
ಮೂರುವರೆಯಿಂದ ಐದು ಅಡಿವರೆಗಿನ ಎತ್ತರ, ಮೇಲುಗಡೆ ಬಿಳಿಯಾಗಿದ್ದರೂ, ಒಳಗಡೆ ತಿಳಿಗುಲಾಬಿ ಬಣ್ಣ ಹೊಂದಿದ ರೆಕ್ಕೆಗಳು, ಉದ್ದನೆಯ ಕಾಲುಗಳು ಹಾಗೂ ಕತ್ತು, ಕಪ್ಪು ತುದಿಯಿರುವ ಬಾಗಿದ ಕೊಕ್ಕು, ರಾಜ ಗಾಂಭೀರ್ಯದ ನಡಿಗೆ.. ಇದು ಆಲಮಟ್ಟಿ ಹಿನ್ನೀರಿನಲ್ಲಿ ಕಾಣುವ ಗ್ರೇಟರ್ ಫ್ಲೆಮಿಂಗೋ (ರಾಜಹಂಸ) ಚಿತ್ರಣ. ನೂರಾರು ಸಂಖ್ಯೆಯಲ್ಲಿ ಸಾಲು, ಸಾಲಾಗಿ ಹಿನ್ನೀರಿನ ದಂಡೆಯಲ್ಲಿ ಆಹಾರ ಹುಡುಕುತ್ತಾ ಸಾಗುವುದನ್ನು ಕಾಣಬಹುದಾಗಿದೆ.
ಆಲಮಟ್ಟಿ ಜಲಾಶಯದ ನೀರು ಲಕ್ಷಾಂತರ ಹೆಕ್ಟೇರ್ ಭೂಮಿಗೆ ನೀರುಣಿಸಿ ರೈತರ ಪಾಲಿಗೆ ವರವಾಗಿದ್ದರೆ, ಹಿನ್ನೀರು ಲಕ್ಷಾಂತರ ದೇಶ, ವಿದೇಶ ಪಕ್ಷಿಗಳಿಗೂ ಆಶ್ರಯ ತಾಣವಾಗಿದೆ. ಎರಡು ದಶ ವರ್ಷಗಳಿಂದ ಹಿನ್ನೀರಿನಲ್ಲಿ ವಿವಿಧ ಪ್ರಭೇದದ ಲಕ್ಷಾಂತರ ಪಕ್ಷಿಗಳು ಹಿಂಡು, ಹಿಂಡಾಗಿ ವಲಸೆ ಬರುವುದನ್ನು ಕಾಣಬಹುದಾಗಿದೆ.
ಜಲಾಶಯದಲ್ಲಿ ನೀರು ನಿಲ್ಲಿಸಲು ಆರಂಭಿಸಿದ ಬಳಿಕ ಪ್ರತಿ ವರ್ಷ ಚಳಿಗಾಲದಲ್ಲಿ ದೇಶ-ವಿದೇಶಗಳಿಂದ ಅಂದಾಜು 34 ವಿವಿಧ ಪ್ರಭೇದಗಳ ಬಾನಾಡಿಗಳು ವಲಸೆ ಬರುತ್ತವೆ. ಸ್ಥಳೀಯ ಪಕ್ಷಿಗಳು ಸೇರಿದರೆ 80ಕ್ಕೂ ಪ್ರಬೇಧದ ಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ. ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಪಕ್ಷಿಗಳ ಕಲರವ ಕೇಳಬಹುದಾಗಿದೆ. ಅಪರೂಪದ ಪಕ್ಷಿಗಳನ್ನು ವೀಕ್ಷಿಸಿ ಸಂಭ್ರಮಿಸಬಹುದಾಗಿದೆ.
ಗ್ರೇಟರ್ ಫ್ಲೆಮಿಂಗೊ, ಪಿನ್ ಟೇಲ್ ಡಕ್ಸ್, ನಾರ್ದನ್ ಶೆವಲರ್ಸ್, ನಾರ್ದನ್ ಪಿಂಟೆಲ್, ಗಾರ್ಗನಿ, ಕಾಮನ್ ಪೋಚಾರ್ಡ್, ಬ್ಲಾಕ್ ಟೇಲ್ಡ್ ಗಾಡ್‌ವಿಡ್ಸ್, ಕಾಮನ್ ಸ್ಯಾಂಡ್ ಪೈಪರ್, ಗ್ಲಾಸಿ ಐಬಿಸ್, ಬಾರ್ ಹೆಡೆಡ್ ಗೂಸ್, ರೂಢಿ ಶೆಲ್‌ಡಕ್, ವಿಸ್ಕರ್ಡ್ ಟರ್ನ್, ಬ್ರೌನ್ ಹೆಡೆಡ್ ಗಲ್, ಪಲ್ಲಾಸ್ ಗಲ್, ಗಲ್‌ಬಿಲ್ಡ್ ಟರ್ನ್ ಮುಂತಾದ ಪಕ್ಷಿಗಳು ಕಾಣುತ್ತವೆ.
