ADVERTISEMENT

ಲೋಕಾಪುರ: ಹಣ್ಣು, ತರಕಾರಿ ಬೆಳೆದು ಮಾದರಿಯಾದ ರೈತ

ವೈವಿಧ್ಯಮಯ ಬೆಳೆ ಬೆಳೆದಿರುವ ರಂಗಪ್ಪ ತಳವಾರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 7:08 IST
Last Updated 28 ಮಾರ್ಚ್ 2025, 7:08 IST
ದಾಳಿಂಬೆ ಬೆಳೆಯೊಂದಿಗೆ ರೈತ ರಂಗಪ್ಪ ತಳವಾರ
ದಾಳಿಂಬೆ ಬೆಳೆಯೊಂದಿಗೆ ರೈತ ರಂಗಪ್ಪ ತಳವಾರ   

ಲೋಕಾಪುರ: ಕಳೆದ 18 ವರ್ಷಗಳಿಂದ ಹಣ್ಣು ಮತ್ತು ತರಕಾರಿ ಬೆಳೆಯುತ್ತಿರುವ ಲೋಕಾಪುರ ತಾಲ್ಲೂಕು ಹೆಬ್ಬಾಳ ಗ್ರಾಮದ ರೈತ ರಂಗಪ್ಪ ನಿಂಗಪ್ಪ ತಳವಾರ ಅವರು ವರ್ಷದಿಂದ ವರ್ಷಕ್ಕೆ ಆದಾಯ ವೃದ್ಧಿಸಿಕೊಂಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಎರಡು ಎಕರೆ ಜಮೀನಿನಲ್ಲಿ ನಿರಂತರ ದಾಳಿಂಬೆ ಬೆಳೆಯುತ್ತಾ ಬಂದಿದ್ದಾರೆ. ಇದಲ್ಲದೆ ಸಪೋಟಾ, ಸೀತಾಫಲ, ಪಪ್ಪಾಯಿ, ತೆಂಗು ಹಾಗೂ ವಿವಿಧ ತರಕಾರಿಗಳನ್ನು ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಪ್ರತಿವರ್ಷ ₹12 ರಿಂದ ₹15 ಲಕ್ಷದವರೆಗೂ ಆದಾಯ ಪಡೆಯುತ್ತಿದ್ದಾರೆ.

ಇದೀಗ ರಂಗಪ್ಪ ಅವರ ಮಗಳ ಪುತ್ರ ದುಂಡಪ್ಪ ಕೂಡಾ ಅಜ್ಜನ ಕೃಷಿ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಎಂಜಿನಿಯರಿಂಗ್‌ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿ ಕೃಷಿಯಲ್ಲಿ ತೊಡಿಗಿಸಿಕೊಂಡಿದ್ದು, ಸ್ಥಳೀಯವಾಗಿ ಬಿಎಸ್‌ಸಿ ಕೋರ್ಸ್‌ ಓದುತ್ತಿದ್ದಾರೆ.

ADVERTISEMENT

ಕೊಳವೆಬಾವಿ ನೀರಿನ ಆಶ್ರಯದಲ್ಲಿ ನೀರಾವರಿ ಸೌಲಭ್ಯ ಮಾಡಿಕೊಂಡಿದ್ದು, ಹನಿ ನೀರಾವರಿ ಅಳವಡಿಸಿದ್ದಾರೆ. ಎಮ್ಮೆ, ಕುರಿ ಹಾಗೂ ಹಸುಗಳನ್ನು ಸಾಕಾಣಿಕೆ ಮಾಡಿದ್ದು, ಜಾನುವಾರುಗಳಿಂಧ ಸಿಗುವ ಸಗಣಿಯನ್ನು ಜೀವಾಮೃತ ತಯಾರಿಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. 200 ಲೀಟರ್ ನೀರು, 2 ಕೆಜಿ ಜೀವಾಮೃತ, ಬೆಲ್ಲ ವಿಶ್ರಣ ಮಾಡಿ ಒಂದು ವಾರ ನೆರಳಿನಲ್ಲಿ ಇಟ್ಟು ನಂತರ ಅದರಲ್ಲಿ ತಯಾರಾದ 20 ಲೀಟರ್‌ ರಾಸಾಯನಿಕವನ್ನು 180 ಲೀಟರ್ ನೀರಿನಲ್ಲಿ ಬೆರೆಸಿ ಹನಿ ನೀರಾವರಿ ಮೂಲಕ ಬೆಳೆಗಳಿಗೆ ಒದಗಿಸುತ್ತಾರೆ. ಸಾವಯವ ಕೃಷಿ ಪದ್ಧತಿಯಿಂದ ಎರೆಹುಳಗಳ ಸಂತಾನೋತ್ಪತ್ತಿ ಆಗುತ್ತವೆ. ಮಣ್ಣು ಹದವಾಗುತ್ತದೆ. ಬೇರುಗಳು ಭೂಮಿಯ ಆಳಕ್ಕೆ ಹೋಗುತ್ತವೆ ಎಂದು ರಂಗಪ್ಪ ವಿವರಿಸುತ್ತಾರೆ.

ಜಮೀನಿನ ಬದುಗಳಲ್ಲೂ ವೈವಿಧ್ಯಮಯ ತರಕಾರಿ ಬೆಳೆಸಿದ್ದು, ಅದರಿಂದಲೂ ಹೆಚ್ಚುವರಿ ಆದಾಯ ಪಡೆಯುತ್ತಿದ್ದಾರೆ. ರಂಗಪ್ಪ ಅವರ ಕೃಷಿ ಸಾಧನೆಯನ್ನು ಶ್ಲಾಘಿಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯವು ಮೂರು ವರ್ಷಗಳವರೆಗೂ ಬೆಳೆಗಳಿಗೆ ಅಗತ್ಯ ಕ್ರಿಮಿ ಕೀಟನಾಶಕವನ್ನು ಉಚಿತವಾಗಿ ಒದಗಿಸಿದೆ.

ಹಾಗಲಕಾಯಿ ಬೆಳೆದಿರುವ ರೈತ ರಂಗಪ್ಪ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.