ADVERTISEMENT

ಸಂಕ್ರಾಂತಿ ಸಡಗರ: ಎಳ್ಳು, ಬೆಲ್ಲ ಸವಿಯೋಣ; ಒಳ್ಳೆಯ ಮಾತಾಡೋಣ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 7:45 IST
Last Updated 13 ಜನವರಿ 2026, 7:45 IST
   

ಹೊಸ ವರ್ಷದ ಕ್ಯಾಲೆಂಡರ್‌ನಲ್ಲಿ ಬರುವ ಮೊದಲ ಹಬ್ಬವೇ ಮಕರ ಸಂಕ್ರಮಣ. ಇದು ಸೂರ್ಯನಿಗೆ ಮೀಸಲಾದ ಹಬ್ಬವಾಗಿದೆ. ಈ ಹಬ್ಬದಲ್ಲಿ ರೈತರು ವಿವಿಧ ರೀತಿಯಲ್ಲಿ ಸೂರ್ಯನನ್ನು ಸ್ವಾಗತಿಸುವರು. ‘ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು’ ಎಂಬ ನುಡಿ ಹೇಳವು ಮೂಲಕ ಸಂಬಂಧಗಳನ್ನು ಬೆಸೆಯುವ ಸಾಂಸ್ಕೃತಿಕ ಮಹತ್ವವನ್ನೂ ಹೊಂದಿದೆ.

ಈ ಸುಗ್ಗಿಯ ಹಬ್ಬದ ವಿಶೇಷ ಎಂದರೆ ಎಳ್ಳು ಬೆಲ್ಲ ಮಿಶ್ರಣವನ್ನು ದೇವರಿಗೆ ನೈವೇದ್ಯ ತಯಾರಿಸಿ, ಪೂಜೆ ಮಾಡಿ ಮನೆ ಮಂದಿ ಎಲ್ಲರೂ ಎಳ್ಳು ಬೆಲ್ಲ ಸವಿದು ಬಂಧು ಮಿತ್ರರಿಗೆ ಹಂಚಿ, ಹಾರೈಸಿ ಸಿಹಿ ಮಾತನಾಡುವ ಮೂಲಕ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವುದು.

ಎಳ್ಳು ಬೆಲ್ಲವೇ ಮುಖ್ಯ ಎನ್ನುವುದರ ಹಿಂದಿದೆ ಆರೋಗ್ಯಕರ ಕಾರಣಗಳು

ADVERTISEMENT

ಸಕಲ ಜೀವರಾಶಿಗಳ ಆರೋಗ್ಯಕ್ಕೆ ಸೂರ್ಯನ ಬೆಳಕು ಅವಶ್ಯಕ. ಸೂರ್ಯನು ತನ್ನ ಪಥ ಬದಲಿಸುವ ಕಾಲವೇ ಮಕರ ಸಂಕ್ರಮಣ. ಮಾಗಿಯ ಚಳಿಗೆ ನಡುಗಿದ್ದ ದೇಹಕ್ಕೆ ಉತ್ತರಾಯಣ ಪುಣ್ಯಕಾಲದಲ್ಲಿ ಬೀರುವ ಸೂರ್ಯನ ತೀಕ್ಷ್ಣವಾದ ಬೆಳಕು ಹೊಸ ಹುರುಪನ್ನು ತುಂಬಿ ಮತ್ತಷ್ಟು ಲವಲವಿಕೆ ತುಂಬುತ್ತದೆ. ಜತೆಗೆ ಆರೋಗ್ಯ ಕೂಡಾ ಉತ್ತಮವಾಗುತ್ತದೆ.

ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ಈ ಕಾಲದಲ್ಲಿ ಸೂರ್ಯನು ತೀಕ್ಷ್ಣವಾಗಿ ಉರಿಯುತ್ತಾನೆ. ಈ ಸಮಯದಲ್ಲಿ ಹಗಲಿನ ಸಮಯ ಹೆಚ್ಚಾಗಿದ್ದು ಇರುಳಿನ ಅವಧಿಯು ಕಡಿಮೆ ಇರುತ್ತದೆ. ಇದರ ಜೊತೆಗೆ ಕಾಲಕ್ಕೆ ತಕ್ಕಂತೆ ನಮ್ಮ ಆಹಾರ ಕ್ರಮವೂ ಬದಲಾದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ದರಿಂದ ಈ ಸಮಯದಲ್ಲಿ ಎಳ್ಳು ಬೆಲ್ಲ ಸೇವನೆ ಒಳ್ಳೆಯದು.

ಹವಾಮಾನ ಬದಲಾವಣೆಯಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಹೀಗಾಗಿ ದೇಹವನ್ನು ಆರೋಗ್ಯವಾಗಿ ಇರಿಸಿಕೊಳ್ಳಲು ಎಳ್ಳು, ಬೆಲ್ಲ ಸಹಕಾರಿ. ಬೆಲ್ಲ ಆಹಾರ ಮಾತ್ರವಲ್ಲದೆ ಔಷಧಿಯೂ ಆಗಿದೆ. ಬೆಲ್ಲದಲ್ಲಿರುವ ಆಂಟಿ ಆಕ್ಸಿಡೆಂಟ್ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ದೇಹವನ್ನು ಶಕ್ತಿಯುತವಾಗಿರಿಸಲು ಎಳ್ಳು ಬೆಲ್ಲ ಸಹಕಾರಿ.

