಿಯ ಮುಂದೆ ನಿಲ್ಲಿಸಿದಾಗ ಆಕೆ ‘ಯಾರಿವಳು ಸುಂದರಿ?’ ಎಂದು ಉದ್ಗಾರ ತೆಗೆದಳು. ಆಸ್ಪತ್ರೆಯಿಂದ ಹೊರಗೆ ಬಂದಳು. ರಸ್ತೆಯ ಆ ಬದಿಗೆ ಇದ್ದ ಕಾರಿನೆಡೆಗೆ ಛಂಗನೇ ಜಿಂಕೆಯಂತೆ ಓಡಿದಳು. ಅದೇ ಸಮಯಕ್ಕೆ ರಸ್ತೆಯಲ್ಲಿ ವೇಗವಾಗಿ ಬಂದ ವಾಹನವೊಂದು ಆಕೆಗೆ ಬಡಿದು ಕ್ಷಣದಲ್ಲೇ ತೀರಿ ಹೋದಳು. ಮೇಲೆ ಹೋಗಿ ಭಗವಂತನನ್ನು ತರಾಟೆಗೆ ತೆಗೆದುಕೊಂಡಳು, ‘ನೀನು ನನಗೆ ಇಪ್ಪತ್ತು ವರ್ಷ ಅವಧಿಯನ್ನು ಕೊಟ್ಟಿದ್ದೆ. ಅಂತೆಯೇ ನಾನು ಕಷ್ಟಪಟ್ಟು ಪುನಃ ತರುಣಿಯಾದೆ. ನೀನೇಕೆ ಹೀಗೆ ಮೋಸ ಮಾಡಿದೆ?’. ಆತ ಕ್ಷಣ ಬಿಟ್ಟು ಹೇಳಿದ, ‘ಅದು ನೀನೆಂದು ನನಗೆ ಗುರುತೇ ಸಿಗಲಿಲ್ಲ’.

ಇದೊಂದು ತಮಾಷೆಯ ಕಥೆಯಂತೆ ಕಂಡರೂ ಅಲ್ಲೊಂದು ಪುಟ್ಟ ಸಂದೇಶವಿದೆ. ಆ ವಯಸ್ಸಿನಲ್ಲೂ ಆಕೆಗೆ ನವತರುಣಿಯಾಗಿ, ಸುಂದರಳಾಗಿ ಕಾಣಬೇಕೆಂಬ ಬಲವಾದ ಆಸೆ. ಇದು ಆಕೆಗೆ ಮಾತ್ರವಲ್ಲ ಬಹುತೇಕ ಎಲ್ಲ ಜನರಲ್ಲೂ ಇರುವ ಬಯಕೆ. ಆದಷ್ಟು ಸುಂದರರಾಗಿ ಕಾಣಬೇಕೆಂಬ, ವಯಸ್ಸನ್ನು ಮರೆಸಿ ಮತ್ತೆ ಚಿಕ್ಕವರಂತೆ ತೋರಬೇಕೆಂಬ ಆಸೆಗೆ ಬಲವತ್ತರವಾಗಿ ಬಹುದೊಡ್ಡ, ಸಾವಿರಾರು ಕೋಟಿ ರೂಪಾಯಿ ಬಂಡವಾಳದ, ಸೌಂದರ್ಯವರ್ಧಕಗಳ ಉದ್ದಿಮೆಗಳೇ ನಿಂತಿವೆ. ತರತರಹದ ಆಹಾರಗಳು, ವ್ಯಾಯಾಮದ ಉಪಕರಣಗಳು, ಬಣ್ಣಗಳು, ಮಾತ್ರೆಗಳು, ಬಟ್ಟೆಬರೆಗಳು, ದ್ರವಲೇಪಗಳು ಪೈಪೋಟಿಯಲ್ಲಿ ಮನುಷ್ಯರನ್ನು ಸುಂದರವಾಗಿ ಕಾಣಿಸುವಲ್ಲಿ ತೊಡಗಿವೆ. ಇದನ್ನು ಈ ಕಗ್ಗ ಹೇಳುತ್ತದೆ. ಸೊಗಸು ಬೇಡ ಎನ್ನುವವರು ಯಾರು? ಎಲ್ಲ ವಯಸ್ಸಿನವರೂ ಈ ಅಪೇಕ್ಷೆಯನ್ನು ಪಟ್ಟವರೇ. ಯಾರೂ ತಮ್ಮನ್ನು ಗಮನಿಸದಿದ್ದಾಗ ಕನ್ನಡಿಯ ಮುಂದೆ ನಿಂತು, ಮುಖ ತೀಡಿಕೊಂಡು ಸಂತೋಷಪಡುವವರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.