ADVERTISEMENT

ಗತಿಬಿಂಬ | ಗದ್ದುಗೆ ಗುದ್ದಾಟ: ಗೆಲುವು ಯಾರಿಗೆ?

ವೈ.ಗ.ಜಗದೀಶ್‌
Published 16 ಜುಲೈ 2025, 0:30 IST
Last Updated 16 ಜುಲೈ 2025, 0:30 IST
<div class="paragraphs"><p>ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್</p></div>

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್

   
ಬಿಹಾರ ಚುನಾವಣೆಯ ಫಲಿತಾಂಶ ಕರ್ನಾಟಕದ ವಿಷಯದಲ್ಲಿ ನಿರ್ಣಾಯಕ ಆಗುವ ಲೆಕ್ಕಾಚಾರ ರಾಜಕೀಯ ಪಡಸಾಲೆಯಲ್ಲಿದೆ. ಅಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ವಿಜಯ ಸಾಧಿಸಿದರೆ, ಇಲ್ಲಿನ ಸರ್ಕಾರದ ಪತನಕ್ಕೆ ಕಮಲ ಪಡೆ ಕೈ ಹಾಕುವ ಸಂಭವ ಹೆಚ್ಚಾಗಿದೆ. ಆರ್‌ಜೆಡಿ– ಕಾಂಗ್ರೆಸ್‌ ಅಧಿಕಾರ ಹಿಡಿದರೆ ಇಲ್ಲಿನ ಕಾಂಗ್ರೆಸ್ ಸರ್ಕಾರದ ಮೇಲೆ ಹಸ್ತಕ್ಷೇಪ ಮಾಡಲು ಹೈಕಮಾಂಡ್ ಮುಂದಾದರೂ ಅಚ್ಚರಿಯಿಲ್ಲ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿದ್ದಂತೆಯೇ ಗದ್ದುಗೆ ಗುದ್ದಾಟ ಜೋರಾಗಿದೆ. ಎರಡೂವರೆ ವರ್ಷದ ಬಳಿಕ ನಾಯಕತ್ವ ಬದಲಾವಣೆಯ ಒಪ್ಪಂದ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಆ ಪಕ್ಷದ ಹೈಕಮಾಂಡ್ ತುಟಿಬಿಚ್ಚಿಲ್ಲ. ಆದರೆ, ಕಾಂಗ್ರೆಸ್‌ನ ರಾಜ್ಯ ಘಟಕದಲ್ಲಿ ‘ಅಧಿಕಾರ ಹಸ್ತಾಂತರ’ದ ಚಡಪಡಿಕೆಯಂತೂ ಶುರುವಾಗಿದೆ. 

ಎಸ್.ಎಂ. ಕೃಷ್ಣ ಅವರು ನಿಧನರಾದಾಗ ವಿಧಾನಸಭೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್ ಅವರು, ‘ಅಧಿಕಾರ ತಂತಾನೇ ಸಿಗುವುದಿಲ್ಲ; ಒದ್ದು ಕಿತ್ತುಕೊಳ್ಳಬೇಕಾಗುತ್ತದೆ’ ಎಂದು ಪ್ರಾಸಂಗಿಕವಾಗಿ ಹೇಳಿದ್ದರು. ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಸಚಿವರು ತಿರುಗಿಬಿದ್ದಿದ್ದರು. ಶಿವಕುಮಾರ್ ನಿಭಾಯಿಸುತ್ತಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಕಿತ್ತುಕೊಳ್ಳುವ ಹೊಸ ಪಟ್ಟು ಹಾಕಿದ್ದರು. ಇದರಿಂದ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಬಿಗಡಾಯಿಸಿತ್ತು. ‘ನಾಯಕತ್ವ ಬದಲಾವಣೆಯ ಬಗ್ಗೆ ಯಾರೊಬ್ಬರೂ ಬಹಿರಂಗ ವಾಗಿ ಮಾತನಾಡಕೂಡದು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಟ್ಟಾಜ್ಞೆ ವಿಧಿಸಿದ್ದರು. ಕೆಲ ದಿನಗಳಲ್ಲೇ ಇದನ್ನು ಧಿಕ್ಕರಿಸಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಪ್ತರು ಹಾದಿಯಲ್ಲಿ ಮಾತನಾಡತೊಡಗಿದರು. ಅಲ್ಲಿಗೆ, ಕಾಂಗ್ರೆಸ್ ಹೈಕಮಾಂಡ್‌ಗೆ ಕರ್ನಾಟಕದ ಮೇಲೆ ಹಿಡಿತ ಇಲ್ಲ ಎಂಬುದು ಸ್ಪಷ್ಟವಾಯಿತು.

