ADVERTISEMENT

ರಂಜಾನ್ ಉಪವಾಸದಿಂದ ಇವೆ ಹತ್ತಾರು ಆರೋಗ್ಯ ಲಾಭಗಳು

ಅಬ್ದುಲ್ ರಹಿಮಾನ್
Published 19 ಫೆಬ್ರುವರಿ 2026, 7:35 IST
Last Updated 19 ಫೆಬ್ರುವರಿ 2026, 7:35 IST
<div class="paragraphs"><p>ಸಾಂದರ್ಭಿಕ ಚಿತ್ರ </p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಇಸ್ಲಾಂ ಧರ್ಮದಲ್ಲಿ ರಂಜಾನ್ ಅಥವಾ ರಮದಾನ್ ಅತ್ಯಂತ ಪವಿತ್ರ ಮಾಸ. ಈ ತಿಂಗಳಲ್ಲಿ ಪ್ರಾತಃಕಾಲದಿಂದ ಸೂರ್ಯಾಸ್ತದವರೆಗೆ ಅನ್ನಹಾರದಿಂದ ದೂರ ಇರುತ್ತಾರೆ. ಇದು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಶಾರೀರಿಕ, ಮಾನಸಿಕ ಶಿಸ್ತಿನ ಅಭ್ಯಾಸವೂ ಹೌದು.‌‌ ಅನೇಕ ಸಂಶೋಧನೆಗಳು, ಅಧ್ಯಯನಗಳು ರಂಜಾನ್ ಉಪವಾಸದಿಂದ ಅನೇಕ ಲಾಭಗಳಿಗೆ ಎನ್ನುವುದನ್ನು ಸ್ಪಷ್ಟಪಡಿಸಿವೆ.

ADVERTISEMENT

ಚಯಪಚಯ ಕ್ರಿಯೆ ಸುಧಾರಣೆ

ಮಾನವ ದೇಹ ಸಾಮಾನ್ಯವಾಗಿ ಶಕ್ತಿಗಾಗಿ ಗ್ಲೂಕೋಸ್‌ ಬಳಸುತ್ತದೆ. ಉಪವಾಸದ 10–12 ಗಂಟೆಗಳ ನಂತರ ದೇಹದಲ್ಲಿನ ಗ್ಲೈಕೋಜನ್ ಸಂಗ್ರಹ ಕಡಿಮೆಯಾಗುತ್ತದೆ. ಈ ಹಂತದಲ್ಲಿ ದೇಹವು ಸಂಗ್ರಹಿತ ಕೊಬ್ಬನ್ನು ಶಕ್ತಿಯಾಗಿ ಪರಿವರ್ತಿಸಲು ಆರಂಭಿಸುತ್ತದೆ. ಈ ಪ್ರಕ್ರಿಯೆಯನ್ನು ‘ಮೆಟಾಬಾಲಿಕ್ ಸ್ವಿಚಿಂಗ್’ ಎಂದು ಕರೆಯಲಾಗುತ್ತದೆ. ‘New England Journal of Medicine’ನಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ, ಇಂಟರ್‌ಮಿಟೆಂಟ್ ಉಪವಾಸದಿಂದ ದೇಹದ ಕೊಬ್ಬು ಕರಗಿ ಚಲಪಚಯ ಕ್ರೀಯೆ ಸುಧಾರಿಸುತ್ತದೆ. ಇದರಿಂದ ತೂಕ ಇಳಿಯುತ್ತದೆ, ಹೊಟ್ಟೆ ಸುತ್ತಲಿನ ಅಪಾಯಕಾರಿ ಕೊಬ್ಬು ಕಡಿಮೆಯಾಗುತ್ತದೆ.

