ಎಐ ಚಿತ್ರ
ನವರಾತ್ರಿ ಮೊದಲ ದಿನದಿಂದ ಕೊನೆಯ ದಿನದವರೆಗೂ ದುರ್ಗೆಯ 9 ಅವತಾರಗಳನ್ನು ಪ್ರತಿದಿನ ಪೂಜಿಸಲಾಗುತ್ತದೆ. ನಿತ್ಯ ದೇವಿಯ ಒಂದೊಂದು ಅವತಾರಗಳಿಗೆ ಶ್ರದ್ಧೆಯಿಂದ ಪೂಜೆ ಸಲ್ಲಿಸಲಾಗುತ್ತದೆ. ನವರಾತ್ರಿಯ ಎರಡನೇಯ ದಿನ ಆಶ್ವಯುಜ ಮಾಸದ ಶುಕ್ಲ ದ್ವಿತೀಯದಂದು ಬ್ರಹ್ಮಚಾರಿಣಿಯನ್ನು ಆರಾಧನೆ ಮಾಡಲಾಗುತ್ತದೆ.
ಹೆಸರೇ ಹೇಳುವಂತೆ ಬ್ರಹ್ಮಚಾರಿಣಿ ಅಂದರೆ ಅವಿವಾಹಿತೆ. ಶಾಂತ ಸ್ವಭಾವವಿರುವ ಬ್ರಹ್ಮಚಾರಿಣಿಯು ಭಕ್ತರಿಗೆ ಶಾಂತಿ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ. ಬ್ರಹ್ಮಚಾರಿಣಿಯನ್ನು ಆರಾಧಿಸುವುದರಿಂದ ಸಿಗುವ ಲಾಭಗಳೇನು? ಪೂಜಾ ವಿಧಾನದ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ
ದೇವಿಯ ರೂಪ ಯಾವುದು?
ಬ್ರಹ್ಮಚಾರಿಣಿಯು ಹಸಿರು ಬಣ್ಣದ ವಸ್ತ್ರವನ್ನು ತೊಟ್ಟಿರುತ್ತಾಳೆ. ಒಂದು ಕೈಯಲ್ಲಿ ಜಪಮಾಲೆ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ. ತನ್ನ ಭಕ್ತರಿಗೆ ಸಂತೋಷ ಹಾಗೂ ಜ್ಞಾನವನ್ನು ನೀಡುತ್ತಾಳೆ.
ಪುರಾಣದ ಕಥೆಯೇನು?
ಪುರಾಣದ ಪ್ರಕಾರ, ಪಾರ್ವತಿಯು ಹಿಮಾಲಯದ ಪುತ್ರಿಯಾಗಿ ಜನಿಸಿದಳು. ಪರಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಇದರಿಂದಾಗಿ ಬ್ರಹ್ಮಚಾರಿಣಿ ಎಂಬ ಹೆಸರು ಬಂದಿದೆ. ತಪಸ್ಸಿನ ವೇಳೆಯಲ್ಲಿ ಹೂ, ಹಣ್ಣು ಹಾಗೂ ಎಲೆಗಳನ್ನು ಸೇವಿಸುತ್ತಿದ್ದಳು. ಕಾಲಾನಂತರದಲ್ಲಿ ಎಲೆಗಳ ಸೇವನೆಯನ್ನು ನಿಲ್ಲಿಸುತ್ತಾಳೆ. ಈ ಕಾರಣಕ್ಕಾಗಿ ಆಕೆಯನ್ನು ಅಪರ್ಣ ಎಂತಲೂ ಕರೆಯಲಾಗುತ್ತದೆ.
ಪೂಜಿಸುವುದರಿಂದಾಗುವ ಲಾಭವೇನು?
ಬ್ರಹ್ಮಚಾರಿಣಿಯು ಸಂತೋಷ ಮತ್ತು ಶಾಂತ ಸ್ವಭಾವದ ರೂಪವಾಗಿದೆ. ಕಠಿಣವಾದದ್ದನ್ನು ಅಭ್ಯಾಸ ಮಾಡಲು, ಮೋಕ್ಷವನ್ನು ಪಡೆಯಲು ಅಥವಾ ಕಾರ್ಯಸಾಧನೆಗಾಗಿ ಈ ಅವತಾರವನ್ನು ಪೂಜಿಸುವುದರಿಂದ ಒಳಿತಾಗುತ್ತದೆ. ದೇವಿಯು ಅನುಗ್ರಹ ಮತ್ತು ಸಮೃದ್ಧಿಯನ್ನು ಕೊಡುತ್ತಾಳೆ. ಬ್ರಹ್ಮಚಾರಿಣಿಯ ಆರಾಧನೆ ಮಾಡುವುದು ತಪಸ್ಸಿಗೆ ಸಮನಾಗಿರುತ್ತದೆ. ಭಕ್ತಿಯಿಂದ ದೇವಿಯನ್ನು ಪೂಜಿಸಿದರೇ ಕುಟುಂಬಕ್ಕೆ ಶಾಂತಿ ಹಾಗೂ ಸಮೃದ್ಧಿ ದೊರೆಯಲಿದೆ.
ಬ್ರಹ್ಮಚಾರಿಣಿಯ ಅರ್ಚನೆ ಮಂತ್ರ ಯಾವುದು ?
’ಓಂ ದೇವಿ ಬ್ರಹ್ಮಚಾರಿಣಿಯೇ ನಮಃ
ಓಂ ದೇವಿ ಬ್ರಹ್ಮಚಾರಿಣಿಯೇ ನಮಃ
ದೇವಿ ಪ್ರಸಾದಿತುಮಹಿ ಬ್ರಹ್ಮಚಾರಿಣಿಯತಮ:’
ದೇವಿಯ ಆರಾಧನೆ ಹೇಗೆ?
ದೇವಿಯ ಆರಾಧನೆಯನ್ನು ಮಾಡಲು ನಿಗದಿತ ಸಮಯವಿಲ್ಲ, ಆ ದಿನ ಯಾವ ಸಮಯದಲ್ಲಾದರೂ ಪೂಜೆ ಸಲ್ಲಿಸಬಹುದು. ಬ್ರಹ್ಮಚಾರಿಣಿಯು ಸಮೃದ್ಧಿ ಮತ್ತು ಶಾಂತಿಯ ಸಂಕೇತವಾಗಿರುವ ಹಸಿರು ಬಣ್ಣದ ವಸ್ತ್ರವನ್ನು ಧರಿಸುತ್ತಾಳೆ. ಇದೇ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜಿಸುವುದರಿಂದ ಸಮೃದ್ಧಿ ಹಾಗೂ ಜ್ಞಾನವನ್ನು ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.