ADVERTISEMENT

ಅನಂತಶಕ್ತಿಗಳ ಮಾತೆ ಶ್ರೀಲಕ್ಷ್ಮೀ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 17:41 IST
Last Updated 14 ನವೆಂಬರ್ 2020, 17:41 IST
ಲಕ್ಷ್ಮಿ ಪೂಜೆ
ಲಕ್ಷ್ಮಿ ಪೂಜೆ   

ದೀಪಾವಳಿಯಲ್ಲಿ ಲಕ್ಷ್ಮಿಯ ಪೂಜೆಯನ್ನೂ ಮಾಡಲಾಗುತ್ತದೆ. ಲಕ್ಷ್ಮಿ ಎಂದರೆ ಸುಖ, ಸಂಪತ್ತು, ಧೈರ್ಯ, ದಯೆ, ವಿದ್ಯೆ, ಯಶಸ್ಸು, ಸೌಂದರ್ಯ ಹಾಗೂ ಅನಂತ ಶಕ್ತಿಗಳನ್ನು ದಯಪಾಲಿಸುವಳು...

ನರಕಚತುರ್ದಶಿಯ ಮಾರನೇ ದಿವಸ ಆಶ್ವಯುಜ ಮಾಸದ ಅಮಾವಾಸ್ಯೆ. ಅಂದು ನಮಗೆಲ್ಲ ತಿಳಿದ ಹಾಗೆ ಲಕ್ಷ್ಮೀಪೂಜೆಯನ್ನು ವಿಶೇಷವಾಗಿ ಮಾಡುತ್ತಾರೆ. ವರ್ತಕರು ಅಂಗಡಿಗಳಲ್ಲಿ ಲಕ್ಷ್ಮೀಪೂಜೆಯನ್ನು ನೆರವೇರಿಸುತ್ತಾರೆ. ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ದಾರಿದ್ರ್ಯ, ದುರಾದೃಷ್ಟಗಳು ಪರಿಹಾರವಾಗುತ್ತವೆ. ದೇವತೆಗಳ ಪೂಜೆಯ ಜೊತೆಗೆ ಅಂದು ಪಿತೃಗಳಿಗೆ ತರ್ಪಣವನ್ನೂ ಕೊಡುತ್ತಾರೆ.

ಸಮುದ್ರಮಂಥನದಲ್ಲಿ ಆವಿರ್ಭವಿಸಿದವಳು ಲಕ್ಷ್ಮೀ ಎಂದು ಪುರಾಣಗಳು ನಮಗೆ ತಿಳಿಸುತ್ತವೆ. ಲಕ್ಷ್ಮೀ ಎಂದರೆ ನಾವು ಸಂಪತ್ತಿನ ಅಧಿದೇವತೆ ಎಂದಷ್ಟೇ ಭಾವಿಸುತ್ತೇವೆ. ಆದರೆ ಲಕ್ಷ್ಮಿಯು ಸುಖ, ಸಂಪತ್ತು, ಧೈರ್ಯ, ದಯೆ, ವಿದ್ಯೆ, ಯಶಸ್ಸು, ಸೌಂದರ್ಯ ಹಾಗೂ ಅನಂತ ಶಕ್ತಿಗಳನ್ನು ದಯಪಾಲಿಸುವಳು ಕೂಡ. ಅವಳು ಧನಲಕ್ಷ್ಮೀಯೂ ಹೌದು, ಸಂತಾನಲಕ್ಷ್ಮೀ, ಧೈರ್ಯಲಕ್ಷ್ಮೀ, ವಿಜಯಲಕ್ಷ್ಮೀ, ಅವಳು ಮೋಕ್ಷಲಕ್ಷ್ಮಿಯೂ ಹೌದು.

