ADVERTISEMENT

Ganesh Festival: ಗಣಪ ಸೌಹಾರ್ದ ಸಂಭ್ರಮ...

ರಾಹುಲ ಬೆಳಗಲಿ
Published 23 ಆಗಸ್ಟ್ 2025, 23:30 IST
Last Updated 23 ಆಗಸ್ಟ್ 2025, 23:30 IST
ಕಾರವಾರದ ಕೋಣೆವಾಡಾದ ಅಂಬೇಡ್ಕರ್ ಭವನದ ಎದುರು ಕಳೆದ ವರ್ಷ ಗಣೇಶ ಮೂರ್ತಿ ವಿಸರ್ಜನೆಗೂ ಮುನ್ನ ಹಿಂದೂ, ಮುಸ್ಲಿಂ  ಯುವಕರು ಒಟ್ಟಾಗಿ ಸೇರಿದ್ದರು.
ಕಾರವಾರದ ಕೋಣೆವಾಡಾದ ಅಂಬೇಡ್ಕರ್ ಭವನದ ಎದುರು ಕಳೆದ ವರ್ಷ ಗಣೇಶ ಮೂರ್ತಿ ವಿಸರ್ಜನೆಗೂ ಮುನ್ನ ಹಿಂದೂ, ಮುಸ್ಲಿಂ  ಯುವಕರು ಒಟ್ಟಾಗಿ ಸೇರಿದ್ದರು.   

ಜೀವನಶೈಲಿ, ಆಹಾರ ಪದ್ಧತಿ, ಧಾರ್ಮಿಕ ಆಚರಣೆ, ಉಡುಗೆ–ತೊಡುಗೆ, ಜಾತಿ, ಧರ್ಮ ಸೇರಿ ಎಲ್ಲವೂ ಭಿನ್ನ. ಆದರೆ, ಗಣೇಶೋತ್ಸವ ಸಮೀಪಿಸುತ್ತಿದ್ದಂತೆಯೇ, ಎಲ್ಲವೂ ಒಂದೊಂದಾಗಿ ಮೇಳೈಸುತ್ತವೆ. ಗಣೇಶ ಮೂರ್ತಿಯ ಮೆರವಣಿಗೆ, ಪ್ರತಿಷ್ಠಾಪನೆ, ಪೂಜೆಯಿಂದ ಆರಂಭಿಸಿ ವಿಸರ್ಜನೆಯವರೆಗೆ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ‘ಇದು ಬರೀ ಹಿಂದೂಗಳದ್ದಲ್ಲ, ನಮ್ಮ ಹಬ್ಬ ಕೂಡ’ ಎಂಬಂತೆ ಮುಸ್ಲಿಮರು, ಕ್ರಿಶ್ಚಿಯನ್ನರೂ ಪಾಲ್ಗೊಳ್ಳುತ್ತಾರೆ.

ಗಣೇಶೋತ್ಸವ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಅದರ ಸಂಭ್ರಮಾಚರಣೆ ಎಲ್ಲಾ ರೀತಿಯ ಸಂಪದ್ರಾಯ, ಕಟ್ಟುಪಾಡುಗಳನ್ನು ಮೀರಿದ್ದು ಎಂಬುದನ್ನು ಕಣ್ಣಾರೆ ನೋಡಲು ಉತ್ತರ ಕರ್ನಾಟಕದಲ್ಲಿ ಸುತ್ತಾಡಬೇಕು. ಅದರಲ್ಲೂ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳಲ್ಲಿ ಸುತ್ತು ಹಾಕಬೇಕು. ಗಣೇಶನ ಹಬ್ಬ, ಈದ್‌ ಮಿಲಾದ್, ಮೊಹರಂ ಎಲ್ಲವೂ ಒಂದೇ ದಿನ ಬಂದರಂತೂ, ಗಣೇಶೋತ್ಸವ ಇನ್ನೂ ರಂಗೇರುತ್ತದೆ. ಎಲ್ಲರೂ ಜೊತೆಗೂಡಿ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾರೆ.

