ಗಣೇಶ ಹಬ್ಬ
(ಪಿಟಿಐ ಚಿತ್ರ)
ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಪುರಾಣಗಳನ್ನು ಶ್ರವಣ ಮಾಡುವ ಪದ್ಧತಿಯಿದೆ. ಪುರಾಣಗಳ ಮೂಲಕ ನಿಗೂಢವಾದ, ಗಹನವಾದ ತತ್ವಗಳನ್ನು ಸರಳವಾಗಿ ಒಂದು ಪ್ರತೀಕದ ರೂಪದಲ್ಲಿ, ಕಥೆಯ ರೂಪದಲ್ಲಿ ನಿರೂಪಣೆ ಮಾಡುತ್ತಾರೆ. ಗಣಪತಿಯ ಕಥೆಯೂ ಅಂತಹದೇ ಗಹನವಾದ ಸಾಂಕೇತಿಕತೆಯನ್ನು ಹೊಂದಿರುವ ಒಂದು ಕಥೆ.
ಗಣಪತಿಯ ಕಥೆಯನ್ನು ಕೇಳಿದ ಬುದ್ಧಿವಂತರು ಇದೆಂಥ ಕಟ್ಟುಕತೆ ಎಂದುಕೊಳ್ಳುತ್ತಾರೆ. ಪಾರ್ವತಿ ಸ್ನಾನ ಮಾಡಲು ಹೋದಳು, ಸ್ನಾನಕ್ಕೆ ಮೊದಲು ಆಕೆ, ಮೈಮೇಲಿನ ಕೊಳೆಯನ್ನೆಲ್ಲ ತೆಗೆದು ಒಂದು ಗೊಂಬೆ ಮಾಡಿದಳು. ನಂತರ ಅದಕ್ಕೆ ಪ್ರಾಣ ಕೊಟ್ಟು ಅದನ್ನು ಬಾಗಿಲಲ್ಲಿ ಕೂರಿಸಿ, 'ಯಾರನ್ನೂ ಒಳಗೆ ಬಿಡಬೇಡ, ನಾನು ಸ್ನಾನಕ್ಕೆ ಹೋಗುತ್ತಿದ್ದೇನೆ' ಎಂದು ಪಾರ್ವತಿ ಹೇಳುತ್ತಾಳೆ. ಇದು ಆಭಾಸಕರ ಎಂದು ಅನ್ನಿಸಿ ಹಲವು ಪ್ರಶ್ನೆಗಳು ಎದುರಾಗುವುದು ಸಹಜ. ಮೈಮೇಲಿನ ಕೊಳೆಯನ್ನು ತೆಗೆದ ಮೇಲೆ ಮತ್ತೆ ಯಾಕೆ ಸ್ನಾನ ಮಾಡಬೇಕು? ಒಂದು ಮಗುವಿನ ಗೊಂಬೆ ಮಾಡುವಷ್ಟು ಮಲ ಅವಳ ಮೈಯಲ್ಲಿ ಸಂಗ್ರಹವಾಗಿತ್ತೇ? ಅವಳು ದಿನನಿತ್ಯ ಸ್ನಾನಮಾಡುತ್ತಿರಲಿಲ್ಲವೇ?
ನಂತರ ಅವನ ಅಪ್ಪ, ಶಿವ ಬಂದ. ಆ ಮಗ ಶಿವನನ್ನು ತಡೆದನಂತೆ, ಶಿವನಿಗೆ ತಡೆಯಲಸಾಧ್ಯವಾದ ಕೋಪ ಬಂದಿತಂತೆ. ಆ ಮಗುವಿನ ತಲೆಯನ್ನೇ ಕತ್ತರಿಸಿಬಿಟ್ಟನಂತೆ. ಜಗತ್ತಿಗೇ ಒಡೆಯನಾದ ತ್ರಿಕಾಲಜ್ಞಾನಿಯಾದ ಶಿವನಿಗೇ ಕೋಪ ತಡೆಯಲಾಗಲಿಲ್ಲವೆಂದರೇನು? ಕೊನೆಗೆ, ಎದುರಿಗಿರುವುದು ಚಿಕ್ಕ ಮಗು ಎಂದೂ ನೋಡಲಿಲ್ಲ. ಸರ್ವಜ್ಞನಾದ ಶಿವನಿಗೆ ಈ ಹುಡುಗ ಯಾರು ಎಂದು ತಿಳಿಯಲಿಲ್ಲವೇ? ಇಲ್ಲಿ ಕುಳಿತಿರುವವನು ನಮ್ಮದೇ ಮಗ ಎಂದು ಶಿವನಿಗೆ ಹೊಳೆಯಲಿಲ್ಲವೇ? ಇದಕ್ಕಿಂತ ಆಭಾಸಕರವಾದುದು ಇನ್ನೊಂದಿರಲಿಕ್ಕಿಲ್ಲ. ಶಿವನಿಗೆ ಮಾನವೀಯತೆಯೇ ಇಲ್ಲವೆಂದ ಮೇಲೆ ದೈವತ್ವ ಎಲ್ಲಿಂದ ಬಂದೀತು? ಶಿವನದ್ದು ರಾಕ್ಷಸೀ ಗುಣವಾಯಿತಲ್ಲ!
