ADVERTISEMENT

ವಿಜ್ಞಾನ ವಿಶೇಷ: ಸುಳ್ಳಿಗೀಗ ಸಂಭ್ರಮದ ಕಾಲ

ನಾಗೇಶ ಹೆಗಡೆ
Published 12 ನವೆಂಬರ್ 2025, 19:30 IST
Last Updated 12 ನವೆಂಬರ್ 2025, 19:30 IST
..
..   
‘ಡೀಪ್‌ ಫೇಕ್‌’ ಎಂಬ ಅಪ್ಪಟ ಸುಳ್ಳಿನ ವಿಡಿಯೊಗಳನ್ನು ಈಗ ಸಾಮಾನ್ಯ ಜನರೂ ಮೊಬೈಲ್‌ಗಳಲ್ಲೇ ಸೃಷ್ಟಿಸಿ ವೈರಲ್‌ ಮಾಡಬಹುದು. ಮಂಕುಬೂದಿಯ ಇಂಥ ಮಹಾಮಂತ್ರ ಎಲ್ಲರ ಕೈಗೆ ಬಂದಾಗ ಅದನ್ನು ನಿಯಂತ್ರಿಸಬೇಕಾದವರು ಯಾರು?

ತನ್ನ ಪಾಡಿಗೆ ತಾನು ಕಾಳು ಹೆಕ್ಕುತ್ತಿದ್ದ ದಷ್ಟಪುಷ್ಟ ಹುಂಜವನ್ನು ಟೆಕ್ಕಿಯೊಬ್ಬ ಹಿಡಿಯುತ್ತಾನೆ. ಆನೆಗೆ ಅಂಬಾರಿ ಕಟ್ಟಿದ ಹಾಗೆ ಹುಂಜದ ಬೆನ್ನಿಗೆ ತುಸು ದೊಡ್ಡ ಗಾತ್ರದ ಡ್ರೋನನ್ನು ಕಟ್ಟುತ್ತಾನೆ. ಸ್ವಿಚ್‌ ಒತ್ತಿದ್ದೇ ತಡ, ಡ್ರೋನ್‌ ಸಮೇತ ಆ ಹುಂಜ ಪುರ‍್ರೆಂದು ಮೇಲಕ್ಕೇರಿ ದೂರಕ್ಕೆ ಹಾರಿ ಹೋಗುತ್ತದೆ. ಆ ವಿಡಿಯೊ ವೈರಲ್‌ ಆಗುತ್ತದೆ.

ದೃಶ್ಯ 2: ದೂರ ಗಗನದಲ್ಲಿ ಧೂಮಕೇತುವೊಂದು ತನ್ನ ಪಾಡಿಗೆ ತಾನು ಸಾಗಿ ಹೋಗುತ್ತಿದೆ. ಅದರ ಹೆಸರು ‘3ಐ ಅಟ್ಲಾಸ್‌’. ಸದ್ಯಕ್ಕೆ ಅದು ಸೂರ್ಯನ ಹಿಂಭಾಗದಲ್ಲಿ ಸಾಗುತ್ತಿದ್ದು, ಮುಂದಿನ ತಿಂಗಳು ಮತ್ತೆ ಗೋಚರಿಸಲಿದೆ. ಅದು ಧೂಮಕೇತು ಅಲ್ಲವೆಂದೂ ಅನ್ಯಲೋಕದ ಟೆಕ್ಕಿಗಳ ಹಾರುವ ಹಡಗೆಂದೂ ಬಿಂಬಿಸುವ ಸಾವಿರಾರು ವಿಡಿಯೊಗಳು ಹರಿದಾಡುತ್ತಿವೆ. ಈ ಮಹಾನ್‌ ಯಂತ್ರ ನಮ್ಮತ್ತ ದಾಳಿ ಮಾಡಲೆಂದೇ ಹೊಂಚು ಹಾಕಿದೆಯೆಂದು ವಿಜ್ಞಾನಿಗಳೇ ಎಚ್ಚರಿಕೆ ನೀಡುವ ನಾನಾ ಬಗೆಯ ರೋಚಕ, ಭಯಾನಕ ದೃಶ್ಯಾವಳಿಗಳ ವಿಡಿಯೊ ಹರಿದಾಡುತ್ತದೆ.

