ಅಮೆರಿಕವನ್ನು ಮತ್ತೆ ಮಹಾನ್ ಆಗಿಸುವುದಾಗಿ ಹೇಳುವ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ದೇಶದ ಅತಿದೊಡ್ಡ ಸಮಸ್ಯೆಯಾದ ಚುನಾವಣಾ ವ್ಯವಸ್ಥೆಯನ್ನು ಸರಿಪಡಿಸಲು ಅಂತೂ ಮುಂದಾಗಿದ್ದಾರೆ.
ಅಮೆರಿಕದಲ್ಲಿ ಕಳೆದ ವರ್ಷ ನಡೆದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಉದ್ದಕ್ಕೂ ಟ್ರಂಪ್ ಅವರು ಅಲ್ಲಿನ ಚುನಾವಣಾ ವ್ಯವಸ್ಥೆಯ ಬಗ್ಗೆ ದೂರುತ್ತಿದ್ದರು. ಈಗ ಅದನ್ನು ಸರಿಪಡಿಸುವ ಒಂದಿಷ್ಟು ಕೆಲಸಕ್ಕೆ ಮುಂದಾಗಲು ತೀರ್ಮಾನಿಸಿದ್ದಾರೆ. ಅಮೆರಿಕವು ತನ್ನದು ಜಗತ್ತಿನ ಅತ್ಯಂತ ಹಳೆಯ ಪ್ರಜಾತಂತ್ರ ವ್ಯವಸ್ಥೆ ಎಂದು ಹೇಳಿಕೊಳ್ಳು
ತ್ತದೆಯಾದರೂ ಅದು ತನ್ನ ಚುನಾವಣಾ ವ್ಯವಸ್ಥೆಯನ್ನು
ಯಾವತ್ತೂ ಸುಗಮಗೊಳಿಸಿಲ್ಲ. ವಾಸ್ತವದಲ್ಲಿ ಅಲ್ಲಿನ ಚುನಾವಣಾ ವ್ಯವಸ್ಥೆಯು ಬಹಳ ಕೆಟ್ಟದ್ದಾಗಿದೆ!
ಅಮೆರಿಕದ ಚುನಾವಣಾ ವ್ಯವಸ್ಥೆಯನ್ನು ಒಂದು ಒಪ್ಪಿತ ಪ್ರಮಾಣಕ್ಕೆ ತರುವ ಕೆಲಸ ಆಗಿಲ್ಲದಿರುವುದು ಅಲ್ಲಿನ ದೊಡ್ಡ ಲೋಪಗಳಲ್ಲಿ ಒಂದು. ದೇಶದೆಲ್ಲೆಡೆ ಅನ್ವಯವಾಗುವ ಚುನಾವಣಾ ಕಾನೂನನ್ನು ಜಾರಿಗೆ ತರುವ ಅಧಿಕಾರ ಇರುವ ಚುನಾವಣಾ ಪ್ರಾಧಿಕಾರವು ಅಮೆರಿಕದಲ್ಲಿ ಇಲ್ಲ. ಭಾರತದಲ್ಲಿ ಮತದಾನದ ಹಕ್ಕು ಇರುವುದು ಭಾರತದ ಪ್ರಜೆಗಳಿಗೆ ಮಾತ್ರ. ಆದರೆ ಅಮೆರಿಕದಲ್ಲಿ ಮತದಾನದ ಹಕ್ಕನ್ನು ಪ್ರಜೆಗಳಿಗೆ ಮಾತ್ರ ಸೀಮಿತಗೊಳಿಸುವ ಕೆಲಸ ಆಗಿಲ್ಲ.
