
ಕನ್ನಡ ಚಿತ್ರರಂಗ
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಎನ್ನುವುದು ಬಸವಣ್ಣನ ಮಾತು. ಹಾಗೆ, ಜೊತೆಗಿರುವವರು ಅಹುದಹುದೆನ್ನುವಂತೆ ಮಾತನಾಡುವ ಕನ್ನಡ ಚಿತ್ರರಂಗದ ಮಾತುಗಾರರಲ್ಲಿ ರಾಜ್ ಬಿ. ಶೆಟ್ಟಿ ಒಬ್ಬರು. ‘45’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಅವರ ಮಾತುಗಳನ್ನೊಳಗೊಂಡ ದೃಶ್ಯತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಜನರ ಗಮನಸೆಳೆದಿದೆ. ಅವರ ಮಾತಿನ ಸಾರ ಇಷ್ಟು: ಅವಕಾಶಕ್ಕೆ ಪ್ರತಿಭೆಯೇ ಏಕೈಕ ಮಾನದಂಡ!
‘ಬಡವರ ಮಕ್ಕಳು ಬೆಳೀಬೇಕು’ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಚಾಲ್ತಿ ಯಲ್ಲಿರುವ ಮಾತುಗಳಲ್ಲೊಂದು. ನಟ ಧನಂಜಯ್ ಅವರ ಮೂಲಕ ಜನಪ್ರಿಯಗೊಂಡ ಈ ಮಾತಿನ ಬಗ್ಗೆ ರಾಜ್ ಶೆಟ್ಟಿ ಅವರಿಗೆ ಆಕ್ಷೇಪವಿದೆ. ಬಡವರ ಮಕ್ಕಳು ಬೆಳೀಬೇಕು ಎನ್ನುವುದು ಮುಖ್ಯವಲ್ಲ, ಪ್ರತಿಭೆಯುಳ್ಳವರು ಬೆಳೆಯಬೇಕು ಎನ್ನುವುದು ಅವರ ನಂಬಿಕೆ, ಪ್ರಮೇಯ. ‘ಅರ್ಹತೆ’ ನಮಗೆ ಮುಖ್ಯವಾಗಬೇಕು. ಪ್ರತಿಭೆಯ ಮುಂದೆ ಬೇರೆ ಯಾವುದೂ ಮುಖ್ಯವಲ್ಲ. ಉದಾಹರಣೆಗೆ, ಬಡವನ ಮಗನಿಗೆ ಪ್ರತಿಭೆ ಇರುವುದಿಲ್ಲ, ಶ್ರೀಮಂತನ ಮಗ ಅಪಾರ ಪ್ರತಿಭಾವಂತ ಎಂದುಕೊಳ್ಳಿ. ಇವರಲ್ಲಿ ನಾವು ಯಾರಿಗೆ ಅವಕಾಶ ಕೊಡಬೇಕು? ಉಚಿತವಾಗಿ ಯಾರೂ ಹತ್ತು ರೂಪಾಯಿಯನ್ನೂ ಕೊಡುವುದಿಲ್ಲ. ಹೀಗಿರುವಾಗ, ನಮಗೆ ಯಾರಾದರೂ ಯಾಕೆ ಅವಕಾಶ ಕೊಡಬೇಕು? ಎನ್ನುವುದು ಅವರ ಪ್ರಶ್ನೆ.
‘ಪ್ರತಿಭೆ’ಯ ಬಗ್ಗೆ ತಮ್ಮ ಹೊಳಹುಗಳನ್ನು ಹಂಚಿಕೊಳ್ಳುವಾಗ ರಾಜ್ ಶೆಟ್ಟಿ ಅವರ ಮಾತಿನಲ್ಲಿನ ಆತ್ಮವಿಶ್ವಾಸವನ್ನೂ ಕಣ್ಣುಗಳಲ್ಲಿನ ಹೊಳಪನ್ನೂ ಗಮನಿಸಬೇಕು. ತೆರೆಯ ಮೇಲಷ್ಟೇ ಅಲ್ಲ, ತೆರೆಯಾಚೆಗೂ ಅವರದ್ದು ಸಹಜಾಭಿನಯ. ‘ಅರ್ಹತೆ’ಯ ಬಗೆಗಿನ ಅವರ ಮಾತುಗಳನ್ನು ಅವರ ಜೊತೆಗಿದ್ದವರು ಅಹುದಹುದೆನ್ನುವಂತೆ ತಲೆದೂಗಿ ಅನುಮೋದಿಸಿರುವುದೇ ಶೆಟ್ಟರ ಅಭಿನಯದ ಅರ್ಹತೆಗೆ ದೊರೆತಿರುವ ಪ್ರಶಸ್ತಿ.