ದೃಶ್ಯ 3: ಥಾರ್‌ ಮರುಭೂಮಿಯಲ್ಲಿ ನದಿಯೊಂದು ನಳನಳಿಸುತ್ತ ಹರಿಯುತ್ತಿದೆ. ಪಂಜಾಬ್‌, ಹರಿಯಾಣದ ನಗರಗಳಿಂದ ಹೊಮ್ಮುವ ಕೊಳಚೆ ನೀರನ್ನು ಸಂಸ್ಕರಿಸಿ ಹರಿಸಿ, ರಾಜಸ್ತಾನ– ಗುಜರಾತಿನ ಮರಳುಗಾಡಲ್ಲಿ ಹಸಿರು ಉಕ್ಕಿಸುವ ಈ ಸಾಹಸದ ಬಗ್ಗೆ ಜಗತ್ತೇ ನಿಬ್ಬೆರಗಾಗಿದೆ. ಪ್ರಧಾನಿ ಮೋದಿಯವರು ಎಂಜಿನಿಯರ್‌ಗಳ ಜೊತೆ ನದಿಯಂಚಿನಲ್ಲಿ ಕೈಬೀಸುತ್ತ ಸಾಗುತ್ತಿದ್ದಾರೆ.

ADVERTISEMENT

ದೃಶ್ಯ 4: ಹವಾಮಾನ ವೈಪರೀತ್ಯದ ದುರ್ಭರ ಪರಿಣಾಮಗಳನ್ನು ತಡೆಗಟ್ಟುವ ಬಗ್ಗೆ ಬ್ರೆಜಿಲ್‌ ದೇಶದ ಅಮೆಝಾನ್‌ ಅರಣ್ಯದ ಅಂಚಿನಲ್ಲಿರುವ ಬೆಲೆಮ್‌ ನಗರದಲ್ಲಿ 190 ದೇಶಗಳ ಪ್ರತಿನಿಧಿಗಳ ‘ಕಾಫ್‌30’ ಶೃಂಗಸಭೆ ಮೊನ್ನೆ ಸೋಮವಾರ ಆರಂಭವಾಗಿದೆ. ಅಲ್ಲಿಗೆ ಪ್ರತಿನಿಧಿಗಳು ಹೋಗದಂತೆ ತಡೆಗಟ್ಟಲು ಕಳೆದ ಮೂರು ತಿಂಗಳಿಂದ ನಾನಾ ಭಾಷೆಗಳಲ್ಲಿ ಅಸಂಖ್ಯ ನಕಲಿ ವಿಡಿಯೊಗಳು ಹರಿದಾಡುತ್ತಿವೆ. ಬೆಲೆಮ್‌ ನಗರವೇ ನೆರೆಹಾವಳಿಗೆ ತುತ್ತಾಗಿ ವಸತಿ ಸೌಕರ್ಯಗಳೆಲ್ಲ ಎಕ್ಕುಟ್ಟಿವೆ ಎಂದು ಎಐ ಪ್ರಣೀತ ಸುಳ್ಳು ವಿಡಿಯೊಗಳು ಸೃಷ್ಟಿಯಾಗಿವೆ. ‘ತಾಪಮಾನ ಏರಿಕೆಯ ಸಂಕಷ್ಟ ಒಂದು ಕಡೆ, ಅದು ಸುಳ್ಳೆಂದು ಹೇಳುವ ಸುಳ್ಳು ಪ್ರಚಾರದ ಮಹಾಪೂರ ಒಂದು ಕಡೆ: ನಾವು ಎರಡನ್ನೂ ತಡೆಗಟ್ಟಬೇಕಿದೆ’ ಎಂದು ಶೃಂಗಸಭೆಯ ಉದ್ಘಾಟನೆಯ ಸಂದರ್ಭದಲ್ಲಿ ಬ್ರೆಜಿಲ್‌ ಅಧ್ಯಕ್ಷ ಲುಲಾ ಡಿಸಿಲ್ವಾ ಹೇಳಿದ್ದಾರೆ.

