ADVERTISEMENT

ಸಹಜತೆಯೇ ಅಧ್ಯಾತ್ಮ...

ಮಂಜುಳಾ ಸುಬ್ರಹ್ಮಣ್ಯ
Published 11 ಮಾರ್ಚ್ 2020, 19:30 IST
Last Updated 11 ಮಾರ್ಚ್ 2020, 19:30 IST
.
.   

ಸುಖ, ಶಾಂತಿ, ನೆಮ್ಮದಿ ‌– ಇವು ಪ್ರತಿಯೊಬ್ಬ ‌ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಅನುಭವಿಸಲು ಬಯಸುವ ಅವಸ್ಥೆಗಳು. ಇದಕ್ಕೆ ನಾನು, ನೀವೂ ಯಾರೂ ಹೊರತಲ್ಲ. ಈ ‘ಸಂತೋಷ’ ಹೇಗಿರುತ್ತದೆ ಎಂದರೆ ನಮ್ಮಲ್ಲಿ ಉತ್ತರವೂ ಸಿಗದು. ನಾವು ಮಾಡುವ ಕೆಲಸಗಳಲ್ಲಿ‌ ಸಿಗುವ ಆನಂದವೇ? ಇಷ್ಟ ಜನರೊಡನೆ ಬೆರೆತಾಗ ಸಿಗುವ ಖುಷಿಯೇ? ಏನೇ ಆದರೂ ಮನಸ್ಸಿಗೆ ಮುದ ನೀಡುತ್ತಿದೆ, ನೆಮ್ಮದಿಯಾಗಿದ್ದೇವೆ ಅಂದರೆ ಅದು ಸಂತೋಷವಿರಬಹುದೇ? ಈ ‘ಸಂತೋಷ’ವನ್ನು ಪಡೆಯುವ ದಾರಿಯೇ ಆಧ್ಯಾತ್ಮ ಎಂಬ ನಂಬಿಕೆ ನನ್ನದು.

ನಮ್ಮ‌ ಕೆಲಸ ನಮಗೆ ಸಂತೃಪ್ತಿ ಕೊಟ್ಟಿದೆ ಅಂದರೆ ಸಂತೋಷ ತಾನೇ ತಾನಾಗಿ ಆಗುತ್ತದೆ. ಹಾಗಿರುವಾಗ ನಾವು ನಿರ್ವಹಿಸುವ ಕೆಲಸ–ಕಾರ್ಯಗಳೇ ನನ್ನ ಆಧ್ಯಾತ್ಮ, ಅದರ ಮೂಲಕ ನಾನು ನಡೆಸುವ ಸಂವಹನವೇ ಆಧ್ಯಾತ್ಮದ ದಾರಿ.

ಆಧ್ಯಾತ್ಮ‌ ಎಂದರೆ ಧ್ಯಾನಿಸುವುದೇ? ಪೂಜಿಸುವುದೇ? ಹೌದಾದರೆ, ಅದು ಹೇಗೆ? ಹೇಗೆಂದರೆ ಕೆಲಸದ ಮೂಲಕ‌ ಧ್ಯಾನಿಸುವುದು, ನಿರಂತರವಾಗಿ ತೊಡಗಿಸಿಕೊಳ್ಳುವುದರ ಮೂಲಕವೇ ಪೂಜಿಸುವುದು. ಹಿರಿಯರ ಮಾತೊಂದಿದೆ ‘ಆಧ್ಯಾತ್ಮ ಎನ್ನುವುದು ಅವರಿವರ ಮಾತಿನಿಂದ ಕಲಿಯುವುದಲ್ಲ, ಮತ್ತೊಬ್ಬರ ನೋಡಿ ಅಳವಡಿಸಿಕೊಳ್ಳುವುದಲ್ಲ. ನಮಗೆ ನಾವೇ ರೂಢಿಸಿಕೊಳ್ಳುವುದು’ ಎಂದು. ಈ ರೂಢಿಯಾಗುವುದು ನಮ್ಮನ್ನು ನಾವು ಅರಿತುಕೊಳ್ಳುಲು ಪ್ರಯತ್ನ ಮಾಡುವಾಗ; ಅಂತರಂಗದ ಅನುಭವವನ್ನು ಅನುಭವಿಸಿದಾಗ.

ADVERTISEMENT

ಆಧ್ಯಾತ್ಮವೆಂದರೆ ಮನಸ್ಸು, ಪ್ರೀತಿ, ವಾತ್ಸಲ್ಯ, ಮುಗ್ಧತೆ, ಅನುಭವ, ಭಕ್ತಿ ಅಥವಾ ಇವೆಲ್ಲದರ ಹುಡುಕಾಟವೂ ಇರಬಹುದೇನೋ? ಯಾವುದೇ ಒಂದು ಭಾವೋತ್ಕರ್ಷವನ್ನು ನಾವು ತಲುಪಿದಾಗ ಬೇರೆಯದ್ದೇ ಆದ ಲೋಕವೊಂದು ತೆರೆದುಕೊಳ್ಳುತ್ತದೆ. ಅದು ನಮ್ಮ ಬುದ್ದಿಶಕ್ತಿಗಳ ಬೇರೆ ಬೇರೆ ಸ್ತರಗಳನ್ನು ಮೀರಿದುದೂ ಆಗಿರಬಹುದು. ಅಂತಹ ಒಂದು ವಿಶೇಷವಾದ ಶಕ್ತಿಯನ್ನೇ ‘ಆಧ್ಯಾತ್ಮ’ ಎಂದು ಪರಿಭಾವಿಸಬಹುದೇನೋ

ನಾವು ನಮ್ಮ ಮನಸ್ಸನ್ನು ನಿಗ್ರಹಿಸಿಕೊಂಡು‌ ಸುಂದರ ಪ್ರಕೃತಿಯ ಜೊತೆ ಸಹಜವಾದ ಬದುಕು ನಡೆಸಲು‌ ಸಾಧ್ಯವಾಗುವುದೂ ಆಧ್ಯಾತ್ಮವೇ. ಒಂದು ಹೂವು ಮುಂಜಾನೆ ತನ್ನಿಂದ ತಾನೇ ಅರಳುತ್ತದೆ; ಜೊತೆಗೆ ಸುಮಧುರ ಕಂಪು ಪಸರಿಸುತ್ತಿದೆ. ಅದನ್ನು ನೋಡಿ ಮನಸ್ಸು ನಮ್ಮ ಮುದಗೊಳ್ಳುವುದು ಸಹಜ. ಇದು ಯಾರೂ ಹೇಳಿಕೊಟ್ಟು ಬಂದಿರುವುದಿಲ್ಲ. ಈ ಸಹಜತೆಯ ಉತ್ಕೃಷ್ಟವಾದ ಆನಂದವನ್ನು ಅನುಭವಿಸುವುದು ಆಧ್ಯಾತ್ಮವಲ್ಲದೆ ಮತ್ತೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.