ಹಬ್ಬದ ಸಿದ್ಧತೆಯಲ್ಲಿ ಮಗ್ನರಾಗಿದ್ದ ಹಾವೇರಿ ಜಿಲ್ಲೆಯ ನೆಗಳೂರಿನ ಹುಚ್ಚುಸಾಬ್ ನದಾಫ್ ಅವರನ್ನು ಕೇಳಿದಾಗ, ‘ಪ್ರತಿ ಸಲದಂತೆ ಈ ವರ್ಷವೂ ನಮ್ಮೂರಿನ ದೊಡ್ಡ ಮಸೀದಿ ಎದುರು ಸರ್ವಧರ್ಮ ಗಣೇಶ ಮೂರ್ತಿ ಕೂರಿಸುತ್ತೇವೆ. ದೇಣಿಗೆ ಸಂಗ್ರಹ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ಅನ್ನ ಸಂತರ್ಪಣೆ ಸೇರಿ ಎಲ್ಲದರ ವ್ಯವಸ್ಥೆ ನಡೆದಿದೆ’ ಎಂದರು. ಅಂಜುಮನ್ ಸಮಿತಿ ಉಪಾಧ್ಯಕ್ಷರೂ ಆಗಿರುವ ನದಾಫ್ ಅವರು ಗಜಾನನ ಮಹಾಮಂಡಳಿಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು.

ADVERTISEMENT

‘ನಮ್ಮ ಈದ್‌ ಮಿಲಾದ್, ಬಕ್ರೀದ್‌ ಹಬ್ಬಗಳಲ್ಲಿ ಹಿಂದೂಗಳು ಭಾಗಿಯಾದರೆ, ಹಿಂದೂಗಳ ಗಣೇಶ ಹಬ್ಬ, ದೀಪಾವಳಿ ಹಬ್ಬದಲ್ಲಿ ನಾವು ಪಾಲ್ಗೊಳ್ಳುತ್ತೇವೆ. ನಮ್ಮ ಅಜ್ಜ, ತಂದೆಯವರ ಕಾಲದಿಂದಲೂ ಯಾವುದೇ ಉತ್ಸವ, ಹಬ್ಬವಿದ್ದರೂ ಪರಸ್ಪರ ಜೊತೆಗೂಡುತ್ತೇವೆ. ನಮ್ಮೂರಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಒಡಕು, ತಾರತಮ್ಯ ಇಲ್ಲ’ ಎಂದು ಹೆಮ್ಮೆಯಿಂದ ಹೇಳಿದರು.

15 ಕಡೆ ಪ್ರತಿಷ್ಠಾಪನೆ ಹೊಣೆ

ವಿಜಯಪುರ ಜಿಲ್ಲೆಯ ಆಲಮೇಲದ ಮೆಹಬೂಬ ಮಸಳಿ ಅವರು ತಮ್ಮೂರಿನಲ್ಲಿ ಹದಿನೈದು ಕಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಹೊಣೆ ಹೊತ್ತವರು. ‘ನಮ್ಮೂರು ಸೌಹಾರ್ದ ಪರಂಪರೆಗೆ ಮಾದರಿ. ಹದಿನೇಳು ವರ್ಷಗಳಿಂದ ಆಲಮೇಲ ಗಜಾನನ ಮಹಾಮಂಡಳಿಯ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದೇನೆ. ಎಲ್ಲಾ ಜಾತಿ, ಧರ್ಮದವರು ಸಭೆ ನಡೆಸಿ, ಗಣೇಶನ ಪೂಜೆ ಸೇರಿಸಿ ಎಲ್ಲದರ ಜವಾಬ್ದಾರಿ ವಹಿಸಿಕೊಳ್ಳುತ್ತೇವೆ. ಹದಿನೈದು ಕಡೆ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲು ₹ 50 ಲಕ್ಷದವರೆಗೆ ಖರ್ಚು ಮಾಡುತ್ತೇವೆ’ ಎಂದು ವಿವರ ನೀಡಿದರು.

ಐದು ದಿನ ಮಹಾರಾಷ್ಟ್ರದ ಮಾದರಿಯಲ್ಲಿ ಆಲಮೇಲದಲ್ಲಿ ಆಚರಿಸಲಾಗುವ ಗಣೇಶೋತ್ಸವಕ್ಕೆ ನಲವತ್ತು ವರ್ಷಗಳ ಇತಿಹಾಸವಿದೆ. ಪ್ರತಿ ದಿನವೂ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುತ್ತಾರೆ.

