ADVERTISEMENT

ಸಂಕ್ರಾಂತಿ: ಕಾಂತಿ ಶಾಂತಿಗಳ ಹಬ್ಬ

ಎಸ್.ಸೂರ್ಯಪ್ರಕಾಶ ಪಂಡಿತ್
Published 15 ಜನವರಿ 2026, 1:15 IST
Last Updated 15 ಜನವರಿ 2026, 1:15 IST
ಗದಗ ತಾಲ್ಲೂಕಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಹಬ್ಬದ ಅಂಗವಾಗಿ ಹಾಕಿರುವ ಸಂಕ್ರಾಂತಿ ಸೆಟ್‌
ಗದಗ ತಾಲ್ಲೂಕಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಹಬ್ಬದ ಅಂಗವಾಗಿ ಹಾಕಿರುವ ಸಂಕ್ರಾಂತಿ ಸೆಟ್‌   

ನಮ್ಮ ಹಬ್ಬಗಳಿಗೆ ಮೂಲ ಎಂದರೆ ನಮ್ಮ ಪ್ರಕೃತಿಯೇ. ಈ ಪ್ರಕೃತಿಗೂ ಎರಡು ಆಯಾಮಗಳು; ಒಂದು: ಒಳಗಿನ ಪ್ರಕೃತಿ; ಇನ್ನೊಂದು: ಹೊರಗಿನ ಪ್ರಕೃತಿ. 

ಒಳಗಿನ ಪ್ರಕೃತಿ ಎಂದರೆ ನಮ್ಮ ಸ್ವಭಾವ; ನಡೆ–ನುಡಿ, ಆಚಾರ–ವಿಚಾರಗಳು. ಹೊರಗಿನ ಪ್ರಕೃತಿ ಎಂದರೆ ಋತುಗಳು, ಗ್ರಹಸಂಚಾರ, ಗಿಡ–ಮರಗಳು, ನದಿ–ಗಿರಿಗಳು, ಮುಂತಾದವು. ನಮ್ಮೀ ಹೊರಗಿನ ಪ್ರಕೃತಿಗೂ ಒಳಗಿನ ಪ್ರಕೃತಿಗೂ ನೇರ ನಂಟಿರುವುದೂ ಸ್ಪಷ್ಟ. ಆದುದರಿಂದಲೇ ಈ ಎರಡು ಪ್ರಕೃತಿಗಳ ನಡುವೆ ಸಾಮರಸ್ಯವೂ ಏರ್ಪಡಬೇಕು. ಆಗಲೇ ನಮ್ಮ ಜೀವನವು ಸುಂದರವೂ ಸುಖಮಯವೂ ಆಗಿರುತ್ತದೆ. ಇಂಥ ವಿವೇಕವೇ ನಮ್ಮ ಸಂಸ್ಕೃತಿ ಕಾಣಿಸಿರುವ ಹಬ್ಬ–ಹರಿದಿನಗಳ ಕೇಂದ್ರಬಿಂದು. ಸುಗ್ಗಿಯ ಹಬ್ಬವಾಗಿ ನಾವು ಆಚರಿಸುವ ಸಂಕ್ರಾಂತಿಯಲ್ಲಿ ಈ ಎರಡು ಪ್ರಕೃತಿಗಳ ಸಾಮರಸ್ಯವನ್ನು ಕಾಣಬಹುದು.