ADVERTISEMENT

ಏತನ್ಮಧ್ಯೆಯೇ ಎರಡು ಬಣಗಳ ಪೈಪೋಟಿ ಮುಂದುವರಿದೇ ಇತ್ತು. ಎಚ್.ಡಿ. ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಸಮಾವೇಶ ನಡೆಸುವ ಮೂಲಕ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಅವರ ಆಪ್ತರು ಸಜ್ಜಾಗಿದ್ದರು. ಅದಕ್ಕೆ ಹೈಕಮಾಂಡ್ ಮುಖೇನ ತಡೆ ಹಾಕಿಸಿದ ಶಿವಕುಮಾರ್, ಅದನ್ನು ‘ಕಾಂಗ್ರೆಸ್ ಸಮಾವೇಶ’ ಎಂದು ಬದಲಾಯಿಸಿದರು. 

ಸಿದ್ದರಾಮಯ್ಯನವರ ಬಲ ಕ್ರೋಡೀಕರಿಸಲು ದಲಿತ ಸಮಾವೇಶ ನಡೆಸಲು ಅವರ ಆಪ್ತ ಸಚಿವರು ಮುಂದಾದರು. ಸಮಾವೇಶ ಮಾತ್ರವಲ್ಲ; ದಲಿತ ನಾಯಕರ ಭೋಜನಕೂಟಕ್ಕೂ ಹೈಕಮಾಂಡ್ ಕಡಿವಾಣ ಹಾಕಿತು. ಕಲಬುರಗಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆಯವರು, ‘ಇಬ್ಬರೂ ಒಟ್ಟಾಗಿ ಹೋದರಷ್ಟೇ ಅಭಿವೃದ್ಧಿ ಸಾಧ್ಯ’ ಎಂದು ಹೇಳುವ ಮೂಲಕ, ‘ಕಚ್ಚಾಟ ನಿಲ್ಲಿಸಿ’ ಎಂದು ಸೂಚನೆ ಕೊಟ್ಟಿದ್ದರು.

ಈ ನಡುವೆ, ‘ನಾವಿಬ್ಬರೂ ಒಂದು ಸಹಮತಕ್ಕೆ ಬಂದಿದ್ದೇವೆ’ ಎಂದು ಸಂದರ್ಶನದಲ್ಲಿ ಶಿವಕುಮಾರ್ ನೀಡಿದ ಹೇಳಿಕೆ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆಗೆ ಇಂಬು ಕೊಟ್ಟಿತು. ಸಿದ್ದರಾಮಯ್ಯ ಆಪ್ತರು ಮತ್ತೆ ಪ್ರತ್ಯೇಕ ಸಭೆಗಳನ್ನು ನಡೆಸಲು ಶುರುವಿಟ್ಟರು. ‘ಅಧಿಕಾರ ಹಂಚಿಕೆಯ ಒಪ್ಪಂದವಾಗಿಲ್ಲ. ಸಿದ್ದರಾಮಯ್ಯ ಐದು ವರ್ಷ ಪೂರ್ಣಗೊಳಿಸುತ್ತಾರೆ’ ಎಂದು ಅವರ ಮಗ ಯತೀಂದ್ರ ನೀಡಿದ ಹೇಳಿಕೆ, ಈ ಬಣ ಜಗಳಕ್ಕೆ ತಿರುವು ನೀಡಿತು.

ಈ ಬೆನ್ನಲ್ಲೇ, ‘ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ಕೈಯಲ್ಲಿದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದ್ದು, ಸೂಕ್ತ ಕಾಲದಲ್ಲಿ ತೀರ್ಮಾನ ತೆಗೆದು ಕೊಳ್ಳಲಿದೆ’ ಎಂದು ಖರ್ಗೆಯವರು ನೀಡಿದ ಹೇಳಿಕೆ, ಕಾಂಗ್ರೆಸ್‌ನಲ್ಲಿ ಸ್ಫೋಟಕ ವಾತಾವರಣಕ್ಕೆ ದಾರಿ ಮಾಡಿಕೊಟ್ಟಿತು.