ADVERTISEMENT

ಲಕ್ಷ್ಮೀ ಅಂದರೆ ಚಂಚಲೆ ಎಂದೇ ಹಲವರ ಅಭಿಪ್ರಾಯ. ವಿಷ್ಣುಪುರಾಣವು ಯಾರ ಬಳಿ ಲಕ್ಷ್ಮಿಯು ಶಾಶ್ವತವಾಗಿ ನೆಲಸುತ್ತಾಳೆ ಎಂದು ಈ ರೀತಿಯಾಗಿ ಹೇಳಿದೆ:

ಸುಶೀಲೋ ಭವ ಧರ್ಮಾತ್ಮಾ ಮೈತ್ರಃ ಪ್ರಾಣಿಹಿತೇ ರತಾಃ |
ನಿಮ್ನಂ ಯಥಾಪಃ ಪ್ರವಣಾಃ ಪಾತ್ರಮಾಯಾಂತಿ ಸಂಪದಃ ||

‘ನೀರು ಹೇಗೆ ತಗ್ಗಿರುವ ಕಡೆ ಹರಿಯುತ್ತದೆಯೋ, ಹಾಗೆಯೇ ಸಂಪತ್ತು ಯೋಗ್ಯನಾದವನ ಬಳಿ ಹರಿದು ಬರುತ್ತದೆ. ಯಾರು ಉತ್ತಮ ನಡೆಯುಳ್ಳವನು, ಧರ್ಮಾತ್ಮನು, ಎಲ್ಲರಲ್ಲಿ ಸ್ನೇಹವನ್ನು ಹೊಂದಿರುವವನು, ಸಕಲ ಜೀವಿಗಳಿಗೆ ಹಿತವಾಗುವಂತೆ ನಡೆದುಕೊಳ್ಳತ್ತಾನೆಯೋ ಅಂತಹವನ ಬಳಿ ಲಕ್ಷ್ಮಿಯು ಶಾಶ್ವತವಾಗಿ ನೆಲಸುತ್ತಾಳೆ’ ಎಂದು.

ಸುಖರಾತ್ರಿಕಾ: ಈ ರಾತ್ರಿಯನ್ನು ಸುಖರಾತ್ರಿಕಾ ಎಂದೂ ಕರೆಯುತ್ತಾರೆ. ಅಂದು ಮನೆಯಲ್ಲಿ ಉತ್ತರಾಭಿಮುಖವಾಗಿ ಲಕ್ಷ್ಮಿಯನ್ನು ಸ್ಥಾಪಿಸಿ, ಅವಳನ್ನು ಪೂಜಿಸುವುದರಿಂದ ಸುಖ-ಸಮೃದ್ಧಿ-ಸಂಪತ್ತುಗಳು ದೊರೆಯುತ್ತವೆ.

ಕಾಳೀಪೂಜೆ: ಬಂಗಾಳದಲ್ಲಿ ಅಂದು ರಾತ್ರಿ ಕಾಳೀಪೂಜೆಯನ್ನು ಮಾಡುತ್ತಾರೆ. ರಾತ್ರಿಯಿಡೀ ಮಾತೆಯನ್ನು ಪೂಜಿಸಿ, ಅರ್ಚಿಸಿ, ಅವಳ ಕೃಪೆಯನ್ನು ಬೇಡುತ್ತಾರೆ.

ಕುಬೇರನ ಪೂಜೆ: ಇದೇ ದಿನ ರಾತ್ರಿ ಕುಬೇರನನ್ನು ಕಲಶದಲ್ಲಿ ಆಹ್ವಾನಿಸಿ, ಪೂಜೆ ಮಾಡಬೇಕು ಎಂದು ಧರ್ಮಶಾಸ್ತ್ರಗಳು ತಿಳಿಸುತ್ತವೆ.

ಅಗ್ನಿಜ್ಯೋತೀ ರವಿಜ್ಯೋತೀಶ್ಚಂದ್ರ ಜ್ಯೋತಿಸ್ತಥೈವ ಚ |
ಉತ್ತಮಃ ಸರ್ವಜ್ಯೋತೀನಾಂ ದೀಪೋsಯಂ ಪ್ರತಿಗೃಹ್ಯತಾಮ್‌ ||

‘ಅಗ್ನಿ, ರವಿ, ಚಂದ್ರ ಮೊದಲಾದ ಜ್ಯೋತಿಗಳಿಗಿಂತ ಉತ್ತಮವಾದ ಈ ದೀಪಜ್ಯೋತಿಯನ್ನು ಸ್ವೀಕರಿಸು – ಎಂದು ಕುಬೇರನಿಗೆ ದೀಪವನ್ನು ಬೆಳಗಬೇಕು.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.