ಸೂರ್ಯನ ಸಂಚಾರವೇ ಸಂಕ್ರಾಂತಿ ಹಬ್ಬದ ಆಚರಣೆಯನ್ನು ನಿರ್ಧರಿಸುವಂಥದ್ದು. ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ‘ಪ್ರವೇಶಿ’ಸುತ್ತಲೇ ಇರುತ್ತಾನೆ. ಇದನ್ನೇ ’ಸಂಕ್ರಾಂತಿ’ ಎನ್ನುವುದು. ಹೀಗೆ ಅವನು ಮಕರರಾಶಿಯನ್ನು ಪ್ರವೇಶಿಸುವ ಸಮಯವನ್ನೇ ‘ಮಕರಸಂಕ್ರಾಂತಿ’ ಎಂದು ಕರೆಯುವುದು. ಈ ಮಕರಸಂಕ್ರಾಂತಿಗೇ ಏಕಿಷ್ಟು ಪ್ರಾಶಸ್ತ್ಯ? ಈ ಸಂಕ್ರಾಂತಿಯಲ್ಲಿ ನಡೆಯುವ ಸೂರ್ಯನ ಸಂಚಾರದಲ್ಲಿ ವಿಶೇಷವುಂಟು; ಸೂರ್ಯ ತನ್ನ ಸಂಚಾರದ ಪಥವನ್ನು ದಕ್ಷಿಣದಿಂದ ಉತ್ತರಕ್ಕೆ ಬದಲಾಯಿಸುತ್ತಾನೆ. ಹೀಗಾಗಿ ಇದೊಂದು ಪರ್ವಕಾಲ ಎಂಬುದು ನಮ್ಮ ಪೂರ್ವಜರ ಎಣಿಕೆ; ಪಿತೃಯಾನದಿಂದ ದೇವಯಾನದ ಕಡೆಗೆ ನಡಿಗೆ ಎಂಬುದು ಇಲ್ಲಿರುವ ನಂಬಿಕೆ. ಪಿತೃಯಾನ ಎಂದರೆ ಹುಟ್ಟು–ಸಾವುಗಳ ಚಕ್ರ; ದೇವಯಾನ ಎಂದರೆ ಶಾಶ್ವತಸುಖದಲ್ಲಿ ನಿಲುಗಡೆ. ಹೀಗಾಗಿಯೇ ಭೀಷ್ಮನು ಶರೀರವನ್ನು ಬಿಡಲು ಆರಿಸಿಕೊಂಡ ಕಾಲ ಉತ್ತರಾಯಣ ಪುಣ್ಯಕಾಲ; ಎಂದರೆ ಮಕರ ಸಂಕ್ರಾಂತಿ; ಮುಕ್ತಿಗಾಗಿ ಆರಿಸಿಕೊಂಡ ಕಾಲವಿದು.

ADVERTISEMENT

ಎಲ್ಲೋ ದೂರದ ‘ಪ್ರಕೃತಿ’ಯಲ್ಲಿ ನಡೆಯುವ ವಿದ್ಯಮಾನಗಳಿಗೂ ನಮ್ಮ ಹಬ್ಬಕ್ಕೂ ಇರುವ ಸಂಬಂಧದ ಕೆಲವು ವಿವರಗಳು ಇವು. ಆದರೆ ನಮ್ಮ ಕಣ್ಣಿಗೇ ಗೋಚರವಾಗುವ ಪ್ರಕೃತಿಯ ಹಲವು ವಿದ್ಯಮಾನಗಳ ಸಂಭ್ರಮವನ್ನೂ ಸಂಕ್ರಾಂತಿಯ ಹಬ್ಬದಲ್ಲಿ ಕಾಣಬಹುದು. ಹೊಲ–ಗದ್ದೆಗಳಲ್ಲಿ ಬೆಳೆದು ನಿಂತಿರುವ ಪೈರು–ತೆನೆಗಳನ್ನು ಕಂಡು ಸಂತೋಷಿಸುವುದು; ಅವುಗಳಿಗೆ ಪೂಜಿಸುವುದು. ದವಸ–ಧಾನ್ಯ–ಕಾಳುಗಳನ್ನು ವಿವಿಧ ಬಗೆಯ ಖಾದ್ಯಗಳನ್ನಾಗಿ ಮಾಡಿಕೊಂಡು ಚಪ್ಪರಿವುದು; ಆತ್ಮೀಯರಿಗೆ ಅವನ್ನು ಹಂಚುವುದು; ಕೃಷಿಗೆ ಪೂರಕವಾಗಿರುವ ದನ–ಕರುಗಳನ್ನು ಸಿಂಗರಿಸಿ, ಪೂಜಿಸುವುದು. ಪ್ರಕೃತಿಗೂ ನಮಗೂ ಇರುವ ಸಾವಯವ ಸಂಬಂಧದ ಹಲವು ನೆಲೆಗಳ ಸಾಂಕೇತಿಕತೆಯನ್ನು ಸಂಕ್ರಾಂತಿಯ ಆಚರಣೆಯ ಉದ್ದಕ್ಕೂ ಕಾಣಬಹುದು.

