ADVERTISEMENT

ಬೆರಗಿನ ಬೆಳಕು: ಲಿಂಗ-ಅಂಗ ಸಾಮರಸ್ಯ

ಡಾ. ಗುರುರಾಜ ಕರಜಗಿ
Published 17 ಫೆಬ್ರುವರಿ 2021, 19:31 IST
Last Updated 17 ಫೆಬ್ರುವರಿ 2021, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ದೇಹಾತುಮಂಗಳೆರಡಂಗಗಳು ಜೀವನಕೆ |
ನೇಹದಿಂದೊಂದನೊಂದಾದರಿಸೆ ಲೇಸು ||
ದಾಹಗೊಂಡಿರಲೊಂದು ಮಿಕ್ಕೊಂದಕೆಲ್ಲಿ ಸುಖ?|
ದ್ರೋಹ ಬೇಡೊಂದಕಂ – ಮಂಕುತಿಮ್ಮ || 388 ||

ಪದ-ಅರ್ಥ: ದೇಹಾತುಮಂಗಳೆರಡಂಗಗಳು=ದೇಹ+ಆತುಮಂಗಳು (ಆತ್ಮಗಳು)+ಎರಡು+ಅಂಗಗಳು, ನೇಹದಿಂದೊಂದನೊಂದಾದರಿಸೆ=ನೇಹದಿಂದ (ಸ್ನೇಹದಿಂದ)+ಒಂದನು+ಒಂದು+ಆದರಿಸೆ, ದಾಹಗೊಂಡಿರಲೊಂದು=ದಾಹಗೊಂಡಿರಲು (ನೀರಡಿಸಿರಲು)+ಒಂದು, ಮಿಕ್ಕೊಂದಕೆಲ್ಲಿ=ಮಿಕ್ಕ (ಉಳಿದ)+ಒಂದಕೆ+ಎಲ್ಲಿ.

ವಾಚ್ಯಾರ್ಥ: ಮನುಷ್ಯನ ಜೀವನಕ್ಕೆ ದೇಹ ಮತ್ತು ಆತ್ಮಗಳು ಎರಡು ಅಂಗಗಳು. ಸ್ನೇಹದಿಂದ ಒಂದನ್ನು ಮತ್ತೊಂದು ಆದರಿಸಿದರೆ ಒಳ್ಳೆಯದು. ಆದರೆ ಒಂದು ನೀರಡಿಸಿದರೆ ಇನ್ನೊಂದಕ್ಕೆ ಎಲ್ಲಿಯ ಸುಖ? ಯಾವ ಒಂದಕ್ಕೂ ದ್ರೋಹ ಮಾಡುವುದು ಬೇಡ.

ADVERTISEMENT

ವಿವರಣೆ: ಅಧ್ಯಾತ್ಮ ಚಿಂತನೆಯಲ್ಲಿ ದೇಹ ಮತ್ತು ಆತ್ಮಗಳ ಸಂಬಂಧ ಬಹಳ ಮುಖ್ಯವಾದದ್ದು. ದೇಹವೇ ನಾನು ಎಂಬುದು ಅಸ್ತಿತ್ವವಾದಿಗಳ ನಂಬುಗೆಯಾದರೆ, ಅದು ಆತ್ಮದ ಆವರಣ ಎನ್ನುವುದು ಪಾರಮಾರ್ಥಿಕ ದರ್ಶನ. ಕೆಲವೊಮ್ಮೆ ಅತಿರೇಕದ ಚಿಂತನೆಯಲ್ಲಿ ದೇಹ ಮತ್ತು ಆತ್ಮಗಳನ್ನು ಪರಸ್ಪರ ವೈರಿಗಳಂತೆ ಬಿಂಬಿಸುವ ವಿಚಾರಗಳು ಹೇರಳವಾಗಿವೆ. ವಿರೂಪವಾಗುವ, ಮುದಿಯಾಗುವ, ರೋಗಕ್ಕೀಡಾಗುವ ಮತ್ತು ಒಂದು ದಿನ ಸತ್ತೇ ಹೋಗುವ ಈ ದೇಹ ಒಂದು ಭ್ರಮೆ, ಒಡೆದು ಹೋಗುವ ಮಡಕೆ. ಅದು ನಿಕೃಷ್ಟವಾದದ್ದು. ಅದನ್ನು ಸದಾಕಾಲ ದಂಡಿಸುತ್ತ ನಿಗ್ರಹಿಸಬೇಕು ಎನ್ನುವುದು ಒಂದು ವಾದ. ಆದರೆ ಉಪನಿಷತ್ತುಗಳು ದೇಹವನ್ನು ಬ್ರಹ್ಮಪುರಿ, ಬ್ರಹ್ಮನ ವಾಸಸ್ಥಾನ ಎಂದು ಕರೆದವು. ಮೋಳಿಗೆ ಮಾರಯ್ಯ ‘ಜ್ಞಾನವನರಿದೆನೆಂದು ಕಾಯುವ ದಂಡಿಸಲೇಕೆ?’ ಎಂದು ಕೇಳುತ್ತಾರೆ. ಚೈತನ್ಯದ ಆವಾಸಸ್ಥಾನ ದೇಹ. ದೇಹವಿಲ್ಲದೆ ಆತ್ಮಕ್ಕೆ ನೆಲೆಯಿಲ್ಲ. ಆದ್ದರಿಂದ ದೇಹ ಮತ್ತು ಆತ್ಮಗಳದ್ದು ಅನ್ಯಾನ್ಯ ಸಂಬಂಧ. ಅದಕ್ಕೇ ಶರಣರು ಲಿಂಗಾಂಗ ಸಾಮರಸ್ಯದ ಬಹುದೊಡ್ಡ ಕಲ್ಪನೆಯನ್ನು ನೀಡಿದರು.

