ADVERTISEMENT

ವಿಜ್ಞಾನ ವಿಶೇಷ: ಸೇತುವೆ ಹತ್ತಿರ ಸೋತೆವೆ? ಗೆದ್ದೆವೆ?

ಪ್ರಕೃತಿಯೇ ನಿರ್ಮಿಸಿದ ರಾಮಸೇತುವೆಯ ಬಗ್ಗೆ ಭಕ್ತಿ ಬೇಕೆ, ವೈಜ್ಞಾನಿಕ ದೃಷ್ಟಿ ಬೇಕೆ?

ನಾಗೇಶ ಹೆಗಡೆ
Published 9 ಏಪ್ರಿಲ್ 2025, 23:30 IST
Last Updated 9 ಏಪ್ರಿಲ್ 2025, 23:30 IST
rama
rama   

ಮೊನ್ನೆ ರಾಮನವಮಿಯಂದು ಧರ್ಮ ಮತ್ತು ವಿಜ್ಞಾನದ ಒಂದು ವಿಶಿಷ್ಟ ಮಿಲನ ಸಂಭವಿಸಿತು. ಅಯೋಧ್ಯೆಯ ಬಾಲರಾಮನ ವಿಗ್ರಹದ ಹಣೆಗೆ ತಿಲಕದಂತೆ ಸೂರ್ಯನ ಬೆಳಕು ಬಿತ್ತು. ಅದೇ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರು ಶ್ರೀಲಂಕಾದಿಂದ ಬರುವಾಗ ರಾಮಸೇತುವೆಯ ದರ್ಶನ ಪಡೆದರು. ಇವೆರಡೂ ಒಟ್ಟಿಗೆ ಘಟಿಸಿದ್ದು ‘ದಿವ್ಯ ಸಂಯೋಗ’ ಎಂದು ಅವರು ಎಕ್ಸ್‌ನಲ್ಲಿ ವಿಡಿಯೊ ಸಮೇತ ಟ್ವೀಟ್‌ ಮಾಡಿದರು.

ಈ ಸಂಯೋಗವನ್ನು ಸಾಧ್ಯಗೊಳಿಸಲು ಎಷ್ಟೆಲ್ಲ ಬಗೆಯ ತಂತ್ರಜ್ಞಾನವನ್ನು ಏಕಕಾಲದಲ್ಲಿ ಬಳಸಿಕೊಳ್ಳಲಾಯಿತು: ಬಾಲರಾಮನ ವಿಗ್ರಹದ ಹಣೆಯ ಮೇಲೆ ಸೂರ್ಯ ‘ತಿಲಕ’ ಗೋಚರಿಸಿದ್ದು ಪವಾಡವೇನಲ್ಲ. ರೂರ್ಕಿ ಐಐಟಿ ಮತ್ತು ಸಿಎಸ್‌ಐಆರ್‌ ಎಂಜಿನಿಯರ್‌ಗಳು ಕಂಚಿನ ಕೊಳವೆಗಳಲ್ಲಿ ಕನ್ನಡಿಗಳನ್ನು ಜೋಡಿಸಿದ್ದರಿಂದ ಬಿಸಿಲು ಒಳಗೆ ಬಂತು. ಹೈಸ್ಕೂಲ್‌ ಮಕ್ಕಳು ರಟ್ಟಿನ ಕೊಳವೆಗಳಲ್ಲಿ ಕನ್ನಡಿಗಳನ್ನಿಟ್ಟು ತಯಾರಿಸುವ ಪೆರಿಸ್ಕೋಪ್‌ ಎಂಬ ಸಾಧನದ ಆಧುನಿಕ ರೂಪ ಇದು. ವರ್ಷದ ಯಾವ ದಿನದಲ್ಲಾದರೂ ಹೀಗೆ ಕತ್ತಲ ಕೋಣೆಗೆ ಬಿಸಿಲು ಬೀಳುವಂತೆ ಮಾಡಬಹುದು.

