ಅಮೆರಿಕ ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನೂ ಭಾರತದ ಮೇಲೆ ಪ್ರಯೋಗಿಸುತ್ತಿದೆ. ಮೊದಲಿಗೆ ಭಾರತದ ಸರಕುಗಳ ಮೇಲೆ ಗರಿಷ್ಠ ಸುಂಕ ವಿಧಿಸಲಾಯಿತು. ನಂತರ, ಅಮೆರಿಕದಲ್ಲಿ ಉದ್ಯೋಗ ನಿರ್ವಹಿಸಲು ಅನುವು ಮಾಡಿಕೊಡುವ ಎಚ್–1ಬಿ ವೀಸಾದ ಶುಲ್ಕವನ್ನು ಒಂದು ಲಕ್ಷ ಡಾಲರ್‌ಗೆ ಏರಿಸಲಾಯಿತು. ಇದೀಗ, ಔಷಧ ಆಮದುಗಳ ಮೇಲೆ ಶೇ 100ರಷ್ಟು ತೆರಿಗೆ!
ಆರ್ಥಿಕ ಒತ್ತಡದ ಜೊತೆಗೆ, ವ್ಯೂಹಾತ್ಮಕ ದೃಷ್ಟಿಯಿಂದ ಒತ್ತಡ ಹೇರುವ ಕೆಲಸವನ್ನೂ ಅಮೆರಿಕ ಮಾಡುತ್ತಿದೆ. ಯಥಾಪ್ರಕಾರ ಪಾಕಿಸ್ತಾನವನ್ನು ಅದು ಬಳಸುತ್ತಿದೆ. ಆಪರೇಷನ್ ಸಿಂಧೂರದ ಬಳಿಕ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಮುನೀರ್ ಅವರನ್ನು ಟ್ರಂಪ್ ಶ್ವೇತಭವನದಲ್ಲಿ ಸತ್ಕರಿಸಿದ್ದರು. ಸೆಪ್ಟೆಂಬರ್ 25ರಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಹಾಗೂ ಜನರಲ್ ಮುನೀರ್ ಶ್ವೇತಭವನಕ್ಕೆ ಭೇಟಿಯಿತ್ತು, ಭಾರತ–ಪಾಕಿಸ್ತಾನ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸುವಲ್ಲಿ ಟ್ರಂಪ್ ವಹಿಸಿದ ಪಾತ್ರದ ಕುರಿತು ಮುಖಸ್ತುತಿ ಮಾಡಿ, ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹ ಎಂದಿದ್ದಾರೆ; ಅಮೆರಿಕ ಹಾಗೂ ಪಾಕಿಸ್ತಾನದ ಸಂಬಂಧ ಗಟ್ಟಿಗೊಳ್ಳುತ್ತಿರುವ ಸಂದೇಶ ರವಾನಿಸಿದ್ದಾರೆ.
ಪಾಕಿಸ್ತಾನಕ್ಕೆ ಮಹತ್ವ ನೀಡುವ ಇನ್ನೊಂದು ಬೆಳವಣಿಗೆ ಪಶ್ಚಿಮ ಏಷ್ಯಾಕ್ಕೆ ಸಂಬಂಧಿಸಿದಂತೆ ಜರುಗಿದೆ. ಸೆ. 15ರಂದು ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳ ತುರ್ತುಸಭೆಯನ್ನು ಕತಾರ್ ಕರೆಯಿತು. ಕತಾರ್ ರಾಜಧಾನಿ ದೋಹಾದಲ್ಲಿದ್ದ ಹಮಾಸ್ ಕಚೇರಿ ಮೇಲೆ ಇಸ್ರೇಲ್ ನಡೆಸಿದ ಏಕಪಕ್ಷೀಯ ದಾಳಿಯನ್ನು ಖಂಡಿಸಲು 40 ರಾಷ್ಟ್ರಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ನ್ಯಾಟೊ ಮಾದರಿಯ ರಕ್ಷಣಾ ಒಪ್ಪಂದದ ಅಗತ್ಯ ಕುರಿತು ಚರ್ಚೆಯಾಯಿತು. ಅದಾದ ಎರಡು ದಿನಕ್ಕೆ ಸೆ. 17ರಂದು ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನ, ನೂತನ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದವು! ಎರಡು ದೇಶಗಳ ಪೈಕಿ ಯಾವುದೇ ದೇಶದ ಮೇಲೆ ದಾಳಿ ನಡೆದರೆ, ಉಭಯ ದೇಶಗಳ ಮೇಲೆ ನಡೆದ ದಾಳಿ ಎಂದು ಪರಿಗಣಿಸಲಾಗುವುದು ಎಂಬುದು ಆ ಒಪ್ಪಂದದ ಮುಖ್ಯ ಅಂಶ.