ಇರುವ ದೇಹದಿಂದಲೇ ದೇವನನ್ನು ಸೇರಬೇಕು. ಹೀಗೆ ಅಂಗ ಮತ್ತು ಲಿಂಗದಲ್ಲಿ ಅಂದರೆ ದೇಹ ಮತ್ತು ಭಗವಂತನಲ್ಲಿ ಐಕ್ಯತೆಯನ್ನು ಸಾಧಿಸಲು ತೋರಿಸಿದ ಶರಣರ ಮಾರ್ಗ ವಿನೂತನವಾದದ್ದು. ಅದು ಲಿಂಗಾಂಗ ಯೋಗ. ದೇಹವನ್ನು ಇಡಿಯಾಗಿ, ಬಿಡಿಯಾಗಿ ಲಿಂಗವಾಗಿಸುವ ಪರಿಯನ್ನು ಅವರು ತಿಳಿಸಿದರು. ಆದ್ದರಿಂದ ಆತ್ಮವನ್ನು ಅರಿಯ ಬಯಸುವವರು ದೇಹವನ್ನು ತಿರಸ್ಕರಿಸುವುದು ಸಾಧ್ಯವಿಲ್ಲ. ಇದನ್ನು ಬಸವಣ್ಣನವರು ಅತ್ಯಂತ ಸುಂದರವಾಗಿ ತಿಳಿಸುತ್ತಾರೆ.

ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದೊಡೇನು? ತಾನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೆ ಆಚಾರ.
ಕೂಡಲಸಂಗಮದೇವರನೊಲಿಸ ಬಂದ
ಪ್ರಸಾದಕಾಯವ ಕೆಡಿಸಲಾಗದು

ಯಾವುದೂ ಬೇಡ ಎನ್ನುವುದು ವೈರಾಗ್ಯ. ಎಲ್ಲವನ್ನು ಬಯಸುವುದು ದೇಹದ ಗುಣ. ನೈತಿಕವಾಗಿ ನಮಗೆ ದೊರೆತದ್ದನ್ನು ಭಗವಂತನಿಗೆ ಅರ್ಪಿಸಿ, ನೈವೇದ್ಯವೆಂದು ಸ್ವೀಕರಿಸಬೇಕು. ಈ ದೇಹವನ್ನು ಬಸವಣ್ಣ ಪ್ರಸಾದಕಾಯ ಎನ್ನುತ್ತಾರೆ. ಇದು ದೇವನೊಡನೆ ನಮ್ಮನ್ನು ಸೇರಿಸಲು ಸಹಕರಿಸುವ, ಅವನೇ ನೀಡಿದ ಪ್ರಸಾದ. ಅದರ ಬಗ್ಗೆ ತಾತ್ಸಾರ ಬೇಡ. ಕಗ್ಗ ಇಂಥ ಉನ್ನತ ಚಿಂತನೆಯನ್ನು ನಾಲ್ಕೇ ಸಾಲುಗಳಲ್ಲಿ ಬಿಚ್ಚಿಡುತ್ತದೆ. ದೇಹ, ಆತ್ಮಗಳು ಪರಸ್ಪರ ಸಹಕಾರದಿಂದ ನಡೆದಾಗ ಜೀವನಕ್ಕೆ ಸುಖ. ಒಂದು ಕೊರಗಿದ್ದರೆ ಇನ್ನೊಂದು ಸುಖವಾಗಿರುವುದು ಹೇಗೆ? ಎರಡಕ್ಕೂನ್ಯಾಯಸಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.