ಇನ್ನು, ಅದೇ ವೇಳೆಗೆ ಪ್ರಧಾನ ಮಂತ್ರಿಯವರಿದ್ದ ವಿಮಾನ ರಾಮಸೇತುವಿನ ಮೇಲ್ಗಡೆ ಸಾಗುವಂತೆ ಮಾಡಿ, ಅವರೆದುರು ಕ್ಯಾಮೆರಾ ಇಟ್ಟು ಅವರ ಕಣ್ಣಿಗೆ ಅಯೋಧ್ಯೆಯ ತಿಲಕ ದರ್ಶನ ಮಾಡಿಸಿ, ಅದೊಂದು ‘ದಿವ್ಯ ಸಂಯೋಗ’ ಎಂದು ಜಗತ್ತಿಗೆ ಸಾರಿದ್ದು ಸರಿಯೆ?

ADVERTISEMENT

ವಾಸ್ತವವಾಗಿ ದೈವಬಲ ಎಂಬುದನ್ನು ಬದಿಗೊತ್ತಿ ಮನುಷ್ಯ ತನ್ನ ಮನೋಬಲ ಮತ್ತು ತೋಳ್ಬಲದಿಂದ ಏನೆಲ್ಲ ವೈಜ್ಞಾನಿಕ ಸಾಧನಗಳನ್ನು ಸೃಷ್ಟಿಸಿದ್ದಾನೆ. ಆದರೆ ಅಂಥ ಸಾಧನಗಳನ್ನೇ ಮೆಟ್ಟಿಲನ್ನಾಗಿ ಮಾಡಿಕೊಂಡು ಧಾರ್ಮಿಕ ನಂಬಿಕೆಗಳನ್ನು ಮೇಲೆತ್ತರಿಸುವ ಸಾಹಸ ಹಿಂದಿನಿಂದಲೂ ನಡೆದುಬಂದಿದೆ. ಅಕ್ಷರಗಳ ಬಳಕೆ ಆರಂಭವಾಗುತ್ತಲೇ ದೈವೀಶಕ್ತಿಯನ್ನು ಬಿತ್ತರಿಸುವ ಧರ್ಮಗ್ರಂಥಗಳೇ ಎಲ್ಲೆಡೆ ಪ್ರಚಾರಕ್ಕೆ ಬಂದವು. ಮುದ್ರಣ ತಂತ್ರಜ್ಞಾನ ಬಂದಮೇಲಂತೂ ನಮಗೆ ಗೊತ್ತೇ ಇದೆ. ಇವೊತ್ತಿಗೂ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಣಗೊಳ್ಳುತ್ತಿರುವ ಗ್ರಂಥ ಯಾವುದೆಂದರೆ ಬೈಬಲ್‌. ನಂತರ ಬಂದ ರೇಡಿಯೊ, ಟಿ.ವಿ., ಇಂಟರ್ನೆಟ್‌ ಎಲ್ಲವೂ ವೈಚಾರಿಕತೆಯನ್ನು ಬಿತ್ತರಿಸುವುದಕ್ಕಿಂತ ಹೆಚ್ಚಾಗಿ ಧರ್ಮಪ್ರಸಾರಕ್ಕೆ ಮತ್ತು ಮೂಢನಂಬಿಕೆಗಳ ವಿಸ್ತರಣೆಗೇ ದಂಡಿಯಾಗಿ ಬಳಕೆಯಾಗುತ್ತಿವೆ. ಈಚೆಗೆ ಮಾರ್ಚ್‌ 29ರ ಸೌರಗ್ರಹಣ ನಮ್ಮ ದೇಶದಲ್ಲಿ ಎಲ್ಲೂ ಕಾಣದಿದ್ದರೂ ಅದೆಷ್ಟೊಂದು ಕಡೆ ದೇವ ದಿಗ್ಬಂಧನ, ಶಾಪವಿಮೋಚನ ವ್ರತ, ನೀರಿನ ಅಪಾರ ಅಪವ್ಯಯ ಎಲ್ಲ ವರದಿಯಾದವು. ಕೋವಿಡ್‌ ಕಾಲದ ಅಂಧಾಚರಣೆಗಳ ವಿರಾಟ್‌ ರೂಪವಂತೂ ನಮಗೆ ಗೊತ್ತೇ ಇದೆ. ಆಗ ಜಗತ್ತಿನ ಎಲ್ಲ ದೇವಮಂದಿರಗಳನ್ನು ಮುಚ್ಚಿಟ್ಟು, ವಿಜ್ಞಾನಿಗಳು ಲ್ಯಾಬಿನಲ್ಲಿ ತ್ವರಿತ ಸಂಶೋಧನೆ ನಡೆಸಿದ್ದರಿಂದಲೇ ನಮಗೆಲ್ಲ ಕೊರೊನಾವನ್ನು ಹಿಮ್ಮೆಟ್ಟಿಸುವ ಲಸಿಕೆ ಸಿಕ್ಕಿತಾದರೂ ಎಷ್ಟೆಲ್ಲ ಬಗೆಯ ಮೂಢನಂಬಿಕೆಗಳು ಪ್ರಸಾರವಾದವು. ಅದೆಷ್ಟೊಂದು ಜನ ಪ್ರಾಣ ಕಳೆದುಕೊಂಡರು.

