ADVERTISEMENT

ಬೆರಗಿನ ಬೆಳಕು | ಅಲೆಯುವ ಎಲೆಗಳು

ಡಾ. ಗುರುರಾಜ ಕರಜಗಿ
Published 27 ಆಗಸ್ಟ್ 2020, 19:30 IST
Last Updated 27 ಆಗಸ್ಟ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಎಲೆಕಟ್ಟನಾಗಾಗ ಕಲಸಿಕೊಡುವುದೆ ಸೃಷ್ಟಿ |
ಬಳಿಕೆಲೆಯ ಗತಿಯೆಂತೊ ಎಲ್ಲಿ ಸೇರುವುದೋ ! ||
ಬಳಸುತಿಹುದೊಂದೊಂದುಮೊಂದೊಂದು ದಿಕ್ಕಿನಲಿ |

ಅಲೆಯುವೆವು ನಾವಂತು –ಮಂಕುತಿಮ್ಮ || 328 ||

ಪದ-ಅರ್ಥ: ಎಲೆಕಟ್ಟನಾಗಾಗ=ಎಲೆಕಟ್ಟನು+ಆಗಾಗ, ಬಳಿಕೆಲೆಯ=ಬಳಿಕ+ಎಲೆಯ, ಒಳಸುತಿಹುದೊಂದೊಂದುಮೊಂದೊಂದು=ಬಳಸುತಿಹವು+ಒಂದೊಂದು+ಒಂದೊಂದು
ವಾಚ್ಯಾರ್ಥ: ಸೃಷ್ಟಿ ಎಲೆಕಟ್ಟನ್ನು ಆಗಾಗ ಕಲಸಿಕೊಡುತ್ತದೆ. ಆಟ ಪ್ರಾರಂಭವಾದ ಮೇಲೆ ಯಾವ ಎಲೆ ಎಲ್ಲಿಗೆ ಹೋಗಿ ಸೇರುತ್ತದೆಯೋ? ಒಂದೊಂದು ಎಲೆ ಒಂದೊಂದು ದಿಕ್ಕಿಗೆ ಬಳಸಿ ಹೋಗುತ್ತದೆ. ಈ ಪ್ರಪಂಚದಲ್ಲಿ ನಾವೂ ಹಾಗೆಯೇ ಅಲೆಯುತ್ತಿದ್ದೇವೆ.

ADVERTISEMENT

ವಿವರಣೆ: ಈ ಕಗ್ಗ ಹಿಂದಿನ ಕಗ್ಗದ ಮುಂದುವರಿದ ಭಾಗದಂತೆಯೇ ಇದೆ. ಇಲ್ಲಿಯೂ ಇಸ್ಪೀಟಿನಂಥ ಆಟದ ವಿವರಣೆ ಇದೆ. ಆಟದಲ್ಲಿ ಒಂದು ಎಲೆಗಳ ಕಟ್ಟು ಇದೆ. ಅವುಗಳನ್ನು ಆಟಗಾರ ನಡುವೆ ಹಂಚಲಾಗುತ್ತದೆ. ಆಟ ಪ್ರಾರಂಭವಾದ ಮೇಲೆ ಆಟಗಾರರು ತಮಗೆ ಬೇಕಾದ ಎಲೆಗಳನ್ನು ತೆಗೆದುಕೊಂಡು ಬೇಡವಾದ ಎಲೆಯನ್ನು ಎಸೆಯುತ್ತಾರೆ. ಆದರೆ ಇವರು ಬೇಡವೆಂದ ಎಲೆ ಮುಂದಿನವರಿಗೆ ಅತ್ಯಂತ ಬೇಕಾದ ಎಲೆಯಾಗಿರಬಹುದು. ಅವರು ಇದನ್ನು ತೆಗೆದುಕೊಂಡು ಕೈಯಲ್ಲಿದ್ದ ಮತ್ತೊಂದು ಎಲೆಯನ್ನು ಬಿಸಾಕುತ್ತಾರೆ. ಹೀಗಾಗಿ ಯಾರ ಕೈಯಲ್ಲಿದ್ದ ಯಾವ ಎಲೆ ಯಾರ ಕೈಯನ್ನು ಸೇರುತ್ತದೋ ಅಥವಾ ನಿಷ್ಟ್ರಯೋಜಕವಾಗಿ ಯಾರಿಗೂ ಬೇಕಾಗದೆ ಬಿದ್ದಿರುತ್ತದೋ ತಿಳಿಯದು. ಹೀಗೆ ಆಟದ ಪ್ರಾರಂಭದಲ್ಲಿ ಒಂದೆಡೆ ಇದ್ದ ಎಲೆ ಆಟ ಮುಗಿಯುವಷ್ಟರಲ್ಲಿ ಯಾರ ಯಾರ ಕೈ ಸೇರಿ ಎಲ್ಲಿ ನೆಲೆಯಾಗುತ್ತದೋ ಹೇಳುವುದು ಕಷ್ಟ. ಅದರ ತಿರುಗಾಟ ಅದರ ಕೈಯಲ್ಲಿ ಇಲ್ಲ. ಅದು ಆಟಗಾರರ ಅಪೇಕ್ಷೆ, ಮನೋಧರ್ಮ, ಕೈಚಳಕದ ಮೇಲೆ ಅವಲಂಬಿತವಾದದ್ದು, ಅದರ ಗತಿ ಅನಿಶ್ಚಿತವಾದದ್ದು.