ಇದರ ಜತೆಗೆ, ಹೈಕಮಾಂಡ್‌ ತನ್ನ ಪಟ್ಟು ಬಿಗಿಗೊಳಿಸಲು ಆರಂಭಿಸಿತು. ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಸಿದ್ದರಾಮಯ್ಯನವರು ಶಿಫಾರಸು ಮಾಡಿದ್ದ ಹೆಸರುಗಳನ್ನು ಹೈಕಮಾಂಡ್ ಆಖೈರುಗೊಳಿಸಿತ್ತು. ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸುವ ತಯಾರಿಯಲ್ಲಿದ್ದಾಗಲೇ, ಹೈಕಮಾಂಡ್‌ ಅದಕ್ಕೆ ತಡೆ ಹಾಕಿತು. 2015ರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಗೆ ಅಂಗೀಕಾರ ನೀಡಿಯೇ ಬಿಡುವ ಸಿದ್ಧತೆಯನ್ನು ಸಿದ್ದರಾಮಯ್ಯ ಮಾಡಿಕೊಂಡಿದ್ದರು. ವರದಿ ಸ್ವೀಕರಿಸದಂತೆ ನಿರ್ಬಂಧ ಹೇರಿದ ಹೈಕಮಾಂಡ್, ಹೊಸದಾಗಿ ಸಮೀಕ್ಷೆ ನಡೆಸುವಂತೆ ಸೂಚಿಸಿತು. ಸಿದ್ದರಾಮಯ್ಯನವರ ವೇಗ ಹಾಗೂ ತೀರ್ಮಾನಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಹೈಕಮಾಂಡ್ ನಿಧಾನಕ್ಕೆ ಆರಂಭಿಸಿದೆ ಎಂಬುದರ ಸೂಚನೆಗಳಿವು.

ಈ ಬೆಳವಣಿಗೆಯ ನಡುವೆಯೇ, ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ರಾಜ್ಯಕ್ಕೆ ಕಳುಹಿಸಿ ಶಾಸಕರ ಅಭಿಪ್ರಾಯ ಸಂಗ್ರಹಿಸುವ ಕೆಲಸವನ್ನು ಹೈಕಮಾಂಡ್ ಮಾಡಿತು. ಎರಡೂವರೆ ವರ್ಷಗಳ ಬಳಿಕ ಅಧಿಕಾರ ಹಂಚಿಕೆ ಸೂತ್ರದ ಅಳವಡಿಕೆ ಹಾಗೂ ಸಚಿವ ಸಂಪುಟ ಪುನರ್‌ರಚನೆಗಾಗಿ ಪಕ್ಷ ಆರಂಭಿಸಿದ ಚಟುವಟಿಕೆ ಎಂದೇ ಇದನ್ನು ಬಿಂಬಿಸಲಾಗುತ್ತಿದೆ. 

