ADVERTISEMENT

Gowri Habba | ಗೌರಿ ಹಬ್ಬದ ನಿಜವಾದ ಸಂದೇಶವೇನು? ಗೌರಿ ಪೂಜೆಯಿಂದ ಸಿಗುವ ಫಲವೇನು?

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 12:24 IST
Last Updated 26 ಆಗಸ್ಟ್ 2025, 12:24 IST
   
ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಗ್ರಾಮದಲ್ಲಿ ಮಂಗಳವಾರ ಗೌರಿ ಹಬ್ಬದ ಸಂಭ್ರಮ. ಸಾವಿರಾರು ಮಂದಿ ಗೌರಿ ಪೂಜೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. 'ಒಂದು ಜಗತ್ತು ಒಂದು ಕುಟುಂಬ' ಸೇವಾ ಅಭಿಯಾನದ ಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಗೌರಿ ಹಬ್ಬದ ನಿಜವಾದ ಸಂದೇಶ ಮತ್ತು ಗೌರಿ ಪೂಜೆಯ ಫಲದ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. ಅವರ ಉಪನ್ಯಾಸದ ಅಕ್ಷರರೂಪ ಇಲ್ಲಿದೆ.

ದೇವಿಯು ಎಲ್ಲರಲ್ಲಿಯೂ ಚೇತನವಾಗಿ, ಪ್ರಜ್ಞೆಯಾಗಿ ನೆಲೆಸಿದ್ದಾಳೆ. ಅವಳಿಗೆ ನಾವು ಸದಾ ನಮಿಸಬೇಕು. ಶಿವ ಮತ್ತು ದೇವಿಯನ್ನು ಪ್ರಜ್ಞೆ ಮತ್ತು ಶಕ್ತಿಯ ರೂಪವಾಗಿ ಆರಾಧಿಸುತ್ತೇವೆ. ಶಿವನು ಪ್ರಜ್ಞೆ ಪ್ರತೀಕವಾದರೆ ಶಕ್ತಿಯು ಅದರ ವಿಸ್ತರಣೆಯಾಗಿದ್ದಾಳೆ. ಅವರಿಬ್ಬರ ಸಂಯೋಗದಿಂದಲೇ ನಾವೆಲ್ಲರೂ ನಮ್ಮ ಕರ್ಮಗಳನ್ನು ಮಾಡಲು ಸಾಧ್ಯವಾಗುತ್ತದೆ. ಶಿವ-ಪಾರ್ವತಿಯರ ಮದುವೆಯು ಭೌತಿಕ ವಿಚಾರ ಅಲ್ಲ. ಇದು ಜೀವಾತ್ಮನು ಪರಮಾತ್ಮನೊಂದಿಗೆ ಸೇರುವುದನ್ನು ಸಂಕೇತಿಸುತ್ತದೆ. ಶಕ್ತಿಯು ಚೈತನ್ಯದಲ್ಲಿ ಸೇರುವುದನ್ನು ಸೂಚಿಸುತ್ತದೆ.

ಶಿವನನ್ನು ವರಿಸಲು ಪಾರ್ವತಿಯು 16 ವರ್ಷ ತಪಸ್ಸು ಮಾಡಿದ್ದಳು. ತಪಸ್ಸು ಹೊರತುಪಡಿಸಿ ಶಿವನನ್ನು ಬೇರೆ ಯಾವುದೇ ರೀತಿಯಲ್ಲಿ ಗೆಲ್ಲಲು ಸಾಧ್ಯವಿರಲಿಲ್ಲ. ಲೋಕಕಲ್ಯಾಣಕ್ಕೆಂದು ಕಾಮದೇವನು ಅವರಿಬ್ಬರನ್ನು ಒಗ್ಗೂಡಿಸಲು ಪ್ರಯತ್ನಿಸಿದ. ಪರಿಣಾಮವೇನಾಯಿತು ಎನ್ನುವುದು ಎಲ್ಲರಿಗೂ ಗೊತ್ತು. ಸಮಾಧಿಯಲ್ಲಿದ್ದ ಶಿವನು ನಿಶ್ಚಲ ಸ್ಥಿತಿಯಿಂದ ಹೊರಬರಲೇ ಇಲ್ಲ. ವಿಶ್ವದ ಚಟುವಟಿಕೆಗಳು ಮುಂದುವರಿಯಲು ಶಿವ-ಪಾರ್ವತಿಯರ ಸಮಾಗಮ ಅತ್ಯಗತ್ಯವಾಗಿತ್ತು. ಆದರೆ ಅದು ಕಾಮದಂಥ ಆಸೆಯಿಂದ ಆಗಲು ಸಾಧ್ಯವಿರಲಿಲ್ಲ.