ಧಾರ್ಮಿಕ ನಂಬಿಕೆಗಳು ರಾಕೆಟ್‌ ಏರಿ ಬಾಹ್ಯಾಕಾಶಕ್ಕೂ ಹೋಗಿದ್ದು ಗೊತ್ತೆ? 1968ರಲ್ಲಿ ಅಪೊಲೊ 8ರಲ್ಲಿ ಕೂತು ಚಂದ್ರನ ಪ್ರದಕ್ಷಿಣೆ ಹಾಕುತ್ತಿದ್ದ ಮೂರೂ ಗಗನಯಾತ್ರಿಗಳು ಬೈಬಲ್‌ ಓದಿದ್ದನ್ನು 64 ದೇಶಗಳ ಶತಕೋಟಿ ಜನ ಕೇಳಿಸಿಕೊಂಡರು. ಅದಾಗಿ ಮೂರು ವರ್ಷಗಳ ನಂತರ ನೀಲ್‌ ಆರ್ಮ್‌ಸ್ಟ್ರಾಂಗ್‌ ಜೊತೆ ಅಪೊಲೊ 11ರ ಮೂಲಕ ಚಂದ್ರನ ಮೇಲೆ ಮೊದಲ ಬಾರಿ ಕಾಲಿಟ್ಟ ಬಝ್‌ ಆಲ್ಡ್ರಿನ್‌ ಕೂಡ ಅಲ್ಲಿಂದಲೇ ಪ್ರಾರ್ಥನೆಯನ್ನು ಬಿತ್ತರಿಸಬಯಸಿದ್ದ. ಆದರೆ ಅದಕ್ಕೆ ಮೊದಲೇ ಮೆಡಲೀನ್‌ ಓಹೇರ್‌ ಹೆಸರಿನ ಮಹಿಳೆಯೊಬ್ಬಳು ತಂತ್ರಜ್ಞಾನದ ಇಂಥ ದುರ್ಬಳಕೆಯ ವಿರುದ್ಧ ಅಮೆರಿಕದ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಳು. ನಾಸಾ ಬೆದರಿತ್ತು. ಚಂದ್ರನ ಮೇಲಿನ ಬಹಿರಂಗ ಪ್ರಾರ್ಥನೆಗೆ ಅದು ಅನುಮತಿ ಕೊಡಲಿಲ್ಲ. ಇಲ್ಲಿ ನೋಡಿದರೆ ಪ್ರಧಾನಿ ಮೋದಿಯವರು ವಿಮಾನದ ಮೇಲಿಂದ ‘ನಮ್ಮೆಲ್ಲರನ್ನೂ ಒಗ್ಗೂಡಿಸುವ ಶಕ್ತಿ ಪ್ರಭು ಶ್ರೀರಾಮನಲ್ಲಿದೆ. ಆತನ ಕೃಪೆ ಸದಾ ನಮ್ಮೆಲ್ಲರ ಮೇಲಿರಲಿ’ ಎಂದು ಹಾರೈಸಿದ್ದಾರೆ. ‘ನಮ್ಮೆಲ್ಲರನ್ನೂ’ ಅಂದರೆ ಯಾರೆಲ್ಲರನ್ನು?

