ನಮ್ಮ ಮನಸ್ಸು ಎಷ್ಟೋ ಸಂದರ್ಭಗಳಲ್ಲಿ ಏನೋನೋ ಸಿಕ್ಕುಗಳಲ್ಲಿ ಸಿಕ್ಕಿಹಾಕಿಕೊಂಡು ಸಂಕಟಕ್ಕೆ ತುತ್ತಾಗುತ್ತಿರುತ್ತದೆ. ಇಂಥ ಸಂಕಟಸಮಯಗಳು ಇಂಥದೇ ವಯಸ್ಸಿನವರಿಗೆ, ಇಂಥದೇ ವೃತ್ತಿಯರವರಿಗೆ, ಇಂಥದೇ ಜಾತಿಯವರಿಗೆ, ಇಂಥದೇ ವ್ಯಕ್ತಿಗಳಿಗೆ ಮಾತ್ರವೇ ಬರುತ್ತವೆ ಎಂದೇನಿಲ್ಲ; ಯಾರಿಗೂ ಯಾವ ಕಾಲದಲ್ಲೂ ಬಿಕ್ಕಟ್ಟುಗಳು ಎದುರಾಗಬಹುದೆನ್ನಿ. ಆಗ ಮನಸ್ಸು ಪರಿಹಾರಕ್ಕಾಗಿ ಹುಡುಕುತ್ತದೆ; ಮಾರ್ಗದರ್ಶನಕ್ಕಾಗಿ ಹಂಬಲಿಸುತ್ತದೆ. ಅವರವರ ಸಮಸ್ಯೆಗಳಿಗೆ ತಕ್ಕ ಪರಿಹಾರ ಸಿಕ್ಕರೆ ನೆಮ್ಮದಿ. ಆದರೆ ಹೀಗೆ ಎಲ್ಲರಿಗೂ ಸಮಾಧಾನ ನಿಶ್ಚಯವಾಗಿ ಸಿಕ್ಕೇ ಸಿಗುತ್ತದೆ ಎನ್ನಲಾಗುವುದಿಲ್ಲ. ಹೀಗಿರುವಾಗ ಎಲ್ಲರ ಸಮಸ್ಯೆಗಳಿಗೂ ಒಂದೇ ಕಡೆ ಪರಿಹಾರ ಸಿಗುವಂತಾದರೆ ಹೇಗಿರುತ್ತದೆ? ಹೀಗೆ ಸರ್ವದುಃಖಪರಿಹಾರದ ಏಕಸ್ಥಳವೊಂದು ಇರಲು ಸಾಧ್ಯವೆ? ಈ ಪ್ರಶ್ನೆಗೆ ಉತ್ತರ ಎಂದರೆ, ಅದು ಶ್ರೀಕೃಷ್ಣ.
ಶ್ರೀಕೃಷ್ಣನನ್ನು ಪೂರ್ಣಾವತಾರ ಎಂದು ಪರಂಪರೆ ಒಕ್ಕಣಿಸಿದೆ. ಮಾನುಷಭಾವದ ಎಲ್ಲ ಭಾವಗಳ ಮೂರ್ತರೂಪವಾಗಿ ಅವನು ಕಾಣಿಸಿಕೊಂಡ; ಮಾತ್ರವಲ್ಲ, ಆ ಎಲ್ಲ ಭಾವಗಳನ್ನೂ ಮೀರಿನಿಂತ ಕೂಡ. ಹೀಗಾಗಿಯೇ ಅವನು ಪೂರ್ಣಾವತಾರಿ. ಅವನು ಎಲ್ಲರ ಭಾವಗಳನ್ನೂ ಅರ್ಥಮಾಡಿಕೊಳ್ಳಬಲ್ಲ; ಅವನು ಎಲ್ಲರ ಸಮಸ್ಯೆಗಳಿಗೂ ಪರಿಹಾರವಾಗಿಯೂ ಒದಗಬಲ್ಲ. ಹೀಗಾಗಿಯೇ ಅವನು ಜಗದ್ಗುರು.