ಕಾಮದೇವನು ಬೂದಿಯಾದ ಮೇಲೆ ಅವನ ಹೆಂಡತಿ ರತಿ ದೇವಿ ಶಿವನನ್ನು ಬೇಡಿಕೊಂಡಳು. 'ನೀವು ಹೀಗೆ ಮಾಡಿದರೆ ಜಗತ್ತು ಹೇಗೆ ಮುಂದುವರಿಯಬೇಕು' ಎಂದು ಪ್ರಲಾಪಿಸಿದಳು. ಶಿವ ತನ್ನ ಕರುಣೆಯಿಂದ ಕಾಮನಿಗೆ ಮತ್ತೆ ಜೀವ ಕೊಟ್ಟ. ಪಾರ್ವತಿಯು ಶಿವನನ್ನು ಆಸೆಯಿಂದ ಗೆಲ್ಲಲಿಲ್ಲ, ತಪಸ್ಸಿನಿಂದ ಗೆದ್ದಳು. ಕಾಮದಿಂದ ಗೆಲ್ಲಲಿಲ್ಲ, ನಾಮದಿಂದ ಗೆದ್ದಳು. ಶಿವನನ್ನು ಸೇರಬೇಕೆಂದು ಪಾರ್ವತಿಯು ಉಗ್ರ ತಪಸ್ಸು ಮಾಡಿದಂತೆ ಜೀವಾತ್ಮನು ಸತತ ಸಾಧನೆ ಮಾಡಬೇಕು. ಆಗ ಮಾತ್ರ ಶಿವ ಅಥವಾ ಪರಮಾತ್ಮನನ್ನು ಸೇರಲು ಸಾಧ್ಯ. ಗೌರಿ ಹಬ್ಬದ ಮೂಲ ತತ್ವವೇ ಅದು.

ADVERTISEMENT

ನಾವೇಕೆ ಗೌರಿಯನ್ನು ಪೂಜಿಸುತ್ತೇವೆ? ಅವಳು ಶಿವನನ್ನು ಸೇರಬೇಕೆಂದು ಸಾಧನೆ ಮಾಡಿದಳು. ಗೌರಿ ಪೂಜೆಯಿಂದ ನಿಮಗೆ ಪ್ರಾಪಂಚಿಕ, ಸುಖ, ಸಂಪತ್ತು, ಕೀರ್ತಿ ದೊರೆಯುತ್ತದೆ ಎನ್ನುವ ಭರವಸೆಯನ್ನು ಗೌರಿ ಹಬ್ಬದ ಕಥೆಯು ಹೇಳುತ್ತದೆ. ಇವು ನಮ್ಮನ್ನು ಗೌರಿ ತತ್ವದತ್ತ ಸೆಳೆಯಲೆಂದು ಹಿರಿಯರು ರೂಪಿಸಿರುವ ತಂತ್ರಗಳು ಮಾತ್ರ. ಯಾಕೆಂದರೆ ನಮಗೆ ಇಂಥ ಸಣ್ಣಪುಟ್ಟ ಆಸೆಗಳೇ ದೊಡ್ಡದಾಗಿ ಕಾಣಿಸುತ್ತಿರುತ್ತವೆ.