ಈಗ ರಾಮಸೇತುವಿನತ್ತ ಬರೋಣ. ಮೋದಿಯವರಿಗೆ ‘ದರ್ಶನ’ ನೀಡಿದ ರಾಮಸೇತುವಿನ ಬಗ್ಗೆ ಅಂದೇ ಕನ್ನಡ ವಾಹಿನಿಗಳಲ್ಲಿ ಬರೀ ಭಕ್ತಿಬೋಧೆ ಪ್ರಸಾರವಾಯಿತು. ಆದರೆ ಅದು ನಿಸರ್ಗನಿರ್ಮಿತ ಭೂರಚನೆ ಎಂದು ಎಲ್ಲ ವೈಜ್ಞಾನಿಕ ಸಂಶೋಧನೆಗಳೂ ಸಾರುತ್ತಲೇ ಬಂದಿವೆ. ಅದು ಘಟಿಸಿದ್ದು ಹೀಗೆ: ಸುಮಾರು ಒಂದು ಲಕ್ಷ ವರ್ಷಗಳ ಹಿಂದೆ ಜಗತ್ತಿಗೆಲ್ಲ ಹಿಮಯುಗ ವ್ಯಾಪಿಸಿತ್ತು. ಸಾಗರಗಳ ನೀರು ಆವಿಯಾಗಿ ಬರ್ಫವಾಗಿ ಎಲ್ಲ ಭೂಖಂಡಗಳ ಮೇಲೂ ಹಾಸಿತ್ತು. ಸಮುದ್ರ ಪಾತಳಿ ಈಗಿಗಿಂತ 125 ಮೀಟರ್‌ ಕೆಳಕ್ಕಿತ್ತು. ಆಗ ಧನುಷ್ಕೋಡಿಯಿಂದ ಕಾಲ್ನಡಿಗೆಯಲ್ಲೇ ಶ್ರೀಲಂಕಾಕ್ಕೆ ಹೋಗಬಹುದಿತ್ತು. ಇಲ್ಲೊಂದೇ ಅಲ್ಲ; ಬ್ರಿಟನ್‌ ಮತ್ತು ಫ್ರಾನ್ಸ್‌ ನಡುವೆ ಸಮುದ್ರ ಇರಲಿಲ್ಲ; ಆಸ್ಟ್ರೇಲಿಯಾದಿಂದ ನ್ಯೂಗಿನಿಗೆ, ರಷ್ಯಾದಿಂದ ಅಲಾಸ್ಕಾಗೆ ನಡೆದೇ ಹೋಗಬಹುದಿತ್ತು. ಸುಮಾರು 60 ಸಾವಿರ ವರ್ಷಗಳ ಹಿಂದೆ ಆಫ್ರಿಕಾದಿಂದ ಹೊರಟ ‘ನೆಗ್ರಿಟೊ’ ಆದಿಮಾನವರು ಭಾರತ, ಶ್ರೀಲಂಕಾ, ಅಂಡಮಾನ್‌, ಇಂಡೊನೇಷ್ಯ, ಆಸ್ಟ್ರೇಲಿಯಾವರೆಗೂ ಹೋದರು. ಸುಮಾರು 11,700 ವರ್ಷಗಳೀಚೆ ಭೂಮಿ ಮತ್ತೆ ಬಿಸಿಯಾಗುತ್ತ ಬಂದಂತೆ ಸಮುದ್ರಮಟ್ಟ ಮೆಲ್ಲಗೆ ಏರತೊಡಗಿತ್ತು. ಭಾರತ– ಶ್ರೀಲಂಕಾ ನಡುವಣ ಗುಡ್ಡಶ್ರೇಣಿಗಳು ಮುಳುಗುತ್ತ ಬಂದಂತೆಲ್ಲ ಸುಣ್ಣದ ಕಲ್ಲುಗಳು ಮತ್ತು ಹವಳದ ದಿಬ್ಬಗಳು ಬೆಳೆಯುತ್ತ ನೀರಿನ ಮಟ್ಟದೊಂದಿಗೆ ಮೇಲಕ್ಕೇರಿದವು. ತಳದ ಕೆಲವು ಹೆಬ್ಬಂಡೆಗಳನ್ನೂ ಮರಳನ್ನೂ ಅಲೆಗಳು ಮೇಲಕ್ಕೆ ತಂದುದರಿಂದ ಅಲ್ಲಲ್ಲಿ ಮರಳಿನ ಪಟ್ಟಿಗಳೂ ನಿರ್ಮಾಣಗೊಂಡವು. ಕ್ರಮೇಣ ಸಾಗರದ ನೀರಿನ ತಾಪಮಾನವೂ ಏರತೊಡಗಿತು. ಹವಳದ ದಿಬ್ಬಗಳ ಬೆಳವಣಿಗೆ ನಿಂತಿತು. ಹಾಗಾಗಿ, ಇಂದು ಸಮುದ್ರ ಪಾತಳಿಗಿಂತ ಸ್ವಲ್ಪ ಕೆಳಗೆ, ಆದರೂ ಆಕಾಶ ಮಾರ್ಗದಲ್ಲಿ ಕಾಣುವಂತೆ ತುಂಡು ತುಂಡು ದಿಬ್ಬಗಳು ರಾಮೇಶ್ವರದ ಬಳಿಯ ಪಂಬಮ್‌ ದ್ವೀಪದಿಂದ ಶ್ರೀಲಂಕಾದ ಮನ್ನಾರ್‌ ದ್ವೀಪದವರೆಗಿನ ಸುಮಾರು 30 ಕಿ.ಮೀ. ದೂರದವರೆಗೆ ಕಾಣುತ್ತಿವೆ. ಪ್ರಾಯಶಃ ಒಂದೆರಡು ಸಾವಿರ ವರ್ಷಗಳ ಹಿಂದೆ ದಿಬ್ಬದಿಂದ ದಿಬ್ಬಕ್ಕೆ ದೋಣಿಯ ಮೂಲಕ ಸಂಚಾರವೂ ಇತ್ತೇನೊ.

