ADVERTISEMENT

ವಚನ ವಾಣಿ | ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ-3

ಡಾ.ಬಸವರಾಜ ಸಾದರ
Published 3 ಆಗಸ್ಟ್ 2020, 3:36 IST
Last Updated 3 ಆಗಸ್ಟ್ 2020, 3:36 IST
ಭಕ್ತಿ ಭಂಡಾರಿ ಬಸವಣ್ಣ
ಭಕ್ತಿ ಭಂಡಾರಿ ಬಸವಣ್ಣ   

ಭೂತಿಕನ ಸೀರೆಯ ಸಾತ್ವಿಕ ನೆರೆ ಉಟ್ಟಡೆ
ಭೂತಿಕ ಸಾತ್ವಿಕನಾದ, ಸಾತ್ವಿಕ ಭೂತಿಕನಾದ:
ಈ ಮಾತು ಬಿದ್ದುದು ನೋಡಾ, ರಾಜಬೀದಿಯಲ್ಲಿ.
ಅಯ್ಯಾ, ಭೂತ ಕೆಣಕಿದಡಿಲ್ಲ, ಮಾತ ಮುಚ್ಚಿದಡಿಲ್ಲ,
ಓತು ಕೂಡುವ ಅನುವ, ಕೂಡಲಸಂಗಮದೇವ ತಾನೆ ಬಲ್ಲ

ಮುಖವಾಡ ಹಾಕಿಕೊಂಡು ಮತ್ತು ವೇಷ ಅದಲು-ಬದಲು ಮಾಡಿಕೊಂಡು ಸ್ವಾರ್ಥ ಸಾಧಿಸಿಕೊಳ್ಳುವ ಮೋಸಗಾರ ಜನ ಯಾವ ಕಾಲದಲ್ಲಾದರೂ ಸಮಾಜಕ್ಕೆ ಕಪ್ಪು ಚುಕ್ಕೆಗಳೆ. ಬಹುಶಃ ಹನ್ನೆರಡನೆಯ ಶತಮಾನದ ಶರಣ ಕ್ರಾಂತಿಗೆ ವಿರುದ್ಧವಾದ ನೆಲೆಯಲ್ಲಿ ಇಂಥ ಮೋಸಗಾರರ ಹಾವಳಿ ಅಧಿಕವಾಗಿತ್ತೆಂದು ತೋರುತ್ತದೆ. ಅಂಥವರನ್ನು ಕುರಿತೇ ಬಸವಣ್ಣ ಈ ವಚನ ರಚಿಸಿದ್ದಾನೆ. ಪ್ರಸ್ತುತ ವಚನ, ವೇಷ ಬದಲಿಸುವವರ ಹಾಲಚಾಲಗಳ ಬಗ್ಗೆ ಮಾತಾಡುತ್ತಲೇ, ಅಂಥವರ ಆಟ ನಡೆಯಲಾರದೆಂಬ ಎಚ್ಚರಿಕೆಯನ್ನೂ ಕೊಡುತ್ತ, ಇಂಥ ಅಡ್ಡನಡೆ ಬಿಟ್ಟು ಸಾತ್ವಿಕ ದಾರಿಯಲ್ಲಿ ನಡೆದರೆ ಅದರಿಂದ ದೊರೆಯುವ ಸತ್ಪರಿಣಾಮವು ಹೇಗೆ ಇಡೀ ಸಮುದಾಯಕ್ಕೆ ಹಿತಕರವಾಗುತ್ತದೆ ಎಂಬುದನ್ನೂ ಸೂಚಿಸುತ್ತದೆ.

ಭೂತಗುಣದವರ ಬಟ್ಟೆಗಳನ್ನು ಸಾತ್ವಿಕರು ಮತ್ತು ಸಾತ್ವಿಕ ಗುಣದವರ ಬಟ್ಟೆಗಳನ್ನು ಭೂತಗುಣದವರು ಹಾಕಿಕೊಂಡರೆ, ಆ ಕ್ಷಣಕ್ಕೆ ಹೊರನೋಟದಲ್ಲಿ ಅವರ ವೇಷಗಳು ಬದಲಾಗಿ ಕಾಣಬಹುದೇನೋ ನಿಜ. ಆದರೆ ಅವರ ಒಳಗಿನ ಬಣ್ಣ ಬದಲಾಗಲು ಸಾಧ್ಯವಿಲ್ಲ. ಅಂತೆಯೇ, 'ಅದಲು-ಬದಲಿನ ನಿಮ್ಮ ಈ ವೇಷದಾಟ ʼಕೂಡಲಸಂಗನ ರಾಜಬೀದಿಯಲ್ಲಿʼ ನಡೆಯಲಾರದು'ಎಂದು ಬಸವಣ್ಣ ಅಂಥವರಿಗೆ ಎಚ್ಚರಿಕೆ ಕೊಡುತ್ತಾನೆ.