ದೇವರು ಸಾಮಾನ್ಯ ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುವುದೇ ಹೀಗೆ. ಸಾಧನೆ ಆರಂಭವಾದ ನಂತರ ಉನ್ನತ ಅಧ್ಯಾತ್ಮಿಕ ತತ್ವಗಳನ್ನು ಅವನೇ ತಿಳಿಸಿಕೊಡುತ್ತಾನೆ. ಗೌರಿ ಪೂಜೆಯ ನಿಜವಾದ ತತ್ವ ಇರುವುದೇ ಅವಳ ಸಾಧನೆಯನ್ನು ನೆನೆಯುವುದರಲ್ಲಿ. ನಾವು ಗೌರಿಯಂತೆಯೇ ಸಾಧನೆ ಮಾಡಬೇಕು. ಜೀವಾತ್ಮನು ಪರಮಾತ್ಮನನ್ನು ತಲುಪಬೇಕು. ಒಮ್ಮೆ ನೀವು ಅಧ್ಯಾತ್ಮ ಸಾಧನೆಯ ಹಾದಿ ತುಳಿದರೆ ನಂತರ ಎಲ್ಲವೂ ನಿಮಗೆ ತನ್ನಿಂತಾನೆ ಸಿಗುತ್ತದೆ. ನಿಮಗೆ ವಸ್ತುವೊಂದು ದೊರೆತರೆ ಅದರ ನೆರಳು ಬೇಕೆಂದು ಕೇಳಬೇಕಾಗಿಯೇ ಇಲ್ಲ. ದೇವರು ನಿಮಗೆ ಸಿಕ್ಕರೆ ಇಡೀ ಜಗತ್ತು ನಿಮ್ಮನ್ನು ಅನುಸರಿಸುತ್ತದೆ. ಜಗತ್ತನ್ನು ಮೆಚ್ಚಿಸಲು ನೀವು ಪ್ರತ್ಯೇಕವಾಗಿ ಏನನ್ನೂ ಮಾಡಬೇಕಿಲ್ಲ.

ಶಿವನ ಬಳಿ ಏನಿತ್ತು? ಪಾರ್ವತಿಗೆ ಕೊಡಲು ಅವನ ಬಳಿ ಏನೂ ಇರಲಿಲ್ಲ. ರಾಜನ ಮಗಳಾಗಿದ್ದ ಪಾರ್ವತಿಯು ಶಿವನನ್ನೇ ಬಯಸಿದಳು. ಅವಳ ತಂದೆಯಾಗಲೀ, ಶಿವನಾಗಲಿ ಅವಳ ಇಚ್ಛೆಯನ್ನು ಒಪ್ಪಲಿಲ್ಲ. ಆದರೆ ಲೌಕಿಕ ಜಗತ್ತಿನ ಐಶ್ವರ್ಯದ ಮಿತಿ ಏನೆಂದು ಪಾರ್ವತಿಗೆ ಗೊತ್ತಿತ್ತು. ಪಾರ್ವತಿಯು ಹಠದಿಂದ ತಪಸ್ಸು ಮಾಡಿದಳು. ಕೊನೆಗೆ ಶಿವನನ್ನೇ ಪಡೆದಳು. ಶಿವನೇ ಸಿಕ್ಕ ಮೇಲೆ ಸಿಗಲು ಬಾಕಿ ಯಾವುದು ಏನಾದರೂ ಉಳಿದೀತೆ? ಅವಳ ಬದುಕಿನಿಂದ ನಾವು ಕಲಿಯಬೇಕಾದ ಪಾಠ ಇದು. ಅವಳ ಹಾದಿಯಲ್ಲಿ ನಡೆಯುವವರು ನಿಷ್ಠೆಯಿಂದ ಇರಬೇಕು. ತಪಸ್ಸಿನಿಂದ ಬ್ರಹ್ಮನನ್ನು ಕಾಣಲು ಸಾಧ್ಯ. ನೀವು ದೇವರನ್ನು ಪಡೆದರೆ ಎಲ್ಲವೂ ನಿಮ್ಮನ್ನು ಅನುಸರಿಸುತ್ತದೆ.

ವೈಷ್ಣೋದೇವಿಯು ಸಹ ಪಾರ್ವತಿಯ ಒಂದು ರೂಪ. ತಪಸ್ಸಿನಿಂದ ಅವಳು ಅಸ್ಥಿಪಂಜರದಂತೆ ಆದಳು. ಅವಳ ದೈಹಿಕ ಸೌಂದರ್ಯಕ್ಕಲ್ಲ, ತಪಸ್ಸಿನ ಶಕ್ತಿಗೆ ನಾನು ಒಲಿಯುತ್ತೇನೆ ಎಂದು ಶಿವ ತೋರಿಸಿಕೊಟ್ಟ. ಶಿವನು ದೇವರಾದರೆ ಪಾರ್ವತಿಯು ಅವನನ್ನು ತಲುಪಲು ಅನುಸರಿಸಬೇಕಾದ ಹಾದಿ. ನಾಳೆಯೇ (ಆ.27) ಗಣೇಶ ಚತುರ್ಥಿ. ಗಣಪತಿಯು ಎಲ್ಲವನ್ನೂ ಕೊಡುವ ದೇವರು. ಅವನು 'ಸಿದ್ಧಿದಾಯಕ'. ನಿಮ್ಮ ಅಧ್ಯಾತ್ಮ ಸಾಧನೆಗೆ ಬೇಕಿರುವ ಎಲ್ಲ ಅನುಕೂಲಗಳನ್ನೂ ಗಣೇಶ ಕೊಡುತ್ತಾನೆ. ನಿಮಗೆ ಎದುರಾಗಬಹುದಾದ ವಿಘ್ನಗಳನ್ನು ನಿವಾರಣೆ ಮಾಡುತ್ತಾನೆ. ನಮ್ಮ ಐಹಿಕ ಆಸೆಗಳನ್ನು ಗೆಲ್ಲಲು ಸಹಾಯ ಮಾಡುತ್ತಾನೆ. ಕೊನೆಗೆ ನಮ್ಮನ್ನು ಶಿವ-ಪಾರ್ವತಿಯರ ಹತ್ತಿರಕ್ಕೆ ತಲುಪಿಸುತ್ತಾನೆ.