‘ಅರಬ್ ನ್ಯಾಟೊ’ ಅಥವಾ ‘ಇಸ್ಲಾಮಿಕ್ ಭದ್ರತಾ ಒಕ್ಕೂಟ’ದ ಕಲ್ಪನೆ ಹೊಸದೇನಲ್ಲ. ಈ ಹಿಂದೆ ಅರಬ್ ರಾಷ್ಟ್ರಗಳು ತಮ್ಮ ಭದ್ರತೆಗಾಗಿ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿವೆ. 2015ರಲ್ಲಿ 34 ರಾಷ್ಟ್ರಗಳ ಇಸ್ಲಾಮಿಕ್ ಸೇನಾ ಮಿತ್ರಕೂಟವನ್ನು ಸೌದಿ ಅರೇಬಿಯಾ ನೇತೃತ್ವದಲ್ಲಿ ರಚಿಸಲಾಗಿತ್ತು. ಅದರ ಮುಖ್ಯ ಆಶಯ, ಭಯೋತ್ಪಾದನೆಯನ್ನು ನಿಗ್ರಹಿಸುವುದಾಗಿತ್ತು. ಅರಬ್ ರಾಷ್ಟ್ರಗಳಲ್ಲಿ ಹೇರಳವಾಗಿರುವ ಇಂಧನ ಮೂಲ ಹಾಗೂ ಬಂಡವಾಳದ ಕಾರಣದಿಂದ ಅಮೆರಿಕ, ಅರಬ್ ರಾಷ್ಟ್ರಗಳಿಗೆ ಭದ್ರತೆಯ ಅಭಯ ನೀಡುತ್ತಾ ಬಂದಿದೆ.
ಒಬಾಮ ಅವರ ಅವಧಿಯಲ್ಲಿ ಅರಬ್ ರಾಷ್ಟ್ರಗಳನ್ನು ಗಣನೆಗೆ ತೆಗೆದುಕೊಳ್ಳದೇ ನಡೆದ ಇರಾನ್ ಜೊತೆಗಿನ ಪರಮಾಣು ಒಪ್ಪಂದದಿಂದಾಗಿ, ಅರಬ್ ರಾಷ್ಟ್ರಗಳಲ್ಲಿ ಅಮೆರಿಕದ ಕುರಿತು ಅಪನಂಬಿಕೆ ಟಿಸಿಲೊಡೆಯಿತು. ಅದನ್ನು ಚಿವುಟಿ ಹಾಕುವ ಸಲುವಾಗಿ 2016ರಲ್ಲಿ ಟ್ರಂಪ್ ತಾವು ಅಧ್ಯಕ್ಷರಾದ ಬಳಿಕ, ಮೊದಲಿಗೆ ಅರಬ್ ರಾಷ್ಟ್ರಗಳಿಗೆ ಭೇಟಿಕೊಟ್ಟರು. 2019ರಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೌದಿ ಅರೇಬಿಯಾದ ತೈಲ ನಿಕ್ಷೇಪಗಳ ಮೇಲೆ ಡ್ರೋನ್ ದಾಳಿ ನಡೆಸಿದ್ದರು. ಇದರಿಂದ ಅರಬ್ ರಾಷ್ಟ್ರಗಳು ಮತ್ತೆ ಕಳವಳಗೊಂಡವು. ಇರಾನ್ ಮತ್ತು ಇರಾನ್ ಬೆಂಬಲಿತ ಉಗ್ರ ಸಂಘಟನೆಗಳ ವಾಯು ದಾಳಿ ತಡೆಯಲು ಅಮೆರಿಕ ನೇತೃತ್ವದಲ್ಲಿ ಇಸ್ರೇಲನ್ನು ಒಳಗೊಂಡು, ‘ಮಧ್ಯಪ್ರಾಚ್ಯ ವಾಯುರಕ್ಷಣಾ ಒಕ್ಕೂಟ’ ರಚಿಸಿಕೊಳ್ಳುವ ಕುರಿತು ಮಾತುಕತೆ ನಡೆಯಿತು. ಇಸ್ರೇಲ್ ಹಾಗೂ ಅರಬ್ ರಾಷ್ಟ್ರಗಳನ್ನು ಬೆಸೆಯುವ ನಿಟ್ಟಿನಲ್ಲಿ ಅಮೆರಿಕ ಈ ಪ್ರಸ್ತಾಪವನ್ನು ಮುಂದಿರಿಸಿತ್ತು. ಆದರೆ, ಬೈಡೆನ್ ಅವರ ಅವಧಿಯಲ್ಲಿ ಯುಎಇ ಮೇಲೆ ಮತ್ತೊಮ್ಮೆ ಹೌತಿ ಬಂಡುಕೋರರ ದಾಳಿ ನಡೆಯಿತು. ಅಮೆರಿಕದ ಭದ್ರತಾ ಖಾತರಿ ಕುರಿತು ಅಪನಂಬಿಕೆ ಬೆಳೆಯತೊಡಗಿತು.
ಇತ್ತೀಚಿನ ಕತಾರ್ ಮೇಲಿನ ಇಸ್ರೇಲ್ ದಾಳಿ ಆ ಅಪನಂಬಿಕೆಯನ್ನು ಮತ್ತಷ್ಟು ಹಿಗ್ಗಿಸಿತು. ಹಾಗಾಗಿಯೇ ಗಲ್ಫ್ ಕೋಆಪರೇಷನ್ ಕೌನ್ಸಿಲ್ ನಾಯಕರು ಅಮೆರಿಕದ ಅಧ್ಯಕ್ಷರನ್ನು ಭೇಟಿ ಮಾಡಿ ಇಸ್ರೇಲ್ ದಾಳಿಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಪರ್ಯಾಯಗಳ ಕುರಿತೂ ಚರ್ಚಿಸತೊಡಗಿದ್ದಾರೆ. ಹಾಗಾಗಿ ‘ಅರಬ್ ನ್ಯಾಟೊ’ ಚರ್ಚೆ ಮುನ್ನೆಲೆಗೆ ಬಂದಿದೆ. ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನ, ಅರಬ್ ರಾಷ್ಟ್ರಗಳಿಗೆ ಭದ್ರತೆ ಒದಗಿಸಬಹುದೇ ಎಂಬ ಚರ್ಚೆ ಆರಂಭವಾಗಿದೆ.