ಟ್ರಂಪ್ ಅವರು ಈಗ, ಅಮೆರಿಕದ ಪ್ರಜೆಗಳಿಗೆ ಮಾತ್ರವೇ ಮತದಾನದ ಹಕ್ಕು ಇದೆ ಎಂಬ ಆದೇಶ ಹೊರ
ಡಿಸಿದ್ದಾರೆ. ಅಂದರೆ, ಇಷ್ಟು ವರ್ಷ ಪ್ರಜೆಗಳಲ್ಲದವರೂ ಅಮೆರಿಕದ ಚುನಾವಣೆಗಳಲ್ಲಿ ಮತ ಚಲಾಯಿಸುತ್ತಿದ್ದರು! ಅಂಚೆ ಮತಪತ್ರಗಳನ್ನು ಎಣಿಸುವುದಕ್ಕೆ ಸಂಬಂಧಿಸಿದ ನಿಯಮಗಳಲ್ಲಿಯೂ ಅವರು ಬದಲಾವಣೆಗಳಿಗೆ ಆದೇಶ ಮಾಡಿದ್ದಾರೆ. ‘ನಕಲಿ ಚುನಾವಣೆಗಳ, ಕೆಟ್ಟ ಚುನಾವಣೆಗಳ ಕಾರಣದಿಂದಾಗಿ ಅಮೆರಿಕ ರೋಗಗ್ರಸ್ತವಾಗಿದೆ; ನಾವು ಅದನ್ನು ಸರಿಪಡಿಸಲು ಹೊರಟಿದ್ದೇವೆ’ ಎಂದು ಟ್ರಂಪ್ ಹೇಳಿದ್ದಾರೆ. ಹೀಗೆ ಹೇಳುವಾಗ ಅವರು ಭಾರತದಲ್ಲಿ ಜಾರಿಯಲ್ಲಿರುವ ಮತದಾರರನ್ನು ಗುರುತಿಸುವ ವ್ಯವಸ್ಥೆ, ಬಯೊಮೆಟ್ರಿಕ್ ದತ್ತಾಂಶದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಭಾರತದಲ್ಲಿ ಇಡೀ ದೇಶಕ್ಕೆ ಅನ್ವಯವಾಗುವ ಚುನಾವಣಾ ಕಾನೂನು ಇದೆ. ರಾಷ್ಟ್ರ ಮಟ್ಟದಲ್ಲಿ ಚುನಾವಣಾ ಆಯೋಗ ಇದೆ. ಚುನಾವಣೆಗಳ ಮೇಲ್ವಿಚಾರಣೆ, ಅದಕ್ಕೆ ಸಂಬಂಧಿಸಿದ ನಿರ್ದೇಶನ ನೀಡು
ವುದು ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಸಾಂವಿಧಾನಿಕ ಅಧಿಕಾರವು ಆಯೋಗಕ್ಕೆ ಇದೆ. ನಮ್ಮಲ್ಲಿನ ಕಾನೂನಿನ ಪ್ರಕಾರ ದೇಶದ ಪ್ರಜೆಗಳಿಗೆ ಮಾತ್ರ ಮತದಾನದ ಹಕ್ಕು ಇದೆ. ಈ ಕಾನೂನೇ ಸರಿ. ಇದರ ಜೊತೆ, ನಮ್ಮಲ್ಲಿ ಎಲ್ಲ ಮತಗಟ್ಟೆಗಳಲ್ಲಿಯೂ ಬಳಕೆ ಮಾಡಲು ನಿಗದಿತ ಪ್ರಮಾಣವನ್ನು ಪಾಲಿಸುವ ಮತಯಂತ್ರದ ವ್ಯವಸ್ಥೆ ಇದೆ. ಈ ಸರಳ ಯಂತ್ರವನ್ನು ರೂಪಿಸಿರುವುದು ಭಾರತದ ಎಂಜಿನಿಯರ್‌ಗಳು, ಇದನ್ನು ಬಳಸಿ ಮತದಾನ ಮಾಡು ವುದನ್ನು ಶಿಕ್ಷಿತರಲ್ಲದವರೂ
ಅರ್ಥ ಮಾಡಿಕೊಳ್ಳಬಲ್ಲರು. ನಮ್ಮಲ್ಲಿ ಮತ ಎಣಿಕೆ ಶುರುವಾದ ನಂತರ, ಬಹುತೇಕ ಲೋಕಸಭಾ ಕ್ಷೇತ್ರಗಳ ಫಲಿತಾಂಶವು ಹತ್ತರಿಂದ ಹನ್ನೆರಡು ತಾಸುಗಳಲ್ಲಿ ಗೊತ್ತಾಗುತ್ತದೆ.