ಮಹಾಪೂರದಂತೆ ಎಲ್ಲೆಡೆ ಹಬ್ಬುತ್ತಿರುವ ‘ಡೀಪ್‌ ಫೇಕ್‌’ಗಳು ಹೊಸ ಹೊಸ ರೂಪದಲ್ಲಿ ಬರುತ್ತಲೇ ಇವೆ. ‘ಓಪನ್‌ ಎಐ’ ಮೂಲಕ ಈಚೆಗಷ್ಟೇ ‘ಸೋರಾ–2’ ಹೆಸರಿನ ಆ‍್ಯಪ್‌ ಬಿಡುಗಡೆ ಆಗಿದೆ. ಕಳೆದ ವಾರ ಅದು ಮೊಬೈಲ್‌ನಲ್ಲೂ ಲಭ್ಯವಾಗುವಂತೆ ಮಾಡಲಾಗಿದೆ. ಇದರ ವಿಶೇಷ ಏನೆಂದರೆ, ಯಾರು ಬೇಕಾದರೂ ತಮಗಿಷ್ಟವಾದ ದೃಶ್ಯವನ್ನೊ, ಕತೆಯನ್ನೊ ಮಾತಿನ (ಪ್ರಾಮ್ಟ್‌) ಮೂಲಕವೇ ವರ್ಣಿಸಿದರೂ ಸಾಕು, ಒಂದು ನಿಮಿಷದ ವಿಡಿಯೊ ಸಿದ್ಧವಾಗುತ್ತದೆ. ಯಾವುದೇ ಖ್ಯಾತ ವ್ಯಕ್ತಿಯನ್ನೊ, ಯುಗಪುರುಷನನ್ನೊ, ದೇವತೆಯನ್ನೊ ಬೇಕೆಂದ ವಸ್ತ್ರದಲ್ಲಿ ಅಥವಾ ವಸ್ತ್ರವಿಲ್ಲದ ಸ್ಥಿತಿಯಲ್ಲಿ ಸಂತೆಯಲ್ಲೂ ಓಡಾಡಿಸಬಹುದು. ಪರಿಚಿತ ಮುಖಚಹರೆ, ಹಾವಭಾವ ಅಷ್ಟೇ ಅಲ್ಲ, ತೀರ ಸಹಜ ಧ್ವನಿಯಲ್ಲೇ ಆ ವ್ಯಕ್ತಿ ಮಾತಾಡುವಂತೆ ಮಾಡಬಹುದು. ಒಣ ಕಡ್ಡಿಯೊಂದು ಪ್ರವಾಹದ ವಿರುದ್ಧ ಸಾಗುವಂತೆ ಮಾಡಿ, ಅದೇ ಅಸಲೀ ‘ಸಂಜೀವಿನಿ’ ಎಂದು ಹಾಡಿ ಹೊಗಳಿ, ಅದನ್ನೇ ಮಾರಾಟಕ್ಕೆ ಒಡ್ಡುವ ಅಸಲೀ ಬಾಬಾನನ್ನು ಸೃಷ್ಟಿ ಮಾಡಬಹುದು.

ಫೇಕ್‌ ವಿಡಿಯೊಗಳ ಎಐ ಜಗತ್ತಿನಲ್ಲಿ ಇದೇನೂ ಹೊಸತಲ್ಲ ನಿಜ. ಆದರೆ, ಈ ಅಸ್ತ್ರ ಈಗ ಎಲ್ಲರ ಕೈಗೂ ಸಿಗುವಂತಾಗಿದೆ. ಹದಿಹುಡುಗನೊಬ್ಬ ತನ್ನ ಸಹಪಾಠಿಯನ್ನು ವಿವಸ್ತ್ರಳನ್ನಾಗಿಸಿ ಓಡಾಡಿಸಿ ರೀಲ್‌ ಬಿಟ್ಟರೆ ಆಕೆಯ ಸ್ಥಿತಿ ಹೇಗಾಗಬೇಡ? ಹಾರುವ ಹುಂಜವನ್ನು ನೋಡಿದ ಹೈದನೊಬ್ಬ ತನ್ನ ಕಲ್ಪನೆಗೆ ರೆಕ್ಕೆಪುಕ್ಕ ಕಟ್ಟಿ ಇನ್ನೇನೇನನ್ನು ಹಾರಿಸುವ ವಿಡಿಯೊ ತಯಾರಿಸುತ್ತಾನೊ? ಕಣ್ಣಿಗೆ ಕಂಡಿದ್ದೇ ಸತ್ಯವೆಂದು ನಂಬುವ ಎಳೆಯರ ಕಣ್ಣಲ್ಲಿ ಈ ಜಗತ್ತು ಹೇಗೆ ಕಾಣುತ್ತದೊ?