ಅಭಿನಯದಿಂದ ವಾಸ್ತವಕ್ಕೆ ಬರೋಣ. ಬಡವರ ಮಕ್ಕಳು ಬೆಳೀಬೇಕು ಎನ್ನುವ ಮಾತು ಕೆಲವರಿಗೆ ಪ್ರತಿಭೆ ಹಾಗೂ ಅರ್ಹತೆಯ ವಿಷಯವನ್ನು ನೆನಪಿಗೆ ತರುತ್ತದೆಂದರೆ, ಅವರು ‘ಸಾಮಾಜಿಕ ನ್ಯಾಯ’ದ ಪರಿಕಲ್ಪನೆಗೆ ವಿರುದ್ಧವಾಗಿದ್ದಾರೆ ಎಂದೇ ಅರ್ಥ. ಬಡತನ ಆರ್ಥಿಕತೆಗೆ ಸಂಬಂಧಿಸಿದ್ದಷ್ಟೇ ಅಲ್ಲ, ಜಾತಿಗೆ ಸಂಬಂಧಿಸಿದ್ದೂ, ಸಾಮಾಜಿಕ ಪರಿಸರಕ್ಕೆ ಸಂಬಂಧಿಸಿದ್ದೂ ಹೌದು. ಈ ವಾಸ್ತವವನ್ನು ಗಮನಿಸುವುದು ಸಾಧ್ಯವಾಗದೆ ಹೋದಾಗ, ಸಮಾಜದ ಬಹುದೊಡ್ಡ ವರ್ಗ ನಮ್ಮ ಕಣ್ಣುಗಳಿಂದ ದೂರವಾಗಿಬಿಡುತ್ತದೆ.
ರಾಜ್ ಶೆಟ್ಟಿ ಅವರು ತಮ್ಮ ಮಾತುಗಳಿಗೆ ಉದಾಹರಣೆಯಾಗಿ ರಾಜ್‌ಕುಮಾರ್ ಅವರ ಆಸರೆ ಪಡೆದಿದ್ದಾರೆ. ‘ನಟನಾಗಬೇಕು’ ಎಂದು ಹಂಬಲಿಸಿದ ಶಿವರಾಜ್‌ಕುಮಾರ್ ಅವರಿಗೆ, ‘ನಾನು ನಿನಗೆ ನಟನೆ ಕಲಿಸುತ್ತೇನೆ ಎಂದು ರಾಜ್‌ಕುಮಾರ್ ಹೇಳಲಿಲ್ಲ. ‘ಗುರುಮುಖೇನ ನಟನೆ ಕಲಿ, ಅರ್ಹತೆ ಸಂಪಾದಿಸು ಎಂದು ಹೇಳಿದರು’ ಎಂದು ರಾಜ್ ಶೆಟ್ಟಿ ಹೇಳಿದ್ದಾರೆ. ಶಿವರಾಜ್‌ಕುಮಾರ್ ಅವರು ನಾಯಕನಟನಾದುದು ತಮ್ಮ ಅರ್ಹತೆಯಿಂದಲೇ ಹೊರತು, ಜನಪ್ರಿಯ ನಟನ ಮಗ ಎನ್ನುವ ಕಾರಣಕ್ಕಲ್ಲ ಎನ್ನುವುದು ಶೆಟ್ಟರ ಮಾತಿನ ಇಂಗಿತ. ಅವರ ಮಾತು ನಿಜವೇ. ಆದರೆ, ಶೆಟ್ಟರು ಕೊಟ್ಟ ಉದಾಹರಣೆಯಲ್ಲಿ ಸಮಸ್ಯೆಯಿದೆ. ಅವರು ಉದಾಹರಣೆಯಾಗಿ ಗಮನಿಸಬೇಕಾದುದು ಶಿವರಾಜ್ ಅವರನ್ನಲ್ಲ; ರಾಜ್‌ಕುಮಾರ್ ಅವರನ್ನು. ರಾಜ್‌ಕುಮಾರ್ ಕನ್ನಡದ ಅಪೂರ್ವ ಪ್ರತಿಭೆ ಎನ್ನುವುದು