ನಂತರ ಪಾರ್ವತಿ ಬಂದು ಗೋಳೋ ಎಂದು ಅಳುತ್ತಾಳೆ. ಆಗ ಶಿವ ತನ್ನ ಗಣಗಳನ್ನು ಕರೆದು ಯಾರು ಉತ್ತರಕ್ಕೆ ತಲೆಯಿಟ್ಟು ಮಲಗಿದ್ದಾರೋ ಅವರ ತಲೆ ಕತ್ತರಿಸಿ ತೆಗೆದುಕೊಂಡು ಬನ್ನಿ ಎಂದು ಆಜ್ಞಾಪಿಸುತ್ತಾನೆ. ಉತ್ತರಕ್ಕೆ ತಲೆಯಿಟ್ಟು ಮಲಗಿದವರ ತಲೆಯೇ ಏಕೆ ಬೇಕು? ಜಗತ್ತನ್ನೇ ನಿರ್ಮಾಣ ಮಾಡಿದವನಿಗೆ ಅದೇ ತಲೆಯನ್ನು ದೇಹಕ್ಕೆ ಜೋಡಿಸಲು ಅಸಾಧ್ಯವಾಗುತ್ತಿತ್ತೆ?
ಗಣಗಳೆಲ್ಲ ಇಡೀ ಜಗತ್ತನ್ನೇ ಜಾಲಾಡಿದರೂ ಉತ್ತರಕ್ಕೆ ತಲೆಯಿಟ್ಟು ಮಲಗಿದವರು ಯಾರೂ ಕಾಣಿಸಲಿಲ್ಲ. ಆದರೆ ಒಂದು ಆನೆ ಮಾತ್ರ ಉತ್ತರಕ್ಕೆ ತಲೆಯಿಟ್ಟು ಮಲಗಿತ್ತು. ಅದನ್ನೇ ಕತ್ತರಿಸಿ ತೆಗೆದುಕೊಂಡು ಬಂದರಂತೆ. ಒಂದು ಆನೆಯ ತಲೆಯನ್ನು ಪುಟ್ಟ ಮಗುವಿನ ದೇಹಕ್ಕೆ ಹೊಂದಿಸುವುದಾದರೂ ಹೇಗೆ ಎಂದೂ ಅವರಿಗೆ ಹೊಳೆಯಲಿಲ್ಲ. ಇವೆಲ್ಲ ಅಸಂಗತ ಎನ್ನಿಸಿ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ನಾವು ಪೂಜಿಸುವ ದೇವರ ಬಗ್ಗೆ ಈ ಬಗೆಯ ಪ್ರಶ್ನೆಗಳನ್ನು ಕೇಳಿದರೆ ನಮ್ಮಲ್ಲಿ ಉತ್ತರವೇ ಇರುವುದಿಲ್ಲ. ನಮ್ಮ ಹಿಂದಿನವರು ಉದ್ದೇಶವಿಲ್ಲದೆ ಇಂತಹ ಕತೆಗಳನ್ನು ಹೆಣೆಯುವಷ್ಟು ದಡ್ಡರಲ್ಲ. ಇದರ ಹಿಂದೆ ಏನೋ ರಹಸ್ಯವಿದೆ. ನಮ್ಮ ಪೂರ್ವಜರು ಈ ರಹಸ್ಯವನ್ನು ಕತೆಯ ಮೂಲಕ ಸಾಂಕೇತಿಕವಾಗಿ ತಿಳಿಸಿದ್ದಾರೆ.