ಅಂತರ್ಜಾಲದಲ್ಲಿ ಸಲೀಸಾಗಿ ಸಿಗುವ ಇಂಥ ಫೇಕ್‌ ಮಾಹಿತಿಗಳನ್ನೇ ಆಧರಿಸಿ ಹಣ ಕಳಕೊಂಡವರು, ಪ್ರಾಣ ಕಳಕೊಂಡವರು, ಜೀವನವನ್ನೇ ನರಕ ಮಾಡಿಕೊಂಡವರ ಸಾಲು ಸಾಲು ಕತೆಗಳಿವೆ. ‘ಖ್ಯಾತ’ ಜ್ಯೋತಿಷಿಗಳ, ವೈದ್ಯತಜ್ಞರ, ಷೇರು ಮಾರುಕಟ್ಟೆಯ ಪರಿಣತರ ಮಾತಿನ ಮೋಡಿಗೆ ಮರುಳಾಗಿ ಎತ್ತರ ಹೆಚ್ಚಿಸಿಕೊಳ್ಳಲೆಂದು, ಸ್ನಾಯುಬಲ ವೃದ್ಧಿಗೆಂದು ಖ್ಯಾತ ‘ವೈದ್ಯರ’ ಉಪದೇಶವನ್ನು ನಂಬಿದವರ, ಕಿಡ್ನಿ ಕಳಕೊಂಡವರ, ವೀರ್ಯದಾನಕ್ಕೆ ಹೋಗಿ ಇನ್ನೇನನ್ನೊ ಕಳಕೊಂಡವರ, ಲಸಿಕೆ ಹಾಕಿಸುವುದೇ ಅಪಾಯವೆಂದು ನಂಬಿ ಮಕ್ಕಳ ಜೀವವನ್ನು ಅಪಾಯಕ್ಕೆ ಒಡ್ಡಿದವರ ನೈಜ ಕಥನಗಳಿವೆ.

ಹಿಂದೆಲ್ಲ ಇಂಥ ಫೇಕ್‌ಗಳ ಸೃಷ್ಟಿಗೆ ತಜ್ಞರ ತಂಡವೇ ಬೇಕಾಗಿತ್ತು. ದೊಡ್ಡ ಕಂಪ್ಯೂಟರ್‌ ವ್ಯವಸ್ಥೆ, ಕ್ಲಿಷ್ಟ ಅಲ್ಗೊರಿದಮ್‌, ರಹಸ್ಯ ಕಾರ್ಯಾಚರಣೆಗಳ ಅಗತ್ಯವಿತ್ತು. ಎರಡು ವರ್ಷಗಳ ಹಿಂದೆ ಸ್ಲೊವಾಕಿಯಾ ಚುನಾವಣೆ ಸಂದರ್ಭದಲ್ಲಿ ಬಿಡುಗಡೆಯಾದ ಒಂದು ಡೀಪ್‌ ಫೇಕ್‌ ಆಡಿಯೊ ಟೇಪ್‌ನ ಪರಿಣಾಮ ಹೇಗಿತ್ತೆಂದರೆ, ಗೆಲ್ಲಲೇಬೇಕಿದ್ದ ಅಲ್ಲಿನ ‘ಸ್ಲೊವಾಕಿಯಾ ಪ್ರಗತಿ ಪಕ್ಷ’ ಸೋತು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಯಿತು. ನೈಜೀರಿಯಾ, ಬ್ರಿಟನ್‌, ಅಮೆರಿಕ, ಪಾಕಿಸ್ತಾನದ ರಾಜಕೀಯ ರಂಗಗಳಲ್ಲಿ ಇದು ಹಾವಳಿ ಎಬ್ಬಿಸಿದೆ. ನಮ್ಮಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಬಿತ್ತನೆಗೆ ಡೀಪ್‌ ಫೇಕ್‌ ಬಳಕೆಯಾಗುತ್ತಿದೆ.

