ADVERTISEMENT

ಸ್ಪಂದನ|ಎರಡು ಮಕ್ಕಳ ನಡುವೆ ಕನಿಷ್ಠ ಅಂತರವಿರಲಿ

ಡಾ.ವೀಣಾ ಎಸ್‌ ಭಟ್ಟ‌
Published 19 ಮೇ 2023, 23:31 IST
Last Updated 19 ಮೇ 2023, 23:31 IST
   

ಮಗು ಆಗಿ ಐದು ತಿಂಗಳಾಗಿದೆ. ಒಂದು ಬಾರಿ ಮಾತ್ರ ಮುಟ್ಟು ಆಗಿದೆ. ಎರಡು ತಿಂಗಳಿಂದ ಮುಟ್ಟಾಗಿಲ್ಲ. ಪ್ರೆಗ್ನೆನ್ಸಿ ಚೆಕ್‌ ಕಿಟ್‌ನಿಂದ ಪರೀಕ್ಷೆ ಮಾಡಿಕೊಂಡಾಗ ನೆಗೆಟಿವ್ ಬಂದಿತ್ತು. 15 ದಿನಗಳ ನಂತರ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ. ಈಗ  ಏನು ಮಾಡುವುದು ಡಾಕ್ಟ್ರೇ?? 

– ಹೇಮಾ, ಊರು ತಿಳಿಸಿಲ್ಲ

 ಹೇಮಾರವರೇ ನೀವೀಗ ಮಗುವಿಗೆ 5ತಿಂಗಳಿರುವಾಗಲೇ ಮತ್ತೆ ಗರ್ಭಿಣಿಯಾಗಿದ್ದೀರಾ. ಆರಂಭದ ಹಂತದಲ್ಲಿ ಸ್ಕ್ಯಾನಿಂಗ್‌ನಲ್ಲಿ ಮಗುವಿನ ಇರುವಿಕೆ ಗೊತ್ತಾಗುವುದಿಲ್ಲ. ಎರಡು ಮಗುವಿನ ನಡುವೆ ಕನಿಷ್ಠ 2ವರ್ಷಗಳಾದರೂ ಅಂತರವಿದ್ದರೆ ಒಳ್ಳೆಯದು. ಮಗುವಿಗೆ ಸಮರ್ಥವಾಗಿ ಎದೆಹಾಲುಣಿಸಿ, ಜೊತೆಗೆ ಪೂರಕ ಆಹಾರ ಕೊಡುತ್ತಾ ಆ ಮಗುವನ್ನು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಸದೃಢಗೊಳಿಸಲು ಅಂತರ ಇರುವುದು ಅಗತ್ಯ.  ಈಗಲೇ ಇನ್ನೊಂದು ಮಗುವನ್ನು ಹಡೆದು, ಸಾಕಿ-ಸಲಹಲು ಕಷ್ಟ ಎನಿಸಿದರೆ  ವೈದ್ಯರನ್ನು ಕಂಡು ವೈದ್ಯಕೀಯ ಗರ್ಭಪಾತ ಮಾಡಿಸಿಕೊಳ್ಳಿ. ಏನಾದರೂ ಆಗಲಿ ಸಾಕಿ–ಸಲಹುತ್ತೇನೆ ಎಂದೆನಿಸಿದರೆ ಮುಂದುವರೆಸಲೂಬಹುದು. ನಿರ್ಣಯ ನಿಮ್ಮದು. ಯೋಚಿಸಿ, ನಿರ್ಧರಿಸಿ. 

ADVERTISEMENT

ಎದೆಹಾಲುಣಿಸುವಾಗ, ಮಾಸಿಕ ಮುಟ್ಟು ಬರದೇ ಇದ್ದಲ್ಲಿ ಲೈಂಗಿಕವಾಗಿ ಸಕ್ರಿಯವಾಗಿದ್ದರೂ ಮತ್ತೆ   ಗರ್ಭಧರಿಸಲು ಸಾಧ್ಯವಿಲ್ಲ ಎಂಬ ತಪ್ಪು ತಿಳಿವಳಿಕೆ ಹಲವರಲ್ಲಿ ಇದೆ. ಎದೆಹಾಲುಣಿಸುವಿಕೆಯಿಂದ ಮತ್ತೆ ಗರ್ಭಧಾರಣೆಯಾಗುವ ಸಂಭವ ಕಡಿಮೆ ಇದ್ದರೂ ಹೆರಿಗೆಯಾಗಿ ಆರೆಂಟುವಾರಗಳ ನಂತರ ಮಾಸಿಕ ಋತುಚಕ್ರ ಬರದೇ ಗರ್ಭಧಾರಣೆಯಾಗುವ ಸಂಭವ ಇದ್ದೇ ಇದೇ. ನಿಮ್ಮ ವಿಷಯದಲ್ಲೂ ಹೀಗೇ ಆಗಿದೆ. ಮುಟ್ಟು ಬರದೇ ಅಂಡೋತ್ಪತ್ತಿ ಆಗಿ ಗರ್ಭಧಾರಣೆಯಾಗಿದೆ. ಹಾಗಾಗಿ ಎದೆಹಾಲುಣಿಸುವ ಸಂದರ್ಭಗಳಲ್ಲಿ ಎಲ್ಲಾ ದಂಪತಿಗಳು ಸಂತಾನನಿಯಂತ್ರಣ ಕ್ರಮಗಳನ್ನ ಅನುಸರಿಸಲೇ ಬೇಕು. ಪುರುಷರು ನಿರೋಧ್‌ ಬಳಸಬಹುದು, ಇಲ್ಲದಿದ್ದಲ್ಲಿ ಮಹಿಳೆಯರು ಪ್ರೊಜೆಸ್ಟ್ರಾನ್‌ ಹಾರ್ಮೊನ್ ಮಾತ್ರವಿರುವ ಸಂತಾನ ನಿಯಂತ್ರಣ ಮಾತ್ರೆಗಳನ್ನು ನಿಯಮಿತವಾಗಿ ಬಳಸುವುದು, ಪ್ರೊಜೆಸ್ಟ್ರಾನ್‌ ಹಾರ್ಮೋನ್ ಡಿಪೋಇಂಜೆಕ್ಷನ್   ಮೂರುತಿಂಗಳಿಗೊಮ್ಮೆ ಹಾಕಿಸಿಕೊಳ್ಳುವುದು ಮಾಡಬಹುದು.  ಸಹಜ ಅಥವಾ ಸಿಸೇರಿಯನ್‌ ಆದ ತಕ್ಷಣವೇ ಕಾಪರ್ಟಿಯನ್ನು ಗರ್ಭಕೋಶದೊಳಗೆ ಅಳವಡಿಸುವ ವಿಧಾನವೂ ಇದೆ. 