ದರ್ಗಾ ಎದುರೇ ಗಣೇಶ ಮೂರ್ತಿ

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಂಠಿ ಗಲ್ಲಿಯಲ್ಲಿನ ಆಲಕಟ್ಟಿ ಫಕೀರಸ್ವಾಮಿ ದರ್ಗಾಕ್ಕೆ ಭೇಟಿ ನೀಡಬೇಕು. ದರ್ಗಾ ಎದುರೇ ಹಿಂದೂ ಮತ್ತು ಮುಸ್ಲಿಮರು ಜೊತೆಗೂಡಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಇದು ದೇಶವು ಸ್ವಾತಂತ್ರ್ಯ ಪಡೆಯುವ ಮೊದಲಿನ ದಿನಗಳಿಂದಲೂ ನಡೆದುಕೊಂಡು ಬಂದಿದೆ. ಈ ವರ್ಷವೂ ವಿನಾಯಕನ ಪ್ರತಿಷ್ಠಾಪನೆಗಾಗಿ ದರ್ಗಾವನ್ನು ಸಜ್ಜುಗೊಳಿಸಲಾಗಿದೆ.

ಮುಸ್ಲಿಮರು ಗಣಪನಿಗೆ ಹೂವು ಮಾಲೆ ಹಾಕಿ ಕಾಯಿ ಕರ್ಪೂರ ಬೆಳಗಿದರೆ, ಹಿಂದೂಗಳು ಆರತಿ ಮಾಡಿ ನೈವೇದ್ಯ ಸಲ್ಲಿಸುತ್ತಾರೆ. 11ನೇ ದಿನಕ್ಕೆ ಒಂದಾಗಿ ಮೆರವಣಿಗೆ ಮೂಲಕ ಹೋಗಿ ಮೂರ್ತಿ ವಿಸರ್ಜನೆ ಕೂಡ ಮಾಡುತ್ತಾರೆ. ಹಿರಿಯರಾದ ಬಾಬುಸಾಬ ಅಡಿಮನಿ, ಶಫೀಕ್‌ ಅಹ್ಮದ್‌ ಅಡಿಮನಿ, ಫಕೀರಸಾಬ್‌ ಅಡಿಮನಿ, ಶೌಕತ್ ಬುಡರಕಟ್ಟಿ, ಪ್ರಕಾಶ ಪಾಗಾದ, ಸೋಮು ಪಾಗಾದ, ಸಚೀನ ಹಣಮೇಟ್, ನಿಖಿಲ ತಟವಟಿ, ವಿಶಾಲ ರೊಡಬಸನವರ, ಸಂತೋಷ ಬೆಂಡಿಗೇರಿ ನೇತೃತ್ವ ವಹಿಸುತ್ತಾರೆ.

ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ಬಿಡ್ನಾಳದ ಗ್ರಾಮಸ್ಥರ ಸಾಮರಸ್ಯವೇ ವಿಶಿಷ್ಟವಾದದ್ದು. ಮೊಹರಂ ಮತ್ತು ಗಣೇಶ ಹಬ್ಬ ಒಂದೇ ದಿನದಂದು ಬಂದುಬಿಟ್ಟರೆ, ಇಲ್ಲಿ ಸಂಭ್ರಮ ಮೇರೆಮೀರುತ್ತದೆ. ಒಂದೇ ಪೆಂಡಾಲ್‌ನಲ್ಲಿ ಗಣೇಶ ಮೂರ್ತಿಯನ್ನು ಮತ್ತು ಪಾಂಜಾಗಳನ್ನು ಇಟ್ಟು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ.

‘ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ದಿನದಿಂದ 9 ದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತೇವೆ. ಪ್ರತಿ ದಿನವೂ ಮಹಿಳಾ ಮಂಡಳ, ಯುವಕ ಸಂಘ ಸೇರಿ ವಿವಿಧ ಸಂಘಸಂಸ್ಥೆಯವರು ಮೂರ್ತಿಯ ದರ್ಶನ ಮಾಡಿ, ಕಾಣಿಕೆ ಅರ್ಪಿಸುತ್ತಾರೆ. ವಿಶೇಷ ಪೂಜೆ ಸಲ್ಲಿಸುತ್ತಾರೆ. ಮುಸ್ಲಿಮರಿಗೂ ಕೂಡ ಒಂದು ದಿನ ಮೀಸಲು ಇಟ್ಟಿರುತ್ತೇವೆ. ಕೆಲವಷ್ಟು ಮುಸ್ಲಿಮರು ದೇಣಿಗೆ ರೂಪದಲ್ಲಿ ಹಣ ನೀಡಿದರೆ, ಇನ್ನೂ ಕೆಲವರು ಪೂಜಾ ಸಾಮಗ್ರಿಗಳನ್ನು ಕೊಡುತ್ತಾರೆ. ಇನ್ನೂ ಕೆಲವರು ಅನ್ನ ಸಂತರ್ಪಣೆ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ’ ಎಂದು ಬಿಡ್ನಾಳದ ಮುಖಂಡ ಮೋಹನ ಅಸುಂಡಿ ತಿಳಿಸಿದರು.