ನಂತರ ಬರುವವನು ಕಾರ್ತಿಕೇಯ. ಅವನು ನಮ್ಮ ಸಾಧನೆಯ ಹಾದಿಗೆ ಅಡ್ಡ ಬರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಂಥ ಶತ್ರುಗಳನ್ನು ಗೆಲ್ಲಲು ಸಹಾಯ ಮಾಡುತ್ತಾನೆ. ನಮ್ಮ ಸಾಧನೆಯ ಹಾದಿಯನ್ನು ನಿಚ್ಚಳವಾಗಿ ತಿಳಿಯುವುದೇ ಎಲ್ಲ ಹಬ್ಬಗಳ ಮುಖ್ಯ ಆಶಯವಾಗಬೇಕು. ಗೌರಿ ಹಬ್ಬದ ಈ ಶುಭ ಸಂದರ್ಭದಲ್ಲಿ ಅಂತಿಮ ಸತ್ಯವಾದ ಶಿವನನ್ನು ಪಡೆಯಲು ಸಾಧನೆ ಮಾಡುವ ಸಂಕಲ್ಪ ಮಾಡೋಣ. ಶಾಲೆಗೆ ಹೋಗುವ ಮಕ್ಕಳ ಕಾಳಜಿಯನ್ನು ಪೋಷಕರು ಮಾಡುವಂತೆ ನಾವು ಅಧ್ಯಾತ್ಮದ ಹಾದಿಯಲ್ಲಿ ಸಾಧನೆಗೆ ಮುಂದಾದರೆ ದೇವರೇ ನಮ್ಮ ಅಗತ್ಯಗಳನ್ನು ಗಮನಿಸುತ್ತಾನೆ. ಅದಕ್ಕಾಗಿ ನೀವು ಏನೂ ಮಾಡಬೇಕಾಗಿರುವುದಿಲ್ಲ.

ಸ್ವರ್ಣಗೌರಿ ಎಂದರೆ ನಾವು ಮಾಡುವ ಎಲ್ಲವೂ ಚಿನ್ನವಾಗಲಿ ಎಂದು ಅರ್ಥ. ಚಿನ್ನದ ಬಣ್ಣ ಎನ್ನುವುದೇ ದೇವರ ಸಂಕೇತ. ನಾವು ನಿಜವಾಗಿಯೂ ಆತ್ಯಂತಿಕ ಸತ್ಯವನ್ನೇ ಕೋರಬೇಕು. ಐಹಿಕ ಭೋಗಗಳನ್ನು ಅಲ್ಲ. ಆಗ ಗೌರಿಯು ನಮಗೆ ಶಿವನನ್ನು ತಲುಪಲು ದಾರಿ ತೋರಿಸುತ್ತಾಳೆ. ತಾಯಿ ಗೌರಿಯ ಆಶೀರ್ವಾದವು ಎಲ್ಲರ ಮೇಲೆ ಇರಲಿ. ನಮ್ಮ ಆತ್ಮಶೋಧನೆ, ಸಾಧನೆಯ ಹಾದಿಗೆ ಎದುರಾಗುವ ಎಲ್ಲ ವಿಘ್ನಗಳೂ ನಿವಾರಣೆಯಾಗಲಿ.

ಉಪನ್ಯಾಸ: ಸದ್ಗುರು ಶ್ರೀ ಮಧುಸೂದನ ಸಾಯಿ,

ಸಂದರ್ಭ: ಸ್ವರ್ಣಗೌರಿ ಹಬ್ಬ,

ಸ್ಥಳ: ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.