ಮುಟ್ಟಿನ ದಿನಗಳಲ್ಲಿ ಲೈಂಗಿಕಕ್ರಿಯೆ ನಡೆಸಬಹುದೇ? ಇದರಿಂದ ಏನಾದರೂ ತೊಂದರೆಯಾಗುತ್ತದಾ? 

ಮುಟ್ಟಿನ ಬಗ್ಗೆ ಪುರುಷರು ಹಾಗೂ ಸ್ತ್ರೀಯರಲ್ಲಿ ತಪ್ಪು ಕಲ್ಪನೆಗಳಿವೆ. ಇದರಿಂದ ಲೈಂಗಿಕ ಚಟುವಟಿಕೆಗೆ ತೊಡಕಾಗಬಲ್ಲದೇ ಹೊರತು ಈ ಸಮಯದಲ್ಲಿ ಲೈಂಗಿಕಕ್ರಿಯೆಯಿಂದ ಯಾವ ತೊಂದರೆಯೂ ಇಲ್ಲ. ಮುಟ್ಟು ಎನ್ನುವುದು  ವೈಜ್ಞಾನಿಕ ಪ್ರಕ್ರಿಯೆ. ಈ ಸಮಯದಲ್ಲಾಗುವ ರಕ್ತಸ್ರಾವದಿಂದ ಕಸಿವಿಸಿ ಅನ್ನಿಸಿದರೆ ಪುರುಷರು ಈ ಸಮಯದಲ್ಲಿ ನಿರೋಧ್ ಬಳಸಬಹುದು, ಮಹಿಳೆಯರು ಟ್ಯಾಂಪೂನ್ ಕೂಡಾ ಬಳಸಬಹುದು ಇಲ್ಲದಿದ್ದಲ್ಲೂ ರಕ್ತಸ್ರಾವವೇ ಲುಬ್ರಿಕೆಂಟ್ ತರಹವೇ ಲೈಂಗಿಕಕ್ರಿಯೆಗೆ ಸಹಾಯವಾಗಬಹುದು. ಋತುಚಕ್ರಕ್ಕೆ ಹೊಂದಿದ ಹಾಗೆ ಹೆಣ್ಣಿನಲ್ಲಿ ಲೈಂಗಿಕ ಭಾವನೆಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಋತುಚಕ್ರದ ಮಧ್ಯದಲ್ಲಿ ಅಂಡಾಣು ಬಿಡುಗಡೆಯ ಸಂದರ್ಭದಲ್ಲಿ ಜೀವವಿಕಾಸದ ಸೂತ್ರಕ್ಕೆ ಹೊಂದುಕೊಳ್ಳುವುದಕ್ಕಾಗಿ ಹೆಣ್ಣಿನಲ್ಲಿ ಲೈಂಗಿಕ ಭಾವನೆ ಹೆಚ್ಚಾಗುತ್ತದೆ. ಮುಟ್ಟುಬರುವ ಮುನ್ನಾದಿನಗಳಲ್ಲಿ ಹಾರ್ಮೋನುಗಳ ಪ್ರಮಾಣ ಒಮ್ಮೇಲೆ ಕುಸಿಯುವುದರಿಂದ ಲೈಂಗಿಕ ಆಸಕ್ತಿ ಕುಂದಬಹುದು. ಮುಟ್ಟಿನ ಆರಂಭದಿಂದ ಮೂರನೇ ದಿನಕ್ಕೆ ಈಸ್ಟ್ರೋಜನ್‌ ಹಾಗೂ ಟೆಸ್ಟೋಸ್ಟಿರಾನ್ ಮಟ್ಟ ಹೆಚ್ಚುವುದರಿಂದ ಜೊತೆಗೆ ಈ ಸಂದರ್ಭದಲ್ಲಿ ಅನಗತ್ಯ ಗರ್ಭಧಾರಣೆಯ ಭಯವಿಲ್ಲದೇ ಇರುವುದು, ಮಹಿಳೆಯರಲ್ಲಿ ಈ ಸಂದರ್ಭದಲ್ಲಿ ಲೈಂಗಿಕ ಬಯಕೆ ಹೆಚ್ಚಾಗಬಹುದು ಕೆಲವರಲ್ಲಿ ಈ ಸಂದರ್ಭದಲ್ಲಿ ಭಾವಪ್ರಾಪ್ತಿ  ಹೆಚ್ಚೆನ್ನುತ್ತಾರೆ ಹಾಗಾಗಿ ಈ ಬಗ್ಗೆ ನಿಮಗೆ ಯಾವುದೇ ಸಂದೇಹ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.