ತನ್ನ ಕೈ ಕಟ್ಟಿಹಾಕುವ ಯತ್ನದ ವಿರುದ್ಧ ಸೆಟೆದು ನಿಂತ ಸಿದ್ದರಾಮಯ್ಯ, ಹೈಕಮಾಂಡ್‌ಗೆ ಸಡ್ಡು ಹೊಡೆಯಲು ಮುಂದಾಗಿರುವ ಲಕ್ಷಣಗಳು ಕಾಣಿಸಿವೆ. ‘ಮುಖ್ಯಮಂತ್ರಿಯಾಗಿ ನಾನೇ ಐದು ವರ್ಷ ಪೂರೈಸುತ್ತೇನೆ’ ಎಂದು ಏರುಧ್ವನಿಯಲ್ಲಿ ಪ್ರತಿಪಾದಿಸಿದ ಸಿದ್ದರಾಮಯ್ಯ, ಬಳಿಕ ದೆಹಲಿಗೆ ಹೋದರು. ಅಲ್ಲಿ ರಾಹುಲ್ ಗಾಂಧಿ ಭೇಟಿಗೆ ಯತ್ನಿಸಿದರೂ ಅವರು ಕೈಗೆ ಸಿಗಲಿಲ್ಲ. ಅದೇ ವೇಳೆ ದೆಹಲಿಯಲ್ಲಿದ್ದ ಶಿವಕುಮಾರ್‌, ಪ್ರಿಯಾಂಕಾ ಗಾಂಧಿ ಭೇಟಿಗೆ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಧಿಕಾರ ಹಂಚಿಕೆ ವಿಷಯದಲ್ಲಿ ಹೈಕಮಾಂಡ್‌ನ ಖಚಿತ ನಿಲುವು ತಿಳಿಯಲು ಇಬ್ಬರೂ ಬಯಸಿದ್ದರು. ಆದರೆ, ತಮ್ಮ ಕೈ ಹಿಡಿಯುವ ನಾಯಕರು ಇಬ್ಬರಿಗೂ ಸಿಗಲಿಲ್ಲ. ಶಿವಕುಮಾರ್ ಬರಿಗೈಲಿ ವಾಪಸ್ ಆದರು.  ಆಂಗ್ಲ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಸಿದ್ದರಾಮಯ್ಯ, ‘ಶಿವಕುಮಾರ್‌ಗೆ ಹೆಚ್ಚಿನ ಶಾಸಕರ ಬೆಂಬಲ ಇಲ್ಲ; ನಾನೇ ಐದು ವರ್ಷ ಮುಖ್ಯಮಂತ್ರಿ’ ಎನ್ನುವ ಮೂಲಕ ಹೈಕಮಾಂಡ್‌ಗೆ ಸಂದೇಶವನ್ನೂ ರವಾನಿಸಿದರು. ಕಾಂಗ್ರೆಸ್‌ ಹೈಕಮಾಂಡ್ ಮಾತ್ರ ಈ ವಿಷಯದಲ್ಲಿ ಮೌನವನ್ನೇ ಹೊದ್ದುಕೊಂಡಿದೆ. ಅದಕ್ಕೆ ಕಾರಣಗಳನ್ನು ಹುಡುಕಿದರೆ, ಹಲವು ಆಯಾಮಗಳು ತೆರೆದುಕೊಳ್ಳುತ್ತವೆ.

ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಎಂದು ಶಿವಕುಮಾರ್ ಆಪ್ತರು ಹೇಳುತ್ತಿದ್ದರೆ, ಸಿದ್ದರಾಮಯ್ಯ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಒಂದು ವೇಳೆ ಒಪ್ಪಂದ ಆಗಿದ್ದರೂ ಆ ಅವಧಿ ಪೂರ್ಣಗೊಳ್ಳಲು ಇನ್ನೂ ಆರು ತಿಂಗಳಿದೆ. ದೇವರಾಜ ಅರಸು ಅವರು ಮುಖ್ಯಮಂತ್ರಿ ಯಾಗಿದ್ದ ಅವಧಿಯ ದಾಖಲೆಯನ್ನು ಮುರಿಯುವ ತವಕದಲ್ಲಿ ಸಿದ್ದರಾಮಯ್ಯ ಇದ್ದಾರೆ. 2026ರ ಫೆಬ್ರುವರಿವರೆಗೆ ಅಧಿಕಾರದಲ್ಲಿದ್ದರೆ ಆ ದಾಖಲೆ ಸರಿಗಟ್ಟಬಹುದು. ಅಷ್ಟರಲ್ಲೇ, ಬಜೆಟ್ ಮಂಡನೆ ಸಮೀಪಿಸಲಿದೆ. ಉತ್ತಮ ಬಜೆಟ್ ಕೊಟ್ಟು ಹೋಗುವೆ ಎಂದು ಸಿದ್ದರಾಮಯ್ಯ ಹೇಳಿದರೆ ಇಲ್ಲವೆನ್ನಲಾಗದು. ಹೀಗಾಗಿ, ಅಲ್ಲಿಯವರೆಗೆ ಕಾದು ನೋಡುವ ಲೆಕ್ಕಾಚಾರ ಹೈಕಮಾಂಡ್‌ನದ್ದಾಗಿದೆ ಎಂದು ಹೇಳಲಾಗುತ್ತಿದೆ. 

