
ಎಐ ಚಿತ್ರ
ತುಳಸಿಯನ್ನು ಪೂಜಿಸುವುದರಿಂದ ಇಷ್ಟಾರ್ಥ ಸಿದ್ದಿಯಾಗುತ್ತೆ ಎಂಬ ನಂಬಿಕೆ ಇದೆ. ಅಕ್ಟೋಬರ್ 2ರಂದು ತುಳಸಿ ಹಬ್ಬವಿದ್ದು, ತುಳಸಿ ಹಬ್ಬದ ಹಿಂದಿರುವ ಪುರಾಣ ಕಥೆಗಳೇನು? ಅದರ ಹಿನ್ನೆಲೆ ಏನು? ಎಂಬುದನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ತಿಳಿಸಿದ್ದಾರೆ.
ಪುರಾಣ ಕಥೆಗಳು:
ಕಾಲ ನೇಮಿ ಎಂಬ ರಾಕ್ಷಸನಿಗೆ ಬೃಂದಾ ಎಂಬ ಮಗಳಿರುತ್ತಾಳೆ. ಮಹಾವಿಷ್ಣುವಿನ ಪರಮ ಭಕ್ತೆಯಾದ ಅವಳು ರಾಕ್ಷಸನಾದ ಜಲಂಧರನನ್ನು ವಿವಾಹವಾಗುತ್ತಾಳೆ. ಅವಳ ಪತಿ ಜಲಂಧರನು ದೇವತೆಗಳನ್ನು ಪಿಡಿಸಲು ಆರಂಭಿಸಿದಾಗ ಶಿವ ಹಾಗೂ ಜಲಂಧರನ ನಡುವೆ ಯುದ್ಧ ನಡೆಯುತ್ತದೆ. ಆ ಯುದ್ದದಲ್ಲಿ ಜಲಂಧರ ಸೋಲುವುದಿಲ್ಲ. ಆಗ ವಿಷ್ಣು ಒಂದು ತಂತ್ರ ಹೂಡಿ ಜಲಂಧರನ ರೂಪದಲ್ಲಿ ಬೃಂದಾಳ ಬಳಿ ಬರುತ್ತಾನೆ. ಬೃಂದ ತನ್ನ ಪತಿಯೆಂದು ತಿಳಿದು ಜಲಂಧರನ ರೂಪದಲ್ಲಿರುವ ಮಹಾವಿಷ್ಣುವನ್ನು ಸ್ಪರ್ಶಿಸುತ್ತಾಳೆ. ತನ್ನ ಪತಿಯಲ್ಲ ಎಂದು ತಿಳಿದ ಮೇಲೆ ಜಲಂಧರನ ರೂಪದಲ್ಲಿರುವ ಮಹಾವಿಷ್ಣುವಿಗೆ ನೀನು ಕಲ್ಲಾಗಿ ಹೋಗು ಎಂದು ಶಪಿಸುತ್ತಾಳೆ.
ಆಗ ಬೃಂದ ತನ್ನ ಪತಿವ್ರತ ಧರ್ಮಕ್ಕೆ ಕುಂದು ಬಂದಿತೆಂದು ಭಾವಿಸಿ ಪ್ರಾಣ ತ್ಯಾಗ ಮಾಡಲು ಸಿದ್ಧವಾಗುತ್ತಾಳೆ. ಆಗ ವಿಷ್ಣು ಸಾಲಿಗ್ರಾಮ ರೂಪದಲ್ಲಿ ಶಿಲೆಯಾಗುತ್ತಾನೆ. ಈ ಸಾಲಿಗ್ರಾಮವು ನೇಪಾಳದ ಗಂಡಕಿ ನದಿಯ ಬಳಿ ದೊರೆಯುತ್ತದೆ. ಇದರಿಂದ ರಾಕ್ಷಸನಾದ ಜಲಂಧರ ತನ್ನ ಅಮರತ್ವ ಕಳೆದುಕೊಂಡು ಶಿವನಿಂದ ಕೊಲ್ಲಲ್ಪಡುತ್ತಾನೆ ಎಂದು ಹೇಳಲಾಗುತ್ತದೆ.
ಬೃಂದ ತನ್ನ ಆರಾಧ್ಯ ದೈವ ವಿಷ್ಣುವೇ ಮೋಸ ಮಾಡಿದ ಹಾಗೂ ತನ್ನ ಪತಿ ಜಲಂಧರನನ್ನು ಕಳೆದುಕೊಂಡ ದುಃಖದಲ್ಲಿ ಮರಣ ಹೊಂದಲು ತೀರ್ಮಾನಿಸುತ್ತಾಳೆ. ವಿಷ್ಣು ಅವಳ ಮರಣಕ್ಕೆ ಮುನ್ನ ಬೃಂದಾಳಿಗೆ ಒಂದು ವರವನ್ನು ದಯಪಾಲಿಸುತ್ತಾನೆ. ‘ಬೃಂದ ತುಳಸಿ ಎಂಬ ಹೆಸರಿನಿಂದ ಬೃಂದಳಾಗಿ, ಸಾಲಿಗ್ರಾಮ ರೂಪದಲ್ಲಿರುವ ಮಹಾನ್ ವಿಷ್ಣುವು ತುಳಸಿಯನ್ನು ವಿವಾಹವಾಗಲಿದೆ ಎಂದು ವರ ನೀಡುತ್ತಾನೆ.
ತುಳಸಿಯ ರೂಪದಲ್ಲಿರುವ ಬೃಂದಾಳಿಗೆ ಶ್ರೇಷ್ಠತೆಯನ್ನು ದಯಪಾಲಿಸುತ್ತಾನೆ. ಆದ್ದರಿಂದ ವಿಷ್ಣುವಿನ ಪೂಜೆಯಲ್ಲಿ ತುಳಸಿಗೆ ಬಹಳ ಮಹತ್ವವಿದೆ. ತುಳಸಿ ಪೂಜೆಯಲ್ಲಿ ವಿಷ್ಣುವಿಗೆ ಪೂಜೆ ಸಲ್ಲಿಸುವುದರಿಂದ ಶುಭಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ. ಪುರಾಣ ಕಥೆಗಳ ಪ್ರಕಾರ, ಕಾರ್ತಿಕ ಮಾಸದ ಶುಕ್ಲ ಪಕ್ಷದ 12ನೆಯ ದಿನ ತುಳಸಿಯ ವಿವಾಹವಾಯಿತೆಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.