ADVERTISEMENT

ಮಂಕುತಿಮ್ಮನ ಕಗ್ಗ | ಆಟದ ಫಲ

ಡಾ. ಗುರುರಾಜ ಕರಜಗಿ
Published 31 ಆಗಸ್ಟ್ 2020, 15:30 IST
Last Updated 31 ಆಗಸ್ಟ್ 2020, 15:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ|
ಕಳೆವುವದರಲಿ ನಮ್ಮ ಜನುಮಜನುಮಗಳು ||
ಗೆಲುವರ‍್ಗೊ! ಸೋಲರ‍್ಗೊ! ಲೆಕ್ಕನೋಡುವುದೆಂದೊ !
ಫಲವು ಬರಿಯಾಟವೆಲೊ- ಮಂಕುತಿಮ್ಮ || 329 ||

ಪದ-ಅರ್ಥ: ಕೊನೆಯಿಲ್ಲದೀಯಾಟ=ಕೊನೆಯಿಲ್ಲದ+ಈ+ಆಟ, ಕಳೆವುವದರಲಿ=ಕಳೆವುವು+ಅದರಲಿ, ಗೆಲವರ‍್ಗೊ=ಗೆಲವು+ರ‍್ಗೊ(ಯಾರಿಗೊ), ಸೋಲರ‍್ಗೊ=ಸೋಲು+ರ‍್ಗೊ(ಯಾರಿಗೊ).

ವಾಚ್ಯಾರ್ಥ: ಈ ಆಟ ಕೊನೆ ಮೊದಲಿಲ್ಲದೆ, ನಿಲ್ಲದೆ ನಡೆಯುವುದು. ಇದರಲ್ಲಿಯೇ ಜನ್ಮ ಜನ್ಮಾಂತರಗಳು ಕಳೆದು ಹೋಗುವುದು. ಯಾರಿಗೆ ಗೆಲವೊ, ಯಾರಿಗೆ ಸೋಲೊ, ಇದರ ಲೆಕ್ಕನೋಡುವುದೆಂದು? ಈ ಆಟಕ್ಕೆ ಬೇರೆ ಫಲವಿಲ್ಲ. ಆಟವಾಡಿದ್ದೇ ಫಲ.

ADVERTISEMENT

ವಿವರಣೆ: ಹಿಂದೂ ಧರ್ಮದಲ್ಲಿ ಪುನರ್ಜನ್ಮದ ನಂಬಿಕೆ ಬಲವಾದದ್ದು. ಬದುಕು ಆಕಸ್ಮಿಕವಲ್ಲ. ಅದು ನಾವು ಮಾಡಿದ ಕರ್ಮಗಳ ಫಲ. ಕರ್ಮಗಳ ಫಲವಾಗಿ ಜೀವ ಜಗತ್ತಿಗೆ ಬಂದು ಬಂದು, ಪಾಪಕರ್ಮಗಳ ಫಲವನ್ನು ಕರಗಿಸುತ್ತ ಅಥವಾ ಪಾಪಕರ್ಮಗಳ ಫಲವಾಗಿ ಕರ್ಮವನ್ನು ಹೆಚ್ಚಿಸುತ್ತ ಜನ್ಮಜನ್ಮಾಂತರಗಳಲ್ಲಿ ನಡೆಯುತ್ತದೆ. ಇದಕ್ಕೆ ಮೊದಲಿಲ್ಲ, ಕೊನೆಯಿಲ್ಲ. ಕನಕದಾಸರು ಹಾಡಿದರು, ‘ಏಸು ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ, ತಾನಲ್ಲ, ತನ್ನದಲ್ಲ’.

ಶಂಕರಾಚಾರ್ಯರು, ‘ಪುನರಪಿ ಜನನಂ, ಪುನರಪಿ ಮರಣಂ, ಪುನರಪಿ ಜನನೀ ಜಠರೇಶಯನಂ, ಇಹ ಸಂಸಾರೇ ಖಲು ದುಸ್ತಾರೆ ಕೃಪಯಾಪಾರೆ ಪಾಹಿ ಮುರಾರೆ’ ಎಂದರು. ‘ಜಾತಸ್ಯಹಿ ಧ್ರುವೋ ಮೃತ್ಯು, ಧ್ರುವಂ ಜನ್ಮ ಮೃತಸ್ಯ ಚ’ ಎಂದಿತು ಸುಭಾಷಿತ.

ಬಸವಣ್ಣನವರು ಕೂಡಲಸಂಗಮ ದೇವನನ್ನು ಬೇಡುವುದು ಹೀಗೆ:

ಭವಭವದಲ್ಲಿ ಎನ್ನ ಮನವು ನೀವಲ್ಲದೆ:
ಭವಭವದಲ್ಲೆನ್ನ ಮನವು ಸಿಲುಕದೆ
ಭವರಾಟಳದೊಳು ತುಂಬದೆ, ಕೆಡಹದೆ
ಭವರೋಗವೈದ್ಯ ನೀನು, ಭವರಹಿತ ನೀನು
ಅವಧಾರು! ಕರುಣಿಸುವುದು ಕೂಡಲಸಂಗಮದೇವಾ

ಭವಭವಗಳಲ್ಲಿ ಅಂದರೆ ದೇಹವನ್ನು ಧರಿಸಿ ಬೇರೆ ಬೇರೆ ಜನ್ಮಗಳಲ್ಲಿ, ಸಿಕ್ಕು ತಿರುಗುತ್ತಿರುವ ಜೀವವಿದು. ಅದನ್ನು ಮುಕ್ತ ಮಾಡು ಎಂದು ಭವರೋಗ ವೈದ್ಯನನ್ನು ಪ್ರಾರ್ಥಿಸುತ್ತಾರೆ.

ಕಗ್ಗ ಹೇಳುವುದು ಇದೇ ಮಾತನ್ನು. ಜನ್ಮ ಜನ್ಮಗಳು ಕೊನೆಯಿಲ್ಲದ ಈ ಆಟದಲ್ಲಿಯೇ ಕಳೆದುಹೋಗುತ್ತವೆ. ಯಾವ ಜನ್ಮದಲ್ಲಿ ಗೆಲುವಾಯ್ತೋ, ಯಾವ ಜನ್ಮದಲ್ಲಿ ಸೋಲಾಯ್ತೋ ಎಂದು ಹೇಗೆ ಲೆಕ್ಕ ಮಾಡುವುದು. ಅದೂ ಅಲ್ಲದೆ ಲೆಕ್ಕವನ್ನು ಎಂದು ಮಾಡುವುದು? ಯಾಕೆಂದರೆ ಜನ್ಮಗಳ ಪರಂಪರೆ ಮುಗಿದರೆ ಕೊನೆಗೆ ಲೆಕ್ಕ ಹಾಕಬಹುದು. ಆದರೆ ಈ ಸರಪಳಿಗೆ ಮುಕ್ತಾಯವೇ ಇಲ್ಲವಲ್ಲ!

ಹಾಗಾದರೆ ಈ ಜನ್ಮದಾಟಗಳ ಫಲವೇನು? ಫಲ ಏನೂ ಇಲ್ಲ, ಆಟವಾಡಿದ್ದೇ ಫಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.