ಶ್ರೀಕೃಷ್ಣನು ಗೀತೆಯನ್ನು ಉಪದೇಶಿಸಿದ್ದು ಕೇವಲ ಅರ್ಜುನನಿಗೆ ಮಾತ್ರವಲ್ಲ; ಅರ್ಜುನ ಅವನಿಗೆ ಒಂದು ನೆಪ ಅಷ್ಟೆ; ಅವನ ಉಪದೇಶದ ಉದ್ದೇಶ ಇಡಿಯ ಮನುಕುಲ. ನಮ್ಮ ಎಲ್ಲರ ಜೀವನದ ನೆಮ್ಮದಿಗೂ ಬೇಕಾದ ತಿಳಿವಳಿಕೆಯಷ್ಟೂ ಗೀತೆಯಲ್ಲಿದೆ. ಶ್ರೀಕೃಷ್ಣನು ಯಾರಿಗೂ ಒದಗಬಲ್ಲ; ಯಾರ ಸಮಸ್ಯೆಗೂ ಪರಿಹಾರವಾಗಬಲ್ಲ – ಎಂಬುದೇ ಅವನ ವ್ಯಕ್ತಿತ್ವದ ವಿಶೇಷತೆ. ನಾವಿಂದು ಬದುಕುವುದಕ್ಕಾಗಿಯೇ ಹೋರಾಡುತ್ತಿದ್ದೇವೆ, ಹೊಡೆದಾಡುತ್ತಿದ್ದೇವೆ. ಆದರೆ ಗೀತೆ ನಮಗೆ ಚೆನ್ನಾಗಿ ಬದುಕುವ ದಾರಿಯನ್ನು ಕಾಣಿಸಿಕೊಡುತ್ತದೆ; ಮಾತ್ರವಲ್ಲ, ನೆಮ್ಮದಿಯಾಗಿಯೂ ಬದುಕುವ ಬಗೆಯನ್ನು ತಿಳಿಸಿಕೊಡುತ್ತದೆ. ಸಂಗ್ರಾಮದ ನಡುವೆ ತೋರಿಕೊಂಡ ಗೀತೆಗೆ ಜೀವನಸಂಗ್ರಾಮದ ಎಲ್ಲ ಪಟ್ಟುಗಳೂ ಗೊತ್ತಿದೆ. ಶ್ರೀಕೃಷ್ಣನಾದರೂ ಈ ಪಟ್ಟು–ವರಸೆಗಳನ್ನು ಉಪದೇಶಿಸಿದವನಷ್ಟೆ ಅಲ್ಲ; ಅವನ್ನು ತಾನೇ ಅನುಸರಿಸಿದವನು; ಅನುಸರಿಸಿ ‘ಜಯ’ಕ್ಕೆ ಕಾರಣನಾದವನು.
ಪ್ರಸಾದೇ ಸರ್ವದುಃಖಾನಾಂ
ಹಾನಿರಸ್ಯೋಪಜಾಯತೇ ।
ಪ್ರಸನ್ನಚೇತಸೋ ಹ್ಯಾಶು
ಬುದ್ಧಿಃಪರ್ಯವತಿಷ್ಠತೇ ।।
‘ಮನಸ್ಸು ನೆಮ್ಮದಿಯಾಗಿದ್ದಾಗ ಎಲ್ಲ ದುಃಖಗಳೂ ನಾಶವಾಗುತ್ತವೆ. ಏಕೆಂದರೆ ಅಂಥ ಚಿತ್ತಶುದ್ಧನ ಬುದ್ಧಿ ಬೇಗನೆ ಸ್ಥಿರವಾಗುತ್ತದೆ’ ಎಂಬುದು ಶ್ರೀಕೃಷ್ಣನ ಈ ಮಾತಿನ ತಾತ್ಪರ್ಯ.
ನಮ್ಮ ಎಲ್ಲರ ಇಂದಿನ ಸಮಸ್ಯೆಯನ್ನು ಶ್ರೀಕೃಷ್ಣ ಅಂದೇ ಗುರುತಿಸಿದ್ದು ಮಾತ್ರವಲ್ಲ, ಅದಕ್ಕೆ ಪರಿಹಾರವನ್ನೂ ಸೂಚಿಸಿದ್ದಾನೆ. ನಾವು ನಮ್ಮ ಮನಸ್ಸನ್ನು ಎಲ್ಲಿ ನೆಲೆಯಾಗಿಸಬೇಕೋ ಅಲ್ಲಿ ಅದನ್ನು ನೆಲೆಗೊಳ್ಳಲು ಬಿಡುತ್ತಿಲ್ಲ; ಈ ಕಾರಣದಿಂದಲೇ ಮನಸ್ಸು ಉದ್ವೇಗಕ್ಕೆ ಒಳಗಾಗುತ್ತಿರುತ್ತದೆ. ಉದ್ವೇಗಕ್ಕೆ ಸಿಕ್ಕಿದ ಮನಸ್ಸು ಬುದ್ಧಿಯನ್ನು ಕೆಡಿಸುವುದು ಸಹಜ. ಅಂಕೆಯಲ್ಲಿರದ ಮನಸ್ಸು–ಬುದ್ಧಿಗಳು ಒಂದಾಗಿ ನಮ್ಮ ಜೀವನದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿರುತ್ತದೆ.
ನಮ್ಮ ಮನಸ್ಸು ಪ್ರತಿ ಕ್ಷಣವೂ ಕೆರಳುತ್ತಿರುತ್ತದೆ; ಅದು ಒಂದೆಡೆ ನಿಲ್ಲದು; ಸದಾ ಕಾಲ ಯಾವುದಾದರೊಂದು ವಿಷಯದ ಹಿಂದೆ ಬಿದ್ದು ಅಲೆಯುತ್ತಲೇ ಇರುತ್ತದೆ. ಒಂದು ಕ್ಷಣವೂ ನೆಮ್ಮದಿಯಾಗಿ ಯಾವ ವಿಷಯದ ಬಗ್ಗೆಯೂ ನಾವು ನಮ್ಮ ಗಮನವನ್ನು ಕೇಂದ್ರೀಕರಿಸಲು ಸೋಲುತ್ತಿದ್ದೇವೆ. ಮನಸ್ಸಿನ ನಿಗ್ರಹದಲ್ಲಿಯೇ ಜೀವನದ ನೆಮ್ಮದಿಯ ಗುಟ್ಟು ಅಡಗಿದೆ ಎಂಬುದು ಶ್ರೀಕೃಷ್ಣನ ಮುಖ್ಯ ಉಪದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.