ಸಹಜವಾಗಿಯೇ ಇದಕ್ಕೆ ಪ್ರತಿಬಂಧ ಹಾಕಬೇಕೆಂಬ ಒತ್ತಡ ಹೆಚ್ಚುತ್ತಿದೆ. ಫೇಕ್‌ಗಳನ್ನು ಗುರುತಿಸುವ ತಂತ್ರಗಳು, ತಂತ್ರಾಂಶಗಳು ಚುರುಕಾಗಿವೆ. ಆದರೆ, ತಂತ್ರಕ್ಕೆ ಪ್ರತಿತಂತ್ರವೂ ಅಷ್ಟೇ ಚುರುಕಾಗುತ್ತಿವೆ. ಫೇಕ್‌ ಎಂದು ಗುರುತಿಸಲು ಸಾಧ್ಯವೇ ಇಲ್ಲದಂಥ ಆ‍್ಯಪ್‌ಗಳೂ ಬರುತ್ತಿವೆ. ಇನ್ನೊಂದು ಕಡೆ, ಎಐ ನಾಗಾಲೋಟಕ್ಕೆ ಲಗಾಮು ಹಾಕಲು ಸಾಧ್ಯವೇ ಇಲ್ಲವೆಂಬ ಪರಿಸ್ಥಿತಿ ಬಂದಿರುವುದರಿಂದ ಅದರೊಂದಿಗೆ ಏಗಲು ಕಲಿಯುತ್ತಲೇ ಕೃತಕ ಬುದ್ಧಿಮತ್ತೆಯನ್ನು ಎಲ್ಲರ ಅನುಕೂಲಕ್ಕಾಗಿ ಬಳಸಿಕೊಳ್ಳಬೇಕೆಂಬ ವಾದಗಳೂ ಇವೆ. ಹೊಸಪೀಳಿಗೆಗೆ ಅದನ್ನು ಪರಿಚಯಿಸದಿದ್ದರೆ ‘ಹಿಂದುಳಿದವರ’ ಹೊಸ ವರ್ಗವನ್ನು ಸೃಷ್ಟಿಸಿದಂತಾಗುತ್ತದೆ ಎಂತಲೂ ಹೇಳಲಾಗುತ್ತಿದೆ.

ಚಾಟ್‌ ಜಿಪಿಟಿಯಂಥ ಎಐ ಬಳಕೆಯಲ್ಲಿ ನಮ್ಮ ದೇಶ ಜಗತ್ತಿನ ಎರಡನೇ ಸ್ಥಾನದಲ್ಲಿದ್ದು, ಮುಂದಿನ ವರ್ಷ ದಿಲ್ಲಿಯಲ್ಲೇ ಎಐ ಜಾಗತಿಕ ಶೃಂಗಸಭೆ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ‘ಎಐ ಉಸ್ತುವಾರಿ ಮಾರ್ಗಸೂಚಿ’ಯನ್ನು ಕಳೆದ ವಾರ ಬಿಡುಗಡೆ ಮಾಡಿದೆ. ‘ಕೃತಕ ಬುದ್ಧಿಮತ್ತೆಯ ಅಪಾರ ಸಾಧ್ಯತೆಗಳು ಎಲ್ಲರಿಗೂ ಲಭಿಸುವಂತೆ ಮಾಡುತ್ತ, ಅಂತರರಾಷ್ಟ್ರೀಯ ರಂಗದಲ್ಲಿ ನಾವು ಎಐ ಮುಂಚೂಣಿಯಲ್ಲಿ ನಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುತ್ತಲೇ ಅದರ ದುಷ್ಪರಿಣಾಮಗಳು ವ್ಯಕ್ತಿಗೂ ಸಮಾಜಕ್ಕೂ ತಟ್ಟದಂತೆ ನೋಡಿಕೊಳ್ಳುವ ಗುರಿ ನಮ್ಮದಿರಬೇಕು’ ಎಂದು ಈಗಷ್ಟೇ ಬಿಡುಗಡೆ ಮಾಡಿದ ಆಚಾರ ಸಂಹಿತೆಯಲ್ಲಿ ಹೇಳಲಾಗಿದೆ. ಸಿಬಿಎಸ್‌ಸಿ ಪಠ್ಯಗಳಲ್ಲಿ 3ನೇ ತರಗತಿಯಲ್ಲೇ ಎಐ ಪಾಠ ಬರಲಿದೆ.