ನಿಸ್ಸಂಶಯ. ಆದರೆ, ಆ ಪ್ರತಿಭೆ ಕಗ್ಗಲ್ಲಾಗಿದ್ದ ಹಾಗೂ ಬಡವರ ಮಗನಾಗಿದ್ದ ಸಂದರ್ಭದಲ್ಲಿ, ಅವರನ್ನು ಬೆಳೆಸಿದ ಸಹೃದಯರ ಔದಾರ್ಯವನ್ನು ನಾವು ಮರೆಯಬಾರದು. ರಂಗಭೂಮಿ ಹಾಗೂ ಚಿತ್ರರಂಗವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅವರ ಪ್ರತಿಭೆಗೆ ಯಾವ ಪ್ರಮಾಣಪತ್ರಗಳ ಬೆಂಬಲವೂ ಇರಲಿಲ್ಲ. ಅವರ ಜೊತೆಗಿದ್ದುದು ಎರಡೇ ಸಂಗತಿ: ಒಂದು, ಮಗ ದೊಡ್ಡ ನಟನಾಗಬೇಕು ಎನ್ನುವ ಅಪ್ಪನ ಹಂಬಲ. ಎರಡನೆಯದು, ದುಡಿಮೆಯ ಬಗೆಗಿನ ಶ್ರದ್ಧೆ.
ಮುತ್ತುರಾಜ್ ಎನ್ನುವ ಬಡ ಕುಟುಂಬದ ತರುಣ ರಾಜ್‌ಕುಮಾರ್ ಆದುದರ ಹಿಂದೆ ಅನೇಕರ ಶ್ರಮವಿದೆ. ರಾಜ್‌ಕುಮಾರ್ ವೃತ್ತಿಜೀವನದ ಆರಂಭದಲ್ಲಿ ದೊರೆತ ಪಾತ್ರಗಳು ಅವರ ಅರ್ಹತೆಗೆ ಸಂದ ಅವಕಾಶಗಳಷ್ಟೇ ಆಗಿರದೆ, ಅವರ ಹಿನ್ನೆಲೆಯ ಕಾರಣದಿಂದ ದೊರೆತ ಅವಕಾಶಗಳೂ ಆಗಿದ್ದವು. ರಾಜ್‌ಕುಮಾರ್ ಚಿತ್ರರಂಗದಲ್ಲಿ ಅವಕಾಶಗಳನ್ನು ಪಡೆಯಲು ಏದುಸಿರುಪಡುತ್ತಿದ್ದ ಸಮಯದಲ್ಲಿ, ಅವರ ಓರಗೆಯ ನಟರು ತಮ್ಮ ಸಾಮಾಜಿಕ ಹಿನ್ನೆಲೆಯಲ್ಲಿ ಪಡೆಯುತ್ತಿದ್ದ ವಿಶೇಷ ಅವಕಾಶಗಳನ್ನು ಗಮನಿಸಬೇಕು. ಈ ಸೂಕ್ಷ್ಮ ಅರ್ಥವಾದರೆ, ಅವಕಾಶಗಳ ಹಿಂದಿನ ರಾಜಕಾರಣವೂ ಅರ್ಥವಾಗುತ್ತದೆ. ಬಡತನ ಹಾಗೂ ಜಾತಿಯ ಕಾರಣಕ್ಕಾಗಿ ರಾಜ್‌ಕುಮಾರ್ ಎದುರಿಸಿದ ಅವಮಾನಗಳ ಸಂಕಥನದ ಅಂದಾಜು ಮಾಡಿಕೊಳ್ಳುವುದು ಸಾಧ್ಯವಾದರೆ, ‘ಬಡವರ ಮಕ್ಕಳು ಬೆಳೀಬೇಕು’ ಎನ್ನುವ ಮಾತಿನ ಸತ್ಯ ಅರ್ಥವಾಗುತ್ತದೆ.
ಬಡವರ ಮಕ್ಕಳು ಬೆಳೀಬೇಕು ಎನ್ನುವುದು ಕೆಲವರಿಗೆ ಪ್ರತಿಭೆಯನ್ನು ಹತ್ತಿಕ್ಕುವ ಹುನ್ನಾರದಂತೆ ಕಾಣಿಸುತ್ತದೆ. ಇಂಥವರು ಗಮನಿಸಬೇಕಾದ ಸೂಕ್ಷ್ಮವೊಂದಿದೆ. ಜಾತಿ ಶ್ರೀಮಂತಿಕೆ ಉಳ್ಳ ಪ್ರತಿಭಾವಂತರಿಗೆ ಅವಕಾಶ ದೊರೆಯುವಷ್ಟು ಸುಲಭವಾಗಿ, ಜಾತಿ ಬಡತನದ ಪ್ರತಿಭಾವಂತರಿಗೆ ದೊರೆಯುವುದಿಲ್ಲ. ಜಾತಿ ಬಡತನ ಎನ್ನುವುದು ಬಹುತೇಕ ಸಂದರ್ಭಗಳಲ್ಲಿ ಆರ್ಥಿಕತೆಗೆ ಸಂಬಂಧಿಸಿದ್ದೂ ಆಗಿರುತ್ತದೆ. ಆ ಕಾರಣದಿಂದಲೇ, ಬಡವರ ಮಕ್ಕಳು ಬೆಳೀಬೇಕು ಎನ್ನುವ ಆಶಯ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ದೃಷ್ಟಿಯಿಂದ ಬಹುಮುಖ್ಯವಾದ ಹೇಳಿಕೆಯಾಗಿದೆ. ಇದು, ಚಿತ್ರರಂಗ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎಲ್ಲರ ಎದೆಗೆ ಬೀಳಬೇಕಾದ ಮಾತು. ಈ ವಾಸ್ತವವನ್ನು ಮರೆತು, ಅರ್ಹತೆ ಇದ್ದವರಿಗಷ್ಟೇ ಅವಕಾಶ ದೊರೆಯಬೇಕು ಎನ್ನುವುದು ಬೌದ್ಧಿಕ ಅಹಂಕಾರದಂತೆ ಕಾಣಿಸುತ್ತದೆ; ಆ ಮಾತು ಧ್ವನಿಸುವ ‘ಅರ್ಹತೆ’ ಜಾತಿಯೇ ಆಗಿರುತ್ತದೆ ಹಾಗೂ ಹೀಗೆ ಮಾತನಾಡುವವರ ಸಾಮಾಜಿಕ ಹೊಣೆಗಾರಿಕೆಯನ್ನು ಅನುಮಾನದಿಂದ ನೋಡಬೇಕಾಗುತ್ತದೆ.
ರಾಜ್ ಶೆಟ್ಟಿ ಅವರ ಮಾತುಗಳ ಜೊತೆಗೆ, ‘ಮಾರ್ಕ್’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ನಟ ಸುದೀಪ್ ಆಡಿರುವ ಮಾತುಗಳನ್ನೂ ಗಮನಿಸಬೇಕು. ‘ಸಾಮಾಜಿಕ ಹೊಣೆಗಾರಿಕೆ ಸಿನಿಮಾದವರಿಗೆ ಮಾತ್ರ ಸೀಮಿತವಾದ ಜವಾಬ್ದಾರಿಯಲ್ಲ. ಅದು ಎಲ್ಲರ ಹೊಣೆಯೂ ಹೌದು’ ಎನ್ನುವುದು ಸುದೀಪ್ ಅವರ ಮಾತು. ಪ್ರತಿಯೊಂದಕ್ಕೂ ಸಿನಿಮಾದವರ ಹೊಣೆ ಗಾರಿಕೆಯನ್ನು ಪ್ರಶ್ನಿಸುವ ಬಗ್ಗೆ ಅವರಿಗೆ ತಕರಾರು.