ಅಣುಬಾಂಬ್ ಹೊಂದಿದೆ ಎಂಬ ಏಕೈಕ ಕಾರಣದಿಂದ ಪಾಕಿಸ್ತಾನದಿಂದ ಭದ್ರತಾ ಖಾತರಿಯನ್ನು ಅರಬ್ ರಾಷ್ಟ್ರಗಳು ನಿರೀಕ್ಷಿಸಿದರೆ ಅದು ಮೂರ್ಖತನವಾಗುತ್ತದೆ. ಪಾಕಿಸ್ತಾನ ಸ್ವತಃ ತನ್ನ ರಕ್ಷಣೆಗೆ ಅಮೆರಿಕ, ಚೀನಾ ಹಾಗೂ ಟರ್ಕಿಯನ್ನು ಅವಲಂಬಿಸಿದೆ; ಭಯೋತ್ಪಾದನೆಯನ್ನು ಒಡಲಿನಲ್ಲಿ ಪೋಷಿಸುತ್ತಾ, ಸೇನಾ ಹಿಡಿತದಿಂದ ತಪ್ಪಿಸಿಕೊಳ್ಳಲಾರದೆ, ರಾಜಕೀಯ ಸ್ಥಿರತೆ ಕಾಯ್ದುಕೊಳ್ಳದೆ ರಾಜಕೀಯವಾಗಿ ಅತಂತ್ರ ಸ್ಥಿತಿ
ಯಲ್ಲಿದೆ. ಜೊತೆಗೆ, ಮುಸ್ಲಿಂ ಜಗತ್ತಿನ ರಾಷ್ಟ್ರಗಳಲ್ಲಿ ಪ್ರಾಂತೀಯ ಪ್ರಾಬಲ್ಯ ಸಾಧಿಸುವ ಪೈಪೋಟಿಯಿದೆ. ಸುನ್ನಿ ಹಾಗೂ ಶಿಯಾ ರಾಷ್ಟ್ರಗಳ ನಡುವೆ ಏಕತೆ ಸಾಧ್ಯವಾಗಿಲ್ಲ. ಇರಾನ್ ಮತ್ತು ಸೌದಿ ಅರೇಬಿಯಾ ಒಂದೇ ವೇದಿಕೆಗೆ ಬರುವುದು ಸುಲಭವಿಲ್ಲ. ಟರ್ಕಿಯ ಮಹತ್ವಾಕಾಂಕ್ಷೆ ಬೇರೆಯದೇ ಇದೆ. ಹಾಗಾಗಿ ನ್ಯಾಟೊ ಮಾದರಿಯ ಅರಬ್ ಅಥವಾ ಇಸ್ಲಾಮಿಕ್ ಒಕ್ಕೂಟ ಸುಲಭವಿಲ್ಲ. ಅಂತಹ ಪ್ರಯತ್ನವಾಗಲು ಅಮೆರಿಕ ಬಿಡುವುದಿಲ್ಲ. ಹಾಗಾಗಿಯೇ, ಇಸ್ರೇಲ್ ಆಕ್ರಮಣಶೀಲತೆಗೆ ಅಂಕುಶ ಹಾಕಲು, ಇಸ್ರೇಲ್ ಪ್ರಧಾನಿಯ ಜೊತೆ ಟ್ರಂಪ್ ಮಾತುಕತೆ ನಡೆಸಿ ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಯೋಜನೆಯೊಂದನ್ನು ಪ್ರಕಟಿಸಿದ್ದಾರೆ.