ಜಗತ್ತಿನ ಬಹುತೇಕ ಯಾವ ಸರ್ಕಾರವೂ ಎಐ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಈಗಂತೂ ಸರ್ಕಾರಗಳ ಮುಷ್ಟಿಗೆ ಸಿಗದಷ್ಟು ಶೀಘ್ರವಾಗಿ ಅದು ಬೆಳೆಯುತ್ತಿದೆ. ಗಡಿ ರಕ್ಷಣೆ, ವಾಣಿಜ್ಯ, ಆರೋಗ್ಯ ಮತ್ತು ಸಾಮಾಜಿಕ ಸುವ್ಯವಸ್ಥೆಗೂ ಧಕ್ಕೆ ತರುವ ಮಟ್ಟಿಗೆ ‘ಡೀಪ್‌ ಫೇಕ್‌’ಗಳ ಹಾವಳಿ ಹೆಚ್ಚುತ್ತಿದೆ. ‘ವಿಶ್ವಾಸಾರ್ಹ’ ಎಂಬ ಪದವೇ ಅರ್ಥಶೂನ್ಯ ಎಂಬಂತ ಸ್ಥಿತಿ ಎದುರಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ ಸರ್ಕಾರಗಳೇ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿಲ್ಲ. ಈಗೇನು ಮಾಡೋಣ? ಖಾಸಗಿ ಯತ್ನಗಳಿಂದಾಗಿ ಎಐ ಕ್ರಾಂತಿ ಹೊಮ್ಮಿದ ಹಾಗೆ, ಅದನ್ನು ನಿಯಂತ್ರಿಸುವ ಉಪಾಯಗಳೂ ಖಾಸಗಿ ರಂಗದಲ್ಲೇ ಸೃಷ್ಟಿಯಾಗಬಹುದಲ್ಲವೆ? ಅದೃಷ್ಟವಶಾತ್‌ ಅನೇಕ ದೇಶಗಳಲ್ಲಿ ಮಾಧ್ಯಮ ಸಂಸ್ಥೆಗಳು ಒಂದಾಗುತ್ತಿವೆ. ಬ್ರೆಜಿಲ್‌ ದೇಶದಲ್ಲಿ 42 ಮಾಧ್ಯಮ ಸಂಸ್ಥೆಗಳು ‘ಕಂಪ್ರೋವಾ ಪ್ರಾಜೆಕ್ಟ್‌’ ಹೆಸರಿನಲ್ಲಿ ಒಂದಾಗಿವೆ. ವಾಟ್ಸ್‌ಆ‍್ಯಪ್‌ ನೆರವಿನಿಂದ ‘ಟಿಪ್‌ಲೈನ್‌’ ವ್ಯವಸ್ಥೆಯನ್ನು ಮಾಡಿಕೊಂಡಿವೆ. ಭಾರತದಲ್ಲೂ ‘ಚೆಕ್‌ಪಾಯಿಂಟ್‌ ಟಿಪ್‌ಲೈನ್‌’ ಹೆಸರಿನಲ್ಲಿ ಮಾಧ್ಯಮ ಸಂಸ್ಥೆಗಳು ಒಂದಾಗಿ ಫೇಕ್‌ ಸುದ್ದಿಗಳ ಹಾವಳಿಯನ್ನು ತಡೆಗಟ್ಟಲು ಶ್ರಮಿಸುತ್ತಿವೆ. ಜನಸಾಮಾನ್ಯರೇ ಇಂಥ ಫೇಕ್‌ಗಳನ್ನು ಗುರುತಿಸಿ ಮಾಧ್ಯಮ ಸಂಸ್ಥೆಗಳಿಗೆ ರವಾನಿಸುವ ವ್ಯವಸ್ಥೆ ತಕ್ಕಮಟ್ಟಿಗೆ ಕೆಲಸ ಮಾಡುತ್ತಿದೆ.