ಮನೆಯಲ್ಲಿರುವ ಪುಟ್ಟ ಮಕ್ಕಳಿಗೆ ಆರತಿಯನ್ನು ಬೆಳಗಿ, ಸಂಭ್ರಮಿಸುವುದೂ ಉಂಟು ಇಂದು. ಮಕ್ಕಳು ನಮ್ಮತನದ ಪ್ರತಿರೂಪ, ನಮ್ಮತನದ ಮುಂದುವರಿಕೆಯ ಚಕ್ರರೂಪ. ಮಾತ್ರವಲ್ಲ, ಮಕ್ಕಳು ಸೃಷ್ಟಿಯ ಬೆರಗು; ಆ ಬೆರಗನ್ನು ಆತ್ಮತತ್ತ್ವದ ಬೆಳಕಿನಲ್ಲಿ ಕಾಣಬೇಕೆಂಬ ಹಂಬಲ ಸಂಕ್ರಾಂತಿ ನಮಗೆ ಕೊಡುವ ಬೆಂಬಲ. ಸೂರ್ಯೋಪಾಸನೆಯೇ ಸಂಕ್ರಾಂತಿಪರ್ವದ ಪ್ರಧಾನ ತತ್ತ್ವ. ಸೂರ್ಯ ನಮ್ಮ ಸಂಸ್ಕೃತಿಯಲ್ಲಿ ದೊಡ್ಡ ಸಂಕೇತ. ಅವನು ಆತ್ಮಕಾರಕ; ನಮ್ಮ ಹೊರಗಿನ ಆರೋಗ್ಯಕ್ಕೂ, ಒಳಗಿನ ಆರೋಗ್ಯಕ್ಕೂ ಕಾರಣನಾದ ದೇವತೆ. ಈ ಹಬ್ಬದಲ್ಲಿ ಸೂರ್ಯತತ್ತ್ವದ ಹಲವು ಆಯಾಮಗಳು ಅನಾವರಣಗೊಳ್ಳುತ್ತವೆ; ದೇಶದ ಬೇರೆ ಬೇರೆ ಭಾಗಗಳ ಆಚರಣೆಗಳಲ್ಲಿ ಈ ತತ್ತ್ವದ ಬೇರೆ ಬೇರೆ ರೂಪಗಳು ಪ್ರಕಟವಾಗುತ್ತವೆ.

‘ಎಳ್ಳು–ಬೆಲ್ಲ ತಿಂದು ಒಳ್ಳೇ ಮಾತಾಡು’ ಎಂಬುದು ಸಂಕ್ರಾಂತಿಯ ಘೋಷವಾಕ್ಯ. ಒಳ್ಳೆಯ ಮಾತು – ಎಂದರೆ ಅದು ನಮ್ಮ ಹೊರಗಿನ ಪ್ರಕೃತಿಯನ್ನೂ, ಒಳಗಿನ ಪ್ರಕೃತಿಯನ್ನೂ ಬೆಳಗಬಲ್ಲ ಮಾತು. ಅಂಥ ಮಾತುಗಳನ್ನು ಆಡುವಂಥ, ಕೇಳುವಂಥ ವಾತಾವರಣ ಸಮಾಜದಲ್ಲಿ ನೆಲಗೊಳ್ಳಲು ಒದಗುವ ದೇವಯಾನದ ಶಾಂತಿಯೇ ಸಂಕ್ರಾಂತಿಯ ದಿಟವಾದ ಕ್ರಾಂತಿ ಮತ್ತು ಕಾಂತಿ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.