ಹಾಗಾದರೆ, ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನದ ನಡುವೆ ರಕ್ಷಣಾ ಒಪ್ಪಂದ ಏರ್ಪಟ್ಟಿದ್ದಕ್ಕೆ ಕಾರಣಗಳಿವೆಯೇ? ಸೌದಿ ಹಾಗೂ ಪಾಕಿಸ್ತಾನವನ್ನು ಬೆಸೆದಿರುವುದು ಇಸ್ಲಾಮಿಕ್ ರಾಷ್ಟ್ರ ಎಂಬ ತಂತು. ಆ ಕಾರಣದಿಂದಲೇ ಸೌದಿ ಆರ್ಥಿಕ ನೆರವನ್ನು ಪಾಕಿಸ್ತಾನಕ್ಕೆ ನೀಡುತ್ತಾ ಬಂದಿದೆ. ಇದೀಗ ರಕ್ಷಣಾ ಒಪ್ಪಂದದ ಮೂಲಕ ಆ ಸಖ್ಯವನ್ನು ಅಧಿಕೃತಗೊಳಿಸಿದಂತಾಗಿದೆ. ಆದರೆ, ಸೌದಿ ಅರೇಬಿಯಾ ಸೇನಾ ಸಾಮರ್ಥ್ಯವನ್ನು ಹೊಂದಿಲ್ಲ. ಹಾಗಾಗಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟರೆ, ಪಾಕಿಸ್ತಾನಕ್ಕೆ ಚೀನಾ ಹಾಗೂ ಟರ್ಕಿಯ ಶಸ್ತ್ರಾಸ್ತ್ರಗಳ ನೆರವಿನ ಜೊತೆಗೆ ಸೌದಿ ಅರೇಬಿಯಾದಿಂದ ಆರ್ಥಿಕ ನೆರವು ದೊರಕಬಹುದು. ಅದು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆಯಾಗಬಹುದು. ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಸೌದಿಯ ರಾಜತಾಂತ್ರಿಕ ನೆರವೂ ದೊರಕಬಹುದು. ಅಷ್ಟರಮಟ್ಟಿಗೆ ಈ ಒಪ್ಪಂದ ಭಾರತದ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸೌದಿ ಅರೇಬಿಯಾ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಈ ನೂತನ ಒಪ್ಪಂದ ಭಾರತ ಹಾಗೂ ಸೌದಿ ಅರೇಬಿಯಾ ನಡುವಿನ ದ್ವಿಪಕ್ಷೀಯ ವಾಣಿಜ್ಯಿಕ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆಯೇ ನೋಡಬೇಕು.
ಪಾಕಿಸ್ತಾನದ ಸೇನೆಯ ಜೊತೆಗಿನ ಅಮೆರಿಕದ ಸಖ್ಯ ಹೊಸದಲ್ಲ. ಅಮೆರಿಕ ತನ್ನ ಹಿತಾಸಕ್ತಿಗೆ ಪೂರಕವಾಗಿ ಪಾಕಿಸ್ತಾನವನ್ನು ಹಲವು ರೀತಿಯಲ್ಲಿ ಈ ಹಿಂದೆ ಬಳಸಿದೆ. ಶೀತಲ ಸಮರದ ದಿನಗಳಲ್ಲಿ ಸೋವಿಯತ್ ವಿರುದ್ಧ ಪಾಕಿಸ್ತಾನವನ್ನು ಬಳಸಿದ್ದ ಅಮೆರಿಕ, ಭಾರತ ಹಾಗೂ ಪಾಕಿಸ್ತಾನದ ವಿಷಯ ಬಂದಾಗ ಪಾಕಿಸ್ತಾನದ ಬಗಲಿಗೆ ನಿಲ್ಲುತ್ತಿತ್ತು. ಪಾಕಿಸ್ತಾನದ ಅಣ್ವಸ್ತ್ರ ಯೋಜನೆಯ ಅಗತ್ಯಗಳನ್ನು ಜರ್ಮನಿಯ ಕಂಪನಿಯೊಂದರ ಮೂಲಕ ಪೂರೈಸಿ, ಪಾಕಿಸ್ತಾನ ಅಣ್ವಸ್ತ್ರ ಪರೀಕ್ಷೆ ನಡೆಸಲು ಪರೋಕ್ಷವಾಗಿ ಸಹಕರಿಸಿತ್ತು. ಪಾಕಿಸ್ತಾನದ ಪರಮಾಣು ಯೋಜನೆಗಳ ಪಿತಾಮಹ ಎನಿಸಿಕೊಂಡ ಪರಮಾಣು ಭೌತಶಾಸ್ತ್ರಜ್ಞ ಎ.ಕ್ಯೂ. ಖಾನ್ ಅವರನ್ನು ನೆದರ್ಲೆಂಡ್ ಸರ್ಕಾರ ಬಂಧಿಸಿದಾಗ, ಅವರನ್ನು ಬಂಧಮುಕ್ತಗೊಳಿಸುವಲ್ಲಿ ಅಮೆರಿಕ ತೆರೆಯ ಹಿಂದೆ ಕೆಲಸ ಮಾಡಿತ್ತು. ಭಾರತದೊಂದಿಗೆ ಯುದ್ಧ ನಡೆದಾಗ ಟರ್ಕಿ ಹಾಗೂ ಜೋರ್ಡಾನ್ ಮೂಲಕ ಅಗತ್ಯ ಶಸ್ತ್ರಾಸ್ತ್ರಗಳು ಪಾಕಿಸ್ತಾನಕ್ಕೆ ದೊರಕುವಂತೆ, ಸೌದಿ ಮೂಲಕ ಹಣದ ಪೂರೈಕೆ ಆಗುವಂತೆ ಅಮೆರಿಕ ನೋಡಿಕೊಂಡಿದ್ದು ಗುಟ್ಟಾಗಿ ಉಳಿದಿಲ್ಲ.
