ADVERTISEMENT

ಬೆರಗಿನ ಬೆಳಕು | ಕಳೆದುಹೋದ ಜ್ಞಾನಿ

ಡಾ. ಗುರುರಾಜ ಕರಜಗಿ
Published 11 ಜೂನ್ 2020, 19:30 IST
Last Updated 11 ಜೂನ್ 2020, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಹಿಂದೆ ಭರು ರಾಷ್ಟ್ರವನ್ನು ಭರುರಾಜನೆಂಬುವವನು ಆಳುತ್ತಿದ್ದ. ಆಗ ಬೋಧಿಸತ್ವ ಜೇಷ್ಠ ನಾವಿಕನ ಮಗನಾಗಿ ಹುಟ್ಟಿದ. ಬೆಳೆದಂತೆ ಅತ್ಯಂತ ಸುಂದರವಾದ, ಬಂಗಾರವರ್ಣದ ತರುಣನಾದ. ಅವನ ಹೆಸರು ಸುಪ್ಪಾರಕ ಕುಮಾರ ಎಂದಿತ್ತು. ಹದಿನಾರು ವರ್ಷಗಳಾಗುವುದರಲ್ಲಿ ಆತ ನಾವಿಕ ವಿದ್ಯೆಯಲ್ಲಿ ಪರಿಣಿತನಾದ. ಅವನಿದ್ದ ನೌಕೆಗೆ ಯಾವ ತೊಂದರೆಯೂ ಆಗುವುದಿಲ್ಲ ಎಂಬ ಮಾತು ಜನಜನಿತವಾಯಿತು. ಆದರೆ ಸದಾ ಕಾಲ ಉಪ್ಪಿನ ನೀರು ಕಣ್ಣಿಗೆ ಬಡಿದು ಬಡಿದು ಅವನ ಕಣ್ಣು ಮಂಕಾಗಿ ಕಾಣದಂತೆ ಆಯಿತು. ಆದರೆ ಅವನ ಬುದ್ಧಿವಂತಿಕೆಯನ್ನು ಕೇಳಿದ ರಾಜ ಅವನನ್ನು ತನ್ನ ಸೇವೆಯಲ್ಲಿ ವಸ್ತುಗಳ ಬೆಲೆ ನಿರ್ಣಯ ಮಾಡುವ ಕೆಲಸವನ್ನು ಒಪ್ಪಿಸಿದ.

ಒಂದು ದಿನ ದೊಡ್ಡದಾದ ಆನೆಯನ್ನು ತಂದು ಇದು ರಾಜನಿಗೆ ಮಂಗಳ ಆನೆಯಾಗಬಹುದೇ ಎಂದು ಮಂತ್ರಿಗಳು ಕೇಳಿದರು. ಸುಪ್ಪಾರಕಕುಮಾರ ಅದನ್ನು ಮುಟ್ಟಿ ನೋಡಿ, ‘ಇದು ಮಂಗಳ ಆನೆಯಾಗದು. ಇದರ ತಾಯಿ ಇದನ್ನು ಹೆರುವಾಗ ಇದರ ಭಾರವನ್ನು ತಾಳಲಾರದೆ ಕುಸಿದುಬಿದ್ದಿತು. ಆಗ ಇದರ ಹಿಂಗಾಲಿಗೆ ಸ್ವಲ್ಪ ಪೆಟ್ಟಾಗಿದೆ’ ಎಂದ. ಆನೆಯನ್ನು ಕರೆದು ತಂದವರನ್ನು ಕೇಳಿದಾಗ ಆ ವಿಷಯ ಸರಿ ಎಂದು ತಿಳಿಯಿತು. ಮತ್ತೊಮ್ಮೆ ಒಂದು ಶ್ರೇಷ್ಠ ಲಕ್ಷಣದ ಕುದುರೆಯನ್ನು ತಂದು ರಾಜನಿಗೆ ಯೋಗ್ಯವಾದ ಕುದುರೆ ಹೌದೇ ಎಂದು ಕೇಳಿದಾಗ ಈತ ಅದನ್ನು ಮುಟ್ಟಿ, ‘ಇದು ರಾಜಯೋಗ್ಯವಾದದ್ದಲ್ಲ. ಇದು ಹುಟ್ಟಿದ ದಿನವೇ ಇದರ ತಾಯಿ ಸತ್ತು ಹೋಯಿತು. ಆದ್ದರಿಂದ ಇದಕ್ಕೆ ತಾಯಿಯ ಹಾಲು ದೊರೆಯದೆ ಅದರ ಬೆಳವಣಿಗೆ ಪರಿಪೂರ್ಣವಾಗಿಲ್ಲ’ ಎಂದ.

ಕುದುರೆಯನ್ನು ಸಾಕಿದವರು ಈ ವಿಷಯವನ್ನು ಒಪ್ಪಿದರು. ಇನ್ನೊಮ್ಮೆ ಅರಬಸ್ಥಾನದ ವ್ಯಾಪಾರಿಗಳು ತುಂಬ ಬೆಲೆಬಾಳುವ ರತ್ನಗಂಬಳಿಯನ್ನು ತಂದರು. ಈತ ಅದರ ಮೇಲೆ ಕೈಯಾಡಿಸಿ, ‘ಇದು ಅರಮನೆಗೆ ಚೆನ್ನಾಗಿಲ್ಲ. ತಯಾರು ಮಾಡಿದ ಮೇಲೆ ಸರಿಯಾಗಿ ನೋಡಿಕೊಂಡಿಲ್ಲವಾದ್ದರಿಂದ ಈ ರತ್ನಗಂಬಳಿಯ ಕೆಳಭಾಗದಲ್ಲಿ, ಮೂಲೆಯನ್ನು ಇಲಿಗಳು ಕಡಿದುಹಾಕಿವೆ’ ಎಂದ.