ಪಾರ್ವತಿ ಎಂದರೆ ಪ್ರಕೃತಿ. ಪ್ರಕೃತಿಯಲ್ಲಿ ಉತ್ಸವ ಉಂಟಾದಾಗ ಅದರ ಅಂಗವಾಗಿ ಅನೇಕ ವಿಘ್ನಗಳು ಎದುರಾಗುತ್ತವೆ. ಇವುಗಳನ್ನು ಆಯಾ ಉತ್ಸವದ ಮಲ ಎಂದು ಪರಿಗಣಿಸಲಾಗಿದೆ. ಪ್ರಕೃತಿಯಲ್ಲಿ ಮಲ ಉಂಟಾಗುವುದು ಸಹಜ ಹಾಗೂ ಸಾಧಾರಣ. ಮಲ ಅಥವಾ ಮಲಿನತೆ ಎಂದರೆ ಶುದ್ಧತೆಯಲ್ಲಿ ಅಶುದ್ಧತೆಯ ಮಿಶ್ರಣವಾಗಿರುವುದು.
ಉದಾಹರಣೆಗೆ, ನೀರೂ ಶುದ್ಧವಾಗಿರುತ್ತದೆ, ಮಣ್ಣೂ ಶುದ್ಧವಾಗಿರುತ್ತದೆ. ಆದರೆ ನೀರಿನ ಜೊತೆ ಮಣ್ಣು ಬಂದರೆ ಅದನ್ನು ಅಶುದ್ಧ ನೀರು ಎನ್ನುತ್ತೇವೆ. ಮಣ್ಣಿನ ಜೊತೆ ನೀರು ಸೇರಿಕೊಂಡರೆ ಅದನ್ನು ಕೊಚ್ಚೆಮಣ್ಣು ಎನ್ನುತ್ತೇವೆ. ಹೀಗೆ, ಒಂದರಲ್ಲಿ ಇನ್ನೊಂದು ಬೆರೆತಾಗ ಮಲ ಉಂಟಾಗುತ್ತದೆ.
ಪ್ರಕೃತಿಯ ಸ್ವಭಾವವೇ ಮಲಿನವಾಗುವುದು. ಬುದ್ಧಿ, ಮನಸ್ಸು, ಚಿತ್ತ, ಅಹಂಕಾರ ಮುಂತಾದ ಅಷ್ಟವಿಧ ಪ್ರಕೃತಿ; ಪರಾಪ್ರಕೃತಿ ಮತ್ತು ಅಪರಾಪ್ರಕೃತಿಗಳಲ್ಲಿ ಮಲ, ಆವರಣ, ವಿಕ್ಷೇಪ ಬರುವುದು ಸಹಜ. ಮಲದ ಈ ವಿಕ್ಷೇಪದಿಂದ ಮತ್ತೆ ಮತ್ತೆ ಶುದ್ಧತೆಯ ಕಡೆಗೆ ಹೋಗುವುದು ಚೈತನ್ಯದ ಸ್ವಭಾವ.
ಈ ಚೈತನ್ಯವು ಶಾಂತವಾದ ಶಿವತತ್ವ ಮತ್ತು ಪ್ರಕೃತಿತತ್ವಗಳ ನಡುವೆ ಅವರೋಧವನ್ನು ತಂದಿಟ್ಟಾಗ ಆ ಅವರೋಧವನ್ನು ದೂರ ಮಾಡಲು ಶಿವನಿಗೆ ಮಾತ್ರ ಸಾಧ್ಯ. 'ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ' ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಈ ಮಾಯೆಯು ದೈವೀ ಗುಣದಿಂದ ತುಂಬಿದೆ. ಇದರಿಂದ ಪಾರಾಗುವುದು ಸುಲಭವಲ್ಲ, ಹಾಗೆ ಪಾರು ಮಾಡುವುದು ನನ್ನಿಂದ ಮಾತ್ರ ಸಾಧ್ಯ. ನನ್ನ ಕೃಪೆಯಿಂದ ಮಾತ್ರ ಅದರಿಂದ ಪಾರಾಗಬಹುದು.
