ADVERTISEMENT

Navarathri 2025 | ನವರಾತ್ರಿಯಲ್ಲಿ ಶಕ್ತಿಯ ಪೂಜೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
<div class="paragraphs"><p>ನವರಾತ್ರಿ</p></div>

ನವರಾತ್ರಿ

   

ಮನುಷ್ಯನ ಚಿಂತನ ಸಾಮರ್ಥ್ಯವನ್ನು ಸೃಷ್ಟಿಯ ಹಿಂದಿನ ಗುಟ್ಟು ಕಾಡಿರುವಷ್ಟು ಇನ್ನಾವುದೂ ಅಣಕಿಸಿರಲಾರದು. ನಾನು ಯಾರು? ಈ ಜಗತ್ತಿನ ಸ್ವರೂಪವೇನು? ನನ್ನನ್ನು ಹೊರತುಪಡಿಸಿಯೂ ಇಲ್ಲಿ ಇಷ್ಟೆಲ್ಲ ಜೀವರಾಶಿಗಳೂ ಜಡಪ್ರಪಂಚವೂ ತುಂಬಿದೆಯಲ್ಲ, ಇದೆಲ್ಲವನ್ನು ರಂಗದ ಮೇಲಿನ ಪಾತ್ರಗಳಂತೆ ಸೃಜಿಸಿ, ಬಾಳಿಸಿ, ಅಳಿಸುತ್ತಿರುವ ಸೂತ್ರಧಾರಿ ಯಾರು? – ಎನ್ನುವುದೆಲ್ಲ ಆತನ ಬುದ್ಧಿಶಕ್ತಿಗೆ ಸವಾಲುಗಳಾಗಿ ಪರಿಣಮಿಸಿವೆ. ದೇವರ ಗುಟ್ಟನ್ನು ಅವನೇ ಹೇಳಬೇಕಲ್ಲದೆ ಅನ್ಯರಲ್ಲ ಎಂಬ ಸೂಕ್ಷ್ಮವನ್ನು ಅರಿತಿದ್ದ ಭಾರತೀಯರು ಸೃಷ್ಟಿಯ ಇತರ ಅಂಗಗಳೊಡನೆ ಒಡನಾಡುತ್ತ ಈ ಪ್ರಶ್ನೆಗಳಿಗೆ ಕಂಡುಕೊಂಡ ಉತ್ತರವೇ ‘ಶಕ್ತಿ’ ಅಥವಾ ‘ಮಾಯೆ’. ಅದರ ಮೂರ್ತರೂಪವೇ ಆ ‘ಮಹಾದೇವಿ’.

ಈ ಶಕ್ತಿಯನ್ನು ನಮ್ಮ ಪ್ರಾಚೀನರು ವಾಙ್ಮಯದಲ್ಲಿ ಬಹುವಾಗಿ ಕೊಂಡಾಡಿರುವುದು ಪುರಾಣಗಳಲ್ಲಿಯೂ, ಶಂಕರರಾದಿಯಾಗಿ ಇತರ ಆಚಾರ್ಯರ ಸ್ತೋತ್ರಗಳಲ್ಲಿಯೂ, ಶಾಕ್ತಗ್ರಂಥಗಳಾದ ದುರ್ಗಾಸಪ್ತಶತೀ, ಲಲಿತಾಸಹಸ್ರನಾಮಾದಿ ಗ್ರಂಥಗಳಿಂದ ವೇದ್ಯವಾಗುತ್ತದೆ. ಆಕೆಯನ್ನೇ ಪರದೈವವೆಂದು ಬಗೆದು ಅವಳ ಆರಾಧನೆಯಲ್ಲಿಯೇ ನಿರತರಾದ ಜನರು ‘ಶಾಕ್ತ’ ಎಂಬ ಪಂಥವನ್ನೇ ಆರಂಭಿಸಿದರು. ಇನ್ನು ಅದ್ವೈತಾಚಾರ್ಯರಾದ ಶಂಕರರಂತೂ ಸೌಂದರ್ಯಲಹರಿಯಲ್ಲಿ ‘ಶಿವನು ಶಕ್ತಿಯೊಂದಿಗೆ ಸೇರಿಕೊಂಡಿರುವಾಗ ಮಾತ್ರ ಸೃಷ್ಟಿಕಾರ್ಯಕ್ಕೆ ಸಮರ್ಥನಾಗುತ್ತಾನೆ. ಅನ್ಯಥಾ ಆತ ಒಂದಡಿಯಿಡಲೂ ಆರನು’ ಎಂದುಬಿಟ್ಟಿದ್ದಾರೆ. ಒಮ್ಮೆ ‘ನಂದಿತಮೇದಿನಿ’ ಎನ್ನುತ್ತಲೂ ಮತ್ತೊಮ್ಮೆ ‘ಮಹಾಹವತರ್ಪಿತ ಭೂತಪಿಶಾಚರತೇ’ ಎನ್ನುತ್ತಲೂ ಆಕೆಯ ಸೌಮ್ಯ ಮತ್ತು ಉಗ್ರಾವತಾರಗಳೆರಡನ್ನೂ ಕೊಂಡಾಡಿದ್ದಾರೆ. ಅಂಥದು ಆ ತಾಯಿಯ ಸಾರ್ವತ್ರಿಕತ್ವ.