ಎಳ್ಳಿನಲ್ಲಿ ಇರುವ ಪ್ರೋಟೀನ್ ಸ್ನಾಯುಗಳ ಕೋಶ ಬಲಪಡಿಸುವುದು ಮಾತ್ರವಲ್ಲದೆ ಅದನ್ನು ಸರಿಪಡಿಸಿ ದೇಹದಲ್ಲಿ ಶಕ್ತಿಯ ಮಟ್ಟ ಮತ್ತು ಆರೋಗ್ಯವನ್ನು ಸುಧಾರಿಸುತ್ತದೆ.

ಬೆಲ್ಲ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಎಳ್ಳು ಬೆಲ್ಲ ಸೇವನೆಯಿಂದ ದೇಹದಲ್ಲಿರುವ ಬೇಡದ ರಾಸಾಯನಿಕಗಳು ಹೊರ ಹೋಗಿ ಮಲಬದ್ಧತೆ ನಿವಾರಣೆ ಮಾಡಿ ಲಿವರ್ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಎಳ್ಳು ಬೆಲ್ಲದಲ್ಲಿರುವ ಸತುವಿನ ಅಂಶ, ಸ್ನಾಯುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ರಕ್ತಸಂಚಾರ ಸರಾಗವಾಗಿ ಆಗುತ್ತದೆ. ಎಳ್ಳಿನಲ್ಲಿರುವ ಕೊಬ್ಬಿನಾಂಶ ಹಾಗೂ ಬೆಲ್ಲದಲ್ಲಿರುವ ಆರೋಗ್ಯಕರ ಕಾರ್ಬೋಹೈಡ್ರೇಟ್ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಎಳ್ಳು ದೇಹಕ್ಕೆ ಶಕ್ತಿಯನ್ನು ನೀಡುವ ಜೊತೆಗೆ ಇದರಲ್ಲಿರುವ ಪೋಷಕಾಂಶಗಳು ತ್ವಚೆಯ ಹೊಳಪನ್ನು ಹೆಚ್ಚಿಸಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಎಳ್ಳು ಬೆಲ್ಲ ಪೋಷಕಾಂಶಗಳ ಆಗರ. ಇವುಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಷಿಯಂ, ಖನಿಜಾಂಶಗಳು, ಫೈಬರ್ ಸಮೃದ್ಧವಾಗಿದೆ. ಇದರ ಜೊತೆ ಕಡಲೆಕಾಯಿ, ಕೊಬ್ಬರಿಯನ್ನೂ ಸೇರಿಸುತ್ತೇವೆ. ಈ ಕೊಬ್ಬರಿ ನಮ್ಮ ದೇಹಕ್ಕೆ ಅಗತ್ಯವಾದ ಕೊಬ್ಬಿನಂಶ ನೀಡುತ್ತದೆ. ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪೋಷಕಾಂಶಗಳು ಇದ್ದು ಮುಖದ ಕಾಂತಿಯನ್ನು ಹೆಚ್ಚಿಸಿ ಹೃದಯದ ಆರೋಗ್ಯಕ್ಕೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡಬಲ್ಲದು.

ಎಳ್ಳು ಬೆಲ್ಲ ಹೀಗೆ ತಯಾರಿಸಿ

ಎಳ್ಳು ಬೆಲ್ಲ ತಯಾರಿಸಲು ಕೊಬ್ಬರಿ, ಬೆಲ್ಲವನ್ನು ಸಣ್ಣಗೆ ಒಂದೇ ಆಕಾರದಲ್ಲಿ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ ಅದರ ಜೊತೆಗೆ ಹುರಿದ ಬಿಳಿ ಎಳ್ಳು, ಹದವಾಗಿ ಹುರಿದು ಸಿಪ್ಪೆ ತೆಗೆದ ಕಡಲೆಬೀಜವನ್ನು ಸಮ ಪ್ರಮಾಣದಲ್ಲಿ ಹಾಕಿ ಎಳ್ಳು ಬೆಲ್ಲವನ್ನು ತಯಾರಿಸುವ ಕೆಲಸ ಗೃಹಿಣಿಯ ಕಲಾತ್ಮಕತೆಯ ಪ್ರದರ್ಶನ ಎಂದರೆ ತಪ್ಪಾಗಲಾರದು. ಈ ಹಬ್ಬದಲ್ಲಿ ಎಳ್ಳು ಬೆಲ್ಲದ ಜೊತೆಗೆ ಸಕ್ಕರೆ ಅಚ್ಚು ಮಾಡುವ ಪದ್ಧತಿ ಇದೆ. ಸಕ್ಕರೆ ಅಚ್ಚು ಮಾಡುವುದು ಸಹ ಗೃಹಿಣಿಯ ಕಲಾತ್ಮಕತೆಯ ಪ್ರದರ್ಶನ.

ಹಬ್ಬದ ದಿನ ಸಾಯಂಕಾಲ ಸಾಂಪ್ರದಾಯಿಕ ಉಡುಗೆ ಧರಿಸಿದ ಮಕ್ಕಳು ತಟ್ಟೆಯಲ್ಲಿ ಎಳ್ಳು ಬೆಲ್ಲದ ಜೊತೆಗೆ ಸಕ್ಕರೆ ಅಚ್ಚು, ಬಾಳೆಹಣ್ಣು, ಕಬ್ಬು, ಎಲಚಿಹಣ್ಣು, ಅರಿಸಿನ, ಕುಂಕುಮ ಹಿಡಿದು ಮನೆ-ಮನೆಗೆ ಹೋಗಿ ಹಿರಿಯರಿಗೆ ಎಳ್ಳು ಬೆಲ್ಲ ಕೊಟ್ಟು ನಮಸ್ಕರಿಸಿ ಆಶೀರ್ವಾದ ಪಡೆಯುವುದು ಸಂಸ್ಕೃತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.