ಪ್ರಕೃತಿಯಾದ ಪಾರ್ವತಿ ಮತ್ತು ಪುರುಷನಾದ ಶಿವನ ನಡುವೆ ಬಂದವನು ವಿಘ್ನರಾಜ, ಗಣಪತಿ. ಗಣಪತಿ ಅಥರ್ವಶೀರ್ಷದಲ್ಲಿ 'ತ್ವಂ ಬ್ರಹ್ಮಸ್ತ್ವಂ ವಿಷ್ಣುಸ್ತ್ವಂ, ರುದ್ರಸ್ತ್ವಂ, ಅಗ್ನಿಸ್ತ್ವಂ, ವಾಯುಸ್ತ್ವಂ, ಸೂರ್ಯಸ್ತ್ವಂ, ಚಂದ್ರಸ್ತ್ವಂ, ಇಂದ್ರಸ್ತ್ವಂ' ಎಂದು ಸ್ತುತಿಸುತ್ತೇವೆ. ಪ್ರಜಾಪತಿ, ಸೂರ್ಯ, ಚಂದ್ರ, ಅಗ್ನಿ, ವಾಯು, ಜಲ ಈ ಎಲ್ಲ ರೂಪಗಳಲ್ಲೂ ಇರುವವನು ನೀನೇಎಂದು ಹೇಳುತ್ತಾ ಕೊನೆಗೆ 'ತ್ವಂ ಸಾಕ್ಷಾತ್ ಆತ್ಮಾಸಿ' ನೀನು ನನ್ನ ಆತ್ಮವೇ ಆಗಿರುವೆ ಎಂದು ಸ್ತುತಿಸುತ್ತೇವೆ. ಹೀಗಿರುವಾಗ, ಶಿವ ಬಂದ ಎಂದರೆ ಆ ಶಿವನಿಂದಲೇ ಮಾಯೆ ದೂರವಾಯಿತು ಎಂದರ್ಥ. ತಲೆಯು ಮಾಯೆಯನ್ನು ಸಂಕೇತಿಸುತ್ತದೆ. ತಲೆಯಲ್ಲಿರುವ ಚಿಕ್ಕ ಬುದ್ಧಿ, ಚಿಕ್ಕ ಮನಸ್ಸುಗಳನ್ನು ತರಿದು ಹಾಕಿ ದೊಡ್ಡ ಬುದ್ಧಿ, ದೊಡ್ಡ ಮನಸ್ಸನ್ನು ಕೊಟ್ಟ. ಈ ದೊಡ್ಡ ಮನಸ್ಸಿನ ಸಂಕೇತ ಆನೆಯ ತಲೆ.
ಆನೆಯ ತಲೆಯಲ್ಲಿ ಅನೇಕ ವಿಶೇಷಗಳಿವೆ. ಆನೆಗೆ ತಲೆಯಲ್ಲಿಯೇ ಜ್ಞಾನೇಂದ್ರಿಯವೂ ಇದೆ, ಕರ್ಮೇಂದ್ರಿಯವೂ ಇದೆ. ಆನೆಯು ಕಣ್ಣು, ಕಿವಿಗಳಿಂದ ಗ್ರಹಿಸುತ್ತದೆ, ಸೊಂಡಿಲಿನಿಂದ ಆಘ್ರಾಣಿಸುತ್ತದೆ, ಕೆಲಸವನ್ನೂ ಮಾಡುತ್ತದೆ. ಉತ್ತರಕ್ಕೆ ತಲೆಯಿಟ್ಟು ಮಲಗಿದೆ ಅಂದರೆ ಯಾವ ತಲೆಯಲ್ಲಿ ಪ್ರಶ್ನೆಗಳಿರುವುದಿಲ್ಲವೋ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಕೊಡಬಲ್ಲ ಜ್ಞಾನವನ್ನು ಹೊಂದಿದ ತಲೆ. ಈ ಬೃಹತ್ ತಲೆಯು ಸಿದ್ಧಿ, ಬುದ್ಧಿ ಎರಡನ್ನೂ ಹೊಂದಿರುವ ತತ್ವವನ್ನು ಪ್ರತಿಪಾದಿಸುತ್ತದೆ. ಶಿವ ಆ ತಲೆಯನ್ನು ಜೋಡಿಸಿದ ಎಂದರೆ ಈ ಪ್ರಪಂಚದಲ್ಲಿ ನಾವು ಯಶಸ್ವಿಯಾಗಲು ಅಧ್ಯಾತ್ಮದಲ್ಲಿ ಪ್ರಗತಿಯನ್ನು ಪಡೆಯಲು ಕೂಡ ಭಗವಂತನ ಕೃಪೆಯಿರಬೇಕು.