ADVERTISEMENT

ಚೈತನ್ಯವುಳ್ಳದ್ದರಲ್ಲೆಲ್ಲ ದೈವದ ಇರುವಿಕೆಯನ್ನು ಬೆರಗಿನ ಕಣ್ಣುಗಳಿಂದ ಕಾಣುವವರು ಭಾರತೀಯರು. ಆ ಪ್ರವೃತ್ತಿಗನುಗುಣವಾಗಿ ವಸಂತ ಋತುವಿನಲ್ಲೊಮ್ಮೆ ಮತ್ತು ಶರದೃತುವಿನಲ್ಲೊಮ್ಮೆ ‘ನವರಾತ್ರಿ’ ಎಂಬ ಹೆಸರಿನಲ್ಲಿ ದುಷ್ಟರನ್ನು ಸಂಹರಿಸಿ, ದುರಿತಗಳನ್ನು ದೂರೀಕರಿಸಿ ಮಂಗಳವನ್ನು ಉಂಟುಮಾಡುವ ಆಕೆಯನ್ನು ಮತ್ತು ಆಕೆಯ ನವವಿಧ ಅವತಾರಗಳನ್ನು ಆರಾಧಿಸುತ್ತಾರೆ. ಮತ್ತು ಈ ಋತುಗಳೇ ಏಕೆ ಎನ್ನುವುದನ್ನು ದೇವೀ ಭಾಗವತವು ತಿಳಿಸುವುದು ಹೀಗೆ:

‘ಶರತ್ ಮತ್ತು ವಸಂತಋತುಗಳು ಜೀವಿಗಳಿಗೆ ರೋಗಾದಿಗಳನ್ನು ತಂದೊಡ್ಡಿ ಅಪಾಯವನ್ನುಂಟು ಮಾಡುವ, ಪ್ರಾಣಹಾನಿಯನ್ನುಂಟುಮಾಡಬಲ್ಲ ಕಾಲಗಳು. ಅದಕ್ಕೆಂದೇ ಅವುಗಳನ್ನು ಯಮದಂಷ್ಟ್ರೌ ಎನ್ನಲಾಗಿದೆ. ಅವು ಯಮನ ಕೋರೆದಾಡೆಗಳಿದ್ದಂತೆ ಎಂದರ್ಥ! ಹಾಗಾಗಿ ಆ ದುರಿತಗಳನ್ನು ನಾಶಮಾಡುವವಳಾದ ತಾಯಿಯನ್ನು ಶ್ರದ್ಧೆಯಿಂದ ಅರ್ಚಿಸಬೇಕು’. 