ಸಮಾಜದ ಕಾಳಜಿ ಎಲ್ಲರಿಗೂ ಸೇರಿದ್ದು ಎನ್ನುವ ಸುದೀಪ್ ಅವರ ಮಾತು ಒಪ್ಪತಕ್ಕದ್ದೇ. ಆದರೆ, ಆ ಕಾಳಜಿಯನ್ನು ಕೆಲವರು ಪ್ರಜ್ಞಾಪೂರ್ವಕವಾಗಿ ನಿಭಾಯಿಸುವುದು, ಪ್ರದರ್ಶಿಸುವುದು ಅಗತ್ಯ. ಸೃಜನಶೀಲ ವ್ಯಕ್ತಿಯೊಬ್ಬ, ಅದರಲ್ಲೂ ಕಲಾವಿದ, ಮಿಗಿಲಾಗಿ ಜನಸಮೂಹವನ್ನು ಪ್ರಭಾವಿಸಬಲ್ಲ ಶಕ್ತಿ ಹೊಂದಿದ್ದರಂತೂ ನಿಶ್ಚಿತವಾಗಿ ಸಾಮಾಜಿಕ ಸ್ವಾಸ್ಥ್ಯಚಿಂತನೆ ಆ ಕಲಾವಿದನ ವೈಯಕ್ತಿಕ ಜವಾಬ್ದಾರಿಯೇ ಹೌದು. ಜನಸಮೂಹದ ಪ್ರೀತಿಗೆ ಭಾಜನರಾದವರು ಆ ಪ್ರೀತಿಗೆ ಉತ್ತರದಾಯಿಯೂ ಆಗುತ್ತಾರೆ ಎನ್ನುವುದನ್ನು ಅರಿಯದೆ, ಸಾಮೂಹಿಕ ಹೊಣೆಗಾರಿಕೆಯ ಮಾತನಾಡುವುದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಜಾಣತನದ ಮಾತಾಗುತ್ತದೆ.
ಸುದೀಪ್, ರಾಜ್ ಶೆಟ್ಟಿ ಅವರಂಥ ಕಲಾವಿದರ ಮಾತುಗಳಲ್ಲಿ ಬುದ್ಧಿವಂತಿಕೆ ಎದ್ದುಕಾಣಿಸುತ್ತದೆ. ಬುದ್ಧಿವಂತಿಕೆಯ ಜೊತೆಗೆ ಹೃದಯವಂತಿಕೆಯೂ ಇದ್ದಾಗ, ‘ಬಡವರ ಮಕ್ಕಳು ಬೆಳೀಬೇಕು’ ಎನ್ನುವ ಮಾತು ಅಥವಾ ಕಲಾವಿದನಿಗೆ ಇರಬೇಕಾದ ಸಾಮಾಜಿಕ ಹೊಣೆಗಾರಿಕೆಯ ಪ್ರಶ್ನೆ ಕಿರಿಕಿರಿ ಹುಟ್ಟಿಸುವುದಿಲ್ಲ. ಕನ್ನಡ ಸಿನಿಮಾದ ಬೌದ್ಧಿಕ ಪ್ರತಿನಿಧಿಗಳಂತೆ ಮಾತನಾಡುವವರು ಈ ನೆಲದ ವಾಸ್ತವಗಳನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅವರು ಅಂಬೇಡ್ಕರರನ್ನೋ ಗಾಂಧಿಯನ್ನೋ ಮಾದರಿಯಾಗಿ ಅನುಸರಿಸದಿದ್ದರೂ ಚಿಂತೆಯಿಲ್ಲ; ತಮ್ಮದೇ ಕ್ಷೇತ್ರದ ರಾಜಕುಮಾರರ ಬದುಕಿನ ಕೆಲವು ತತ್ತ್ವಗಳನ್ನು ಎದೆಗೆ ಬೀಳಿಸಿಕೊಂಡರೂ ಸಾಕು.