ADVERTISEMENT

ಹಾಗೆಯೇ, ನಿಮ್ಮಲ್ಲಿರುವ ಭೂತವನ್ನು ಸರಿಯಾಗಿ ಕೆಣಕಿದರೆ ಮತ್ತು ನಿಮ್ಮ ಮಾತುಗಳನ್ನು ಮುಚ್ಚಿ ಹಾಕಿದರೆ ಸಾಕು, ನಿಮ್ಮ ಅವತಾರ ಅಲ್ಲಿಗೆ ಮುಗಿಯುತ್ತದೆ ಎಂದು ಧ್ವನಿಪೂರ್ಣವಾಗಿ ತಿವಿಯುತ್ತಾನೆ ಕೂಡ. ವೇಷ ಬದಲಿಸಿ ಕುತಂತ್ರದ ಆಟವಾಡುತ್ತಿದ್ದ ಅಂಥ ಅನೇಕ ಭೂತಗಳ ಬಟ್ಟೆಗಳನ್ನು ಶರಣಗಣವು ಕಳಚಿ ಹಾಕಿದ್ದೇ ಅಲ್ಲವೆ ದೊಡ್ಡ ಕ್ರಾಂತಿಗೆ ಕಾರಣವಾದದ್ದು?

ವೇಷಗಳನ್ನು ಬದಲಿಸುವ ವಂಚಕರಿಗೆ ಹೀಗೆ ವಚನದ ಮೊದಲ ಭಾಗದಲ್ಲಿ ಎಚ್ಚರಿಕೆ ಕೊಡುವ ಬಸವಣ್ಣ ಮುಂದಿನ ಒಂದು ಪಂಕ್ತಿಯಲ್ಲಿ, ಇದನ್ನೆಲ್ಲ ಬಿಟ್ಟು ಎಲ್ಲರೂ ಪ್ರೀತಿಯಿಂದ ಕೂಡಿ ಬಾಳುವ ಸುಖ ಇದೆಯಲ್ಲ, ಅದಕ್ಕೆ ಸಮನಾದುದು ಯಾವುದೂ ಇಲ್ಲ, ಅದನ್ನು ಕೂಡಲಸಂಗಮದೇವರು ಮಾತ್ರ ಬಲ್ಲ ಎನ್ನುತ್ತ, ನಿಮ್ಮ ಈ ಅದಲು-ಬದಲಾದ ವೇಷ ಕಳಚಿ, ಆ ಕೂಡುಬಾಳಿನ ಸುಖದ ಅರಿವನ್ನು ನಿಮ್ಮ ಮೈ-ಮನಸ್ಸುಗಳಿಗೆ ತಂದುಕೊಳ್ಳಿ ಎಂದು ಹಿತವಚನದ ಮಾತು ಹೇಳುತ್ತಾನೆ.

ಸಪ್ತಶೀಲಗಳನ್ನೊಳಗೊಂಡ ಸಾತ್ವಿಕ ಹಾಗೂ ಪ್ರಗತಿಪರ ಸಮಾಜ ನರ‍್ಮಿಸುವ ಗುರಿ ಶರಣರದಾಗಿತ್ತು.ಅದು ಪ್ರಜಾಪ್ರಭುತ್ವದ ಮಾರ್ಗವಾಗಿತ್ತು ಕೂಡ. ಅದನ್ನೇ ಬಸವಣ್ಣ ಈ ವಚನದಲ್ಲಿ 'ರಾಜಬೀದಿ'ಎಂದು ಕರೆದದ್ದು. ಸಕಲ ಜೀವಾತ್ಮರ ಲೇಸ ಬಯಸುವ ಆ ಮಾರ್ಗದಲ್ಲಿ ಮೋಸಕ್ಕೆ, ಕುತಂತ್ರಕ್ಕೆ ಮತ್ತು ವೇಷದಾಟಕ್ಕೆ ಅವಕಾಶ ಇರಲಿಲ್ಲವೆಂಬುದು ಈ ವಚನದಿಂದ ಖಚಿತವಾಗುತ್ತದೆ. ಅದರ ಜೊತೆಗೆ ಎಲ್ಲರೂ ಒಂದಾಗಿ ಪ್ರೀತಿಯ ಸಹಬಾಳ್ವೆ ನಡೆಸುವ ಸಂದೇಶವನ್ನೂ ಈ ವಚನ ಸಾರುತ್ತದೆ. ಇಂಥ ಕಾರಣಕ್ಕಾಗಿಯೇ ಐತಿಹಾಸಿವಾಗಿ ತುಂಬ ಮಹತ್ವ ಪಡೆಯುವ ಬಸವಣ್ಣನ ಈ ವಚನ ವರ್ತಮಾನಕ್ಕೂ ಅಷ್ಟೇ ಪ್ರಸ್ತುತವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.