ಇದರಲ್ಲಿ ತಥ್ಯವೂ ಇಲ್ಲದಿಲ್ಲ. ಏಕೆಂದರೆ ವಸಂತ ಮತ್ತು ಶರದೃತುಗಳು ಕಾಲವಿಪರ್ಯಯವಾಗುವ ಹೊತ್ತುಗಳು. ಅಂಥ ಬದಲಾವಣೆಯ ಹೊತ್ತಿನಲ್ಲಿ ರೋಗರುಜಿನಗಳು ತೋರಿಕೊಳ್ಳುವುದು ಸಹಜ. ಅವುಗಳನ್ನು ದೇವಿಯು ನಿವಾರಿಸಲಿ ಎಂಬ ಆಶಯ ಪೂರ್ವಿಕರದು.

ಪೌರಾಣಿಕ ಹಿನ್ನೆಲೆ:

ದೇವಿಯ ಕುರಿತಾದ ಆಖ್ಯಾನಗಳಿಗೆಲ್ಲ ಹೃದಯಪ್ರಾಯವಾದದ್ದು ದುರ್ಗಾಸಪ್ತಶತಿ. ಮಾರ್ಕಂಡೇಯಪುರಾಣದಲ್ಲಿ ಅಂತರ್ಗತವಾಗಿರುವ ಈ ಏಳುನೂರು ಶ್ಲೋಕಗಳ ಕಟ್ಟು – ಮೂರು ಲೋಕಗಳನ್ನೂ ನಡುಗಿಸುತ್ತಿದ್ದ, ಲೋಕಕಂಟಕನೂ ಉದ್ಧಟನೂ ಆದ ಮಹಿಷಾಸುರನನ್ನು ದೇವಿಯು ಕೊಂದ ಕಥೆಯನ್ನು ಕಟ್ಟಿಕೊಡುತ್ತದೆ. ಬ್ರಹ್ಮನಿಂದ ಪಡೆದ ವರದಿಂದ ಕೊಬ್ಬಿದ್ದ ಆತನನ್ನು ಸಂಹರಿಸಲೆಂದು ದೇವತೆಗಳೆಲ್ಲ ತಮ್ಮ ತಮ್ಮ ಅಂಶಗಳಿಂದ ಒಂದು ಸ್ತ್ರೀರೂಪವನ್ನು ಉಂಟುಮಾಡಿ ಆಕೆಯ ಹದಿನೆಂಟು ಕೈಗಳಿಗೆ ಹದಿನೆಂಟು ಆಯುಧಗಳನ್ನು ನೀಡಿದರಂತೆ. ಸ್ವತಃ ಹಿಮವಂತನು ಆಕೆಗೆ ವಾಹನವಾಗಿ ಸಿಂಹವನ್ನು ನೀಡಿದನಂತೆ. ಇವುಗಳಿಂದ ಭೂಯಿಷ್ಠಳಾದ ಆ ಚಂಡಿಕೆಯು ಚಾಮರ, ಚಿಕ್ಷುರಾದಿ ಮಹಿಷಾಸುರನ ಸೇನಾಪತಿಗಳನ್ನೆಲ್ಲ ಒಬ್ಬೊಬ್ಬರನ್ನಾಗಿ ಸಂಹರಿಸುತ್ತ ಕೊನೆಯಲ್ಲಿ ಭೀಕರವಾದ ಯುದ್ಧವೊಂದರಲ್ಲಿ ಮಹಿಷಾಸುರನನ್ನು ಸಂಹರಿಸಿದಳು. ಆ ದಿನವು ‘ವಿಜಯದಶಮಿ’ ಎನ್ನುವುದಾಗಿ ಪ್ರಸಿದ್ಧವಾಗಿದೆ. ಅಧರ್ಮದ ಮೇಲಣ ಧರ್ಮದ ಈ ಜಯವನ್ನೇ ನವರಾತ್ರಿಯ ಹೊತ್ತಿನಲ್ಲಿ ಸ್ಮರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.