ಪಕ್ಷಿಗಳು ವಲಸೆ ಹೋಗುವ ಒಂಬತ್ತು ಮಾರ್ಗಗಳನ್ನು ಗುರುತಿಸಲಾಗಿದೆ. ಸೆಂಟ್ರಲ್ ಏಷಿಯನ್ ಬರ್ಡ್ ಮೈಗ್ರೇಟರಿ ಫ್ಲೈವೇ ಮಾರ್ಗದಲ್ಲಿ ಭಾರತ ಬರುತ್ತದೆ. ಈ ಮಾರ್ಗದಲ್ಲಿ ಬರುವ ಪಕ್ಷಿಗಳು ಅವುಗಳ ವಾಸಕ್ಕೆ ಯೋಗ್ಯವಾದ ವಾತಾವರಣ ಹಾಗೂ ಆಹಾರ ಸಿಗುವ ಸ್ಥಳಗಳಲ್ಲಿ ಮೂರ್ನಾಲ್ಕು ತಿಂಗಳಿದ್ದು, ವಾಪಸ್ ಮರಳುತ್ತವೆ.
ಪಕ್ಷಿಗಳು ಬರಲಾರಂಭಿಸಿದ್ದರೂ, ಅದನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿರಲಿಲ್ಲ. ಪರಿಣಾಮ ಸುತ್ತಲಿನ ಗ್ರಾಮಗಳ ಜನತೆ, ಪ್ರವಾಸಿಗರು ಪಕ್ಷಿಗಳಿಗೆ ತೊಂದರೆಯುಂಟು ಮಾಡುತ್ತಿದ್ದರು. ಇದನ್ನು ತಪ್ಪಿಸಲು 12,369 ಹೆಕ್ಟೇರ್ ಪ್ರದೇಶವನ್ನು ಚಿಕ್ಕಸಂಗಮ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ಎಂದು 2023ರಲ್ಲಿ ಘೋಷಿಸಲಾಗಿದೆ. ಬಾಗಲಕೋಟೆ, ಬೀಳಗಿ, ನಿಡಗುಂದಿ, ಕೊಲ್ಲಾರ ತಾಲ್ಲೂಕುಗಳ ಹಲವು ಗ್ರಾಮಗಳನ್ನು ಒಳಗೊಂಡಿದ್ದು, ಇಲ್ಲಿಯೇ ಪಕ್ಷಿಗಳು ವಲಸೆ ಬರುತ್ತವೆ.
ಎಲ್ಲೆಲ್ಲಿ ಬರುತ್ತವೆ?
ಆಲಮಟ್ಟಿ ಹಿನ್ನೀರು ಆವರಿಸಿರುವ ಬೀಳಗಿ ತಾಲ್ಲೂಕಿನ ಹೆರಕಲ್ ಬ್ಯಾರೇಜು ಹಾಗೂ ಸುತ್ತ–ಮುತ್ತ, ಗಲಗಲಿ, ಕದಾಂಪುರ, ಚಿಕ್ಕಸಂಗಮ, ಹಳೇ ಅನಗವಾಡಿ, ಕುಂದರಗಿ ರಸ್ತೆ, ಸಾಲಗುಂದಿ, ನೆಕ್ಕರಗುಂದಿ, ಸಿಂದಗಿ, ಕೋರ್ತಿ, ಬಾಗಲಕೋಟೆ ತಾಲ್ಲೂಕಿನ ಮಲ್ಲಾಪುರ, ಬೆಣ್ಣೂರ, ರಾಂಪುರ, ಅಚನೂರ, ಸೀತಿಮನಿ ಸುತ್ತ–ಮುತ್ತ ಕಾಣಬಹುದಾಗಿದೆ.
ಎಲ್ಲಿಂದ ಬರುತ್ತವೆ?
ರಷ್ಯಾ, ಸೈಬೇರಿಯಾ, ಖಜಕಿಸ್ತಾನ, ಚೈನಾ, ಮಂಗೋಲಿಯಾ, ಯುರೋಪ್, ಭಾರತದ ಗುಜರಾತ್, ಹಿಮಾಲಯ ಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಪಕ್ಷಿಗಳು ಬರುತ್ತವೆ.
ಇಲ್ಲೇಕೆ ಬರುತ್ತವೆ?