ADVERTISEMENT

ಸರಿಯಾಗಿ ಪರೀಕ್ಷಿಸಿದಾಗ ಅದು ಸರಿ ಎಂದು ತಿಳಿಯಿತು. ಎಲ್ಲರಿಗೂ ಇವನ ಪಾಂಡಿತ್ಯದಿಂದ ಆಶ್ಚರ್ಯ ಮತ್ತು ಗೌರವ. ಆದರೆ ರಾಜ ಮಾತ್ರ ಇವನಿಗೆ ಪ್ರತಿಸಲ ಕೇವಲ ಎಂಟು ಕಹಾಪಣಗಳನ್ನು ಕೊಡುತ್ತಿದ್ದ. ಮಂತ್ರಿಗಳು ಗೌರವಧನವನ್ನು ಹೆಚ್ಚಿಸಲು ಹೇಳಿದರೆ, ‘ಅವನಿಗೆ ಹೆಚ್ಚಿನ ಹಣದ ಯೋಗ್ಯತೆ ಇಲ್ಲ. ಕುರುಡನಿಗೆ ಹಣದ ಬೆಲೆ ಏನು ಗೊತ್ತು?’ ಎಂದು ಹಗುರವಾಗಿ ಮಾತನಾಡಿದ. ಸುಪ್ಪಾರಕ ಕುಮಾರನಿಗೆ ಇದು ತಿಳಿಯಿತು.

ಆತ ರಾಜನ ಕೆಲಸವನ್ನು ಬಿಟ್ಟು ಕೆಲವು ತರುಣರನ್ನು ಒಟ್ಟುಗೂಡಿಸಿ ಒಂದು ಹಡಗನ್ನು ನಿರ್ಮಿಸಿ ಸಮುದ್ರದಲ್ಲಿ ಪ್ರಯಾಣಕ್ಕೆ ಹೊರಟ. ಇವನ ಮಾರ್ಗದರ್ಶನದಂತೆ ಹಡಗು ನಡೆಯಿತು. ಒಂದೆಡೆಗೆ ಬಲವಾದ ತೆರೆಗಳಿಂದ ಹಡಗು ಮುಳುಗುವಂತಾಯಿತು. ತರುಣರು, ‘ಇಲ್ಲಿ ಬರೀ ಚೂಪು ಮೂತಿಯ ಮೀನುಗಳಿವೆ’ ಎಂದರು. ಆತ ಅವರನ್ನು ಸಮಾಧಾನ ಮಾಡಿ, ಹಡಗನ್ನು ಒಂದು ದಿಕ್ಕಿಗೆ ನಡೆಸಿ ನಿಲ್ಲಿಸಿದ. ಅದು ರತ್ನಗಳ ದ್ವೀಪ. ರಾಶಿ ರಾಶಿ ರತ್ನಗಳನ್ನು ಹಡಗಿನಲ್ಲಿ ತುಂಬಿದರು. ಅಂತೆಯೇ ಮತ್ತೊಂದು ದ್ವೀಪದಲ್ಲಿ ಬಂಗಾರ, ಇನ್ನೊಂದರಲ್ಲಿ ಬೆಳ್ಳಿ, ಮಗುದೊಂದರಲ್ಲಿ ಹವಳ, ಮಣಿಗಳನ್ನು ತುಂಬಿಸಿಕೊಂಡು ಭರು ರಾಜ್ಯಕ್ಕೆ ಮರಳಿದ. ರಾಜನ ಅರಮನೆಗೆ ಈ ವಸ್ತುಗಳನ್ನೆಲ್ಲ ಹೊರಿಸಿಕೊಂಡು ಅಂಗಳದಲ್ಲಿ ಸುರಿಸಿದ. ‘ರಾಜಾ, ನಿನ್ನ ಬಳಿ ಕೆಲಸಕ್ಕೆ ಹಣದಾಸೆಗೆ ಬರಲಿಲ್ಲ. ನನ್ನ ಜ್ಞಾನ ನಿನಗೆ ಪ್ರಯೋಜನವಾದೀತು ಎಂದು ಬಂದೆ. ನೀನು ಜಿಪುಣ. ನೀನೇ ಈ ವಸ್ತುಗಳನ್ನು ಇಟ್ಟುಕೋ. ನಿನಗೆ ಬೇಕಾದೀತು’ ಎಂದು ಹೊರಟುಬಿಟ್ಟ. ಮುಂದೆ ಯಾರ ಕಣ್ಣಿಗೂ ಬೀಳಲಿಲ್ಲ.

ಬಹಳ ಬಾರಿ ಜ್ಞಾನವನ್ನು ಗುರುತಿಸದೆ ಅಹಂಕಾರ ಪಟ್ಟಾಗ ಜ್ಞಾನಿಗಳನ್ನು ಕಳೆದುಕೊಳ್ಳುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.