ಬ್ರಿಟಿಷರ ಕಾಲದಲ್ಲಿ ‘ಆಡಮ್ಸ್‌ ಬ್ರಿಜ್‌’ ಎಂದೆನಿಸಿದ್ದ ಈ ಸೇತುವೆ ಮಾನವ ನಿರ್ಮಿತ ಅಲ್ಲ; ವಾನರರು+ ದೇವಮಾನವರೂ ಸೇರಿ ನಿರ್ಮಿಸಿದ್ದೂ ಅಲ್ಲ. ಇಷ್ಟಕ್ಕೂ ರಾಮನೆಂಬ ವ್ಯಕ್ತಿ ಇತಿಹಾಸದಲ್ಲಿ ಆಗಿಹೋಗಿದ್ದರ ಬಗ್ಗೆ ಯಾವ ಸಾಕ್ಷ್ಯವೂ ಇಲ್ಲವೆಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ 2007ರಲ್ಲಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿತ್ತು. ಅದೂ ಅಲ್ಲದೆ, ಮೋದಿಯವರ ನೇತೃತ್ವದ ಸರ್ಕಾರದಲ್ಲಿ ವಿಜ್ಞಾನ ಸಚಿವರಾಗಿದ್ದ ಡಾ. ಜಿತೇಂದ್ರ ಸಿಂಗ್‌ 2022ರಲ್ಲಿ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿ, ‘ಅಲ್ಲಿನ ಸಾಲು ಸಾಲು ಸುಣ್ಣದ ಬಂಡೆಗಳು ಮತ್ತು ಮರಳು ದಿಬ್ಬಗಳು ಸೇತುವೆ ಆಗಿದ್ದವೆಂದು ಹೇಳಲು ಸಾಕ್ಷ್ಯಗಳು ಸಿಕ್ಕಿಲ್ಲ’ ಎಂದಿದ್ದರು. ಆದಾಗ್ಯೂ ನಮ್ಮ ಪ್ರಧಾನಿಯವರು ತಮಗೆ ‘ರಾಮಸೇತುವಿನ ದರ್ಶನದ ಸೌಭಾಗ್ಯ ಸಿಕ್ಕಿತು’ ಎಂದು ಹೇಳಿದ್ದಾರೆ.