ಸೈಬೇರಿಯಾ, ಖಜಕಿಸ್ತಾನ ಮುಂತಾದ ದೇಶಗಳಲ್ಲಿ ತೀವ್ರವಾದ ಚಳಿಗಾಲ ಇರುತ್ತದೆ. ಅಲ್ಲಿ ತಾಪಮಾನವು 20 ರಿಂದ 35 ಡಿಗ್ರಿ ಸೆಲ್ಷಿಯಸ್ ಮೈನಸ್ ಆಗಿರುತ್ತದೆ. ಹಿಮಪಾತದಿಂದಾಗಿ ಆಹಾರವೂ ದೊರೆಯದಂತಾಗುತ್ತದೆ. ರಾತ್ರಿ ದೊಡ್ಡದಾಗಿದ್ದು, ಹಗಲು ಸಣ್ಣದಾಗಿರುತ್ತದೆ. ಆಹಾರ ಹುಡುಕುವುದು ಕಷ್ಟವಾಗುತ್ತದೆ. ಈ ಕಾರಣಗಳಿಗಾಗಿ ಭೂಮಧ್ಯ ರೇಖೆಯ ಕಡೆಗೆ ಮುಖ ಮಾಡುತ್ತವೆ.
ಕಡಿಮೆ ಚಳಿ ಇರುವ, ಹಿನ್ನೀರಿನಲ್ಲಿ ಯಥೇಚ್ಛವಾಗಿ ಆಹಾರ ಸಿಗುವ ಸ್ಥಳಗಳಿಗೆ ಅವುಗಳು ವಲಸೆ ಬರುತ್ತವೆ. ಆಲಮಟ್ಟಿ ಹಿನ್ನೀರಿನ ವಿವಿಧ ಗ್ರಾಮಗಳು ಅವುಗಳು ವಲಸೆಗೆ ಸೂಕ್ತ ಸ್ಥಳಾಗಳಾಗಿವೆ. ಹಿನ್ನೀರಿನ ಕೆಸರಿನಲ್ಲಿ ಸಿಗುವ ಸಣ್ಣ ಹುಳುಗಳು, ನೀರಿನಲ್ಲಿನ ಮೀನುಗಳು, ಜಲಸಸ್ಯಗಳು, ಕೀಟಗಳು, ಮೃದ್ವಂಗಿಗಳು ಮತ್ತು ಏಡಿಗಳನ್ನು ತಿನ್ನುತ್ತವೆ.
‘ಜಲಾಶಯದಲ್ಲಿ ಈ ಬಾರಿ ಹಿನ್ನೀರಿನ ಪ್ರಮಾಣ ಕಡಿಮೆಯಾಗದಿರುವುದರಿಂದ ವಲಸೆ ಬರುವ ಪಕ್ಷಿಗಳ ಪ್ರಮಾಣ ಕಡಿಮೆಯಾಗಿದೆ. ನೀರು ಕಡಿಮೆಯಾದರೆ ಅವುಗಳ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸಿಗುತ್ತದೆ. ಇಲ್ಲಿಯವರೆಗೆ ಅಂದಾಜು 50 ಸಾವಿರದಷ್ಟು ಪಕ್ಷಗಳು ವಲಸೆ ಬಂದಿವೆ. ನೀರು ಕಡಿಮೆಯಾದರೆ ಇನ್ನಷ್ಟು ಪಕ್ಷಿಗಳು ವಲಸೆ ಬರಬಹುದು ಎನ್ನುತ್ತಾರೆ ಪಕ್ಷಿಗಳ ಬಗ್ಗೆ ಅಧ್ಯಯನವೂ ಮಾಡುತ್ತಾ ಬಂದಿರುವ ಅರಣಾಧ್ಯಿಕಾರಿ ಎಚ್.ಬಿ. ಡೋಣಿ.
ಆಲಮಟ್ಟಿಯಿಂದ ಹೆರಕಲ್ ಬ್ಯಾರೇಜ್‌ವರೆಗೆ 25 ಕಿ.ಮೀ. ದೂರದ ಜಲ ಸಾರಿಗೆ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಕಾಮಗಾರಿಗೆ ಟೆಂಡರ್ ಕೂಡ ಕರೆಯಲಾಗಿದೆ. ಬೋಟಿಂಗ್ ವ್ಯವಸ್ಥೆ ಮಾಡುವ ಮೂಲಕ ಪ್ರವಾಸಿ ತಾಣವಾಗಿಸಲು ಉದ್ದೇಶಿಸಲಾಗಿದೆ. ಪಕ್ಷಿಗಳ ವೀಕ್ಷಣೆಗೂ ಅನುಕೂಲವಾಗಲಿದೆ. ಅತಿಯಾದ ಓಡಾಟ, ಯಂತ್ರಗಳ ಆರ್ಭಟದಿಂದ ಪಕ್ಷಿಗಳಿಗೆ ತೊಂದರೆಯಾಗದಂತೆ ಯೋಜನೆ ಜಾರಿಗೊಳಿಸಬೇಕಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.