1971ರ ಭಾರತ–ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಭಾರತದ ಮೇಲೆ ಒತ್ತಡ ಹೇರಲು ನೇರವಾಗಿ ಪ್ರಯತ್ನಿಸಿದ್ದ ಅಮೆರಿಕ, ತನ್ನ ವಿಮಾನವಾಹಕ ನೌಕೆ ‘ಯುಎಸ್‌ಎಸ್ ಎಂಟರ್‌ಪ್ರೈಸ್’ ಅನ್ನು ಬಂಗಾಳ ಕೊಲ್ಲಿಯತ್ತ ಕಳುಹಿಸಿತ್ತು. ಸೋವಿಯತ್ ಒಕ್ಕೂಟ ಭಾರತದ ಬೆಂಬಲಕ್ಕೆ ನಿಂತು ಪರಮಾಣು ಜಲಾಂತರ್ಗಾಮಿ ನೌಕೆಯನ್ನು ಕಳುಹಿಸಿದಾಗ ಅಮೆರಿಕ ಹಿಂದಡಿಯಿಟ್ಟಿತ್ತು.
ಇದೀಗ ಪರಿಸ್ಥಿತಿಯ ಲಾಭ ಪಡೆದು ಪಾಕಿಸ್ತಾನ, ಅಮೆರಿಕಕ್ಕೆ ಮತ್ತೊಮ್ಮೆ ಹತ್ತಿರವಾಗುತ್ತಿದೆ. ಚೀನಾದೊಂದಿಗೂ ಬೆಸೆದುಕೊಂಡಿದೆ. ಭಾರತದ ವಿರುದ್ಧ ಸೆಣೆಸಲು ಟರ್ಕಿಯಿಂದ ಶಸ್ತ್ರಾಸ್ತ್ರ ಸಹಾಯ ಪಡೆದಿದ್ದ ಪಾಕಿಸ್ತಾನ, ಇದೀಗ ಸೌದಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆರ್ಥಿಕವಾಗಿ ಕೃಶಗೊಂಡಿರುವ ಪಾಕಿಸ್ತಾನ, ಅಣುಬಾಂಬ್ ಹಾಗೂ ಮುಸ್ಲಿಂ ರಾಷ್ಟ್ರ ಎಂಬ ಎರಡು ದಾಳಗಳ ಮೂಲಕ ಥೈಲಿ ತುಂಬಿಸಿಕೊಳ್ಳುವ ಪ್ರಯತ್ನದಲ್ಲಿದೆ. ಭಾರತ ಈ ಎಲ್ಲ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು ಹಾಗೂ ರಾಜತಾಂತ್ರಿಕವಾಗಿ ಜಾಣ್ಮೆಯ ಹೆಜ್ಜೆ ಇಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.