ಅದೆಲ್ಲ ಸರಿ; ಆದರೆ ಸರ್ಕಾರವೇ ಸುಳ್ಳಿನ ಪ್ರಚಾರದಲ್ಲಿ ಮುಳುಗಿರುವಾಗ ಹೇಗೆ ಏಗುವುದು? ಮರುಭೂಮಿಯಲ್ಲಿ ಶುದ್ಧ ನೀರಿನ ಪ್ರವಾಹವನ್ನೇ ಹರಿಸಿದ ಸಂಗತಿ ಹೇಗೂ ಇರಲಿ, ಬ್ರೆಜಿಲ್‌ ಶೃಂಗಸಭೆಯನ್ನು ವಿಫಲಗೊಳಿಸಲು ಅಮೆರಿಕವೇ ಡೀಪ್‌ ಫೇಕ್‌ಗಳ ಪ್ರವಾಹವನ್ನು ಹರಿಬಿಟ್ಟಿದೆ ಎಂಬುದಕ್ಕೆ ಸಾಕ್ಷ್ಯಗಳಿವೆ. ‘ಇಡೀ ಹವಾಮಾನ ವೈಪರೀತ್ಯವೇ ಬೊಗಳೆ’ ಎಂದು ಸೆಪ್ಟೆಂಬರ್‌ನಲ್ಲಿ ಟ್ರಂಪ್‌ ಹೇಳಿದ್ದಕ್ಕೆ ದಾಖಲೆಗಳಿವೆ. ಆತ ಅಧಿಕಾರಕ್ಕೆ ಬಂದನಂತರ ಹೊಸ ಹೊಸ ತೈಲ ನಿಕ್ಷೇಪಗಳ ಶೋಧಕ್ಕೆ ಭಾರೀ ಹಣವನ್ನು ಹೂಡಲಾಗುತ್ತಿದೆ. ಬದಲೀ ಶಕ್ತಿಗೆ ಮೀಸಲಾಗಿದ್ದ 13 ಶತಕೋಟಿ ಡಾಲರ್‌ ನಿಧಿಯನ್ನು ಸ್ಥಗಿತಗೊಳಿಸಲಾಗಿದೆ. ತೈಲ ಧನಿಕರ ಲಾಬಿ ಮತ್ತೆ ಹೆಡೆಯೆತ್ತಿದೆ. ಈಗ ಹರಿಬಿಟ್ಟಿರುವ ಸುಳ್ಳು ಪ್ರಚಾರವನ್ನು ತಡೆಗಟ್ಟಲು ವಿಶ್ವಸಂಸ್ಥೆ ಹರಸಾಹಸ ನಡೆಸಿದೆ. ಅದಕ್ಕೆಂದೇ ಯುನೆಸ್ಕೊ ಪ್ರತ್ಯೇಕ ಸುಳ್ಳುಪತ್ತೆ ವಿಭಾಗವನ್ನು ಸೃಷ್ಟಿ ಮಾಡಿದೆ. 14 ಸಾವಿರ ಫೇಕ್‌ ವಿಡಿಯೊಗಳನ್ನು ಅದು ಗುರುತಿಸಿದೆ. ‘ತಾಪಮಾನ ಏರುತ್ತಿಲ್ಲ ಎಂಬ ಎಲ್ಲ ಸುಳ್ಳು ಪ್ರಚಾರಗಳನ್ನೂ ವಿಫಲಗೊಳಿಸಲು ನಾವೆಲ್ಲ ಕೈಜೋಡಿಸೋಣ’ ಎಂದು ಅದು ಜನರಿಗೆ ಕರೆ ನೀಡಿದೆ.

‘ಸತ್ಯ ತನ್ನ ಕಾಲಿಗೆ ಚಪ್ಪಲಿ ಹಾಕುವುದರೊಳಗೆ ಸುಳ್ಳು ಅರ್ಧ ಭೂಮಿ ಸುತ್ತಿರುತ್ತದೆ’ ಎಂಬ ಹಳೇ ಇಂಗ್ಲಿಷ್‌ ಗಾದೆಯನ್ನು ಮಾರ್ಕ್‌ ಟ್ವೇನ್‌ ಮರುಬಿತ್ತರಣೆ ಮಾಡಿದ್ದ. ಈಗಿನ ಕಾಲದಲ್ಲಂತೂ ಸುಳ್ಳು ಬಾಹ್ಯಾಂತರಿಕ್ಷಕ್ಕೂ ವ್ಯಾಪಿಸತೊಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.