ಮಧುಮೇಹದ ಅಪಾಯ ಕಡಿತ

ದಿನಪೂರ್ತಿ ಆಗಾಗ್ಗೆ ಆಹಾರ ಸೇವಿಸಿದರೆ ಇನ್ಸುಲಿನ್ ಹಾರ್ಮೋನ್‌ ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ. ದೀರ್ಘಾವಧಿಯಲ್ಲಿ ಇದು ಇನ್ಸುಲಿನ್ ಪ್ರತಿರೋಧ ಉಂಟುಮಾಡಬಹುದು. ಉಪವಾಸವು ದೇಹಕ್ಕೆ ಒಂದು ರೀತಿಯ ‘ಹಾರ್ಮೋನಲ್ ವಿಶ್ರಾಂತಿ’ ನೀಡುತ್ತದೆ. ಉಪವಾಸದಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಸಮತೋಲನಗೊಳ್ಳುತ್ತದೆ. ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ‘Cell Metabolism’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಆಟೋಫ್ಯಾಜಿ

ಉಪವಾಸದ ವೇಳೆ ದೇಹದಲ್ಲಿ ‘ಆಟೋಫ್ಯಾಜಿ’ ಎಂಬ ಜೈವಿಕ ಪ್ರಕ್ರಿಯೆ ಸಕ್ರಿಯಗೊಳ್ಳುತ್ತದೆ. ಹಾಳಾದ ಅಥವಾ ದುರ್ಬಲಗೊಂಡ ಕೋಶಗಳನ್ನು ದೇಹವೇ ಸ್ವಚ್ಛಗೊಳಿಸುವ ವ್ಯವಸ್ಥೆಯೇ ಆಟೋಫ್ಯಾಜಿ. ಜಪಾನ್ ವಿಜ್ಞಾನಿ ಯೊಶಿನೊರಿ ಓಸುಮಿಯವರಿಗೆ ಈ ಪ್ರಕ್ರಿಯೆಯ ಅನ್ವೇಷಣೆಗೆ ನೊಬೆಲ್ ಪುರಸ್ಕಾರ ಲಭಿಸಿದೆ. ಈ ಪ್ರಕ್ರಿಯೆ ಕ್ಯಾನ್ಸರ್‌ ಸೇರಿದಂತೆ ಕೆಲವು ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ ಎಂಬುದನ್ನು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಹೃದಯ ಆರೋಗ್ಯ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ

ರಂಝಾನ್ ಉಪವಾಸವು ಹೃದಯ ಆರೋಗ್ಯಕ್ಕೂ ಸಹಕಾರಿ. ಉಪವಾಸದ ಅವಧಿಯಲ್ಲಿ ಕೆಟ್ಟ ಬೊಜ್ಜು ಮತ್ತು ಟ್ರೈಗ್ಲಿಸರೈಡ್ ಮಟ್ಟ ಕಡಿಮೆಯಾಗಬಹುದು. ‘American Journal of Clinical Nutrition’ ಪ್ರಕಟಿಸಿದ ಅಧ್ಯಯನಗಳು ಉಪವಾಸವು ರಕ್ತದ ಒತ್ತಡ ಮತ್ತು ಕೊಬ್ಬಿನ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿವೆ. ಇದರಿಂದ ಹೃದಯಾಘಾತ ಮತ್ತು ಸ್ಟ್ರೋಕ್ ಅಪಾಯವು ಕಡಿಮೆಯಾಗುವ ಸಾಧ್ಯತೆ ಇದೆ.

ಮೆದುಳಿನ ಕಾರ್ಯಕ್ಷಮತೆ ಮತ್ತು ಮಾನಸಿಕ ಸ್ಪಷ್ಟತೆ

ಉಪವಾಸದ ಸಮಯದಲ್ಲಿ ಮೆದುಳಿನಲ್ಲಿ BDNF (Brain-Derived Neurotrophic Factor) ಉತ್ಪಾದನೆ ಹೆಚ್ಚಾಗುತ್ತದೆ. ಇದು ನರವ್ಯವಸ್ಥೆಯ ಆರೋಗ್ಯಕ್ಕೆ ಅಗತ್ಯವಾದ ಪ್ರೋಟೀನ್. ‘ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ’ದ ಅಧ್ಯಯನದ ಪ್ರಕಾರ, ಉಪವಾಸದಿಂದ ಸ್ಮರಣಶಕ್ತಿ, ಏಕಾಗ್ರತೆ ಹಾಗೂ ಕಲಿಕೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ

‘Nutrition Research’ ಪ್ರಕಟಿಸಿದ ಅಧ್ಯಯನ ಪ್ರಕಾರ, ರಂಜಾನ್ ಉಪವಾಸದ ಅವಧಿಯಲ್ಲಿ ಉರಿಯೂತ ಕಡಿಮೆಯಾಗುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.