ಆ ಭಗವಂತನ ಸ್ವರೂಪವೇ ಗಣಪತಿ. ಗಣಗಳಿಗೆಲ್ಲ ಅಧಿಪತಿಯಾದವನು ಗಣಪತಿ. ಈ ಪ್ರಪಂಚವೇ ಗಣಗಳಿಂದ ತುಂಬಿಕೊಂಡಿದೆ. ಗಣ ಎಂದರೆ ಗುಂಪು. ಬೇರೆಬೇರೆ ಅಣುಗಳ ಗುಂಪುಗಳಿಂದ ಈ ಜಗತ್ತು ನಿರ್ಮಾಣವಾಗಿದೆ. ಒಂದು ಅಣುಗಳ ಗುಂಪನ್ನು ಚಿನ್ನ ಎಂದೂ ಇನ್ನೊಂದು ಅಣುಗಳ ಗುಂಪನ್ನು ಕಬ್ಬಿಣ ಎಂದೂ ಕರೆಯುತ್ತೇವೆ. ಹೀಗೆ, ಇತರ ಕೆಲವು ಅಣುಗಳ ಗುಂಪನ್ನು ಅಕ್ಕಿ, ಗೋಧಿ, ಧಾನ್ಯ ಎಂದೆಲ್ಲಾ ಕರೆಯುತ್ತೇವೆ. ಜಗತ್ತಿನಲ್ಲಿ ಎಷ್ಟು ದ್ರವ್ಯಗಳಿವೆಯೋ ಅವೆಲ್ಲವೂ ಗಣಗಳೇ. ಎಷ್ಟು ವಿಧದ ಬುದ್ಧಿಗಳಿವೆಯೋ ಅವೆಲ್ಲವೂ ಗಣಗಳು. ಈ ಗಣಗಳಿಗೆಲ್ಲ ಅಧಿಪತಿಯಾಗಿರುವವನು, ಗಣಪತಿ.
ಪ್ರಕೃತಿ ಮತ್ತೆ ಪರಮಾತ್ಮನ, ಅಂದರೆ ಪ್ರಕೃತಿ ಮತ್ತು ಪುರುಷನ ಸಂಯೋಗದಿಂದ ಉಂಟಾಗಿರುವ ಈ ದೈವೀಶಕ್ತಿಗೆ ಗಣಪತಿ ಎಂದು ಹೆಸರಿಸಿ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳುವ ಮೊದಲು ವಂದನೆ ಮಾಡುವುದು ಸಂಪ್ರದಾಯ. ಗಣಗಳಿಂದ ತುಂಬಿದ ಈ ಪ್ರಪಂಚದಿಂದ ಮುಕ್ತಿ ನೀಡಿ ಈಶ್ವರ ಪ್ರಾಪ್ತಿಯನ್ನು ಸಾಧ್ಯ ಮಾಡುವುದು ಗಣಪತಿತತ್ವ.
ಗೌರೀದೇವಿ:
ವಿನಾಯಕ ಚತುರ್ಥಿಯ ದಿನ ಗಣಪತಿಯನ್ನು ನಾವು ಬರಮಾಡಿಕೊಳ್ಳುತ್ತೇವೆ. ಆದರೆ, ಅದಕ್ಕಿಂತ ಮೊದಲು ಶುಭ್ರವಾಗಿ ಹೊಳೆಯುವ ಗೌರಿ ಬರುತ್ತಾಳೆ. ಈಕೆ ಶಕ್ತಿಸ್ವರೂಪಿಣಿ. ಸತ್ವ, ರಜ ಮತ್ತು ತಮೋಗುಣಗಳು ಸೇರಿ ಪ್ರಕೃತಿ ಉಂಟಾಗಿದೆ. ಅದೇ ರೀತಿ, ದೇವಿಯಲ್ಲಿಯೂ ಎಲ್ಲಾ ಗುಣಗಳೂ ಅಡಕವಾಗಿವೆ. ಗೌರಿಯರಲ್ಲಿ ಅನೇಕ ವಿಧದ ಗೌರಿಯರಿದ್ದಾರೆ. ಕಾಳಿ ಎನ್ನುವುದೂ ಒಂದು ರೂಪ. ಕಾಳಿಯನ್ನು ಗೌರೀದೇವಿ ಸಮುದ್ಭವಾ – ಗೌರಿಯ ಶರೀರದಿಂದ ಹುಟ್ಟಿದವಳು ಎನ್ನುತ್ತಾರೆ. ಹೀಗೆ ಅನೇಕ ರೀತಿಯಿಂದ ಪ್ರಕಟವಾಗುವ ಶಕ್ತಿಯು ಸ್ವರ್ಣದಂತೆ ಹೊಳೆಯುತ್ತಾಳೆ, ಆದುದರಿಂದ ಆಕೆ ಸ್ವರ್ಣಗೌರಿ. ಆಕೆ ಸಕಲ ಸಮೃದ್ಧಿಯನ್ನು ತಂದುಕೊಡುತ್ತಾಳೆ ಎಂಬುದು ಇದರ ಅರ್ಥ.