ಸೌಹಾರ್ದ ಹಬ್ಬಕ್ಕೆ 24 ವರ್ಷ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಣೆವಾಡಾದಲ್ಲಿ ನಡೆಯುವ ಸೌಹಾರ್ದ ಹಬ್ಬಕ್ಕೆ 24 ವರ್ಷಗಳ ಇತಿಹಾಸವಿದೆ. ಗಣೇಶ ಮೂರ್ತಿಯ ಮೆರವಣಿಗೆ ವೇಳೆ ಮುಸ್ಲಿಮರು ಪಾನಕ, ಸಿಹಿ ತಿನಿಸು ವಿತರಿಸುತ್ತಾರೆ. ಹಿಂದೂ, ಮುಸ್ಲಿಮರದ್ದು ಇಲ್ಲಿ ಭಾವೈಕ್ಯದ ಪರಂಪರೆಯಿದೆ. ಗಣೇಶೋತ್ಸವ ಸಮಿತಿಯಲ್ಲಿ ನಜೀರ್ ರಾಣೆಬೆನ್ನೂರ, ಬಾಬು ಶೇಖ್ ಪ್ರಮುಖ ಪಾತ್ರವಹಿಸಿದರೆ, ಈದ್ ಮಿಲಾದ್ ಆಚರಣೆ ಸಮಿತಿಯಲ್ಲಿ ನಾಗರಾಜ್ ಬಾಬನಿ ಅವರದೇ ನಾಯಕತ್ವ.

ಚಿಕ್ಕಮಗಳೂರು ಜಿಲ್ಲೆಯ ಕಳಸದ ಅರಮನೆಮಕ್ಕಿ ಮೈದಾನದಲ್ಲಿ ಎರಡು ವರ್ಷಗಳಿಂದ ಸೌಹಾರ್ದ ಗಣೇಶೋತ್ಸವ ನಡೆಯುತ್ತಿದೆ. ಇಲ್ಲಿನ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಮರಲ್ಲದೇ ಕ್ರೈಸ್ತರು ಮತ್ತು ಜೈನರು ಪಾಳ್ಗೊಳ್ಳುತ್ತಾರೆ. ಗಣೇಶೋತ್ಸವ ನೆಪದಲ್ಲಿ ಇಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ವಿವಿಧ ಸಂಘಸಂಸ್ಥೆಗಳು ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಮುಂದಾಗುತ್ತಾರೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯ ಸಿದ್ಧಿ ವಿನಾಯಕ ಮಿತ್ರ ಮಂಡಲಿಗೆ ಕ್ರೈಸ್ತ ಧರ್ಮದ ವಿಜೇಶ್ ಕ್ಸೇವಿಯರ್ ಅಧ್ಯಕ್ಷರಾಗಿದ್ದಾರೆ. ಮುಸ್ಲಿಂ ಮುಖಂಡ ನೌಫಲ್ ಮಂಡಲಿಯ ಪ್ರಮುಖ ಸದಸ್ಯರಲ್ಲಿ ಒಬ್ಬರು. 13 ವರ್ಷಗಳಿಂದ ಇಲ್ಲಿ ಸೌಹಾರ್ದಯುತವಾಗಿ ಎಲ್ಲ ಧರ್ಮದವರೂ ಸೇರಿ ಗೌರಿ, ಗಣೇಶೋತ್ಸವ ಆಚರಿಸುತ್ತಾರೆ.