ಸಾರ್ವಜನಿಕ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡವರ ಜೀವನತತ್ತ್ವ ಯಾವುದಾಗಿರಬೇಕು ಎನ್ನುವುದಕ್ಕೆ ಉತ್ತರದ ರೂಪದಲ್ಲಿ ಕುವೆಂಪು ಅವರ ‘ಕವಿಯ ಹೃದಯವೊಂದು ವೀಣೆ’ ಕವಿತೆಯನ್ನು ಗಮನಿಸಬಹುದು. ‘ಕವಿಯ ಹೃದಯವೊಂದು ವೀಣೆ; ಲೋಕವದನು ಮಿಡಿವುದು’ ಎಂದು ಆರಂಭವಾಗುವ ಈ ಪುಟ್ಟ ಕವಿತೆ, ‘ವ್ಯಕ್ತಿತನವೆ ಕವಿಗೆ ಇಲ್ಲ; ಅವನು ಇಲ್ಲ, ಅಥವ ಎಲ್ಲ’ ಎನ್ನುತ್ತದೆ. ‘ಎಂತೊ ನಾಡಿನೊಡಲ ನಾಡಿ, ಎಂತುಟಾಸೆಯಿಹುದೊ ನೋಡಿ, ಎಂತೊ ಜನದ ಮೂಕವಾಣಿ, ಅಂತೆ ತಂತಿ ನುಡಿವುದು!’ ಎಂದು ಕವಿತೆ ಕೊನೆಗೊಳ್ಳುತ್ತದೆ. ಈ ಪುಟ್ಟ ಕವಿತೆ, ಕವಿಗಷ್ಟೇ ಅಲ್ಲ, ಸಾರ್ವಜನಿಕ ಬದುಕಿನಲ್ಲಿ ತನ್ನ ಬದುಕಿನ ಸಾರ್ಥಕತೆಯನ್ನು ಕಾಣಲು ಹಂಬಲಿಸುವವರು ಹೇಗಿರಬೇಕು ಎನ್ನುವುದನ್ನು ಮನವರಿಕೆ ಮಾಡುವಂತಿದೆ.
ಕವಿಯ ಹೃದಯ ಲೋಕ ಮಿಡಿಯುವ ವೀಣೆ ಎನ್ನುವ ಮಾತು, ಕವಿ ಸಮಾಜಕ್ಕೆ ಸೇರಿದ ವ್ಯಕ್ತಿ ಎನ್ನುವುದನ್ನು ಸೂಚಿಸುವುದರ ಜೊತೆಗೆ, ಲೋಕದ ತವಕತಲ್ಲಣಗಳು ಕವಿಯ ಮೂಲಕ ಅಭಿವ್ಯಕ್ತಿಗೊಳ್ಳುವುದನ್ನೂ ಸೂಚಿಸುತ್ತದೆ. ‘ನಾಡಿನೊಡಲ ನಾಡಿ’, ‘ಎಂತೊ ಜನದ ಮೂಕವಾಣಿ’ ಎನ್ನುವುದನ್ನು ಕವಿ–ಕಲಾವಿದ ಅರ್ಥ ಮಾಡಿಕೊಳ್ಳುವುದರಲ್ಲಿ ಅವರು ನಿರ್ವಹಿಸಬೇಕಾದ ಸಾಮಾಜಿಕ ಜವಾಬ್ದಾರಿಯ ಅರಿವೂ ಇದೆ. ಜನರ ಮೂಕವಾಣಿಗೆ ತಂತಿಯಾಗಿ ನುಡಿಯುವುದರ ಬದಲು, ಸಾಮಾಜಿಕ ಸಮಸ್ಯೆಗಳ ಬಗ್ಗೆ ಮೂಕರಾಗುವುದು ಬಹಳಷ್ಟು ಕವಿ–ಕಲಾವಿದರ ಸಮಸ್ಯೆ; ಅದು ಕರ್ನಾಟಕದ ಸಮಕಾಲೀನ ಕಲೆ–ಸಾಹಿತ್ಯದ ಬಿಕ್ಕಟ್ಟೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.