ಇದೇ ನವೆಂಬರ್‌ಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅಲ್ಲಿ ಕಾರ್ಯಪ್ರವೃತ್ತರಾಗಿರುವ ರಾಹುಲ್ ಗಾಂಧಿ ಅಹಿಂದ ಮತಗಳ ಮೇಲೆ ಕಣ್ಣಿಟ್ಟು ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿರುವ ಮೂರು ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರ ಹಿಂದುಳಿದ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದಾರೆ. ಬಿಹಾರ ಚುನಾವಣೆಗೆ ಮೊದಲೇ ಸಿದ್ದರಾಮಯ್ಯ ಅವರನ್ನು ಇಳಿಸುವ ಯತ್ನಕ್ಕೆ ಕೈ ಹಾಕಿದರೆ, ಅದು ವಿರೋಧ ಪಕ್ಷಗಳಿಗೂ ಅಸ್ತ್ರವಾಗಬಹುದು ಎಂಬ ಆತಂಕವೂ ಹೈಕಮಾಂಡ್‌ ಅನ್ನು ಕಾಡುತ್ತಿರ ಬಹುದು. 

ಕಾಂಗ್ರೆಸ್‌ನಲ್ಲಿ ಅಹಿಂದ ಸಮುದಾಯದ ಪ್ರಬಲ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ, ಪಕ್ಷದ ಪ್ರಬಲ ಮತಬ್ಯಾಂಕ್ ಆಗಿರುವ ಅಹಿಂದ ಮತಗಳು ಛಿದ್ರವಾಗಬಹುದು ಎಂಬ ಭಯವೂ ಹೈಕಮಾಂಡ್‌ಗೆ ಇದ್ದಂತಿದೆ. ಹೀಗಾಗಿ ಬಿಹಾರ ಚುನಾವಣೆವರೆಗೂ ಕಾಯ್ದುನೋಡುವ ತಂತ್ರಕ್ಕೆ ಹೈಕಮಾಂಡ್ ಮೊರೆ ಹೋದಂತಿದೆ. ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಹಗ್ಗ ಜಗ್ಗಾಟದ ಬಲಾಬಲ ಎಷ್ಟೆಂದು ಅರಿಯಬೇಕಾದರೆ, 10 ವರ್ಷಗಳ ಹಿಂದಿನ ವಿದ್ಯಮಾನ ನೋಡಬೇಕು.

2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಶಿವಕುಮಾರ್ ಅವರಿಗೆ ಸಚಿವರಾಗಲೂ ಸಾಧ್ಯವಾಗಿರಲಿಲ್ಲ. 2013ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಬೆಂಗಳೂರು ಗ್ರಾಮಾಂತರದಿಂದ ಗೆದ್ದಿದ್ದ ಎಚ್.ಡಿ. ಕುಮಾರಸ್ವಾಮಿ, ಮಂಡ್ಯದಿಂದ ಜೆಡಿಎಸ್‌ನಿಂದ ಗೆದ್ದಿದ್ದ ಎನ್. ಚಲುವರಾಯಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎರಡೂ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿತ್ತು. ಆ ವೇಳೆಗೊಮ್ಮೆ, ದೆಹಲಿಯಲ್ಲಿದ್ದ ಸಿದ್ದರಾಮಯ್ಯನವರು ಕರ್ನಾಟಕ ಭವನದಲ್ಲಿ ಕಾರು ಹತ್ತಿ ಕುಳಿತಿದ್ದರು. ಆಗ ಅವರ ಬಳಿ ಹೋಗಿದ್ದ ಶಿವಕುಮಾರ್, ಸಂ‍‍ಪುಟಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ‘ಎರಡು ಉಪಚುನಾವಣೆ ಗೆಲ್ಲಿಸಿಕೊಂಡು ಬಾ; ಆಮೇಲೆ ನೋಡೋಣ’ ಎಂದು ಸಾಗ ಹಾಕಿದ್ದರು. ಗೆಲ್ಲಿಸಿಕೊಂಡು ಬಂದ ಶಿವಕುಮಾರ್ ಸಚಿವರೂ ಆದರು.

