ADVERTISEMENT

ಇಂದು ಗಣೇಶ ಚತುರ್ಥಿ: ಗಣೇಶನ ಕುಟುಂಬ ಪ್ರೀತಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 30 ಆಗಸ್ಟ್ 2022, 19:30 IST
Last Updated 30 ಆಗಸ್ಟ್ 2022, 19:30 IST
ಗಣೇಶ ಮೂರ್ತಿ
ಗಣೇಶ ಮೂರ್ತಿ   

ಒಮ್ಮೆ ಕೈಲಾಸದಲ್ಲಿ ಶಿವ ಮತ್ತು ಪಾರ್ವತಿ ಕುಳಿತಿದ್ದಾರೆ; ನಡುವೆ ಅವರ ಮುದ್ದಿನ ಮಗ ಗಣೇಶನನ್ನೂ ಕುಳ್ಳಿರಿಸಿಕೊಂಡಿದ್ದಾರೆ. ತಂದೆ–ತಾಯಿಗಳಿಗಿಬ್ಬರಿಗೂ ಏಕಕಾಲದಲ್ಲಿ ಒಂದು ಆಸೆ ಮೂಡಿದೆ – ಮಗನನ್ನು ಮುದ್ದಿಸಬೇಕು ಎಂದು. ಈ ಸಂಗತಿಯನ್ನು ಗಣೇಶ ಅದು ಹೇಗೋ ಗ್ರಹಿಸಿದ್ದಾನೆ. ಒಂದು ಕಡೆಯಿಂದ ಅಪ್ಪ, ಇನ್ನೊಂದು ಕಡೆಯಿಂದ ಅಮ್ಮ – ಗಣೇಶನ ಆ ಕಡೆ ಕೆನ್ನೆಗೆ, ಈ ಕಡೆ ಕೆನ್ನೆಗೆ ಮತ್ತು ಕೊಡಲು ಮುಂದಾದರು. ಇನ್ನೇನು ಅವರಿಬ್ಬರ ತುಟಿಗಳು ಗಣೇಶನ ಕೆನ್ನೆಗಳನ್ನು ಸ್ಪರ್ಶಿಸಬೇಕು – ಅಷ್ಟರಲ್ಲಿ ಅವನು ತನ್ನ ಮುಖವನ್ನು ಸ್ವಲ್ಪ ಹಿಂದಕ್ಕೆ ಸೆಳೆದುಕೊಂಡ! ಮಗನಿಗೆ ಮುತ್ತು ಕೊಡಲು ಬಂದ ದಂಪತಿ ಈಗ ಪರಸ್ಪರ ಮುತ್ತನ್ನು ಕೊಟ್ಟುಕೊಳ್ಳುವಂತಾಯಿತು!

ಸಂಸ್ಕೃತ ಪದ್ಯವೊಂದರ ತಾತ್ಪರ್ಯವಿದು.

ನಮ್ಮ ಸಂಸ್ಕೃತಿಯಲ್ಲಿ ದೇವತೆಗಳನ್ನೂ ನಮ್ಮ ಹಾಸ್ಯಕ್ಕೂ ವಿಮರ್ಶೆಗೂ ಪ್ರೀತಿಗೂ ಕ್ರೋಧಕ್ಕೂ ಬಳಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ನಮ್ಮ ಆಶಯಗಳು, ಆಲೋಚನೆಗಳು, ಮೌಲ್ಯಗಳು, ಔದಾರ್ಯಗಳು ದೇವತೆಗಳ ಕಲ್ಪನೆಯಲ್ಲಿ ಸಹಜವಾಗಿಯೇ ಪ್ರತಿಫಲನಗೊಳ್ಳುತ್ತವೆ. ಈ ಆತ್ಮವಿಸ್ತರಣದ ಭಾಗವಾಗಿ ತೋರಿಕೊಂಡಿರುವ ದೇವತೆಗಳಲ್ಲಿ ಗಣೇಶನಿಗೆ ತುಂಬ ವಿಶಿಷ್ಟವಾದ ಸ್ಥಾನವಿದೆ.