ದೇಶದಲ್ಲಿ ಜಾತಿ, ಧರ್ಮ, ದೇವರ ಹೆಸರಿನಲ್ಲಿ ಎಷ್ಟೇ ಗಲಾಟೆ ನಡೆಯಲಿ ಅಥವಾ ದ್ವೇಷ ಹೊಗೆಯಾಡಿದರೂ ಕರುನಾಡಿನಲ್ಲಿ ಅದರಲ್ಲೂ ಗ್ರಾಮೀಣ ಪರಿಸರದಲ್ಲಿ ಬಾಂಧವ್ಯ ಗಟ್ಟಿಯಾಗಿ ಉಳಿದಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಈ ಭಾವೈಕ್ಯ ವಿಶೇಷ ಕಳೆ ಪಡೆಯುತ್ತದೆ ಎಂಬುದಕ್ಕೆ ಆಯಾ ಊರುಗಳಲ್ಲಿನ ಪ್ರೀತಿ, ವಿಶ್ವಾಸ, ನಂಬಿಕೆಯೇ ಸಾಕ್ಷಿ.

ನರೇಗಲ್‌ನಲ್ಲಿ ವಿಶಿಷ್ಟ ಆಚರಣೆ 

ಗದಗ ಜಿಲ್ಲೆಯ ನರೇಗಲ್‌ನ 3ನೇ ವಾರ್ಡ್‌ನ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ನಡೆಯುವ ಗಣೇಶೋತ್ಸವ ಎಲ್ಲಕ್ಕಿಂತ ವಿಭಿನ್ನ. ಇಲ್ಲಿ ಉತ್ಸವಕ್ಕೆ ಓಣಿಯ ಪ್ರತಿ ಮನೆಯಿಂದ ದೇಣಿಗೆ ಸಂಗ್ರಹಿಸಿ, ಮೂರ್ತಿ ವಿಸರ್ಜನೆ ಬಳಿಕ ಲೆಕ್ಕಪತ್ರ ಒಪ್ಪಿಸುತ್ತಾರೆ. ಅದರಲ್ಲಿ ಉಳಿದ ಹಣದಲ್ಲಿ ಇಂತಿಷ್ಟು ಹಣವನ್ನು ಓಣಿಯಲ್ಲಿ ನಡೆಯುವ ಸಾವು-ನೋವಿನ ತುರ್ತು ಸಂದರ್ಭಗಳಿಗೆ ಬಳಸುತ್ತಾರೆ. ಕೆಲ ದಿನಗಳ ನಂತರ ಆ ಮನೆಯವರಿಂದ ಮರಳಿ ಪಡೆಯುತ್ತಾರೆ. ಇನ್ನುಳಿದ ಹಣದಲ್ಲಿ ಆರ್ಥಿಕವಾಗಿ ಹಿಂದುಳಿದ ಇಬ್ಬರು ಅಥವಾ ಮೂವರು ಯುವಕರಿಗೆ ನೀಡುತ್ತಾರೆ. ಅವರು ಮರು ವರ್ಷ ಗಣೇಶ ಉತ್ಸವದ ಒಂದು ತಿಂಗಳ ಮೊದಲು ಸ್ವಲ್ಪ ಹೆಚ್ಚಿನ ಹಣ ಸೇರಿಸಿ ಸಮಿತಿಗೆ ಮರಳಿ ಕೊಡುತ್ತಾರೆ. ಇದು ಯುವಕರ ಸಣ್ಣ ವ್ಯಾಪರಕ್ಕೆ, ಕಷ್ಟಕ್ಕೆ ಸಹಾಯವಾಗುತ್ತದೆ.

ಮುಸ್ಲಿಮರ ಮನೆಯಲ್ಲಿ ಅರಳುವ ಗಣಪ

ಚಂದ್ರಶೇಖರ ಎಸ್. ಚಿನಕೇಕರ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಮಾಂಜರಿವಾಡಿಯ ಜಮಾದಾರ ಅವರ ಮನೆಯಲ್ಲಿ ಅಲ್ಲಾಹು ಅಕ್ಬರ್ ಹಾಗೂ ವಕ್ರತುಂಡ ಮಹಾಕಾಯ ಶ್ಲೋಕಗಳು ಜೊತೆಯಾಗಿ ಕೇಳಿಬರುತ್ತವೆ.