2018ರಲ್ಲಿ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರಲ್ಲಿತ್ತು. ಆ ವೇಳೆ, ಸೋನಿಯಾ ಗಾಂಧಿಯವರ ಆಪ್ತ ಅಹಮದ್ ಪಟೇಲ್‌ ಅವರು ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯ ಅಭ್ಯರ್ಥಿಯಾಗಿದ್ದರು. ‘ಆಪರೇಷನ್ ಕಮಲ’ದಿಂದ ಗುಜರಾತಿನ ಕಾಂಗ್ರೆಸ್‌ ಶಾಸಕರನ್ನು ರಕ್ಷಿಸಲು ಬೆಂಗಳೂರಿಗೆ ಕರೆತರಲಾಗಿತ್ತು. ಅವರಿಗೆ ರಕ್ಷಣೆ ಕೊಟ್ಟಿದ್ದ ಶಿವಕುಮಾರ್, ಹೈಕಮಾಂಡ್‌ನ ಒಲವು ಗಳಿಸಿದ್ದರು. ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯದ
ದಾಳಿಗೆ ಸಿಲುಕಿ, ಜೈಲುವಾಸವನ್ನೂ ಕಂಡರು. ಕೆಪಿಸಿಸಿ ಅಧ್ಯಕ್ಷರಾದ ತರುವಾಯ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದರು. ಹೀಗಾಗಿ, 2023ರ ಚುನಾವಣೆ ಹೊತ್ತಿಗೆ ರಾಜಕೀಯ ಚಿತ್ರಣವೇ ಬದಲಾಗಿತ್ತು. ಸಿದ್ದರಾಮಯ್ಯನವರ ಜನಪ್ರಿಯತೆ, ವರ್ಚಸ್ಸು ಹಾಗೂ ಶಿವಕುಮಾರ್ ಸಂಘಟನಾ ಶಕ್ತಿ, ಇಬ್ಬರೂ ಹೂಡಿದ ಸಂಪನ್ಮೂಲಗಳ ಫಲವಾಗಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತು. 10 ವರ್ಷಗಳ ಹಿಂದೆ, ಸಚಿವ ಸ್ಥಾನಕ್ಕೆ ಅಂಗಲಾಚುವ ಸ್ಥಿತಿಯಲ್ಲಿದ್ದ ಶಿವಕುಮಾರ್, ಈ ಚುನಾವಣೆ ಬಳಿಕ ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಾಕುವ ಮಟ್ಟಕ್ಕೆ ಬಂದು ನಿಂತಿದ್ದರು.

‘ನಾನೇ ಐದು ವರ್ಷ ಮುಖ್ಯಮಂತ್ರಿ’ ಎಂದು ಸಿದ್ದರಾಮಯ್ಯ ಅಬ್ಬರಿಸುತ್ತಿದ್ದರೂ ಶಿವಕುಮಾರ್ ಮಾತ್ರ ಮೌನ ವಹಿಸಿದ್ದಾರೆ. ‘ಖರ್ಗೆಯವರು ದೀಕ್ಷೆ ಕೊಟ್ಟಿದ್ದಾರೆ. ಪಕ್ಷ ಹೇಳಿದಂತೆ ಕೇಳುವುದಷ್ಟೇ ತಮ್ಮ ಕೆಲಸ’ ಎಂದು ಶಿವಕುಮಾರ್‌ ಹೇಳುತ್ತಿದ್ದಾರೆ. ಕಿತ್ತುಕೊಳ್ಳಲು ಹೋದರೆ ಸಿದ್ದರಾಮಯ್ಯನವರು ಬಿಟ್ಟುಕೊಡುವವರಲ್ಲ ಎಂಬುದು ಅವರಿಗೂ ಗೊತ್ತಾದಂತಿದೆ. ಹಾಗಂತ ಸುಮ್ಮನೆ ಕೂರುವ ಜಾಯಮಾನವೂ ಅವರದಲ್ಲ. 10 ವರ್ಷಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ಅವರೀಗ ಮಾಗಿದ್ದಾರೆ. ಕಾಯಿ ಹಣ್ಣಾಗುವವರೆಗೆ ಕಾಯುವ ತಾಳ್ಮೆಯೂ ಬಂದಂತಿದೆ. ಜಟ್ಟಿ ಕೈ ಕಟ್ಟಿದ್ದಾನೆಂದರೆ ಸೋತ ಎಂದಲ್ಲ; ಎದುರಾಳಿಯನ್ನು ಮಣಿಸಲು ಮತ್ತೊಂದು ಬಲಿಷ್ಠ ಪಟ್ಟು ಹಾಕುವ ಕಾಲಕ್ಕೆ ಕಾಯುತ್ತಿದ್ದಾನೆ ಎಂದೇ ಭಾವಿಸಬೇಕು. ಅಬ್ಬರ–ಮೌನದ ಗುದ್ದಾಟದಲ್ಲಿ ಗೆಲ್ಲುವವರು ಯಾರು? ಯಾರಿಗೆ ನಷ್ಟ ಎಂಬುದನ್ನು ಕಾಲವೇ ಹೇಳಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.