ADVERTISEMENT

ಲಿಂಗದ ಮರಹೇ ಭವದ ಬೀಜ! ಭವರೋಗ ವೈದ್ಯರು ಬಸವಾದಿ ಪ್ರಮಥರು

ಪ್ರಜಾವಾಣಿ ವಿಶೇಷ
Published 26 ಅಕ್ಟೋಬರ್ 2025, 20:10 IST
Last Updated 26 ಅಕ್ಟೋಬರ್ 2025, 20:10 IST
<div class="paragraphs"><p>ಬಸವಣ್ಣ</p></div>

ಬಸವಣ್ಣ

   

ಸಮಸ್ತವು ಆವ ವಸ್ತುವಿನಲ್ಲಿ ಉತ್ಪತ್ತಿಗೊಂಡು, ಆ ವಸ್ತುವಿನಲ್ಲೇ ಲೀಲೆಯಾಡಿ, ಅವ ವಸ್ತುವಿನಲ್ಲಿ ಲಯಗೊಳ್ಳುವುದೋ ಆ ಚಿತ್ವಸ್ತುವಿಗೆ ಅ ಆತ್ಮ ಚೈತನ್ಯ ವಸ್ತುವಿಗೆ ಲಿಂಗವೆಂದರು ಬಸವಾದಿ ಪ್ರಮಥರು.

ಆದಿ ಅನಾದಿಯಿಂದಲೂ ಹೆಸರಿಡಬಾರದ ಘನ ವಸ್ತುವನ್ನು ಬಸವಣ್ಣನವರು ಇಷ್ಟಲಿಂಗವ ಮಾಡಿ, ಗುರುವಾಗಿ ಲಿಂಗವನ್ನು ನಮ್ಮೆಲ್ಲರಿಗೂ ಸಾಕಾರ ರೂಪಾಗಿ ಕೊಟ್ಟರು.

ADVERTISEMENT

ಭಕ್ತಿ ಯೋಗ, ಜ್ಞಾನ ಯೋಗ, ಕರ್ಮ ಯೋಗ, ರಾಜ ಯೋಗ, ಧ್ಯಾನಯೋಗ, ಶ್ವಾಸ ಯೋಗ(ಕುಂಭಕ)ದಿಂದ, ಲಯಯೋಗ, ಹಠಯೋಗ. ಹೀಗೆ ಅನೇಕಾನೇಕ ಯೋಗ ಮಾರ್ಗದ ಮೂಲಕ ಪರವಸ್ತುವನ್ನು ಕೂಡಿಕೊಂಡರು, ಆದರೂ ಮೂಲ ಅರಿವಿನ ಕೊರತೆ ಬಯಲ ಚೇತನದ ಬೆಳಕನ್ನು ಕಂಡಾಗ ಅದರರಿವು ಇಲ್ಲದಿದ್ದರೆ ಜ್ಞಾನದ ಕೊರತೆ ಇದ್ದರೆ ಅಂತಹ ಸಾಧನೆಯ ನಿಷ್ಪ್ರಯೋಜಕ.

ಕಲಿಯುಗದ ಮರ್ಮ ಅಲ್ಲಮಪ್ರಭುಗಳು ಹೀಗೆ ಹೇಳುತ್ತಾರೆ

ಸಾರೆ ಚೆಲ್ಯಾವೇ ಮುಕುತಿ ಗುರು ತೋರಿಸಿದಲ್ಲದೆ ಕಾಣಿಸದಣ್ಣ.

ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ.

ಬ್ರಹ್ಮವ ನುಡಿದು ಭ್ರಮಿತನಾದೆನಯ್ಯಾ.

ಶೂನ್ಯವ ನುಡಿದು ನಾನು ಸುಖದುಃಖಕ್ಕೆ ಗುರಿಯಾದೆನಯ್ಯಾ.

ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಸಾನ್ನಿಧ್ಯದಿಂದ ನಾನು ಸದ್ಭಕ್ತನಾದೆನಯ್ಯಾ.