ಪ್ರಪಂಚದಲ್ಲಿ ಮನುಷ್ಯನೂ ಒಂದು ಎಲೆ ಇದ್ದಂತೆ, ಅವನ ಗತಿಯನ್ನು ಆತ ನಿರ್ಧರಿಸಲಾರ. ಅದು ತೀರ್ಮಾನಿಸುವವರು ಪ್ರಧಾನ ಆಟಗಾರರಾದ ಪುರುಷ ಪ್ರಯತ್ನ, ಪೂರ್ವಕರ್ಮ ಫಲ ಮತ್ತು ದೈವಗಳು. ಈ ಆಟಗಾರರ ಮಧ್ಯೆ, ಅವರು ಅಪೇಕ್ಷಿಸಿದಂತೆ ಸುತ್ತುವುದು ಎಲೆಯ ಕರ್ಮ.

ಹಾಗಾದರೆ ಈ ಕಗ್ಗ ನಿರಾಸೆಯನ್ನು ಹೇಳುತ್ತದೆಯೇ? ಇಲ್ಲ, ಅದು ಒಂದು ಎಚ್ಚರಿಕೆಯನ್ನು ಸೂಚ್ಯವಾಗಿ ಕೊಡುತ್ತಿದೆ. ಬದುಕಿನ ಅನಿಶ್ಚಿತತೆಯನ್ನು ನಾವು ಸಾಮಾನ್ಯವಾಗಿ ಋಣಾತ್ಮಕವಾಗಿಯೇ ತೆಗೆದುಕೊಳ್ಳುತ್ತ ಬಂದಿದ್ದೇವೆ. ಯಾಕೆಂದರೆ ಅನಿಶ್ಚಿತತೆ ಉದ್ವಿಗ್ನತೆಯನ್ನು ಹುಟ್ಟುಹಾಕುತ್ತದೆ. ಭಯವನ್ನು ಸೃಷ್ಟಿಸುತ್ತದೆ. ನಾವು ಅನಿಶ್ಚಿತತೆಯನ್ನು ಸಹಜ ಎಂದು ಭಾವಿಸುವುದು ಸಾಧ್ಯವೇ? ಸಾಧ್ಯ. ನೀವು ಮನೆಯಿಂದ ವಾಹನವನ್ನು ತೆಗೆದುಕೊಂಡು ಹೊರಟಾಗ ರಸ್ತೆಯಲ್ಲಿ ಏನಾಗಬಹುದು, ಯಾವ ವಾಹನ ಅಡ್ಡ ಬರಬಹುದು, ಪಾದಚಾರಿಗಳು ನುಗ್ಗಿ ಬರಬಹುದು ಎಂಬುದು ಗೊತ್ತಿಲ್ಲ. ಆದರೆ ಅವೆಲ್ಲ ಆಗಬಹುದು, ಅದು ಸಹಜ ಎಂದು ಮಾನಸಿಕವಾಗಿ ಸಿದ್ಧವಾಗಿಯೇ ಹೊರಡುತ್ತೇವೆ, ತೊಂದರೆ ಬಂದರೆ ನಿವಾರಿಸುವುದನ್ನು ಕಲಿಯುತ್ತೇವೆ.

ನಾವು ಅಸಹಾಯಕವಾದ ಎಲೆ ಆಗಿದ್ದರೂ, ಅನಿಶ್ಚಿತತೆಗೆ ಸಿದ್ಧವಾಗಿ, ಪರಿಹಾರಗಳಿಗೆ ಮುಖಮಾಡಿ ನಿಂತರೆ ಆಟಗಾರರು ಹೇಗೇ ಆಡಿದರೂ ನಾವು ಬಳಲುವುದಿಲ್ಲ, ಕೊರಗುವುದಿಲ್ಲ, ನಿರಾಶರಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.