ADVERTISEMENT

ಮೇಲಣ ಪದ್ಯವನ್ನು ಮೆಲುಕು ಹಾಕುವಾಗ ಒಂದು ಕುಟುಂಬದ ಚಿತ್ರ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಈ ಕುಟುಂಬವಾದರೂ ಆದರ್ಶದ ಕುಟುಂಬ, ಸುಖೀ ಕುಟುಂಬ. ಗಣೇಶತತ್ತ್ವದ ಪ್ರಧಾನ ಸಂದೇಶವೇ ಇದು: ನಮ್ಮ ಕೌಟುಂಬಿಕ ಜೀವನ ಸುಖವಾಗಿರಬೇಕು. ಶಿವನ ಸಂಸಾರ ಎಂದರೆ ಅದು ಆದರ್ಶದ ಸಂಸಾರ. ಎಷ್ಟೆಲ್ಲ ಇಜ್ಜೋಡುಗಳು ನಡುವೆಯೂ ಸಾಮರಸ್ಯವನ್ನೂ ಆನಂದವನ್ನೂ ಸಾಧಿಸಿರುವ ಕುಟುಂಬವದು. ಶಿವನ ವಾಹನ ಎತ್ತು, ಪಾರ್ವತಿಯ ವಾಹನ ಸಿಂಹ; ಗಣಪತಿಯ ವಾಹನ ಇಲಿ, ಸುಬ್ರಹ್ಮಣ್ಯನ ವಾಹನ ನವಿಲು; ಶಿವನ ಆಭರಣ ಹಾವು; ಇಷ್ಟನ್ನು ನೋಡಿದರೂ ಸಾಕು, ಜಗತ್ತಿನ ಸಮಸ್ಯೆಗಳೆಲ್ಲವೂ ಏಕತ್ರ ಸೇರಿಕೊಂಡಿರುವುದು ಎದ್ದುಕಾಣುತ್ತದೆ. ಆದರೆ ಶಿವನ ಪರಿವಾರ ಇಷ್ಟೆಲ್ಲ ವೈರಗಳನ್ನು ಹತ್ತಿರದಲ್ಲಿಯೇ ಇಟ್ಟುಕೊಂಡಿದ್ದರೂ ಅದು ಸಾಮರಸ್ಯದಿಂದಿದೆ, ಸಂತೋಷದಿಂದಿದೆ. ಮಾತ್ರವಲ್ಲ, ಬೇರೆಯವರಿಗೂ ಅಭಯ–ಆನಂದಗಳನ್ನು ನೀಡುತ್ತಿದೆ. ಈ ಕುಟುಂಬದ ಕೌಟುಂಬಿಕ ಪ್ರೀತಿಗೆ ಸಂಕೇತದಂತಿದೆ, ಗೌರೀ–ಗಣೇಶ ಹಬ್ಬ. ತಾಯಿಯೊಬ್ಬಳೇ ತವರಿಗೆ ಬಂದದ್ದು ತಿಳಿದು ಗಣೇಶ ಕೂಡಲೇ ಇಲ್ಲಿಗೆ ಓಡಿಬರುತ್ತಾನೆ; ತಾಯಿ ಇರುವಷ್ಟು ದಿನ ಅವಳೊಂದಿಗೆ ಉಳಿಯುತ್ತಾನೆ; ಬಳಿಕ ಜೊತೆಯಲ್ಲಿಯೇ ಜೋಪಾನವಾಗಿ ಮನೆಗೆ ಕರೆದುಕೊಂಡುಹೋಗುತ್ತಾನೆ.

ನಮ್ಮ ಜೀವನದ ಹಲವು ಆಯಾಮಗಳ ಮೀಮಾಂಸೆಯನ್ನು ಗಣೇಶನ ಕಲ್ಪನೆಯಲ್ಲಿ ಕಾಣುತ್ತೇವೆ. ನಾವು ಜಗತ್ತಿಗೆ ಕಿವಿಯಾಗಬೇಕು ಎಂಬದುನ್ನು ಅವನ ಕಿವಿಗಳು ಸಂಕೇತಿಸುತ್ತವೆ. ಅವನ ಸೊಂಡಿಲು ಅದು ಪ್ರಣವಕ್ಕೆ ಸಂಕೇತ. ಅವನ ದೊಡ್ಡ ಶರೀರವನ್ನು ಇಲಿಯಂಥ ಸಣ್ಣ ಜೀವಿ ಹೊರುತ್ತಿದೆ; ದೊಡ್ಡದು–ಸಣ್ಣದು ಎಂಬುದು ಸಾಪೇಕ್ಷ ಎನ್ನುತ್ತಿದೆ. ಅವನು ಸೊಂಟಕ್ಕೆ ಸುತ್ತಿಕೊಂಡಿರುವ ಹಾವು ಅದು ಸಾಧನೆಗೆ ಸಂಕೇತ. ಅವನು ಬ್ರಹ್ಮಚಾರಿಯೇ ಹೌದು; ಆದರೆ ಸಿದ್ಧಿ–ಬುದ್ಧಿಗಳನ್ನೇ ಅವನು ವರಿಸಿದ್ದಾನೆ. ಆದಿದಂಪತಿಗಳನ್ನೇ ತನ್ನ ತುಂಟಾಟಕ್ಕೆ ವಸ್ತುವಾಗಿಸಿಕೊಂಡವನು ಗಣೇಶ. ಆದರೆ ಅಪಹಾಸ್ಯ ಮಾಡಿದ ಚಂದ್ರನನ್ನು ಅವನು ಶಪಿಸಿದೆ ಬಿಡಲಿಲ್ಲ.

ಒಟ್ಟಿನಲ್ಲಿ ಗಣೇಶ ಹಬ್ಬದ ದಿನ ಅವನ ತತ್ತ್ವಗಳ ಅನುಸಂಧಾನವೂ ನಡೆಯಬೇಕು; ಆಗ ನಮ್ಮ ಜೀವನವು ಸತ್ಯ ಶಿವ ಸುಂದರಗಳ ನೆಲೆಯಾಗುವುದು ಖಂಡಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.