ನಮ್ಮ ಸಂವಿಧಾನದ ಕಲಮು 51ಎ(ಎಚ್‌)ನಲ್ಲಿ, ‘ವೈಜ್ಞಾನಿಕ ಮನೋಭಾವವನ್ನು, ಸತ್ಯಾನ್ವೇಷಣೆ ಮತ್ತು ಸುಧಾರಣಾ ಗುಣವನ್ನು ರೂಢಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ’ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹಾಗೆ ವಿಜ್ಞಾನದ ಮಹತ್ವವನ್ನು ಸ್ಪಷ್ಟವಾಗಿ ಸಾರಿದ ಏಕೈಕ ಸಂವಿಧಾನ ನಮ್ಮದೆಂದು ಹೆಮ್ಮೆಯಿಂದ ಹೇಳಿಕೊಂಡು ಬಂದಿದ್ದೇವೆ. ಆದರೂ ಸೇತುವೆ ನೋಡಿ ನಾವು ಸೋತೆವೆ?

ಇರಲಿಕ್ಕಿಲ್ಲ. ರಾಮಸೇತುವಿನ ದರ್ಶನದ ನಂತರ ನೆಲಕ್ಕಿಳಿದ ಮೋದಿಯವರು ರಿಮೋಟ್‌ ಹಿಡಿದು ಅಲ್ಲೇ ಪಂಬನ್‌ ದ್ವೀಪದ ರೈಲುಸೇತುವೆಯ ಕಡೆ ಕ್ಲಿಕ್‌ ಮಾಡಿದರು. ಆ ಲೋಹದ ಸೇತುವೆಯ 72 ಮೀಟರ್‌ ಉದ್ದದ ಭಾಗವೊಂದು ರೈಲು ಹಳಿಗಳ ಸಮೇತ ತೊಟ್ಟಿಲಿನಂತೆ 17 ಮೀಟರ್‌ ಮೇಲಕ್ಕೇರಿತು. ಆಗ ಕೆಳಗಿನ ಸಮುದ್ರದಲ್ಲಿದ್ದ ಕಡಲ ರಕ್ಷಣಾ ಪಡೆಯ ಹಡಗು ಸಲೀಸಾಗಿ ಈಚೆ ಸಾಗಿ ಬಂತು. ತಲೆಯೆತ್ತಿ ಸಾಗಿ ಬಂತು.

ಹಿಂದಿನವರ ಕಲ್ಪನಾಕತೆಗಳನ್ನು ಹಾಡಿ ಹೊಗಳಬೇಕಾದದ್ದೇನೊ ಹೌದು. ಆದರೆ ‘ನಮ್ಮೆಲ್ಲರನ್ನೂ ಒಂದುಗೂಡಿಸಬಲ್ಲ’ ದೈವೀಶಕ್ತಿಯ ಬದಲು ವೈಜ್ಞಾನಿಕ, ತಾಂತ್ರಿಕ ಸಾಧನೆಗಳನ್ನು ಸಂಭ್ರಮಿಸಬೇಕಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.