
ಸಂಸ್ಕೃತಿಗಳು ವಿಕೃತಗೊಳ್ಳುತ್ತಿರುವ ಕಾಲದಲ್ಲಿ ನಾವಿದ್ದೇವೆ. ಜಾಗತೀಕರಣದ ಸಂದರ್ಭದಲ್ಲಿ ಬುಡಕಟ್ಟು ಜನಸಮುದಾಯಗಳು ತಮ್ಮ ಮೂಲನೆಲೆ, ಸಂಸ್ಕೃತಿ, ಪರಂಪರೆ, ಆಚರಣೆ, ವಿಧಿವಿಧಾನಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಅಲೆಮಾರಿಗಳಾಗಿದ್ದ ಬಂಜಾರರು ಕಾಡಿನ ಜೀವನವನ್ನು ಬಿಟ್ಟು ತಾಂಡಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದರೆ, ಅವರು ಎಷ್ಟೇ ನಿಯತ್ತಿನಿಂದ ದುಡಿದು ಉಣ್ಣುವ ಪ್ರಯತ್ನ ಮಾಡಿದರೂ ಅವರಿಗೆ ಅಂಟಿರುವ ಸಾಮಾಜಿಕ ಬಹಿಷ್ಕಾರದಂತಹ ಪೀಡೆ ದೂರವಾಗಿಲ್ಲ. ಅವರನ್ನು ಸಮಾಜ ಇಂದಿಗೂ ನಿರ್ಲಕ್ಷ್ಯದಿಂದ ನೋಡುತ್ತಿದೆ. ಇಂತಹ ಸಮುದಾಯಕ್ಕೆ ದಿಕ್ಕು ತೋರಿಸಿದ ಮಹಾನ್ ಸಂತ ಸೇವಾಲಾಲರು.
ಸಮುದಾಯದ ಸಾಂಸ್ಕೃತಿಕ ನಾಯಕ ಸಂತ ಸೇವಾಲಾಲರು, ಭೀಮ ನಾಯ್ಕ್ ಮತ್ತು ಧರ್ಮಿಣಿ ಯಾಡಿ ದಂಪತಿಯ ಮೂರನೇ ಮಗ. ಕರ್ನಾಟಕದ ಸೂರಗೊಂಡನಕೊಪ್ಪದಲ್ಲಿ ರಾಮವತ್ ಎನ್ನುವ ಬುಕ್ಯಾ ಬೆಡಗದಲ್ಲಿ 1739ರ ಫೆಬ್ರುವರಿ 15ರಂದು ಜನಿಸಿದರು. ಶಿರಸಿಯ ಮಾರಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗಿ ಸಂತನಾದರು. ಬಾಲ್ಯದಿಂದಲೂ ಸಂತ ಪರಂಪರೆಯ ಕಡೆಗೆ ಒಲವನ್ನು ಹೊಂದಿದ ಸೇವಾಲಾಲರು, ತಮ್ಮ ಪವಾಡಗಳಿಂದ ಸೇವಾ ‘ಭಾಯ’ (ಅಣ್ಣ) ಆದರು. ಹೆಂಗಸರು, ಗಂಡಸರು ‘ಭಾಯ’ ಎನ್ನುವುದರಿಂದಾಗಿ ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿದು ಬಿಟ್ಟರು. ಸಮುದಾಯದವರು ಅಂದು ಬದುಕಿದ್ದ ಸ್ಥಿತಿಯನ್ನು ಕಂಡು ಅವರ ಬದುಕಿಗೆ ಒತ್ತಾಸೆಯಾಗಿ ನಿಂತು ದುಡಿಮೆ, ಜ್ಞಾನಾರ್ಜನೆ, ಸ್ವಾಭಿಮಾನ, ಸ್ವಾವಲಂಬನೆ ಕುರಿತು ಅರಿವು ಮೂಡಿಸಿದ್ದರು.