ಅಮೆರಿಕದ ಇಡೀ ಚುನಾವಣಾ ವ್ಯವಸ್ಥೆ
ಗೊಂದಲಮಯವಾಗಿದೆ. ಅಲ್ಲಿ ರಾಜ್ಯದಿಂದ ರಾಜ್ಯಕ್ಕೆ ಚುನಾವಣಾ ಕಾನೂನು ಭಿನ್ನವಾಗಿದೆ. ಅದೇ ರೀತಿ, ಮತದಾನದ ವಿಧಾನ ಹಾಗೂ ಮತ ಎಣಿಕೆ ವಿಧಾನ ಬದಲಾಗುತ್ತದೆ. ಪ್ರತಿ ಕೌಂಟಿಯೂ ತನ್ನದೇ ಆದ ಚುನಾವಣಾ ಕಾನೂನು, ಮತಗಳನ್ನು ದಾಖಲು ಮಾಡುವ ಬಗೆ ಹಾಗೂ ಅವುಗಳನ್ನು ಎಣಿಸುವ ವಿಧಾನವನ್ನು ಹೊಂದಿದೆ. ಕೆಲವು ಕೌಂಟಿಗಳು ಮತಪತ್ರಗಳನ್ನು ನೀಡಿ, ತಮ್ಮ ಮತ ಯಾರಿಗೆ ಎಂಬುದನ್ನು ತಿಳಿಸಲು ಶಾಯಿ ನೀಡುತ್ತವೆ. ಅವು ಚುನಾವಣಾ ಚಿಹ್ನೆಯನ್ನು ಬಳಸುವುದಿಲ್ಲ. ಕೆಲವು ಕೌಂಟಿಗಳು ಮತದಾರರಿಗೆ ಮತಪತ್ರಗಳನ್ನು ನೀಡಿ ತಮ್ಮ ಮತ ಯಾರಿಗೆ ಎಂಬುದನ್ನು ತಿಳಿಸಲು ಒಂದು ಉಪಕರಣವನ್ನು ನೀಡುತ್ತವೆ.
2000ನೇ ಇಸವಿಯವರೆಗೆ ಹಲವು ರಾಜ್ಯಗಳಲ್ಲಿ ಮತದಾರರು ಮತಪತ್ರಗಳಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದೆ ಒಂದು ರಂಧ್ರ ಮಾಡಬೇಕಿತ್ತು. ಒಂದು ಕೌಂಟಿಯಲ್ಲಿ ಮತದಾರರು ಎರಡು ಅಡಿ ಉದ್ದದ ಸನ್ನೆಗೋಲು ಬಳಸಿ ರಂಧ್ರ ಮಾಡಬೇಕಿತ್ತು! ಹಲವು ಸಂದರ್ಭಗಳಲ್ಲಿ ಈ ಕೆಲಸ ಬಹಳ ಸಂಕೀರ್ಣವಾಗಿರುತ್ತಿತ್ತು. ಉದಾಹರಣೆಗೆ, ರಂಧ್ರ ಮಾಡುವ ವಿಧಾನದ ಕುರಿತಾಗಿ ಬೇರೆ ಬೇರೆ ರಾಜ್ಯಗಳು ತೀರಾ ಈಚಿನವರೆಗೆ ಬೇರೆ ಬೇರೆ ನಿಯಮ ಹೊಂದಿದ್ದವು. ಟೆಕ್ಸಾಸ್‌ನಲ್ಲಿ ಮತಪತ್ರವನ್ನು ಎಣಿಕೆಗೆ ಪರಿಗಣಿಸಬೇಕು ಎಂದಾದರೆ ಪೂರ್ತಿಯಾಗಿ ರಂಧ್ರ ಮಾಡಬೇಕಿತ್ತು. ಮತದಾರ ಕಡಿಮೆ ಬಲ ಪ್ರಯೋಗಿಸಿ, ಮತಪತ್ರದ ಮೇಲೆ ಅರ್ಧ ರಂಧ್ರ ಅಥವಾ ಸಣ್ಣ ಕುಳಿಯೊಂದನ್ನು ಮಾತ್ರ ಮಾಡಿದ್ದರೆ ಆ ಮತಪತ್ರವನ್ನು ತ್ಯಾಜ್ಯದ ಬುಟ್ಟಿಗೆ ಹಾಕ ಲಾಗುತ್ತಿತ್ತು! ಫ್ಲಾರಿಡಾದಲ್ಲಿ ಕಾನೂನು ಕಠಿಣವಾಗಿರ ಲಿಲ್ಲ. ಮತದಾರರು ಅರ್ಧಚಂದ್ರದ ರೂಪದಲ್ಲಿ ರಂಧ್ರ ಮಾಡಿದರೆ ಅಥವಾ ಒಂದು ಸಣ್ಣ ಕುಳಿಯಂತೆ ಮಾಡಿದರೆ ಸಾಕಿತ್ತು. ಅದನ್ನು ಮಾನ್ಯವಾದ ಮತ ಎಂದು ಪರಿಗಣಿಸ ಲಾಗುತ್ತಿತ್ತು. ಸಣ್ಣ ಕುಳಿಯ ಮೂಲಕ ಬೆಳಕು ಹರಿಯುತ್ತದೆ ಎಂದಾದರೆ ಆ ಮತ ಮಾನ್ಯ ಎಂದು ಕಾನೂನು ಹೇಳುತ್ತಿತ್ತು. ಇದರ ಪರಿಣಾಮವಾಗಿ ಅಲ್ ಗೋರ್ ಮತ್ತು ಬುಷ್ ಬೆಂಬಲಿಗರ ನಡುವೆ 2000ನೇ ಅಧ್ಯಕ್ಷೀಯ ಚುನಾವಣೆಯಲ್ಲಿ ದೊಡ್ಡ ಗಲಾಟೆ ನಡೆದಿತ್ತು. ವಿವಾದ ಕೋರ್ಟ್ ಮೆಟ್ಟಿಲೇರಿತ್ತು, ಪ್ರತಿ ಮತಪತ್ರವನ್ನೂ ಬೆಳಕಿಗೆ ಹಿಡಿಯಬೇಕು, ಬೆಳಕು ಅಲ್ಲಿರುವ ರಂಧ್ರದ ಮೂಲಕ ಪ್ರವೇಶಿಸುತ್ತದೆ ಎಂದಾದರೆ ಆ ಮತವನ್ನು ಮಾನ್ಯ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಚುನಾವಣಾ ಅಧಿಕಾರಿಗಳಿಗೆ ಹಲವು ದಿನಗಳೇ ಬೇಕಾಗಿದ್ದವು!
ಫ್ಲಾರಿಡಾದಲ್ಲಿ ಹೀಗಾದ ನಂತರ ಅಮೆರಿಕದ ಕಾಂಗ್ರೆಸ್, ‘ಹೆಲ್ಪ್ ಅಮೆರಿಕ ವೋಟ್ ಆ್ಯಕ್ಟ್’ ಹೆಸರಿನ ಕಾನೂನು ರೂಪಿಸಿತು. ಮತದಾನದ ವ್ಯವಸ್ಥೆಯನ್ನು ಉನ್ನತೀಕರಿಸಲು, ಚುನಾವಣಾ ನೆರವು ಆಯೋಗವನ್ನು ರಚಿಸಲು ಈ ಕಾನೂನು ತರಲಾಯಿತು. ಆದರೆ ಈ ಆಯೋಗಕ್ಕೆ ತನ್ನ ನಿರ್ಧಾರಗಳನ್ನು ಜಾರಿಗೆ ತರಲು ಅಧಿಕಾರವಿಲ್ಲ, ಅದು ಸಲಹೆ ನೀಡುವ ಸಂಸ್ಥೆ ಮಾತ್ರ.
ಹೀಗಾಗಿ, ಅಲ್ಲಿನ ಪ್ರತಿ ರಾಜ್ಯವೂ ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈಗಲೂ ಪ್ರತ್ಯೇಕ ನಿಯಮ
ಹೊಂದಿದೆ. ಒಂದು ಅಂದಾಜಿನ ಪ್ರಕಾರ, ಶೇ 70ರಷ್ಟು ಮತದಾರರು ತಮ್ಮ ಆಯ್ಕೆಯನ್ನು ಕೈಯಿಂದ ಗುರುತಿಸು ತ್ತಾರೆ, ಶೇ 23ರಷ್ಟು ಮಂದಿ ಯಂತ್ರ ಬಳಸುತ್ತಾರೆ, ಶೇ 7ರಷ್ಟು ಮಂದಿ ಎಲೆಕ್ಟ್ರಾನಿಕ್ ಮತಯಂತ್ರ ಬಳಕೆ ಮಾಡುತ್ತಾರೆ. ಅಂಚೆ ಮತಪತ್ರ ಹಾಗೂ ಆ ಮತಪತ್ರಗಳು ಎಣಿಕೆ ಕೇಂದ್ರಕ್ಕೆ ಯಾವಾಗ ತಲುಪಬೇಕು ಎಂಬ ವಿಚಾರದಲ್ಲಿ ರಾಜ್ಯಗಳು ಭಿನ್ನ ನಿಯಮಗಳನ್ನು ಹೊಂದಿವೆ.
ಅಮೆರಿಕದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ನಡುವೆ ಇರುವ ಸಮಯದ ವ್ಯತ್ಯಾಸವು ಇನ್ನೊಂದು ಲೋಪ. ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ಮತದಾನ ಮುಗಿದು ಅಲ್ಲಿ ಟಿ.ವಿ. ವಾಹಿನಿಗಳು ಮತದಾನೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡಲು ಆರಂಭಿಸುವ ಹೊತ್ತಿನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಮತದಾನ ಪೂರ್ಣ
ಗೊಳ್ಳಲು ಇನ್ನೂ ಐದು ತಾಸು ಬಾಕಿ ಇರುತ್ತದೆ. ಇದು ಮುಕ್ತ ಮತ್ತು ನ್ಯಾಯಸಮ್ಮತ ಮತದಾನದ ಪರಿಕಲ್ಪನೆಗೆ ಧಕ್ಕೆ ತರುತ್ತದೆ.
ಭಾರತದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶವು ಮತ ಎಣಿಕೆಯ ದಿನ ಸಂಜೆಯ ಹೊತ್ತಿಗೆ ಬಹುತೇಕ ಸ್ಪಷ್ಟವಾಗಿರುತ್ತದೆ. ಆದರೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಎಣಿಕೆ ಶುರುವಾಗಿ ಹಲವು ದಿನಗಳು ಕಳೆದರೂ ಫಲಿತಾಂಶ
ಸ್ಪಷ್ಟವಾಗಿರುವುದಿಲ್ಲ.
ಈ ದೀರ್ಘ ಪ್ರಕ್ರಿಯೆಯಲ್ಲಿ ಗೊಂದಲಗಳು ಸಹಜವಾಗಿ ಆಗುತ್ತಿರುತ್ತವೆ. 2024ರ ನವೆಂಬರ್‌ನಲ್ಲಿ ನಡೆದ ಮತದಾನದಲ್ಲಿ ವಿಸ್ಕಾನ್ಸಿನ್‌ನ ಕೌಂಟಿಯೊಂದ
ರಲ್ಲಿನ 193 ಮತಗಳ ಎಣಿಕೆಯು ಆಗೇ ಇಲ್ಲ ಎಂಬುದು ಅಧಿಕಾರಿಗಳಿಗೆ ಡಿಸೆಂಬರ್‌ನಲ್ಲಿ ಗೊತ್ತಾಯಿತು! ಇದು ಫಲಿತಾಂಶವನ್ನು ಬದಲು ಮಾಡುತ್ತಿರಲಿಲ್ಲವಾದರೂ, ಈಗಿನ ಸಂದರ್ಭದಲ್ಲಿ ಅಮೆರಿಕದಲ್ಲಿನ ಚುನಾವಣಾ ವ್ಯವಸ್ಥೆಯು ಅದೆಷ್ಟು ದೋಷಗಳಿಂದ ಕೂಡಿದೆ ಎಂಬುದನ್ನು ತೋರಿಸಿಕೊಟ್ಟಿತು. ಟ್ರಂಪ್ ಅವರು ಹೊರಡಿಸಿರುವ ಹೊಸ ಆದೇಶವು ಚುನಾವಣೆಯ ದಿನದ ನಂತರ ಬರುವ ಅಂಚೆ ಮತಪತ್ರಗಳನ್ನು ಪರಿಗಣಿಸಲು ಆಗುವುದಿಲ್ಲ ಎಂದು ಹೇಳುತ್ತದೆ.
ಚುನಾವಣೆ ಹಾಗೂ ಪ್ರಜಾತಾಂತ್ರಿಕ ಪ್ರಕ್ರಿಯೆಗಳ ವಿಚಾರಕ್ಕೆ ಬರುವುದಾದರೆ, ವಿಶ್ವದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರವಾದ ಭಾರತವು ಮೊದಲ ದರ್ಜೆಯಲ್ಲಿದೆ. ಅಮೆರಿಕವು ಬಹಳ ಹಿಂದೆ ಉಳಿದಿದೆ. ಅಮೆರಿಕವು ಭಾರತದ ಸಾಲಿಗೆ ಬಂದುನಿಲ್ಲಲು ಬಹಳಷ್ಟು ಪ್ರಯತ್ನ ಮಾಡಬೇಕಿದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.