ಸ್ವರ್ಣಗೌರಿಯು ಕೇವಲ ಹಣ, ಹೊನ್ನು ಕೊಡುತ್ತಾಳೆ ಎಂದು ಭಾವಿಸಬಾರದು. ಆಕೆ ಚಿನ್ನದಂತೆ ಹೊಳೆಯುವ ಬುದ್ಧಿಯನ್ನೂ, ಪ್ರಸನ್ನ ಮನಸ್ಸನ್ನೂ, ಮಧುರವಾದ ವ್ಯವಹಾರವನ್ನೂ ನಮಗೆ ದಯಪಾಲಿಸುತ್ತಾಳೆ.
ಮನೆಗೆ ಹೆಣ್ಣುಮಕ್ಕಳು ಬಂದಾಗಲೆಲ್ಲ ತಾಯಿ ಹೆಣ್ಣುಮಕ್ಕಳಿಗೆ ಮಡಿಲು ತುಂಬುವುದು, ಮೊರಬಾಗಿನ ಕೊಡುವುದು ಕರ್ನಾಟಕದ ಪದ್ಧತಿ. ಇದು ಆಧ್ಯಾತ್ಮಿಕ ರಹಸ್ಯವನ್ನೂ ಜೀವನದ ಸಿದ್ಧಾಂತವನ್ನೂ ನಿರೂಪಿಸಲಿಕ್ಕಾಗಿ ಮಾಡಿದ ಪದ್ಧತಿ.
ಈ ಮೊರಬಾಗಿನ ಕೊಡುವ ಪದ್ಧತಿಯ ಹಿಂದೆ ಒಂದು ರಹಸ್ಯ ಅಡಗಿದೆ. ನಾವು ಬೇರೆಯವರಿಗೆ ಕೊಡುವುದನ್ನು ಮುಚ್ಚಿಟ್ಟು ಕೊಡುತ್ತೇವೆ; ಬಿಚ್ಚಿಕೊಡುವುದಿಲ್ಲ. ಮನವನ್ನು ಬಿಚ್ಚಿ, ತೆರೆದು ಸ್ವೀಕರಿಸುತ್ತೇವೆ. ಒಂದು ಮಹಿಳೆಗೆ ಅಗತ್ಯವಾದ ಸೀರೆ, ಕುಪ್ಪಸ, ಬಳೆ, ಕನ್ನಡಿ, ಅಕ್ಕಿ, ಬೇಳೆ ಮುಂತಾದ ಶೃಂಗಾರ ಹಾಗೂ ಆಹಾರ ಸಾಮಗ್ರಿಗಳನ್ನು ಮೊರದ ಮೇಲೆ ಇಟ್ಟು ನಂತರ ಅದನ್ನು ಒಂದು ಬಟ್ಟೆಯಿಂದ ಮುಚ್ಚಿ ರಹಸ್ಯವಾಗಿ ಕೊಡುತ್ತಾರೆ. ಕೊಡುವಾಗ ಅದನ್ನು ಅಲುಗಾಡಿಸಿ ಅಲುಗಾಡಿಸಿ ಕೊಡುತ್ತಾರೆ.