ಸೇವಾಲಾಲರು ಲದೇಣಿಯದಲ್ಲಿ ಭಾಗವಹಿಸುತ್ತಾ ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದ ಪ್ರತಿಯೊಂದು ತಾಂಡಗಳ ಮನೆ ಮಾತಾಗಿದ್ದಾರೆ. ಅವರ ತ್ಯಾಗದ ಫಲದಿಂದಾಗಿಯೇ ಬಂಜಾರ ಸಮಾಜ ಸಾಮಾಜಿಕ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಅವರ ಆದರ್ಶಗಳನ್ನು ಮರೆತು ತಾವೇ ಸರ್ವಶ್ರೇಷ್ಠರು ಎಂದು ಮೆರೆಯುತ್ತಿರುವ ಅಜ್ಞಾನಿ ವಿದ್ಯಾವಂತರಿಗೆ ಸಮಾಜವನ್ನು ಕಟ್ಟಿ ಬೆಳೆಸಲು ಸಾಧ್ಯವಾಗುತ್ತಿಲ್ಲ.
ಆದಿವಾಸಿ ಬುಡಕಟ್ಟು ಸಮಾಜವಾಗಿದ್ದರೂ ಈ ಸಮುದಾಯದವರು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಮೀಸಲಾತಿ ಪಡೆದು ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಸಮುದಾಯದಲ್ಲಿ ಭೂರಹಿತರು, ವಲಸೆ ಕಾರ್ಮಿಕರು, ಅವಿದ್ಯಾವಂತರು, ಬಡತನದ ರೇಖೆಗಿಂತ ಕೆಳಗಿರುವವರು ಇವತ್ತಿಗೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚಿರುವ ತಾಂಡಗಳಲ್ಲಿ ನೆಲಸಿರುವ ಈ ಜನಾಂಗ, ಮುಂಬೈನಲ್ಲಿ ಕಟ್ಟಡ ಕಾರ್ಮಿಕರಾಗಿದ್ದಾರೆ.
ಮಂಗಳೂರು, ಬೆಂಗಳೂರು, ಕಾಸರಗೋಡು ಹಾಗೂ ಗೋವಾದ ಕಾಫಿ ತೋಟಗಳಲ್ಲಿ ಸಮುದಾಯದವರು ಕೂಲಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಸಮುದಾಯದ ಸ್ತ್ರೀಯರ ಮೇಲೆ ಪ್ರಬಲ ವರ್ಗದವರಿಂದ ದಬ್ಬಾಳಿಕೆ, ಲೈಂಗಿಕ ದೌರ್ಜನ್ಯ ಘಟನೆಗಳು ನಡೆಯುತ್ತಿದ್ದರೂ ಎಲ್ಲೂ ಪ್ರಕರಣಗಳು ದಾಖಲಾಗದಿರುವುದು ದುರದೃಷ್ಟಕರ. ‘ಯಾರ ಕೈಯಲ್ಲಿ ದೊಣ್ಣೆ ಇದೆಯೋ ಅವರದ್ದೇ ಎಮ್ಮೆ’ ಎನ್ನುವ ಕಾಲದಲ್ಲಿ ಸಳೋಯಿ (ಭೋಟಿ) ಹಡಕಗಳಿಗೆ (ಎಲುಬು) ಹೊಡೆದಾಡಿಕೊಂಡು ತಾಂಡಗಳನ್ನೇ ಬದಲಾವಣೆ ಮಾಡುವ ಮನಃಸ್ಥಿತಿಯಿಂದ ನಾವು ಹೊರಬರಬೇಕು. ಚಿಂತನಶೀಲ ಮನಸ್ಥಿತಿಯನ್ನು ಹೊಂದುವುದರೊಂದಿಗೆ ಒಮ್ಮತದ ಬದುಕನ್ನು ಕಟ್ಟಿಕೊಂಡಾಗ ಮಾತ್ರ ಸ್ವಾಭಿಮಾನ ಕಲಿಸಿದ ಸಂತ ಸೇವಾಲಾಲರ ಕನಸನ್ನು ಈಡೇರಿಸಿದಂತಾಗುತ್ತದೆ.
–ಲೇಖಕ: ಪ್ರಾಧ್ಯಾಪಕ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.