ಭಕ್ತಿಯ ಮಾರ್ಗ ಅಂತಃಕರಣಗಳಾದ.

ಮನ ಬುದ್ಧಿ ಚಿತ್ತ ಅಹಂಕಾರವನ್ನು ಶಮನ ಗೊಳಿಸುತ್ತದೆ.


ತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ,

ಹೆಡೆಯೆತ್ತಿ ಆಡುತ್ತಿರಲು,

ಆ ಸರ್ಪನ ಕಂಡು, ನಾ ಹೆದರಿಕೊಂಡು,

ಗುರುಕರುಣವೆಂಬ ಪರುಷವ ತಂದು ಮುಟ್ಟಿಸಲು,

ನೋಟ ನಿಂದಿತ್ತು, ಹೆಡೆ ಅಡಗಿತ್ತು, ಹಾವು ಬಯಲಾಯಿತ್ತು.

ಆ ಗುರುಕರುಣವೆಂಬ ಪರುಷವೆ ನಿಂದಿತ್ತು.

ನಿಂದ ಪರುಷವನೆ ಕೊಂಡು ನಿಜದಲ್ಲಿ ನಿರ್ವಯಲಾಗುವ

ಶರಣರ ಪಾದವ ನಂಬಿ ಕೆಟ್ಟು ಬಟ್ಟಬಯಲಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.


ಹಡಪದ ಅಪ್ಪಣ್ಣಗಳ ಪುಣ್ಯ ಸ್ತ್ರೀ ಲಿಂಗಮ್ಮ ಮಾರ್ಗದರ್ಶಕರಾದ ಚಿನ್ಮಯ ಜ್ಞಾನಿ ಚೆನ್ನ ಬಸವಣ್ಣನವರ ಗುರು ಉಪದೇಶ, ನಿಜದ ನಿರ್ವಯಲ ಸಮಾಧಿಗೆ, ಮುಕ್ತ ಮಾರ್ಗದರ್ಶನವನ್ನು ನೀಡಿತ್ತು.


ನರರ ಬೇಡೆನು, ಸುರರ ಹಾಡೆನು, ಕರಣಂಗಳ ಹರಿಯಬಿಡೆನು,

ಕಾಮನ ಬಲೆಗೆ ಸಿಲ್ಕೆನು, ಮರವೆಗೊಳಗಾಗೆನು.

ಪ್ರಣವ ಪಂಚಾಕ್ಷರಿಯ ಜಪಿಸಿಹೆನೆಂದು

ತನುವ ಮರೆದು ನಿಜಮುಕ್ತಳಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.


ಗುರುಕೊಟ್ಟ ಪ್ರಣವ ಪಂಚಾಕ್ಷರಿಯು ಭವವನ್ನುಗೆಲ್ಲಲು ಬೇಕಾದ ಮೂಲ ಮಂತ್ರವಾಗಿದೆ, ನಮಗೆ ಹೇಗೆ ಅನರ್ಘ್ಯ ರತ್ನದ ಅರಿವಿಲ್ಲದಿದ್ದರೆ ಅದು ಕೇವಲ ಕಲ್ಲು. ತನ್ನಾತ್ಮದ ( ಅನುಭವ) ದರ್ಶನವಾದರು,

ಗುರು ಮಾರ್ಗದರ್ಶನವಿಲ್ಲದಿದ್ದರೆ, ಕೇವಲ ಕುರುಡ ಕಂಡ ಕನಸಿನಂತೆ ನಿಷ್ಪ್ರಯೋಜಕ.


ಸಾಯದ ಮುಂಚೆ ಸತ್ತಹಾಗೆ ಇರುವರು.

ಆರಿಗೂ ವಶವಲ್ಲ, ನಮ್ಮ ಶರಣರಿಗಲ್ಲದೆ.