ಅಲ್ಲಾಭಕ್ಷ– ರೇಷ್ಮಾ ದಂಪತಿ, ಮೊಹಮ್ಮದ್‌– ಅಫ್ಸಾನಾ ದಂಪತಿ, ಪುತ್ರರಾದ ನಿಯಾಜ್, ಅಮನ್ ಸೇರಿ ಇಡೀ ಕುಟುಂಬದವರು ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾರೆ. ಪರಿಸರ ಪ್ರಿಯವಾದ, ಜೇಡಿ ಮಣ್ಣಿನಿಂದ ತಯಾರಿಸುವ ಅವರ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಹಿಂದೂ ಪುರಾಣಗಳಂತೆ ಶಾಸ್ತ್ರೋಕ್ತವಾಗಿ ಮೂರ್ತಿಗಳನ್ನು ತಯಾರಿಸುವುದು ಅವರ ಹೆಚ್ಚುಗಾರಿಕೆ.

ಬಡಗಿತನ ವೃತ್ತಿ ಮಾಡುತ್ತಿದ್ದ ದಾದು ಜಮಾದಾರ ಐದು ದಶಕಗಳ ಹಿಂದೆ ಗಣೇಶ ಮೂರ್ತಿ ತಯಾರಿಸಿ ಮನೆ– ಮನೆಗೆ ತೆರಳಿ ಕೊಡುತ್ತಿದ್ದರು. ತಂದೆಯ ವೃತ್ತಿಯನ್ನೇ ಪುತ್ರ ರಂಜಾನ್ ನಡೆಸಿಕೊಂಡು ಬಂದರು. ಇದೀಗ ರಂಜಾನ್ ಅವರ ಪುತ್ರರಾದ ಅಲ್ಲಾಭಕ್ಷ ಹಾಗೂ ಮೊಹಮ್ಮದ್ ಸಹೋದರರು ಪರಂಪರೆ ಮುಂದುವರಿಸಿದ್ದಾರೆ.

ಪ್ರತಿ ವರ್ಷ ಗಣೇಶ ಚತುರ್ಥಿಯ ಮೂರು ತಿಂಗಳ ಮೊದಲು ಗಣೇಶ ಮೂರ್ತಿ ತಯಾರಿಯಲ್ಲಿ ಜಮಾದಾರ ಕುಟುಂಬ ತೊಡಗಿಕೊಳ್ಳುತ್ತದೆ. ಈ ಅವಧಿಯಲ್ಲಿ ಇವರ ಮನೆಯಲ್ಲಿ ಮಾಂಸಾಹಾರ ಸೇವನೆ ಸಂಪೂರ್ಣ ನಿಷಿದ್ಧ. 50ಕ್ಕೂ ಹೆಚ್ಚು ಮನೆಗಳಲ್ಲಿ ಜಮಾದಾರ ಕುಟುಂಬದವರು ತಯಾರಿಸಿದ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.

(ಪೂರಕ ಮಾಹಿತಿ: ಬಸವರಾಜ್ ಸಂಪಳ್ಳಿ, ಸಂತೋಷ ಜಿಗಳಿಕೊಪ್ಪ, ಗಣಪತಿ ಹೆಗಡೆ, ನಾಗರಾಜ್ ಬಿ.ಎನ್, ಚಂದ್ರಪ್ಪ ಎಂ.ರಾಠೋಡ, ರವಿಕುಮಾರ ಹುಲಕುಂದ)

ಅಲ್ಲಾಭಕ್ಷ ಜಮಾದಾರ ಮೂರ್ತಿಗೆ ಅಂತಿಮ ಸ್ಪರ್ಶ ನೀಡಿದರು
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕಂಠಿ ಗಲ್ಲಿಯ ಆಲಕಟ್ಟಿ ಫಕೀರಸ್ವಾಮಿ ದರ್ಗಾದಲ್ಲಿ ಪ್ರತಿಷ್ಠಾಪಿಸಿದ ಗಣಪನ ಮೂರ್ತಿಗೆ ಹಿಂದೂ– ಮುಸ್ಲಿಮರು ಜತೆಯಾಗಿ ಪೂಜೆ ಸಲ್ಲಿಸುತ್ತಿರುವುದು. (ಸಂಗ್ರಹ ಚಿತ್ರ)
ಕೊಪ್ಪಳದಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹಿಂದೂ–ಮುಸ್ಲಿಮರು ಗಣೇಶ ಮೂರ್ತಿ ಎದುರು ಈದ್‌ ಮಿಲಾದ್‌ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.