'ನೀವು ಬಾಗಿನವನ್ನು ಸ್ವೀಕರಿಸಿ, ಆದರೆ, ಕೊಡುವವನು ಒಬ್ಬನೇ, ಕೊಡುವ ತಾಯಿ ಒಬ್ಬಳೇ. ನಾವು ಕೇವಲ ಕೊಡುವ ಆಟ ಆಡುತ್ತಿದ್ದೇವೆ' ಎಂಬುದರ ಸಂಕೇತವಾಗಿ ಅಲುಗಾಡಿಸಿ, ಅಲುಗಾಡಿಸಿ ಕೊಡುತ್ತಾರೆ. ಇದು ಕೇವಲ ಕೊಡುವ ಆಟ. ಕೊಡುತ್ತಿದ್ದೇವೆ ಎಂಬ ಅಹಂಕಾರ ಬೇಡ. ಇವೆಲ್ಲ ನಿಮ್ಮದೇ ಎಂಬುದನ್ನು ಸೂಚಿಸಲು ಮುಚ್ಚಿದ ಬಟ್ಟೆಯನ್ನು ಕೊಂಚ ತೆರೆದು ನೋಡಿ ಮತ್ತೆ ಅದನ್ನು ಮುಚ್ಚಿ ಕೊಡುವುದು ಮೊರಬಾಗಿನ ಕೊಡುವ ಪದ್ಧತಿ.
ಮದುವೆ, ಉತ್ಸವ ಮುಂತಾದ ಸಮಾರಂಭಗಳಲ್ಲಿ ಕಲಶ ಕನ್ನಡಿ ಹಿಡಿಯುವ ಪದ್ಧತಿಯ ಹಿಂದೆಯೂ ಆದರ್ಶ ತತ್ತ್ವವಿದೆ. ನಾವು ಯಾರನ್ನು ಬರಮಾಡಿಕೊಳ್ಳುತ್ತೇವೋ ಅವರಿಗೆ ಕನ್ನಡಿ ತೋರಿಸುತ್ತೇವೆ. ನಿಮ್ಮ ಪ್ರಸನ್ನ ಮುಖವನ್ನು ಒಮ್ಮೆ ನೋಡಿಕೊಳ್ಳಿ, ನಾವೆಲ್ಲರೂ ದರ್ಪಣದ ಹಾಗೆ. ಇಡೀ ವಿಶ್ವವೇ ನಮಗೆ ದರ್ಪಣದಂತೆ. ವಿಶ್ವಂ ದರ್ಪಣದೃಶ್ಯಮಾನ ನಗರಿ – ಇಡೀ ವಿಶ್ವವು ಕನ್ನಡಿಯಲ್ಲಿ ಕಾಣುವ ನಗರಿಯ ಹಾಗೆ ಎಂಬುದನ್ನು ಸಾಂಕೇತಿಕವಾಗಿ ಸೂಚಿಸುತ್ತೇವೆ.
ಇನ್ನೊಂದು ರೀತಿಯಲ್ಲಿ ನೋಡುವುದಾದರೆ, 'ನಮ್ಮ ಮನಸ್ಸು ಕನ್ನಡಿಯ ಹಾಗಿದೆ, ಇದು ಪೂರ್ಣವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತಿದ್ದೇವೆ' ಎಂಬ ವಿಚಾರವನ್ನು ಸೂಚಿಸಲು ಬೀಗರನ್ನು ಎದುರುಗೊಳ್ಳುವಾಗ ಕಲಶಕನ್ನಡಿ ಹಿಡಿಯುತ್ತಾರೆ. ಗೌರಿಪೂಜೆ ಮಾಡಿದ ನಂತರ ಕಲಶಕನ್ನಡಿ ಹಿಡಿದುಕೊಂಡು ಹೋಗುವುದರ ಹಿಂದಿನ ರಹಸ್ಯವೂ ಇದೇ. ನಾವು ಪೂರ್ಣರಾಗಿದ್ದೇವೆ. ನಮ್ಮ ಮನಸ್ಸು ಕನ್ನಡಿಯಂತೆ ಶುಭ್ರವಾಗಿದೆ. ನಮ್ಮಲ್ಲಿ ಒಳ್ಳೆಯದನ್ನು ಕಂಡರೆ ನೀವು ನಿಮ್ಮ ಮುಖ ನೋಡಿದಂತೆ, ಕೆಟ್ಟದ್ದನ್ನು ಕಂಡರೂ ನೀವು ನಿಮ್ಮ ಮುಖವನ್ನೇ ಕಂಡಂತಾಗುತ್ತದೆ ಎಂಬುದು ಇದರ ಹಿಂದಿನ ತತ್ವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.