ಅದು ಹೇಗೆಂದಡೆ ಹಗಲಿರುಳೆಂಬ ಹಂಬಲ ಹರಿದರು

ಜಗದಾಟವ ಮರೆದರು ಆಡದ ಲೀಲೆಯನೆ ಆಡಿದರು.

ಆರು ಕಾಣದ ಘನವನೆ ಕಂಡರು.

ಮಹಾಬೆಳಗಿನೊಳಗೋಲಾಡಿ ಸುಖಿಯಾದರಯ್ಯಾ,ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.


ಸಾಧಕರಿಗೆ ಶರಣರ ಸಂಗವೇ ಅತ್ಯಂತ ಮುಖ್ಯವಾದದ್ದು, ಭವ ಭಾರಿಗಳ ಸಂಗವು ಮರಳಿ ಭವಕ್ಕೆ ತಪ್ಪುದಾಗಿ. ಬಸವಣ್ಣನವರ ವಚನ ವಿಂತಿದೆ.


ಮಡಕೆಯ ಮಾಡುವಡೆ ಮಣ್ಣೆ ಮೊದಲು,

ತೊಡಿಗೆಯ ಮಾಡುವಡೆ ಹೊನ್ನೆ ಮೊದಲು,

ಶಿವಪಥವನರಿವಡೆ ಗುರುಪಥವೆ ಮೊದಲು,

ಕೂಡಲಸಂಗಮದೇವರನರಿವಡೆ

ಶರಣರ ಸಂಗವೆ ಮೊದಲು.


ಮುಖ ಲಿಂಗಿಗಳು ಕಲ್ಯಾಣದ ಶಿವ ಶರಣರು. ಲಿಂಗಮ್ಮನವರ ವಚನ

ಬಲು ಕಠಿಣ ವೆನಿಸಿದರು ಇಂತಪ್ಪ ಶಿವಶರಣರ ಸಂಗವು, ಭವವನ್ನು ಗೆಲಿದು ಮಹಾ ನಿಜೈಕ್ಯ ಪದವಿಯನ್ನು ನೀಡುತ್ತದೆ.

ಅಂತರಂಗ ಬಹಿರಂಗ ಶುದ್ಭವಿಲ್ಲದೆ ನುಡಿವರು ಸಂತೆಯ ಸೂಳೆಯರಂತೆ.

ಅಂತರಂಗ ಬಹಿರಂಗವೆಂಬುದಿಲ್ಲ ನಮ್ಮ ಶಿವಶರಣರಿಗೆ.

ಅಂತರಂಗವೆಲ್ಲ ಅರುಹಾಯಿತ್ತುz ಬಹಿರಂಗದಲ್ಲಿ ಲಿಂಗವಾಯಿತ್ತು,

ಆ ಲಿಂಗದಲ್ಲೆ ನುಡಿದು, ಲಿಂಗದಲ್ಲೆ ನಡೆದು,

ಲಿಂಗದಲ್ಲೆ ಮುಟ್ಟಿ, ಲಿಂಗದಲ್ಲೆ ವಾಸಿಸಿ,

ಲಿಂಗದಲ್ಲೆ ಕೇಳಿ, ಲಿಂಗವಾಗಿ ನೋಡಿ,

ಸರ್ವಾಂಗವು ಲಿಂಗವಾಗಿ, ಆ ಲಿಂಗವ ನೋಡುವ ಕಂಗಳಲ್ಲೆ ಐಕ್ಯ.

ಕಂಡೆಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.

ಕೇವಲ ಭಕ್ತಿಯ ಶಕ್ತಿಯೇ ಇಷ್ಟಿದ್ದರೆ, ಬಸವಾದಿಶರಣರ ಸಂಘವು ನಿಶ್ಚಿಂತ ನಿಜ ನಿವಾಸವು.

ಸರ್ವರಿಗೂ ಶರಣು ಶರಣಾರ್ಥಿಗಳು


ಲೇಖಕರು: ವಿರಕ್ತ ಮಠ, ದಾವಣಗೆರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.